spot_img
spot_img

ಪುಸ್ತಕ ಪರಿಚಯ: ಓದುಗರ ಗಟ್ಟಿ ಹಿಡಿಕೆ, ಈ ಬಿದಿರ ತಡಿಕೆ

Must Read

- Advertisement -

ಸಾಹಿತ್ಯದ ಪ್ರಕಾರ: ಪ್ರಬಂಧ ಸಂಕಲನ

ಪುಸ್ತಕದ ಹೆಸರು: ಬಿದಿರ ತಡಿಕೆ

ಲೇಖಕರು: ಡಾ.ಎಚ್.ಎಸ್. ಸತ್ಯನಾರಾಯಣ

- Advertisement -

ಪ್ರಕಾಶಕರು: ಮಿಂಚುಳ್ಳಿ ಪ್ರಕಾಶನ

ಬಿದಿರ ತಡಿಕೆಯ ಹಿಂದೆ ಬಿಚ್ಚಲಾಗದ ಕಣ್ಣು ಕವನ ಹುಟ್ಟೀತೆ? ಎಂದು ಕೇಳುತ್ತಿದೆ. ನಾನೀಗ ತುಟಿಯಂಚಿನಲ್ಲಿ ಹೇಳಿದ್ದಿಷ್ಟೆ : ಇನ್ನೊಂದು ದಿವಸ ಕಾದರೆ ನಷ್ಟವೆ ? ಎಂಬ ಕೆ.ಎಸ್.ನರಸಿಂಹಸ್ವಾಮಿಯವರ ಕವನ ಹುಟ್ಟುವ ಸಮಯವನ್ನು “ಬಿದಿರ ತಡಿಕೆ” ಪ್ರಬಂಧ ಸಂಕಲನದ ಶಿರೋನಾಮೆಗೆ ಅಧಾರವಾಗಿಟ್ಟುಕೊಂಡಿದ್ದು ಲೇಖಕರ ಸೂಕ್ಷ್ಮಗ್ರಾಹಿಕೆಗೆ ಸಾಕ್ಷಿಯಾಗಿದೆ ಎಂದು ಹೇಳಬಹುದು.

ಈ ಪ್ರಬಂಧದ ಲೇಖಕರಾದ ಡಾ.ಹೆಚ್.ಎಸ್.ಸತ್ಯನಾರಾಯಣರವರು ವಿಮರ್ಶಾ ಕ್ಷೇತ್ರದಲ್ಲಿ ಸಾಕಷ್ಟು ದುಡಿದವರು ಹಾಗೂ ಸದಾ ಸಾಹಿತ್ಯದ ಸೃಷ್ಟಿಯಲ್ಲಿ ಕ್ರಿಯಾಶೀಲರಾದವರು ಹಾಗೂ ನಾಡಿನಾದ್ಯಂತ ಗುರುತಿಸಿಕೊಂಡವರು.ಸದಾ ಸಾಹಿತ್ಯದ ಒಂದಿಲ್ಲೊಂದು  ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಹಾಗೂ ತೊಡಗಿಕೊಳ್ಳುವ ಅವರ ಹಸನ್ಮುಖಿ ಹುರುಪು ಮೆಚ್ಚುವಂತದ್ದು.

- Advertisement -

ಸೂರ್ಯಕೀರ್ತಿ ಹಾಗೂ ಶಂಕರ್ ಸಿಹಿಮೊಗ್ಗೆ ಯವರ  ಬೆನ್ನುಡಿಯ ಮಾತುಗಳು ಲೇಖಕರ ಬೆನ್ನುತಟ್ಟಿವೆ ಹಾಗೂ ಪ್ರಕಾಶಕರ ಮಾತುಗಳಾಗಿ  ಉತ್ತಮವಾಗಿ ಪ್ರಕಾಶಿಸುತ್ತ ಮಿಂಚುಳ್ಳಿ ಪ್ರಕಾಶನದ ಮೂಲಕ ಉತ್ತಮವಾದ ಕೃತಿಯನ್ನು ನೀಡಿದಂತಿದೆ.

ಹಿರಿಯ ಲೇಖಕಿ ವೈದೇಹಿಯವರಿಗೆ ಅರ್ಪಸಿದ ಸಂಕಲನಕ್ಕೆ ಪ್ರೊ.ಟಿ .ಯಲ್ಲಪ್ಪ, ವಾಸುದೇವ ನಾಡಿಗ್, ಲಕ್ಷ್ಮಣ ಕೊಡಸೆ ಅವರ ಪ್ರತಿಕ್ರಿಯೆ ಮಾತುಗಳು ಚೆನ್ನಾಗಿ ಮೂಡಿಬಂದಿವೆ. ಇಂಥ ಪ್ರಬಂಧ ಸಂಕಲನವನ್ನು ಮಿಂಚುಳ್ಳಿ ಪ್ರಕಾಶನ ಶಿವಮೊಗ್ಗದವರು ಪ್ರಕಟಿಸಿದ್ದು ಒಟ್ಟಾರೆ 105 ಪುಟಗಳಲ್ಲಿ ಒಂಭತ್ತು ಪ್ರಬಂಧಗಳು ವಿರಾಜಮಾನವಾಗಿ ಕೂತು ಓದುಗರನ್ನು ಗಟ್ಟಿಯಾಗಿ ಹಿಡಿದಿಡುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿವೆ. 

 ಒಂದೇ ಬಾರಿ ಓದಿ ಮುಗಿಸಿಬಿಡಬೇಕೆಂಬ ಧಾವಂತ ತೊರೆದು ನಿಧಾನವಾಗಿ ಒಂದೊಂದೇ ಪ್ರಬಂಧವನ್ನು ಓದಿ ಗ್ರಹಿಸುತ್ತ ಮೆಲಕು ಹಾಕಿಕೊಳ್ಳುತ್ತ ರಸಾಸ್ವಾದನೆ ಮಾಡುತ್ತ ಹೋದರೆ ಪ್ರಬಂಧಗಳನ್ನು ಒಂದೊಂದಾಗಿ ಸಂಪೂರ್ಣವಾಗಿ ಅರ್ಥೈಸಿಕೊಳ್ಳಬಹುದು.

ಬಿಚ್ಚಲಾಗದ ಒಂಭತ್ತು ಪ್ರಬಂಧಗಳೆಂಬ ಕಣ್ಣುಗಳ ಒಳಹೊಕ್ಕು ಒಂದೊಂದಾಗಿ ನೋಡುವುದಾದರೆ ಅವುಗಳ ಒಳಾರ್ಥ ಹೊಳೆದೀತು, ತಿಳಿದೀತು…

ಪ್ರಾತ:ಕಾಲದ ದನಿಗಳು:

ಬೆಳಗಾಗೆದ್ದು ಯಾರ್ಯಾರ ನೆನೆಯಲಿ….ಎನ್ನುವಂತೆ  ಪ್ರಾತಃಕಾಲವೆಂಬ ಬೆಳಗಲ್ಲಿ ಎಷ್ಟೆಲ್ಲ ಸಣ್ಣ ಪುಟ್ಟ ವ್ಯಾಪಾರಿಗಳು ತಮ್ಮ ತಮ್ಮ ಹೊಟ್ಟೆ ತುಂಬಿಸಿಕೊಳ್ಳುವುದನ್ನು ನೋಡಬಹುದು. ತರಕಾರಿ ಮಾರುವ ಅಜ್ಜಿ ಚಿಕ್ಕ ಅಂಗಡಿಯಲ್ಲಿ ತನ್ನ ಹೊಟ್ಟೆ ತುಂಬಿಸಿಕೊಳ್ಳುತ್ತ ತನ್ನಮ್ಮನ ಹೊಟ್ಟೆಯನ್ನು ಕೂಡ ತುಂಬಿಸುವುದು ಓದುಗರ ಕರುಳನ್ನು ಚುರ್ರೆನಿಸುತ್ತದೆ. ಪ್ರಬಂಧ ಸಾಗಿದಂತೆ ಅಲ್ಲಲ್ಲಿ ಸಂದರ್ಭೋಚಿತವಾಗಿ ಮಾಸ್ತಿಯವರ ‘ಮೊಸರಿನ ಮಂಗಮ್ಮ’ ಕಥೆ, ತೇಜಸ್ವಿಯವರ ‘ಅಣ್ಣನ ನೆನಪು’ ಕೃತಿಯಲ್ಲಿ ಬರೆದ ಸಾಲುಗಳು ಹಾಗೂ ಕೆ ಎಸ್ ನರಸಿಂಹ ಸ್ವಾಮಿಗಳ ಪದ್ಯದ ಸಾಲುಗಳನ್ನು ಪ್ರಯೋಗಿಸುವುದರ ಮೂಲಕ   ಸಣ್ಣಪುಟ್ಟ ವ್ಯಾಪಾರಸ್ಥರ ನಿತ್ಯದ ಬವಣೆಗೆ ಕನ್ನಡಿಯನ್ನು ಹಿಡಿಯುತ್ತ ಓದುಗರ ಧ್ಯಾನವನ್ನು ಅತ್ತಲಿತ್ತ ಹೋಗದಂತೆ ಪ್ರಬಂಧವೆಂಬ ಕನ್ನಡಿಯನ್ನೇ ದಿಟ್ಟಿಸುವಂತೆ ಮಾಡುವಲ್ಲಿ ಲೇಖಕರಾದ ಡಾ.ಎಚ್.ಎಸ್.ಸತ್ಯನಾರಾಯಣರವರು ಯಶಸ್ವಿಯಾಗಿದ್ದಾರೆ ಎಂದು ಹೇಳಬಹುದು.

ಕಾಲವೆಂಬ ರೈಲು ಗಾಡಿ: 

ಈ ಪ್ರಬಂಧದಲ್ಲಿ ಹಳೆಯ ತಲೆಮಾರಿನ ರೈಲುಗಾಡಿಯ ಪ್ರಯಾಣದ ಅನುಭವವನ್ನು ಸ್ಮರಿಸಿಕೊಳ್ಳುತ್ತ ಹೊಸ ತಲೆಮಾರಿನ ರೈಲು ಅನುಭವಗಳನ್ನು ಲೇಖಕರು ತುಂಬಾನೇ ಸ್ವಾರಸ್ಯಕರವಾಗಿ ವಿವರಿಸಿದ್ದಾರೆ.ರೈಲಿನಲ್ಲಿ ಪ್ರಯಾಣಿಕರು ಅದಲು ಬದಲು ಅಗುವಂತೆ ರೈಲಿನ ಚಿತ್ರಣಗಳನ್ನು ,ಪ್ರಯಾಣದ ಆಗುಹೋಗುಗಳನ್ನು ಲೇಖಕರು ತಮ್ಮ ಕೈ ಚಳಕದಿಂದ ಬದಲಿಸುತ್ತ ಓದುಗರನ್ನು ರಂಜಿಸುತ್ತ  ಸಾಗುತ್ತಾರೆ. ಕೆಲವೊಂದು ಪ್ರಯಾಣಿಕರ ಅನುಭವ ಕಥನಗಳನ್ನು ಹೇಳುತ್ತ ತಮ್ಮ ಪ್ರಯಾಣದ ಅನುಭವಗಳನ್ನು ಹೇಳಲು ಮರೆತಿಲ್ಲ.ಪ್ರಬಂಧ ಓದಿಸಿಕೊಂಡು ಹೋದಂತೆ ಬಸ್ಸಿನ ಪ್ರಯಾಣ ಹಿತಕರವೊ, ರೈಲು ಪ್ರಯಾಣ ಹಿತಕರವೊ ಎಂಬ ಪ್ರಶ್ನೆಯನ್ನು ಓದುಗರು ತಮ್ಮನ್ನು ತಾವು ಕೇಳಿಕೊಂಡರೆ ಅಶ್ಚರ್ಯವೇನಿಲ್ಲ.

ಪರೀಕ್ಷೆಗಳು ಸಾರ್ ಪರೀಕ್ಷೆಗಳು:

ಅಧ್ಯಾಪಕ ವೃತ್ತಿಯಲ್ಲಿದ್ದವರು ಮನಸ್ಸಿರಲಿ ಇಲ್ಲದಿರಲಿ ಪರೀಕ್ಷಾ ಕಾರ್ಯಕ್ಕೆ ತಮ್ಮನ್ನು ತಾವು ಒಡ್ಡಿಕೊಳ್ಳುವ ಅನಿವಾರ್ಯತೆಯನ್ನು ಹಾಗೂ ಕಾರ್ಯತತ್ಪರತೆಯಲ್ಲಿದ್ದಾಗಿನ ಸವಾಲುಗಳನ್ನು ಈ ಪ್ರಬಂಧ ಹಾಸ್ಯಮಯವಾಗಿ ಬಿಂಬಿಸುತ್ತದೆ. ಪರೀಕ್ಷೆ ನಡೆಸುವವರ ಕಾರ್ಯಕ್ಷಮತೆ ವಿದ್ಯಾರ್ಥಿಗಳಿಗೆ ಹೇಗೆ ಹೇಗೆ ವರದಾನ ವಾಗುತ್ತದೆ ಮತ್ತು ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಯಾವ ಯಾವ ತೆರನಾಗಿ ಆಮಿಷ ಒಡ್ಡಿ ಜೀವನದ ಪರೀಕ್ಷೆಗಳನ್ನು ಗೆಲ್ಲಲೆತ್ನಿಸುವ ಪ್ರಸಂಗಗಳು ನಗು ಉಕ್ಕಿಸದೇ ಇರದು.ಲೇಖಕರ ಅನುಭವಗಳೂ ಪ್ರಸ್ತಾಪವಾಗಿ ಪ್ರಬಂಧ ಮತ್ತಷ್ಟು ಮಗದಷ್ಟು ಸ್ವಾರಸ್ಯಕರವಾಗಿ ತನ್ನನ್ನು ತಾನು ತೆರೆದುಕೊಳ್ಳುತ್ತಲೇ ಸಾಗುತ್ತದೆ.

ಭೀಮಸೇನ ನಳಮಹಾರಾಜರು ಗಂಡಸರಲ್ಲವೇ:

ಎಂಬ ಪ್ರಬಂಧವು ಅಡುಗೆ ಮಾಡುವುದು ಗಂಡಸರ ಸ್ವತ್ತೋ ? ಇಲ್ಲವೇ ಹೆಂಗಸರ ಸ್ವತ್ತೊ ?ಎಂಬ ಪ್ರಶ್ನೆಯ ಹುಳುವನ್ನು ಬಿಟ್ಟು,ಅಡುಗೆ ಕಾರ್ಯಗಳು ಬಹುಪಾಲು ಹೆಂಗಸರ ಸ್ವತ್ತಾದರೂ ಅದಕ್ಕೆ ಪುರಾವೆ ರೂಪದಲ್ಲಿ ಯಾವ ಸ್ತ್ರೀಯರು ಬೀಮ, ನಳರಂತೆ ಪುರಾಣ ಪುಣ್ಯ ಕಥೆಗಳಲ್ಲಿ ಉಲ್ಲೇಖಿತರಾಗದೇ ಇರುವುದು ದುರ್ದೈವದ ಸಂಗತಿಯಾಗಿದೆ. ಪುರುಷರು ಕೂಡ ಅಡುಗೆಯಲ್ಲಿ ಕಡಿಮೆಯೇನಿಲ್ಲ ಎನ್ನುವಂತೆ ಸವಾಲೆಸೆದ ಲೇಖಕರು ಸ್ವತಃ ತಮ್ಮ ಪಾಕ ಚಳಕದ ನಿದರ್ಶನಗಳನ್ನು ನೀಡುವುದರ ಮೂಲಕ ಭೀಮ‌, ನಳರಿಗೆ ಸಾಥ್ ನೀಡಿದಂತಿದೆ. ಒಂದು ಕೆಟ್ಟ ಮೌಢ್ಯಾಚರಣೆಗೆ ತುತ್ತಾದ ಹಾಗೂ ತುತ್ತಾಗುತ್ತಿರುವ ಸ್ತ್ರೀಯರು ರಜಸ್ವಲೆಯರಾದಾಗ ಅಡುಗೆ ಇತ್ಯಾದಿ ಕಾರ್ಯಗಳನ್ನು ಮಾಡಲು ನಿರ್ಭಂಧಿಸಿದಾಗ ಅನುಭವಿಸುವ ಕಷ್ಟ,ಹಿಂಸೆಗಳನ್ನು ಖಂಡಿಸುತ್ತ ಸಾಗುವ ಲೇಖಕರು ಅಂತಹ ಸಮಾಜದ ಕೆಲವೊಂದು ಅಂಧಾನುಚರಣೆಗಳನ್ನು ತೀಕ್ಣವಾಗಿ ಪ್ರತಿರೋಧಿಸಿರುವುದು ಸ್ವಾಗತಾರ್ಹವಾಗಿದೆ.

ಪಾಕಕಲೆಗೂ ಸಾಹಿತ್ಯದ ಸೆಲೆಗೂ ಅವಿನಾಭಾವ ಸಂಬಂಧ ಕಲ್ಪಿಸುತ್ತ ಸಾಗುವ ಲೇಖಕರು ಋಷಿ ಮೂಲ ನದಿಮೂಲ ಹುಡುಕಬಾರದೆಂಬಂತೆ ತಯಾರಾದ ತಿಂಡಿ  ತಿನಿಸುಗಳ ಮೂಲವನ್ನು ಕೂಡ ಹುಡುಕಬಾರದು/ ನೋಡಬಾರದು ಎಂದು ಹೇಳಿದ್ದು ಪ್ರಸ್ತುತ ಅನ್ನಿಸುತ್ತದೆ.

ಮುನ್ನುಡಿ ಬೆನ್ನುಡಿಗಳೆಂಬ ಬೆಂಬಲದ ದಾರಿ

ಇಂದಿನ ಸಾಹಿತ್ಯ ಲೋಕಕ್ಕೆ ಪ್ರಸ್ತುತ ಎನ್ನಿಸುವಂತೆ ಪ್ರಬಂಧ ಮೂಡಿಬಂದಿದೆ ಎನ್ನಬಹುದು. ಕೃತಿ ರಚನೆಕಾರರಿಗೆ ಬರೆದ ಮುನ್ನುಡಿ ಬೆನ್ನುಡಿಗಳು ಬರೆಯಲು ಮತ್ತಷ್ಟು ಪ್ರೇರೇಪಣೆ ನೀಡಬಹುದು. ಆದರೆ ಕೃತಿ ಬಗ್ಗೆ ಏನೇನೋ ಬರೆದು ನಿರಾಸೆ ಗೊಳಿಸದೆ ಕೃತಿಕಾರನನ್ನು ತೃಪ್ತ ಪಡಿಸುವ ಸಾಹಸ ಮಾತ್ರ ಇದ್ದದ್ದೆ. ಹಿಂದಿನ ಹಾಗೂ ಇಂದಿನ ಹಿರಿಯ ಲೇಖಕರ ಅಂದದ ಮುನ್ನುಡಿ ಬೆನ್ನುಡಿಗಳು ಸಾಹಿತ್ಯದ ಪ್ರಕಾರವೇ ಆಗಿವೆ ಹಾಗೂ ಪಿ.ಎಚ್.ಡಿ ಪ್ರಬಂಧಕ್ಕೆ ಆಯ್ದುಕೊಳ್ಳಬೇಕಾದ ವಿಷಯ ಎಂಬ ಲೇಖಕರ ಸಲಹೆ ಬಹುಯೋಗ್ಯವಾದದ್ದು. ಪುಸ್ತಕ ಯಾರು ಓದತಾರೆ? ಮುನ್ನುಡಿ ಬೆನ್ನುಡಿಗಳನ್ನಷ್ಟೇ ಓದುವ ವರ್ಗದ ಮೇಲೂ ಸೂಕ್ಷ್ಮವಾಗಿ ಬೆಳಕು ಹರಿಸಿದ ಲೇಖಕರು ಸಿದ್ದಯ್ಯ ಪುರಾಣಿಕರು ಬರೆದಂತೆ “ಮುನ್ನುಡಿಯನ್ನೋದಿ ವಾದಿಸಿದನೊಬ್ಬ,ವಿಮರ್ಶೆಯನ್ನೋದಿ ವಾದಿಸಿದನೊಬ್ಬ. ಮೂಲ ಕೃತಿಯನ್ನೋದಿದವರನ್ನೊಬ್ಬರನೂ ಕಾಣೆ” ಎಂಬ ಮಾತುಗಳು ಅಕ್ಷರಶಃ ಸರಿ ಎನ್ನಿಸುವುದೂ ಉಂಟು.

ಬಿದಿರ ತಡಿಕೆಯ ಹಿಂದೆ ಬಿಚ್ಚಲಾಗದ ಕಣ್ಣು:

ಇದು ಪುಸ್ತಕದ ತಲೆಬರಹಕ್ಕೆ ಹೊಂದಿಕೊಂಡ ವಿಶೇಷ ಪ್ರಬಂಧವಾಗಿದೆ. ಕವಿತೆಗಳನ್ನು ಓದಿ ಖುಷಿಪಡುವ ವರ್ಗಕ್ಕೆ ಸೇರಿದ ಲೇಖಕರು ಓದಿ ಸುಖಿಸುವಿಕೆಯನ್ನು ಚೆನ್ನಾಗಿ ಪ್ರತಿಪಾದಿಸಿದ್ದಾರೆ.ಕನ್ನಡದ ಪಠ್ಯಪುಸ್ತಕಗಳಿಂದಲೇ ಎಲ್ಲ ಕವಿ ಸಾಹಿತಿಗಳು ನಮಗೆ ಚಿರಪರಿಚಿರಾಗಿದ್ದು .ಪದ್ಯಗಳೇ ಬಹುತೇಕ ಹೃದ್ಯಂಗಮವಾಗಿ ಜನ ಮನತಟ್ಟಿವೆ.ಕನ್ನಡ ಕವಿಗಳ ಹೆಸರುಗಳ ಉಚ್ಛಾರಣೆಯ ಪ್ರಸಂಗಳನ್ನು ನೆನೆಯುತ್ತ ಕಚಗುಳಿಯನ್ನಿಡುತ್ತ ಸಾಗುವ ಪ್ರಬಂಧ ಲೇಖಕರೊಂದಿಗೆ ಓದುಗರನ್ನೂ ಬಾಲ್ಯಕ್ಕೆ ಎಳೆದೊಯ್ಯುತ್ತದೆ.

‘ಆಲಂಪು’ಎಂಬ ಇಂಪಿನ ಮನೆಹೆಸರು ಕೇಳಲು ಎಷ್ಟು ಚಂದ.ಆ ಹೆಸರನ್ನು ಆಯ್ದು ಇಟ್ಟುಕೊಂಡ ಲೇಖಕರ ಸಾಹಿತ್ಯ ಪ್ರೀತಿಗೆ, ಒಲವಿಗೆ ಮನದನಿಯೆ ಚಪ್ಪಾಳೆಗಳು, ಕಂಠಪಾಠ, ಬಾಯಿಪಾಠ ಮಾಡುವಾಗಿನ ನವಿರು ಹಾಸ್ಯಪ್ರಸಂಗಳು ಬಿದಿರ ತಡಿಕೆಯ ಹಿಂದೆ ತೆರೆದ ಕಣ್ಣುಗಳು ಪಿಳಿಪಿಳಿಯಾಗಿ ನೋಡಿದಂತೆ ಭಾಸವಾಗುತ್ತವೆ.

ಮಕ್ಕಳ ಮನವೆಂಬ ಮಾಯಾಲೋಕ: 

ಹೌದು, ಮಕ್ಕಳಿಲ್ಲದ ಜನಪದ ಲೋಕವಿಲ್ಲ.”ಬಡತನ ಬಂದಾಗ ಬಡಿಬ್ಯಾಡ ಬಾಲರನು ,ಅಡ್ಯಾಡಿ ಬಂದು ತೊಡಿಮ್ಯಾಲ ಆಡಿದರ ಬಡತನವೆಲ್ಲ ಬಯಲಾದೊ” ಜನಪದರು ಹೇಳುವ ಹಾಗೆ ಮಳಿ ಆದ್ರ ಕೆಟ್ಟಲ್ಲ,ಮಕ್ಕಳು ಉಂಡ್ರ ತಪ್ಪಲ್ಲ ಎನ್ನುವಂತೆ ಮಕ್ಕಳೇ ಬಾಳಿನ ಐಶ್ವರ್ಯ ಅನ್ನೋದನ್ನು ಅಲ್ಲಗಳೆಯುವಂತಿಲ್ಲ. ಆದರೆ ‘ಆರತಿಗೊಂದು ಕೀರುತಿಗೊಂದು’ ಎರಡು ಮಕ್ಕಳು ಬಯಸೋರು ಈಗಂತೂ ಯಾವುದೋ ಒಂದು ಎನ್ನುವಂತಾಗಿದೆ. ಪ್ರಬಂಧದ ತುಂಬ ವಿವಿಧ ಪ್ರಸಂಗಗಳಲ್ಲಿ ಕಾಣಬರುವ ಮಕ್ಕಳು ಒಬ್ಬರಿಗಿಂದ ಒಬ್ಬರು ಆಕರ್ಷಕವಾದ ಕೀಟಲೆ ಸ್ವಭಾವ ಹೊಂದಿರುವಂತವರು. ಸಂಭ್ರಮ’ಳ ಚುರುಕಿನ ಮಾತುಗಳು, ರಯಾನ್’ನ ಕಿಲಾಡಿ ಉತ್ತರ, ಮೋನಿಕಾ’ಳ ಚಾಕಲೇಟ ಪ್ರೀತಿ, ಚಿರಂತನ ಶಾಲೆ ತಪ್ಪಿಸಿಕೊಳ್ಳಲು ಪಿಎಮ್, ಸಿಎಮ್ ರನ್ನು ದೂರಿದ್ದು ಹಾಗೂ ಮಯೂರ’ನ ವಿಪರೀತ ಸಿಟ್ಟು ಹಾಗೂ ಕ್ಷಣಮಾತ್ರದಲ್ಲಿ ಕರಗಿ ಬಿಡುವ ರೀತಿ ಇವರೆಲ್ಲ ಪ್ರತಿ ಮನೆಗಳಲ್ಲಿ ಪ್ರತಿ ಮನಗಳನ್ನು ಕದ್ದವರೆ. ಲೇಖಕರಿಗೆ ಜ್ಞಾನಪೀಠ ಕೊಡಿಸಿದ ರಯಾನ’ನಂತೂ ಮುಗ್ದತೆಯ ಮೂರ್ತಿಯಾಗಿ ನಿಂತಿದ್ದಾನೆ.ಮೋಬೈಲ್ ಭೂತ ಮಕ್ಕಳಿಗೆ ಬ್ಲಾಕ್ ಮೇಲ್ ತಂತ್ರವನ್ನೂ ಕಲಿಸಿದೆ. ಅಳುವಿಲ್ಲದಿದ್ದರೂ ಅಳು ತೋಡಿಕೊಳ್ಳೋ ಮಕ್ಕಳ ತಂತ್ರಗಾರಿಕೆಗಳು ಓದುಗರನ್ನು ತಮ್ಮ ಬಾಲ್ಯಕ್ಕೆ ಕರೆದೊಯ್ದರೆ ತಪ್ಪಿಲ್ಲ. ಮಕ್ಕಳ ಮನಸ್ಸು  ಸೂಕ್ಷ್ಮವಾಗಿ ಸಂವೇದನೆಯಿಂದ ಕೂಡಿದ್ದು ಮನೆಮಂದಿಯನ್ನೆಲ್ಲಾ ಇನ್ನಿಲ್ಲದಂತೆ ರಂಜಿಸುತ್ತಲೇ ಇರುತ್ತವೆ.

ಆದರೆ ಕಾರಂತರು ಹೇಳುವಂತೆ “ಐದು ವರ್ಷಗಳವರೆಗೆ ಮಾತ್ರ ಮಕ್ಕಳು ಸುಖನೀಡಿ ರುಚಿಸುತ್ತವೆ ನಂತರದ್ದು ಕೇವಲ ದೂರುಗಳಾಗುತ್ತವೆ” ಎಂಬುದೂ ಸುಳ್ಳಲ್ಲ.ಮಕ್ಕಳ ಮನಸ್ಸನ್ನು ಪಕ್ವವಾಗಿಸಲು ಮನೆ ಹಾಗೂ ಶಾಲೆ ಪ್ರಧಾನ ಪಾತ್ರ ವಹಿಸಬೇಕೆಂಬ ಲೇಖಕರ ಅಭಿಪ್ರಾಯಕ್ಕೆ ಎಲ್ಲರೂ ಹೂಂಗುಟ್ಟಲೇ ಬೇಕು.

ಹಾಡು ಹಳೆಯದಾದರೇನು?

ಗುನುಗುನುಗುತ್ತಲೆ ಸಾಗುವ ಪ್ರಬಂಧವಿದು. ಜಗದ ಜಗುಲಿ ನಮ್ಮ ಬಾನುಲಿ ಎನ್ನುವಂತೆ ಆಕಾಶವಾಣಿಗಳಲ್ಲಿ ವಿವಿಧ ತರಾಂಗಾಂತರಗಳಲ್ಲಿ ತೇಲಿಬಂದು ನಮ್ಮೆಲ್ಲರ ಹೃದಯ ತರಂಗಳನ್ನು ಹುಚ್ಚೆಬ್ಬಿಸುವಂತೆ ಮಾಡಿದ್ದ ಹಾಗೂ ಮಾಡುತ್ತಿರುವ ಆಕಾಶವಾಣಿಯ ಕಾರ್ಯಕ್ರಮಗಳು ನಿಜಕ್ಕೂ ಶ್ಲಾಘನೆಗೆ ಅರ್ಹವಾದಂತವು. ಅದರಲ್ಲೂ ಹಳೆಯ ಮಧುರ ಹಾಡುಗಳೆಂದರೆ ಎಲ್ಲರಿಗೂ ಅಚ್ಚುಮೆಚ್ಚು.ನಮ್ಮ ದಿನ ನಿತ್ಯದ ದಿನಚರಿಯೇ ಕಾರ್ಯಕ್ರಮಗಳಲ್ಲಿ ಅಡಗಿತ್ತು. ಹಳೆಯ ಹಾಡುಗಳು ಅದೆಷ್ಟು ಕಾಡಿದ್ದಾವೆಂದರೆ ಲೇಖಕರು ಪ್ರಬಂಧದ ತುಂಬೆಲ್ಲ ಹಾಡಿನ ಸಾಲುಗಳ ಮಳೆ ಸುರಿಸಿ ಓದುಗರನ್ನೂ ಮಧುರ ಗಾನದಲ್ಲಿ ತೊಯ್ಯಿಸಿ ಪುಳಕಿತರನ್ನಾಗಿಸಿದ್ದಾರೆ. ಲೇಖಕರಾದ ಡಾ.ಸತ್ಯನಾರಾಯಣರವರು ಪ್ರಬಂಧದಲ್ಲಿ ಲೋಕೋವ್ಯವಹಾರಿ ಉದಾಹರಣೆಗಳನ್ನಷ್ಟೆ ನೀಡದೆ ತಮ್ಮ ಸ್ವಂತ ಜೀವನದ ಉದಾಹರಣೆಗಳನ್ನು ನೀಡಿದ್ದು ಓದುಗರಿಗೆ ಆಪ್ಯಾಯಮಾನವಾಗಿ ಕಾಣುತ್ತದೆ. ಸ್ವತಃ ಸತ್ಯನಾರಾಯಣ ಹಾಗೂ ಶಾಂತರಾಜು ಎಂಬ ಹುಡುಗರ ಜಗಳ ಭೂತಯ್ಯನ ಮಗ ಅಯ್ಯು ಚಲನಚಿತ್ರದ ಹಾಡಾದ ‘ವಿರಸವೆಂಬ ವಿಷಕೆ ಬಲಿಯಾದೆ ಏತಕೆ, ಸುಖ ಶಾಂತಿ ನಾಶಕೆ, ಮರುಳಾ..’ಎಂಬ ಹಾಡು ಕೇಳಿ ಶಮನವಾಗಿದ್ದು ಅರ್ಥವೇ ಗೊತ್ತಿರದ ವಯಸ್ಸಿನಲ್ಲಿ ಬದಲಾವಣೆಗೆ ಪ್ರೇರೇಪಿಸಿದ ಹಾಡಿನ ಗಟ್ಟಿತನ ಎದ್ದು ತೋರುತ್ತೆ. ಮನಸ್ಸು ಎಷ್ಟೇ ಬೆಸರದಲ್ಲಿದ್ದರೂ ಹಾಡುಗಳನ್ನು ಕೇಳಿದಂತೆ ನಿರಾಳವಾಗಿ ಬಿಡುತ್ತೆ. ಓಲ್ಡ ಈಸ್ ಗೋಲ್ಡ ಎನ್ನುವ ಲೇಖಕರು ಎಲ್ಲರ ಮನಸ್ಸಿನ ಮಾತನ್ನು ಕದ್ದಾಲಿಸಿದಂತಿದೆ. ನವನವೀನ ಭಾವಗಳು ಹೊಮ್ಮುವಂತೆ ಸಾಹಿತ್ಯ ರಚನೆಯಾಗಲಿ ಎಂಬ ಲೇಖಕರ ಆಶಾಭಾವನೆ ಮೆಚ್ಚುವಂತದ್ದು.

ಸ್ನೇಹಲೋಕವೆಂಬ ಪರಿಮಳದ ಹಾದಿ:

ಗೆಳೆತನಕೆ ಜಾತಿ, ಧರ್ಮ, ಕುಲ, ಗೋತ್ರ , ಭಾಷೆ, ಬಣ್ಣ, ದೊಡ್ಡವ, ಸಣ್ಣವ ಮೇಲು ಕೀಳು ಅಂತಸ್ತಿನ  ಹಂಗಿಲ್ಲ ಅನ್ನೋದು ಡಾ.ಸತ್ಯನಾರಾಯಣ ಗುರುಗಳ ಪ್ರಬಂಧ ಓದಿದಾಗ ಮತ್ತಷ್ಟು ಪುಷ್ಟೀಕರಿಸಿತೆನ್ನಬಹುದು. ಚಿರಪರಿಚಿತರಾದ ಸರಳ ಸ್ನೇಹಮಯಿ ಸ್ವಭಾವದ ಲೇಖಕರು ಎಷ್ಟೊಂದು ಸ್ನೇಹಮಯಿಗಳು ಎಂಬುದಕ್ಕೆ ತೆರೆದಿಟ್ಟ ಸ್ನೇಹ ಪ್ರಸಂಗಗಳನ್ನು  ಪ್ರಬಂಧದಲ್ಲಿ ಓದಿದಾಗ ಅವರ ಮೇಲಿನ ಪ್ರೀತಿ ಗೌರವ ಭಾವನೆ ಹೆಚ್ಚಾಗುತ್ತಲೆ ಹೋಗುತ್ತದೆ . ಮೌನಿ ಹಾಗೂ ಮುಜುಗರದ ವ್ಯಕ್ತಿತ್ವದ ಕಾರ್ಪೆಂಟರ್ ನವೀನ ಗೌಡರೊಂದಿಗಿನ ಸ್ನೇಹದ ಬೆಸುಗೆ ಒಂದು ತೆರನಾದರೆ,ಭಾಷೆ,ರಾಜ್ಯದ ಹಂಗಿಲ್ಲದೆ ಬೆಳೆದ ಮತ್ತೊಂದು ಸ್ನೇಹ ಅಂದರೆ ಅದು ಬಂಗಾಳದ ‘ತಾಪಸ್ ಕಾಯಲ್’ಅವರದ್ದು. ಅಟೋಚಾಲಕನ ವೃತ್ತಿಯನ್ನು ಕಡೆಗಣಿಸದೆ ಸ್ನೇಹದ ಹಸ್ತ ಚಾಚಿದ ಲೇಖಕರ ಗುಣ  ಮಾದರಿಯಾಗಿ ನಿಲ್ಲುತ್ತದೆ. ಕಾಲದ ಮಹಿಮೆಯಿಂದ ಆದ ಕೊರೋನಾ ಕಾಲಘಟ್ಟದ ಸ್ನೇಹಿತರ ಸಖ್ಯದ ಅನಾವರಣವಂತೂ ಸ್ನೇಹಲೋಕವನ್ನೆ ತೆರೆದಿಟ್ಟಂತಿದೆ. ಎಲ್ಲರನ್ನು ಸ್ನೇಹದಿಂದ ಮುಕ್ತಮನಸ್ಸಿನಿಂದ ಅಪ್ಪಿಕೊಳ್ಳುವ ಲೇಖಕರ ಹೃದಯ ಕೊನೆಗೆ ಸ್ನೇಹದ ಕಹಿಯನ್ನೂ ಉಂಡಿತು.ಅಮೃತಾ ಪ್ರೀತಮ್ ಅವರು ಬರೆದಂತೆ “ಕೆಲ ಸಂಬಂಧಗಳು ಮೈ ಮೇಲೆ ತೊಟ್ಟ ಬಟ್ಟೆಯಂತೆ. ಎಂದಾದರೂ ಕಳಚಬಹುದು.ಆದರೆ ಕೆಲವು ಸಂಬಂಧಗಳು ನರನಾಡಿಗಳಲ್ಲಿ ಹರಿಯುವ ರಕ್ತದಂತೆ ಅದಿಲ್ಲದೆ ಮನುಷ್ಯ ಬದುಕಲಾರ”ಎನ್ನುವಂತೆ ಡಾ.ಎಚ್ ಎಸ್ ಸತ್ಯನಾರಾಯಣ ಗುರುಗಳು ನರನಾಡಿಗಳಲ್ಲಿ ಹರಿಯುವಂಥ ಗಟ್ಟಿ ಸ್ನೇಹವನ್ನು ನೋಡಿದ್ದಾರೆ ಜೊತೆಗೆ ತೊಟ್ಟ ಬಟ್ಟೆಯಂತೆ ಬಹುಬೇಗ ಕಳಚಬಹುದಾದ ಸ್ನೇಹವನ್ನೂ ನೋಡಿದ ಹಾಗೂ ಅನುಭವಿಸಿದ ಅನುಭಾವ ಇಲ್ಲಿ ವೇದ್ಯವಾಗುತ್ತದೆ.

ಒಂದಕ್ಕಿಂತ ಒಂದು‌ ಭಿನ್ನ ವಸ್ತು ವಿಶೇಷತೆಗಳನ್ನು ಹೊಂದಿದ ಪ್ರಬಂಧಗಳು ಓದಲು ರುಚಿಸುತ್ತವೆ.ಇಲ್ಲಿನ‌ಪ್ರಬಂಧಗಳು ಲೇಖಕರಾದ ಡಾ.ಎಚ್.ಎಸ್.ಸತ್ಯನಾರಾಯಣರವರ ನೂರಕ್ಕೆ ನೂರರಷ್ಟು ಅನುಭವಗಳಿಂದಲೇ ಮೂಡಿ ಬಂದಿವೆ.ಕಲ್ಪನೆಯ ಎಳೆಗಳು ಅಲ್ಲಲ್ಲಿ ಇಣುಕಿವೆಯಾದರೂ ವಾಸ್ತವದ ಅನುಭವಗಳ ಗಟ್ಟಿ ಅಡಿಪಾಯವೇ ಹೆಚ್ಚು ಭದ್ರತೆಯನ್ನು ಒದಗಿಸಿವೆ. ಓದುಗರ ಮನಸ್ಸನ್ನು ಸೆಳೆಯುತ್ತ ಸಾಗುವ ಪ್ರಬಂಧಗಳ ಒಂದೊಂದು ಪ್ಯಾರಾಗಳು ಎಲ್ಲೂ ಬೋರ್ ಅನ್ನಿಸುವುದಿಲ್ಲ. ಅತ್ತ ಲೇಖಕರ ಅನುಭವವು ವೇದ್ಯವಾಗುತ್ತಲೇ ಇತ್ತ ಓದುಗರ ಅನುಭವಗಳು ಸ್ಮೃತಿ ಪಟಲದಲ್ಲಿ ಮೆಲುಕು ಹಾಕಿಸುತ್ತ, ಮೈನವಿರೇಳಿಸುತ್ತ ಸಾಗಿ, ಪ್ರಬಂಧಗಳು ಓದುಗರನ್ನು ಎಲ್ಲೂ ಅಲ್ಲಾಡದಂತೆ ಗಟ್ಟಿಯಾದ ಹಿಡಿಕೆಯಂತೆ ಹಿಡಿದುಬಿಡುತ್ತವೆ.

ಡಾ.ಎಚ್.ಎಸ್.ಸತ್ಯನಾರಾಯಣ ಅವರಿಂದ ಸಾಹಿತ್ಯಲೋಕದಲ್ಲಿ ಹಾಗೂ ಜನಮನದಲ್ಲಿ ಪುಸ್ತಕಗಳ ವರ್ಷಧಾರೆ ಹರಿಯುತ್ತಿರಲಿ ಎಂದು ಹಾರೈಸೋಣ.


ಕಿರಣ ಗಣಾಚಾರಿ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಭತ್ತದ ನಾಡು ಕೆ.ಆರ್.ನಗರ ಕಾವೇರಿ ತೀರದ ಅರ್ಕೇಶ್ವರ

ನಾವು ಕಪ್ಪಡಿ ದರ್ಶನ ಮಾಡಿಕೊಂಡು ಕೆ.ಆರ್.ನಗರದ ಅರ್ಕೇಶ್ವರ ದೇವಸ್ಥಾನ ನೋಡಲು ಪ್ರಯಾಣ ಮುಂದುವರೆಸಿದೆವು. ಕೆ.ಆರ್.ನಗರದಿಂದ ಹಾಸನ ರಸ್ತೆಯಲ್ಲಿ ಮೂರ್ನಾಲ್ಕು ಕಿ.ಮೀ. ದೂರದಲ್ಲಿ ಕಾವೇರಿ ನದಿಯ ದಂಡೆಯಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group