ಸಿಂದಗಿ; ರಾಜ್ಯದಲ್ಲಿ ದುರಾಡಳಿತ ಭ್ರಷ್ಟಾಚಾರ ಅನ್ಯಾಯ ದೌರ್ಜನ್ಯಗಳ ವಿರುದ್ಧ ನಿರಂತರವಾಗಿ ಹೋರಾಟ ಮಾಡುತ್ತಿರುವ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ತನ್ನ ಪ್ರಾಮಾಣಿಕ ಹೋರಾಟದಿಂದ ನಾಡಿನ ಜನರ ಪ್ರೀತಿ ಮತ್ತು ವಿಶ್ವಾಸ ಗಳಿಸುತ್ತಿದ್ದು ಹಾಗೂ ಹೆಚ್ಚಿನ ಜನರು ಸದಸ್ಯತ್ವ ಪಡೆಯಲು ಮುಂದಾಗುತ್ತಿದ್ದಾರೆ ಪಕ್ಷವನ್ನು ಮತ್ತಷ್ಟು ಬಲಪಡಿಸಲು ಮತ್ತು ಜನರ ಬಳಿಗೆ ಒಯ್ಯಲು ಯುವನೇತಾ ಬೈಠಕ ಅಭಿಯಾನದ ಮೂಲಕ ಸಿಂದಗಿ ಭಾಗದಲ್ಲಿ ಇನ್ಮುಂದೆ ಜನ ಪರವಾದ ಕೆಲಸಗಳು ಮುಂದುವರೆಯಲಿದೆ ಎಂದು ಕೆಆರ್.ಎಸ್.ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಶಿವನಂದ ಯಡಹಳ್ಳಿ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಿಂದಗಿ ಭಾಗದ ಕೆಆರ್ಎಸ್ ಪಕ್ಷದ ನೂತನ ಕ್ರಾಂತಿಗೆ ಸಿಂದಗಿ ಭಾಗದ ಜನ ಕ್ರಾಂತಿಕಾರಿಗಳಾದ ನೀವು ಹೊಸ ಕ್ರಾಂತಿಗೆ ಮುನ್ನುಡಿ ಬರೆಯಿರಿ, ಸತ್ಯ ನ್ಯಾಯ ನೀತಿ ಧರ್ಮದ ಆಧಾರದ ಮೇಲೆ ಹೊಸ ಯುಗದ ರಾಜಕಾರಣವನ್ನು ಸ್ಥಾಪಿಸಲು ಅದೆಷ್ಟೋ ದುಷ್ಟ ಶಕ್ತಿಗಳನ್ನು ಎದುರಿಸಿ ಅಧರ್ಮವನ್ನು ಬಗ್ಗಿ ಬಡಿದು ಭ್ರಷ್ಟ ರನ್ನು ಮೆಟ್ಟಿ ನಿಂತು ಸರ್ವ ಜನಾಂಗದ ಶಾಂತಿಯ ತೋಟವನ್ನು ಕಟ್ಟಿ, ನೊಂದ ಪ್ರಜೆಯ ಧನಿಯಾಗಿ ಹೊರಹೊಮ್ಮುತ್ತಿರುವ ಏಕೈಕ ಪಕ್ಷವಾಗಿದೆ ಎಂದರು.
ಕೆಆರ್‌ಎಸ್ ಪಕ್ಷದ ನಬಿ ಹುಣಶ್ಯಾಳ ಮಾತನಾಡಿ, ಅಕ್ರಮವಾಗಿ ಮದ್ಯ ಮಾರಾಟ ದಂಧೆ ಅವ್ಯಾಹತವಾಗಿ ನಡೆಸುತ್ತ ಯುವಕರನ್ನು ದಮನ ಮಾಡುವ ಹುನ್ನಾರ ಇಂದಿನ ರಾಜಕೀಯ ಪಕ್ಷಗಳು ನಡೆಸುತ್ತಿದ್ದು ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಯುವ ನೇತಾ ಬೈಠಕ್ ಅಭಿಯಾನದ ಮೂಲಕ ಯುವಕರನ್ನು ಒಂದೂಗೂಡಿಸುವ ಕಾರ್ಯಕ್ಕೆ ಈ ಪಕ್ಷ ಮುಂದೆ ಹೋಗುತ್ತಿದೆ ಇದರಿಂದ ಭ್ರಷ್ಠಮುಕ್ತ ಸರಕಾರ ನಡೆಸಲು ಸಾಧ್ಯವಾಗುತ್ತದೆ ಆ ನಿಟ್ಟಿನಲ್ಲಿ ಹೋಬಳಿ, ಗ್ರಾಮೀಣ ಮಟ್ಟದಲ್ಲಿ ಸಂಘಟನೆ ಬಲವರ್ಧನೆ ಮಾಡಲಾಗುತ್ತಿದೆ ಯುವಕರು ಮುಂದೆ ಬರಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಅಶೋಕ ಜಾಧವ, ಪ್ರವೀಣ ಕನಸೆ, ನಾಗನಿಂಗ ನಾಟಿಕಾರ ಇದ್ದರು.

