ಖಂಡ್ರೆ ಡಿಸಿಎಂ ಆಗಲೆಂದು ಹೋರಾಟಕ್ಕಿಳಿದ ಸ್ವಾಮೀಜಿಗಳು; ರಾಜಕಾರಣಕ್ಕಿಳಿದ ಕಾವಿ ರಂಗು

0
1502

ಬೀದರ– ಬೇಕೇ ಬೇಕು ಡಿಸಿಎಂ ಬೇಕು… ಇಲ್ಲದಿದ್ದರೆ ಉಗ್ರ ಹೋರಾಟ ಎಂದು ಕೈ ಮೇಲೆತ್ತಿ ಹೋರಾಟದ ಎಚ್ಚರಿಕೆ ಕೊಡುತ್ತಿರುವ ಇವರು ರಾಜಕೀಯ ನಾಯಕರಲ್ಲ, ಸರ್ವ ಸಂಗ ಪರಿತ್ಯಾಗಿಗಳೆನಿಸಿದ ಸ್ವಾಮೀಜಿಗಳು !

ಹೌದು, ಬೀದರ ಜಿಲ್ಲೆಯ ಎಲ್ಲ ಸ್ವಾಮೀಜಿಗಳು ಸೇರಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆಯವರಿಗೆ ಡಿಸಿಎಂ ಸ್ಥಾನ ನೀಡಬೇಕೆಂದು ಘೋಷಣೆ ಕೂಗುತ್ತ ಹೋರಾಟಕ್ಕೆ ಇಳಿದಿದ್ದು, ತಮ್ಮ ಬೇಡಿಕೆ ಈಡೇರದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಹೇಳಿದ್ದಾರೆ.

ಬೀದರ್‌ನಲ್ಲಿ ಜಿಲ್ಲೆಯ ವಿವಿಧ ಮಠಾಧೀಶರು ಸುದ್ದಿಗೋಷ್ಠಿ ನಡೆಸಿ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಈಶ್ವರ ಖಂಡ್ರೆ ಪ್ರಭಾವಿ ನಾಯಕರಾಗಿದ್ದು ಕಲ್ಯಾಣ ಕರ್ನಾಟಕ  ಅಭಿವೃದ್ದಿ ಆಗಬೇಕಾದರೆ, ಈಶ್ವರ ಖಂಡ್ರೆಯವರಿಗೆ ಸೂಕ್ತ ಸ್ಥಾನಮಾನ ಸಿಗಬೇಕು. ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕಾದರೆ ಲಿಂಗಾಯತರ ಕೊಡುಗೆ ಅಪಾರ ಇದೆ. ಹಿಂದೆ ವೀರೇಂದ್ರ ಪಾಟೀಲ‌ ಇದ್ದಾಗ, ಅಭಿವೃದ್ದಿ ಆಗಿದ್ದು ಹೊರತುಪಡಿಸಿ ಮತ್ತೆ ಯಾವುದೇ ಅಭಿವೃದ್ದಿ ಆಗಿಲ್ಲ. ಬೀದರ್ ಜಿಲ್ಲೆಯವರಿಗೆ ಇದುವರೆಗೆ ಯಾವುದೇ ಉನ್ನತ ಖಾತೆಯನ್ನು ನೀಡಿಲ್ಲ ಆದ್ದರಿಂದ ಈ ಬಾರಿ ಈಶ್ವರ ಖಂಡ್ರೆಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಲೇಬೇಕು ಎಂದು ಸ್ವಾಮೀಜಿಗಳು ಒಕ್ಕೊರಲಿನಿಂದ ಆಗ್ರಹಿಸಿದರು.

ತಮ್ಮ ಈ ಬೇಡಿಕೆಯ ಸಲುವಾಗಜ ರಾಹುಲ್ ಗಾಂಧಿ,ಸೋನಿಯಾ ಗಾಂಧಿ ಅವರೊಂದಿಗೆ ಮಾತುಕತೆ ನಡೆಸಲು ತಯಾರಿದ್ದೇವೆ. ಸೋನಿಯಾ ಅವರ, ಡೇಟ್ ಕೂಡಾ ಕೇಳಿದ್ದೇವೆ, ಅವರ ಜೊತೆ ಚರ್ಚೆ ಮಾಡಿ, ಖಂಡ್ರೆಗೆ ಸ್ಥಾನಮಾನ ನೀಡುವಂತೆ ಕೇಳುತ್ತೇವೆ.ಸಿಎಂ ಸ್ಥಾನ ನಿರ್ವಹಿಸಲು ಕೂಡ ಈಶ್ವರ ಖಂಡ್ರೆ ಸಮರ್ಥರಿದ್ದಾರೆ, ಅವರಿಗೆ ಸಿಎಂ ಸ್ಥಾನ ನೀಡಬೇಕು ಅಥವಾ ಡಿಸಿಎಂ ಸ್ಥಾನ  ನೀಡಬೇಕು ಎಂದು ಸ್ವಾಮೀಜಿಗಳು ಆಗ್ರಹಿಸಿದರು.

ಈ ಹೋರಾಟದಲ್ಲಿ  ತಡೋಳ ಮಠದ ಶ್ರೀಗಳು, ಭಾಲ್ಕಿ ಮಠದ ಶ್ರೀಗಳು, ಹುಡಗಿ ಮಠದ ಶ್ರೀಗಳು, ಹಲಸೂರು ಮಠದ ಶ್ರೀಗಳು ಸೇರಿದಂತೆ ವಿವಿಧ ಸ್ವಾಮೀಜಿಗಳು ಭಾಗಿಯಾಗಿದ್ದು ಸಮಾಜ ಸೇವೆ, ಆಧ್ಯಾತ್ಮಿಕ ಸೇವೆ ಮಾಡಬೇಕಾದ ಸ್ವಾಮೀಜಿಗಳು, ಸರ್ವ ಸಂಗ ಪರಿತ್ಯಾಗಿಗಳು ಎನಿಸಿಕೊಳ್ಳಬೇಕಾದ ಸ್ವಾಮೀಜಿಗಳು ರಾಜಕಾರಣದಂಥ ವಿಷಯದಲ್ಲಿ ಪಾಲ್ಗೊಂಡು ರಾಜಕಾರಣಕ್ಕೇ ವಿಭಿನ್ನ ರಂಗು ತಂದಿದ್ದು ಭಕ್ತ ಸಮೂಹದಲ್ಲಿ ಗೊಂದಲ ಮೂಡುವಂತಾಯಿತು. ಕೈ ಮೇಲೆತ್ತಿ ಪಕ್ಕಾ ರಾಜಕಾರಣಿಗಳಂತೆ ಸ್ವಾಮೀಜಿಗಳು ಒಬ್ಬ ರಾಜಕಾರಣಿಯ ಪರವಾಗಿ ವಕಾಲತ್ತು ವಹಿಸಿ ಘೋಷಣೆ ಕೂಗುತ್ತ ಇದ್ದದ್ದು ಮುಂದಿನ ದಿನಗಳಲ್ಲಿ ಆಧ್ಯಾತ್ಮಿಕ ಜಗತ್ತು ಯಾವ ರೂಪ ಪಡೆಯಬಹುದು ಎಂಬುದು ಚರ್ಚಾಸ್ಪದ ಸಂಗತಿಯಾಗಿ ಮಾರ್ಪಟ್ಟಿದೆ ಎಂದರೆ ತಪ್ಪಲ್ಲ.


ವರದಿ: ನಂದಕುಮಾರ ಕರಂಜೆ, ಬೀದರ