ನಾಗಪ್ಪಣ್ಣ ದುರಡಿ ಅವರ ಸಂದರ್ಭೋಚಿತ ಧೈರ್ಯಶಾಲಿ ವರ್ತನೆಯಿಂದ ಆ ದಿವಸ ಅಲ್ಲಿ ಕೂಡಿದ್ದ ಉದ್ರಿಕ್ತ ಗುಂಪು ಅಲ್ಲಿಂದ ಕರಗಿತು.
ಆದರೆ ಆ ಗುಂಪು ಅಲ್ಲಿಂದ ಮತ್ತೇ ಕೂಗು ಹಾಕುತ್ತ ಮಹಾಲಿಂಗಪೂರ ರಸ್ತೆಯಲ್ಲಿರುವ ಮಾಂಡವಕರ ಬಂಗಲೆಯ ಮೇಲೆ ದಾಳಿ ಮಾಡಿತು. ಮನೆಯಲ್ಲಿ ನುಗ್ಗಿದ ಜನರು ತಮ್ಮ ಕೈಗೆ ಸಿಕ್ಕ ಸಿಕ್ಕಿದ್ದನ್ನು ದೋಚತೊಡಗಿದರು. ಕೆಲವರು ತಿಂಡಿ ತಿನಿಸುಗಳ ಮೇಲೆ ಲಗ್ಗೆ ಹಾಕಿದರು. ಒಬ್ಬ ತುಪ್ಪದ ಗಿಂಡಿಯನ್ನು ಹಿಡಿದು ಓಡುವಾಗ ಅವನ ಕೈಯಲ್ಲಿಯ ತುಪ್ಪವೆಲ್ಲ ನೆಲದ ಮೇಲೆ ಚೆಲ್ಲಾಡಿತು. ಬಹುಶಃ ಈ ಘಟನೆಗಳ ವಿವರವನ್ನು ನಂತರ ” ಭೂತಯ್ಯನ ಮಗ ಅಯ್ಯು ” ಚಿತ್ರ ತಯಾರಿಸಿದ ಎನ್. ವೀರಾಸ್ವಾಮಿಗೆ ಯಾರೊ ಹೇಳಿದ ಹಾಗೆ ಕಾಣುತ್ತೆ ! ಏಕೆಂದರೆ ಅವರ ಆ ಚಿತ್ರದಲ್ಲಿ ಲೂಟಿ ಮಾಡುವವರು ಒಡವೆ ವಸ್ತುಗಳನ್ನು ಕೊಳ್ಳೆ ಹೊಡೆಯುತ್ತಿರುತ್ತಾರೆ. ಆದರೆ ಒಬ್ಬ ಮಾತ್ರ ಅದ್ಯಾವುದರ ಗೊಡವೆಗೆ ಹೋಗದೆ ‘ ಉಪ್ಪಿನಕಾಯಿ ಭರಣಿ ‘ ಹೊರಗಡೆ ತಂದು ಅವುಗಳನ್ನು ತಿನ್ನಲು ಹಪಹಪಿಸುತ್ತಿರುತ್ತಾನೆ. ಹಾಗೆ ಇಲ್ಲಿಯೂ ಒಬ್ಬ ತುಪ್ಪದ ಗಿಂಡಿಯ ಮೇಲೆ ಕಣ್ಣಿಟ್ಟಿರುತ್ತಾನೆ. ಆದರೆ ಅವನ ಕೈಯಿಂದ ಜಾರಿ ಆ ತುಪ್ಪ ಅಲ್ಲಿಯೇ ನೆಲದ ಮೇಲೆಲ್ಲ ಪಸರಿಸಿರುತ್ತದೆ.
ಮನೆಯ ಪಕ್ಕದಲ್ಲಿ ಪಾವರ್ ಲೂಮ್ ಕಾರ್ಖಾನೆ ಇತ್ತು. ಕಾರ್ಖಾನೆಯ ಬಾಗಿಲನ್ನು ಕೂಡಿದ ಜನಜಂಗುಳಿಯು ಒಡೆದು ತೆಗೆಯುತ್ತಾರೆ. ಒಳಗಡೆ ಮಗ್ಗಗಳ ಮೇಲೆ ಇದ್ದ ನೂಲು ಬೆಂಕಿಗೆ ಆಹುತಿಯಾಗುತ್ತದೆ. ಎರಡು ಮೋಟಾರು ಕಾರು, ಸೈಕಲ್ ಮೋಟಾರು ಹೀಗೆ ಎಲ್ಲದಕ್ಕೂ ಬೆಂಕಿ ಹಚ್ಚಿ ಕೇಕೇ ಹಾಕತೊಡಗುತ್ತಾರೆ.
ಅಲ್ಲಿ ಮಗ್ಗುಲಲ್ಲಿ ಸಣಕಲ್ ಅವರ ಬಂಗಲೆಯಲ್ಲಿ ಶ್ರೀ ಶಂಕರರಾವ್ ಮಾಂಡವಕರ ಅವರು ಇರುತ್ತಾರೆ. ಈ ಗಲಭೆಯಿಂದಾಗಿ ” ನೀವು ಇಲ್ಲಿಯೇ ಇರ್ರಿ ; ಹೊರಗೆ ಬರಬೇಡಿ ” ಅಂತ ಹೇಳಿ ಅವರನ್ನು ಒಳಗಡೆಯೇ ಸದುದ್ದೇಶದಿಂದ ಅವರ ಹಿತೈಷಿಗಳು ಅವರನ್ನು ಕೂಡಿ ಹಾಕಿರುತ್ತಾರೆ. ಆದರೆ ಉದ್ರಿಕ್ತ ಗುಂಪು ಅಲ್ಲಿ ಎಲ್ಲದಕ್ಕೂ ಬೆಂಕಿ ಹಚ್ಚಲು ಶುರು ಮಾಡುತ್ತದೆ. ಇದನ್ನು ಅಲ್ಲಿಯ ಕಿಟಕಿಯಿಂದ ಎಲ್ಲವನ್ನೂ ನೋಡುತ್ತಿದ್ದ ಶಂಕರರಾವ್ ಮಾಂಡವಕರರು, ಅಲ್ಲಿ ಹೊರಗಡೆ ಇದ್ದ ಸಣಕಲ್ಲರವರ ಕಾರು ಚಾಲಕ ಹನಗಂಡಿಯ ಚನ್ನಪ್ಪ ಎಂಬವನಿಗೆ ತನ್ನನ್ನು ಕೂಡಿ ಹಾಕಿದ ಕೋಣೆಯ ಬಾಗಿಲನ್ನು ತೆರೆಯಲು ಒತ್ತಾಯಿಸುತ್ತಾರೆ. ಅವರ ಒತ್ತಾಯಕ್ಕೆ ಮಣಿದು ಚನ್ನಪ್ಪನು ಅವರನ್ನು ಕೂಡಿ ಹಾಕಿದ ಬಾಗಿಲು ತೆರೆಯುತ್ತಾನೆ.
ಬಾಗಿಲು ತೆರೆದ ಕೂಡಲೇ ಶಂಕರರಾವ ಮಾಂಡವಕರರು ಧಾವಿಸುತ್ತ ಜಾಳ್ ಪೋಳ್ ನಡೆದಲ್ಲಿ ಹೋಗುತ್ತಾರೆ. ಅಲ್ಲಿ ಕೂಡಿದ ಜನರಿಗೆ ಅವರು ಕೈಮುಗಿದು “ದಯವಿಟ್ಟು ಯಾವುದಕ್ಕೂ ಬೆಂಕಿ ಹಚ್ಚಬೇಡಿರಿ ; ನಿಮಗೇನು ಬೇಕೋ ತೊಗೊಳ್ರಿ. ” ಅನ್ನುತ್ತ ಮನೆಯ ಒಳಗಡೆ ಓಡುತ್ತ ಹೋಗುತ್ತಾರೆ. ಯಾರದೋ ಕೈಯಿಂದ ತುಪ್ಪ ಜಾರಿ ನೆಲದ ಮೇಲೆ ಬಿದ್ದಿರುತ್ತದೆ. ಅದರ ಮೇಲೆ ಇವರು ಕಾಲು ಊರಿ ಜಾರಿ ಬೀಳುತ್ತಾರೆ. ಅದರಿಂದ ಸಾವರಿಸಿಕೊಂಡು ಎದ್ದು ನಿಲ್ಲುವಷ್ಟರಲ್ಲಿ ಹೊರಗಿನಿಂದ ಒಂದು ಕಲ್ಲು ಬಂದು ಇವರ ಎದೆಗೆ ಜೋರಾಗಿ ಬಡಿಯುತ್ತದೆ. ಆಗ ಮತ್ತೆ ಅವರು ಕೆಳಗೆ ಬೀಳುತ್ತಾರೆ.
ಇದೆಲ್ಲ ಭೀಭತ್ಸ ಘಟನೆ ನಡೆದಿರುವಾಗ ಅಲ್ಲಿಗೆ ಬಂದಿದ್ದ ಏಕೈಕ ಪೋಲಿಸ್ ಕಾನ್ಸಟೇಬಲ್ ಓರ್ವನು ಉದ್ರಿಕ್ತ ಗುಂಪು ಚದುರಿಸಲು ತನ್ನ ಬಳಿಯಿದ್ದ ರೈಫಲ್ ನಿಂದ ಒಂದು ಗುಂಡನ್ನು ಗಾಳಿಯಲ್ಲಿ ಹಾರಿಸುತ್ತಾನೆ. ಅಷ್ಟಕ್ಕೂ ಗುಂಪು ಚದುರದಿದ್ದಾಗ ಇನ್ನೊಂದು ಗುಂಡನ್ನು ಜನರ ಕಡೆಗೆ ಹಾರಿಸುತ್ತಾನೆ. ಆಗ ಆತ ಹಾರಿಸಿದ ಗುಂಡು ಗುಂಪಿನಲ್ಲಿದ್ದ ಒಬ್ಬನ ತೊಡೆಗೆ ತಗುಲುತ್ತದೆ . ಗುಂಡು ತಗುಲಿದವನ ರಕ್ತ ಸ್ರಾವ ಮತ್ತು ಆತನ ಆಂಕ್ರದನ ಕೇಳಿ ಉದ್ರಿಕ್ತ ಗುಂಪು ಮತ್ತಷ್ಟು ಉದ್ರಿಕ್ತ ಗೊಳ್ಳುತ್ತದೆ.
ಅತ್ತ ಶಂಕರರಾವ್ ಮಾಂಡವಕರ ಅವರನ್ನು ಅಲ್ಲಿಂದ ಎತ್ತಿ ಅವರ ಮನೆಯ ಹಿಂದೆ ಒಂದು ಗಿಡದ ಕೆಳಗೆ ಮಲಗಿಸುತ್ತಾರೆ. ಇಲ್ಲಿಯೂ ನಾಗಪ್ಪಣ್ಣ ದುರಡಿ ಅವರ ಚಿರಂಜೀವ ಬಲದೇವ ದುರಡಿ ಅವರು ತಮ್ಮ ಬಂಗಲೆಯಿಂದ ಅಲ್ಲಿಗೆ ಬರುತ್ತಾರೆ. ಬಲದೇವರು, ಶಂಕರರಾವ್ ಮಾಂಡವಕರರ ಎದೆ ತಿಕ್ಕುವದು , ನೀರು ಕುಡಿಸುವುದು ಮುಂತಾದ ಉಪಚಾರ ಮಾಡುತ್ತಾರೆ.
ಒಂದು ಗುಂಡು ಗಾಳಿಯಲ್ಲಿ ಇನ್ನೊಂದು ಗುಂಡು ಉದ್ರಿಕ್ತ ಜನರಲ್ಲಿ ಹಾರಿಸಿದ ನಂತರ, ಆತನ ಹತ್ತಿರ ಗುಂಡುಗಳು ಖಾಲಿಯಾಗುತ್ತವೆ. ಇದೀಗ ಆತನ ಬಳಿ ಗುಂಡುಗಳು ಖಾಲಿಯಾಗಿದ್ದನ್ನು ಮನವರಿಕೆ ಮಾಡಿಕೊಂಡ ಉದ್ರಿಕ್ತ ಜನಜಂಗುಳಿ ಅವನ ಬೆನ್ನು ಬೀಳುತ್ತವೆ. ಆತ ಓಡುತ್ತ ಒಂದು ಕೈಯಲ್ಲಿ ಬಂದುಕು ಹಿಡಿದು ಹಿಂದೆ ನೋಡುತ್ತ ಮತ್ತೊಮ್ಮೆ ಮುಂದೆ ನೋಡುತ್ತ , ಆ ಬಂದೂಕಿನಿಂದ ಬೆದರಿಸುತ್ತ ರಬಕವಿಯ ಪೋಲಿಸ್ ಔಟ್ ಪೋಸ್ಟ್ ಗೆ ಹೋಗಿ ಒಳಗೆ ಅಡಗಿ ಕೂಡುತ್ತಾನೆ.
(ಇನ್ನು ಉಳಿದ ವಿವರ ಮತ್ತೇ ನಾಳೆ ಹೇಳುವೆ)
– ನೀಲಕಂಠ ದಾತಾರ