ಶರಣ ಮೇಳ ಕೇವಲ ಜಾತ್ರೆಯಲ್ಲ ಅನುಭವ ಹಂಚಿ ಅನುಭಾವ ಪಡೆದು ಪುನೀತರಾಗುವ ಮಹಾಮೇಳ
ಪ್ರತಿ ವರ್ಷ ಕೂಡಲಸಂಗಮದಲ್ಲಿ ಜರುಗುವ ಶರಣ ಮೇಳ ಬಂದು ಹೋಗುವ ಜನಕೂಡಿಸುವ ಜಾತ್ರೆಯಲ್ಲ. ಅನುಭಾವ ಹಂಚುವ,ಹೊಸತನ್ನು ಅನುಭವಿಸುವ,ನಮ್ಮ ಜೀವನ ಶೈಲಿಯನ್ನು ತಿದ್ದಿಕೊಳ್ಳುವ, ನಮ್ಮನ್ನು ಸಾಕ್ಷಾತ್ಕಾರ ಮಾಡಿಕೊಳ್ಳುವ ಮಹಾಮೇಳವಾಗಿದೆ ಎಂದು ಶರಣ ಮೇಳದ ಕಾರ್ಯಾಧ್ಯಕ್ಷರು ಕೂಡಲಸಂಗಮ ಪೀಠದ ಮಹಾ ಜಗದ್ಗುರುಗಳು ಆದ ಶ್ರೀ. ಮ. ನಿ. ಪ್ರ ಡಾ ಮಾತೆ ಗಂಗಾದೇವಿಯವರು ಹೇಳಿದರು.
ಬುಧವಾರ ದಿ.7ರಂದು ‘ಲಿಂಗಾಯತ ಸಂಘಟನೆ ‘ವತಿಯಿಂದ ಬೆಳಗಾವಿ ನಗರದ ಫ. ಗು.ಹಳಕಟ್ಟಿ ಭವನದಲ್ಲಿ ಹಮ್ಮಿಕೊಂಡಿದ್ದ ಜನವರಿ ತಿಂಗಳಲ್ಲಿ ಕೂಡಲಸಂಗಮದಲ್ಲಿ ಜರುಗಲಿರುವ ’36ನೇ ಶರಣ ಮೇಳ’ದ ಪ್ರಚಾರ ಸಭೆಯಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಶರಣ ಮೇಳದ ವೈಶಿಷ್ಟಯವನ್ನು ವಿವರಿಸಿದ ಅವರು, ಧರ್ಮದ ಅಸಮಾನತೆಯನ್ನು ಹೋಗಲಾಡಿಸಿ ಜಾತಿ,ಮತ,ಲಿಂಗ ತಾರತಮ್ಯವಿಲ್ಲದೆ ಜರುಗುವ ಶರಣ ಮೇಳ ಮೂಢನಂಬಿಕೆಗಳನ್ನು ಬದಿಗಿರಿಸುವ ನಮ್ಮನ್ನು ನಾವು ಶುದ್ಧೀಕರಣ ಗೊಳಿಸುವ ವೇದಿಕೆಯಾಗಿದೆ ಆ ನಿಟ್ಟಿನಲ್ಲಿ ಎಲ್ಲರೂ ಸಹ ಶರಣ ಮೇಳದಲ್ಲಿ ಭಾಗವಹಿಸಿ ಶರಣರ ಅನುಭಾವದ ನುಡಿಗಳನ್ನು ಆಲಿಸುವುದರ ಮೂಲಕ ಪುನೀತರಾಗಬೇಕೆಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಶರಣಮೇಳದ ಪ್ರಚಾರಾರ್ಥ ಪೋಸ್ಟರ್ ಅನ್ನು ಬಿಡುಗಡೆಗೊಳಿಸಲಾಯಿತು.
ಪ್ರಸ್ತಾವಿಕವಾಗಿ ಲಿಂಗಾಯತ ಸಂಘಟನೆಯ ಅಧ್ಯಕ್ಷ ಈರಣ್ಣ ದೇಯನ್ನವರ ಮಾತನಾಡಿ, ಎಲ್ಲ ಸಂಘಟನೆಗಳು ಕೂಡಿ ಸರ್ವರಿಗೂ ಸದುಪಯೋಗವಾಗುವ ಐಕ್ಯತೆ ಸಾಮರಸ್ಯವನ್ನು ಬೆಳೆಸುವ ಈ ಮೇಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶರಣರು ಭಾಗವಹಿಸಿ ಯಶಸ್ವಿಗೊಳಿಸಲು ಶ್ರಮಿಸುತ್ತೇವೆ ಎಂದರು.
ಕಾರ್ಯಕ್ರಮದಲ್ಲಿ ಯೋಗೇಶ್ವರ ಸ್ವಾಮಿಗಳು, ಬಸವ ಪ್ರಕಾಶ ಸ್ವಾಮೀಜಿ ಮತ್ತು ಬಸವ ರತ್ನ ಮಾತಾಜಿಯವರು ಶರಣ ಸಂಪ್ರದಾಯದಲ್ಲಿ ಬೆಸೆದುಕೊಂಡಿರುವ ಮೇಳ ನಡೆದು ಬಂದ ದಾರಿ ಮತ್ತು ಮಹತ್ವವನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ಶರಣರಾದ ಶಂಕರ ಗುಡಸ, ಮಹಾಂತೇಶ ತೋರಣಗಟ್ಟಿ, ಸುಧೀರ ವಾಲಿ,ವೀರೇಶ ಹಲಕಿ, ವಿಜಯ ಹುದಲಿಮಠ, ಶಿವಾನಂದ ಲಾಳಸಂಗೆ, ನ್ಯಾಯವಾದಿಗಳಾದ ಕೆ.ಎಸ್. ಕೋರಿ ಶೆಟ್ಟರ, ಮಲ್ಲಿಕಾರ್ಜುನ ಶಿರಗುಪ್ಪಿ ಶೆಟ್ಟರ, ಮಹಾಂತೇಶ ಮೆಣಸಿನಕಾಯಿ, ಶಿವಾನಂದ ತಲ್ಲೂರ, ಶರಣಿಯರಾದ ಶಾಂತಾ ಕಂಬಿ, ಸುವರ್ಣಾ ಗುಡಸ, ಸುನಿತಾ ದೇವರಮನಿ, ಭಾಗ್ಯಾ ದೇಯನ್ನವರ, ರಾಜೇಶ್ವರಿ ಕಣಗನ್ನಿ,ದ್ರಾಕ್ಷಾಯಿಣಿ ಪೂಜಾರ ಸೇರಿದಂತೆ ಹಲವಾರು ಶರಣರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಆನಂದ ಕರ್ಕಿ ಸ್ವಾಗತಿಸಿದರು, ಮಹಾದೇವಿ ಅರಳಿ ಪ್ರಾರ್ಥಿಸಿದರು ಸದಾಶಿವ ದೇವರಮನಿ ನಿರೂಪಿಸಿದರು ಕೊನೆಯಲ್ಲಿ ಸಂಗಮೇಶ ಅರಳಿ ವಂದಿಸಿದರು.