ಮೈಸೂರು: ನಗರದ ಭಾಮೀಸ್ ಫೌಂಡೇಶನ್‍ನ ಸಂಸ್ಥಾಪಕ ಡಾ.ರಾಘವೇಂದ್ರ ಪ್ರಸಾದ್ ಮತ್ತು ನಗರದ ಶಾಂತಲಾ ಚಿತ್ರಮಂದಿರದ ವ್ಯವಸ್ಥಾಪಕರಾಗಿದ್ದ ಎಂ.ಜಿ.ದೇವರಾಜ್ ಅವರುಗಳ ಆಶೀರ್ವಾದದೊಂದಿಗೆ ಎಸ್.ಜೆ.ಸಿ.ಇ. ನಿವೃತ್ತ ಪ್ರಾಧ್ಯಾಪಕ ಡಾ.ಕೆ.ಎಸ್.ಮಂಜುನಾಥ್‍ರವರ ಸಾರಥ್ಯದಲ್ಲಿ ಜಗನ್ಮೋಹನ ಅರಮನೆಯಲ್ಲಿ ಇತ್ತೀಚೆಗೆ ‘ಹಾಡು-ಹಳೆಯದಾದರೇನು ಭಾವ ನವನವೀನ’ ಕನ್ನಡ ಮತ್ತು ಹಿಂದಿ ಚಲನಚಿತ್ರಗಳ ಸಂಗೀತ ಸಂಜೆಯನ್ನು ಆಯೋಜಿಸಲಾಗಿತ್ತು.
ಮೊದಲಿಗೆ ಡಾ.ಮಂಜುನಾಥ್ ಕವಿರತ್ನ ಕಾಳಿದಾಸ ಚಿತ್ರದ ‘ಮಾಣಿಕ್ಯವೀಣಾ ಮುಪಲಾಲಯಂತಿ’ ಗೀತೆಯೊಂದಿಗೆ ಪ್ರಾರ್ಥನೆ ಸಲ್ಲಿಸಿದರು.
ನಂತರ ಮತ್ತೊಬ್ಬ ಎಸ್.ಜೆ.ಸಿ.ಇ. ನಿವೃತ್ತ ಪ್ರಾಧ್ಯಾಪಕ, ಗಾಯಕ ಡಾ.ಎ.ಡಿ.ಶ್ರೀನಿವಾಸನ್ ಸೂರ್ಯವಂಶ ಚಿತ್ರದ ‘ಸೇವಂತಿಯೇ ಸೇವಂತಿಯೇ’, ಹಿಂದಿ ಚಲನಚಿತ್ರ ಮೆಹಬೂಬದಿಂದ ಮೇರೇ ನೈನಾ, ಬಡವರ ಬಂಧು ಚಿತ್ರದ ನಿನ್ನ ಕಂಗಳ ಬಿಸಿಯ ಹನಿಗಳು, ಹಿಂದಿ ಚಲನಚಿತ್ರ ಆರಾಧನಾದಿಂದ ಮೇರೇ ಸಪನೋಂಕಿ ರಾಣಿ… ಗೀತೆಗಳನ್ನು ಪ್ರಸ್ತುತ ಪಡಿಸಿದರು.
ನಂತರ ಡಾ.ಕೆ.ಎಸ್.ಮಂಜುನಾಥ್ ಹಾಗೂ ಸಹನಾ ನಾ ನಿನ್ನ ಮರೆಯಲಾರೆ ಚಿತ್ರದ ಎಲ್ಲೆಲ್ಲಿ ನೋಡಲಿ ಹಾಡನ್ನು ಬಹಳ ಸೊಗಸಾಗಿ ಹಾಡಿದರು. ಯುಗಳ ಗೀತೆಯಲ್ಲಿ ಡಾ.ಎ.ಡಿ.ಶ್ರೀನಿವಾಸನ್ ಹಾಗೂ ಮತ್ತೊಬ್ಬ ಯುವ ಪ್ರತಿಭೆ ಹಂಸಿನಿ ಕುಮಾರ್‍ರವರು ನಾ ನಿನ್ನ ಬಿಡಲಾರೆ ಚಿತ್ರದ ನಾನು ನೀನು ಒಂದಾದ ಮೇಲೆ, ಇಂದ್ರಜಿತ್ ಚಿತ್ರದ ಬೆಳ್ಳಿ ರಥದಲಿ ಸೂರ್ಯ ತಂದ ಕಿರಣ ಗೀತೆಯನ್ನು ಬಹಳ ತನ್ಮಯತೆಯಿಂದ ಪ್ರಸ್ತುತಪಡಿಸಿದರು.
ಸುಮಾರು ಮೂರು ಗಂಟೆಗಳಿಗೂ ಹೆಚ್ಚು ಕಾಲ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಹಾಡಿನ ಆಯ್ಕೆಯೂ ಅಷ್ಟೇ ಮಧುರವಾಗಿತ್ತು. ಎಲ್ಲ ಗಾಯಕ-ಗಾಯಕಿಯರೂ ನಾವು ಯಾವ ಡಾ.ರಾಜ್, ಡಾ.ಎಸ್‍ಪಿಬಿ, ಡಾ.ಪಿಬಿಎಸ್, ಎಸ್.ಜಾನಕಿಗೆ ಕಡಿಮೆಯಿಲ್ಲ ಎಂಬಂತೆ ಸುಶ್ರಾವ್ಯವಾಗಿ ಹಾಡಿದರು. ಪ್ರೇಕ್ಷಕರೂ ಸಭಾಂಗಣದಲ್ಲಿ ಕಟ್ಟ ಕಡೆಯ ಹಾಡಿನವರೆಗೂ ಅಲುಗದೇ ಕುಳಿತು ಸಂಗೀತ ರಸಸಂಜೆಯನ್ನು ಆಹ್ಲಾದಿಸಿದರು.