ಮುನವಳ್ಳಿ: “ನಮ್ಮ ಜೀವನದಲ್ಲಿ ಸತ್ಕಾರ್ಯಕ್ಕೆ ವಸ್ತುಗಳ ರೂಪದಲ್ಲಿ ಹಣದ ರೂಪದಲ್ಲಿ ಅಥವ ಇನ್ನಿತರ ರೂಪದಲ್ಲಿ ನೀಡುವ ದಾನ ಅಥವಾ ದೇಣಿಗೆಗಳು ಬದುಕಿನಲ್ಲಿ ಉತ್ತಮ ಜೀವನ ಮತ್ತು ಸ್ವಾಸ್ತ್ಯ ಬದುಕನ್ನು ನಡೆಸಿಕೊಡುತ್ತವೆ.
ಜ್ಞಾನ ಪೂರ್ವಕವಾಗಿಯಾದರೂ ಸರಿ ಕರ್ತವ್ಯವೆಂಬ ದೃಷ್ಟಿಯಿಂದ ದಾನವನ್ನು ಕೊಡಬೇಕೆಂದು ಹೇಳುವರು. ನಮ್ಮ ಡೈಟ್ ಸಂಸ್ಥೆಯ ವತಿಯಿಂದ ೬ ಮತ್ತು ೭ ನೇ ತರಗತಿಗಳಿಗೆ ಸಂಬಂಧಿಸಿದಂತೆ ಚಟುವಟಿಕೆ ಬ್ಯಾಂಕ್ ಮುದ್ರಣವಾಗುತ್ತಿದ್ದು ಅದರ ಪ್ರಕಟಣೆಗಾಗಿ ಇಂದು ಶ್ರೀ ಸೋಮೇಶ್ವರ ಸಕ್ಕರೆ ಕಾರ್ಖಾನೆ ಬೆಳವಡಿ ವತಿಯಿಂದ ಒಂದೂವರೆ ಲಕ್ಷ ರೂಪಾಯಿಗಳ ಚೆಕ್ ನೀಡುವ ಮೂಲಕ ಶೈಕ್ಷಣಿಕ ಕಾರ್ಯಕ್ಕೆ ಉತ್ತೇಜನ ನೀಡಿದ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಿಗೂ ವ್ಯವಸ್ಥಾಪಕ ನಿರ್ದೇಶಕರಿಗೂ ಇಲಾಖೆಯ ಪರವಾಗಿ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತೇನೆ” ಎಂದು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಂಶುಪಾಲರೂ ಮತ್ತು ಉಪನಿರ್ದೇಶಕರು (ಅಭಿವೃದ್ಧಿ) ಆದ ಎಂ.ಎಂ.ಸಿಂಧೂರ ತಿಳಿಸಿದರು.
ಅವರು ಬೆಳವಡಿಯ ಶ್ರೀ ಸೋಮೇಶ್ವರ ಸಕ್ಕರೆ ಕಾರ್ಖಾನೆಯ ಕಾರ್ಯಾಲಯದಲ್ಲಿ ಒಂದೂವರೆ ಲಕ್ಷ ರೂಪಾಯಿಗಳ ಚೆಕ್ ಸ್ವೀಕರಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರಾದ ಎಂ.ಡಿ.ಮಲ್ಲೂರ,ಅಧ್ಯಕ್ಷರಾದ ಮಲ್ಲಿಕಾರ್ಜುನ ಗೂಳಪ್ಪನವರ,ಉಪಾಧ್ಯಕ್ಷರಾದ ರಾಜು ಕುಡಸೋಮನ್ನವರ ಅವರನ್ನು ಶಿಕ್ಷಣ ಇಲಾಖೆಯ ಪರವಾಗಿ ಸತ್ಕರಿಸಿ ಅಭಿನಂದಿಸಲಾಯಿತು. ಡೈಟ್ ಹಿರಿಯ ಉಪನ್ಯಾಸಕರಾದ ರಾಜೇಂದ್ರ ತೇರದಾಳ ಮಾತನಾಡಿ, “ಬೆಳಗಾವಿ ಡೈಟ್ ವತಿಯಿಂದ ಶೈಕ್ಷಣಿಕ ಕ್ರಾಂತಿಯನ್ನೇ ಪ್ರಾಂಶುಪಾಲರಾದ ಎಂ.ಎಂ.ಸಿಂಧೂರ ಮಾಡುತ್ತಿದ್ದು ಇದು ರಾಜ್ಯಕ್ಕೇ ಮಾದರಿಯಾದ ಕಾರ್ಯ. ಇಂತಹ ಕಾರ್ಯಕ್ಕೆ ತಮ್ಮಂತಹ ಸಹೃದಯರು ಉದಾರ ಮನಸ್ಸಿನಿಂದ ನೀಡುತ್ತಿರುವ ಕೊಡುಗೆ ಮರೆಯಲಾಗದ್ದು ” ಎಂದು ಶ್ಲಾಘಿಸಿದರು.
ಯಕ್ಕುಂಡಿ ಸಮೂಹ ಸಂಪನ್ಮೂಲ ವ್ಯಕ್ತಿ ನಾಗರಾಜ ಪೆಂಟೇದ,ಮಲ್ಲೂರ ಗ್ರಾಮ ಪಂಚಾಯತಿ ಸದಸ್ಯರಾದ ಸೋಮಪ್ಪ ಕಬ್ಬೂರ, ಶಿಕ್ಷಕರಾದ ಎಂ.ಕೆ.ಪಾಟೀಲ ಸೇರಿದಂತೆ ಕಾರ್ಖಾನೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ಪ್ರಾಸ್ತಾವಿಕವಾಗಿ ಮಾತನಾಡಿದ ಎನ್.ಬಿ.ಪೆಂಟೇದ “ ಈ ಕಾರ್ಯಕ್ಕೆ ನಮ್ಮ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಅರ್ಜುನ ಕಂಬೋಗಿ ನಮಗೆ ಪ್ರೋತ್ಸಾಹದ ಮಾತುಗಳನ್ನಾಡಿ ಡೈಟ್ ಪ್ರಾಚಾರ್ಯರ ಕಾರ್ಯವನ್ನು ಮೆಚ್ಚಿ ಇನ್ನೂ ಹತ್ತು ಹಲವು ಮಹನೀಯರನ್ನು ಸಂಪರ್ಕಿಸಿ ಎಂ.ಎಂ.ಸಿಂಧೂರ ಅವರ ವಿಚಾರಧಾರೆಗಳಿಗೆ ಕೈಜೋಡಿಸುವ ಮೂಲಕ ಶಿಕ್ಷಣದಲ್ಲಿ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡೋಣ ಎಂದು ಹೇಳಿ ನಮ್ಮೆಲ್ಲರಿಗೂ ಪ್ರೋತ್ಸಾಹ ತುಂಬಿದ್ದು ಸೋಮೇಶ್ವರ ಸಕ್ಕರೆ ಕಾರ್ಖಾನೆಯ ಈ ಕೊಡುಗೆ ಸದಾ ಸ್ಮರಣೀಯವಾದದು”ಎಂದು ತಿಳಿಸಿದರು.ಶಿಕ್ಷಕ ಎಂ.ಕೆ.ಪಾಟೀಲ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.