ಸಿಂದಗಿ: ಈ ರಾಜ್ಯದಲ್ಲಿ ದಲಿತ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ, ಅತ್ಯಾಚಾರ, ಕೆಲವು ಕಡೆ ದಲಿತರಿಗೆ ಕ್ಷೌರ ಮಾಡುವುದಿಲ್ಲ ಎನ್ನುವ ನಾಮಫಲಕಗಳು ಜಾರಿಯಲ್ಲಿವೆ ಎಂದರೆ ಡಾ. ಅಂಬೇಡ್ಕರ ನೀಡಿದ ಸಂವಿಧಾನಕ್ಕೆ ಅಪಚಾರವೆಸಗಿದಂತೆ. ವಿಜಯಪುರ ಜಿಲ್ಲೆಯಲ್ಲಿ ನಡೆಯುತ್ತಿರುವ ಬಾಲಕಿಯರ ಮೇಲೆ ಅತ್ಯಾಚಾರ ವೆಸಗಿ ಕೊಲೆ ಮಾಡಿರುವಂಥ ಘಟನೆಗಳು ನಡೆಯುತ್ತಿದ್ದರು ಸರಕಾರ ಜಾಣ ಕುರುಡುತನ ಪ್ರದರ್ಶನ ಮಾಡುತ್ತಿರುವುದನ್ನು ದಲಿತ ಮುಖಂಡ ರಾಜಶೇಖರ ಕೂಚಬಾಳ ತೀವ್ರವಾಗಿ ಖಂಡಿಸಿದರು.
ಪಟ್ಟಣದ ಜೀತವನದಲ್ಲಿ ವಿವಿಧ ದಲಿತ ಸಂಘಟನೆಗಳ ಮುಖಂಡರು ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಎರಡು ದಿನಗಳ ಹಿಂದೆ ತಾಲೂಕಿನ ಅಂತರಗಂಗಿ ಗ್ರಾಮದಲ್ಲಿ ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಹೋಗುತ್ತಿರುವಾಗ ಎಳೆದುಕೊಂಡು ಹೋಗಿ ಅತ್ಯಾಚಾರ ವೆಸಗಿದ ಪ್ರಕರಣವನ್ನು ಸಚಿವ ಗೋವಿಂದ ಕಾರಜೋಳ ಹಾಗೂ ಸಂಸದ ರಮೇಶ ಜಿಗಜಿಣಗಿ ಅವರು ಈ ಪ್ರಕರಣವನ್ನು ಮುಚ್ಚಿ ಹಾಕುವ ಹುನ್ನಾರ ನಡೆಸಿರುವುದನ್ನು ಚಾಟಿ ಬೀಸಲು ಹಿಂಜೆರಿಯುವುದಿಲ್ಲ ಹಿಂದೆ ನಡೆದ ದಾನಮ್ಮ ಪ್ರಕರಣ, ಸಲಾದಹಳ್ಳಿ ಗ್ರಾಮದಲ್ಲಿ ನಡೆದ ಕೊಲೆ ಪ್ರಕರಣಗಳನ್ನು ಮುಚ್ಚಿ ಹಾಕಿದ್ದರೆ. ಈ ಪ್ರಕರಣವನ್ನು ಅದೇ ರೀತಿಯಲ್ಲಿ ಮುಚ್ಚಿ ಹಾಕಲು ಪ್ರಯತ್ನಿಸುತ್ತಿದ್ದಾರೆ ಎನ್ನುವುದು ಬೆಳಕಿಗೆ ಬಂದಿದ್ದು ಅಂತರಗಂಗಿ ಬಾಲಕಿಯ ಅತ್ಯಾಚಾರ ವೆಸಗಿದ ಆರೋಪಿಯನ್ನು ಬಂಧಿಸಿ ಸಂತ್ರಸ್ಥ ಬಾಲಕಿಯ ಕುಟುಂಬಕ್ಕೆ ಸೂಕ್ತ ರಕ್ಷಣೆ ಒದಗಿಸಿಕೊಟ್ಟು ಪರಿಹಾರ ಒದಗಿಸಿಕೊಡಬೇಕು ಇದರಲ್ಲಿ ಸರಕಾರ ಮೂಗು ತೂರಿಸಿದರೆ ದಲಿತರು ಯಾರು ಕುರಿಗಳಲ್ಲ ಅನ್ನುವುದಕ್ಕೆ ಶಕ್ತಿ ತೋರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ವೈ.ಸಿ.ಮಯೂರ ಮಾತನಾಡಿ, ಉತ್ತರ ಪ್ರದೇಶ, ರಾಜಸ್ತಾನ ಸೇರಿದಂತೆ ಬೇರೆ ಬೇರೆ ರಾಜ್ಯಗಳಲ್ಲಿ ಇಂತಹ ಪ್ರಕರಣಗಳು ನಿತ್ಯ ನಿರಂತರ ನಡೆಯುತ್ತಿವೆ ಎಂದು ಮಾಧ್ಯಮಗಳ ಮೂಲಕ ಕೇಳುತ್ತಿದ್ದೇವೆ ಆದರೆ ಕರ್ನಾಟಕವು ಕೂಡ ಅದಕ್ಕೆ ಹೊರತಾಗಿಲ್ಲ ಎಂದು ಸಾಬೀತುಪಡಿಸಿದೆ. ಕುದುರಿ ಸಾಲೋಡಗಿಯಲ್ಲಿ 2 ಬಾಲಕಿಯರ ಮೇಲೆ ನಡೆದ ಅತ್ಯಾಚಾರ ವೆಸಗಿ ಕೊಲೆ, ಸಲಾದಹಳ್ಲಿಯಲ್ಲಿ ಮಹಿಳೆಯ ಮೆಲೆ ಅತ್ಯಾಚಾರ, ಇವಾಗ್ಗೆ ಅಂತರಗಂಗಿ ಗ್ರಾಮದ ಬಾಲಕಿಯ ಮೇಲೆ ಅತ್ಯಾಚಾರ ಹೀಗೆ ದುರ್ಬಲರಿಗೆ, ಮಕ್ಕಳಿಗೆ ರಕ್ಷಣೆ ನೀಡುವಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದೆ ಇದರ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿಗಳು ರಾಜೀನಾಮೆ ಸಲ್ಲಿಸಬೇಕು ಎಂದು ಒತ್ತಾಯಿಸಿದರು.
ಎಲ್ಲಿ ಅನ್ಯಾಯವಾಗುತ್ತದೆ ಅಲ್ಲಿ ದಲಿತ ಸಂಘರ್ಷ ಸಮಿತಿ ಜಾತಿ ಭೇದ ಮರೆತು ಹೋರಾಟ ನಡೆಸುತ್ತದೆ. ಈ ಪ್ರಕರಣದಲ್ಲಿ ಪಾರದರ್ಶಕ ತನಿಖೆ ನಡೆಯಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಹುಯೋಗಿ ತಳ್ಳೋಳ್ಳಿ, ಶ್ರೀಶೈಲ ಜಾಲವಾದಿ, ಧರ್ಮರಾಜ ಯಂಟಮಾನ, ಅಶೋಕ ಬಿಜಾಪುರ ಸೇರಿದಂತೆ ಅನೇಕರಿದ್ದರು.