ಮೂಡಲಗಿ – ಮೂಡಲಗಿ ಎಪಿಎಮ್ ಸಿ ಆವರಣದಲ್ಲಿರುವ ಕೃಷಿ ಮಾರುಕಟ್ಟೆ ಸಮಿತಿಯ ಅತಿಥಿ ಗೃಹ ನಿರ್ಮಾಣವಾಗಿ ಮೂರು ವರ್ಷ ಕಳೆದರೂ ಉದ್ಘಾಟನೆ ಭಾಗ್ಯ ಕಾಣದೆ ಅನಾಥ ಬಂಗಲೆಯಂತಾಗಿದೆ. ಇದನ್ನು ಆದಷ್ಟು ಬೇಗ ಪುನಃ ಅಭಿವೃದ್ಧಿಪಡಿಸಿ ಅತಿಥಿಗಳ ಉಪಯೋಗಕ್ಕೆ ಬಿಡಬೇಕು ಎಂದು ಸಾಮಾಜಿಕ ಹೋರಾಟಗಾರ ಗುರುನಾಥ ಗಂಗಣ್ಣವರ ಆಗ್ರಹಿಸಿದ್ದಾರೆ.
ನಗರದ ಎಪಿಎಮ್ ಸಿ ಆವರಣದ ಅತಿಥಿ ಗೃಹಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಅವ್ಯವಸ್ಥೆ, ಅಧ್ವಾನ ನೋಡಿ ಪತ್ರಿಕೆಯೊಡನೆ ಅವರು ಮಾತನಾಡಿದರು.
ಸನ್ ೨೦೨೦-೨೧ ರ ಕ್ರಿಯಾ ಯೋಜನೆಯಲ್ಲಿ ನಿರ್ಮಾಣಗೊಂಡ ಈ ಅತಿಥಿ ಗೃಹಕ್ಕೆ ಇನ್ನೂ ಉದ್ಘಾಟನಾ ಭಾಗ್ಯ ಬಂದಿಲ್ಲ. ಇದಕ್ಕೆ ಕಾರಣವೇನೋ ಗೊತ್ತಿಲ್ಲ. ಆದರೆ ಕಟ್ಟಡದ ಕಿಟಕಿ ಗಾಜುಗಳು ಒಡೆದುಹೋಗಿವೆ, ಬಾಗಿಲುಗಳಿಗೆ ಹಾನಿಯಾಗಿದೆ. ಅಲ್ಲದೆ ಇಲ್ಲಿ ಕೂರಿಸಲಾಗಿರುವ ಏಸಿ ಕೂಡ ಕೆಟ್ಟು ಹೋಗಿದ್ದು ಈ ಬಗ್ಗೆ ಯಾರಿಗೂ ಕಾಳಜಿ ಇಲ್ಲದ್ದು ತುಂಬಾ ವಿಪರ್ಯಾಸಕರ ಎಂದು ಅವರು ನುಡಿದರು.
ಮೂಡಲಗಿ ಕೃಷಿ ಮಾರುಕಟ್ಟೆ ಆವರಣದಲ್ಲಿ ಇರುವ ಈ ಅತಿಥಿ ಗೃಹದ ಆವರಣದಲ್ಲಿ ಕುಡುಕರ ಹಾವಳಿ, ಅನೈತಿಕ ಚಟುವಟಿಕೆಗಳ ಕಾಟ ಇದೆ. ಇಲ್ಲಿಯೇ ದನಗಳನ್ನು ಮೇಯಿಸಲಾಗುತ್ತದೆ, ಗೃಹದ ಆವರಣದಲ್ಲಿ ಎಲುಬಿನ ಚೂರುಗಳು ಬಿದ್ದು ವಾತಾವರಣ ಗಬ್ಬೆದ್ದು ಹೋಗಿದೆ ಎಂದ ಅವರು, ಮೂಡಲಗಿಯು ಈಗ ತಾಲೂಕು ಪಟ್ಟಣವಾಗಿದೆ ಆದ್ದರಿಂದ ಪಟ್ಟಣಕ್ಕೆ ಭೇಟಿ ಕೊಡುವ ತಾಲೂಕಾ ಅಧಿಕಾರಿಗಳಿಗೆ, ಮೇಲಧಿಕಾರಿಗಳಿಗೆ ಉಳಿದುಕೊಳ್ಳಲು ಈ ಅತಿಥಿಗೃಹದ ಉಪಯೋಗವಾಗಬೇಕು ಆದ್ದರಿಂದ ಸಂಬಂಧಪಟ್ಟವರು ಅತಿಥಿಗೃಹವನ್ನು ಆದಷ್ಟು ಬೇಗ ಪುನರ್ ಅಭಿವೃದ್ಧಿ ಪಡಿಸಬೇಕು ಇಲ್ಲವಾದರೆ ವಿವಿಧ ಸಂಘಟನೆಗಳ ಜೊತೆಗೂಡಿ ತಾಲೂಕಾ ಅಧಿಕಾರಿಗಳ ವಿರುದ್ಧ ಹೋರಾಟಕ್ಕಿಳಿಯಲಾಗುವುದು ಎಂದು ಗುರು ಗಂಗಣ್ಣವರ ಎಚ್ಚರಿಕೆ ನೀಡಿದರು.