ಒಂದು ನಗರದ ಶಾಂತ ಸ್ಥಳದಲ್ಲಿ ಒಬ್ಬ ಯುವಕ ವಾಸಿಸುತ್ತಿದ್ದ. ಅವನು ತುಂಬಾ ಚುರುಕಾಗಿದ್ದ. ಸಂತೋಷದಿಂದಲೂ ಇರುತ್ತಿದ್ದ. ಆದರೆ ಕೆಲ ದಿನಗಳಿಂದ ಒಬ್ಬಂಟಿಯಾಗಿರುತ್ತಿದ್ದ ಮತ್ತು ಅವನು ಚಿಂತೆಯಲ್ಲಿ ಮುಳುಗಿದ್ದ. ಅದೇ ವರ್ಷ ಅವನು ತನ್ನ ಹೈಸ್ಕೂಲ್ ಪರೀಕ್ಷೆಯನ್ನು ಮುಗಿಸಿದ್ದ. ಆದರೆ ತನ್ನ ಗೆಳೆಯರ ಹಾಗೆ ಕಾಲೇಜಿನಲ್ಲಿ ಪ್ರವೇಶ ಪಡೆದಿರಲಿಲ್ಲ. ಅವನಿಗೆ ಆರ್ಥಿಕ ತೊಂದರೆಯೇನೂ ಇರಲಿಲ್ಲ. ಸಾಕಷ್ಟು ಜಮೀನಿತ್ತು. ಆ ಪ್ರದೇಶದಲ್ಲಿ ಶ್ರೀಮಂತ ಕುಟುಂಬಗಳಲ್ಲಿ ಅವನ ಮನೆತನವೂ ಒಂದಾಗಿತ್ತು. ಆದರೆ ಆತನಿಗೆ ಶಾಲೆಯ ಯಾವ ಪಾಠಗಳೂ ಅರ್ಥವಾಗುತ್ತಿರಲಿಲ್ಲ. ಅವುಗಳಲ್ಲಿ ಅವನಿಗೆ ಆಸಕ್ತಿಯೂ ಇರಲಿಲ್ಲ. ಹೀಗಾಗಿ ಅವನು ತನ್ನ ಆಸಕ್ತಿಯನ್ನು ತಾನು ತಿಳಿಯಲು ಕೆಲ ಸಮಯ ಬೇಕೆಂದು ನಿರ್ಧರಿಸಿದ.
ಒಂದು ದಿನ ತನ್ನ ತಂದೆಗೆ ಕುದುರೆ ಫಾರ್ಮಿನಲ್ಲಿ ಸಹಾಯ ಮಾಡುವಾಗ ತನ್ನ ಮನದ ಸ್ಥಿತಿಯ ಬಗ್ಗೆ ಹೇಳಿದ. ಅದನ್ನು ಕೇಳಿದ ಅವನ ತಂದೆ ಕೋಪಗೊಳ್ಳಲಿಲ್ಲ. ಬದಲಾಗಿ ನಕ್ಕು ಹೇಳಿದ. ನೀನು ನನ್ನ ಮೂವರು ಗೆಳೆಯರನ್ನು ಭೇಟಿಯಾಗು. ಅವರ ಹೆಸರನ್ನು ಕಾಗದದಲ್ಲಿ ಬರೆಯುವಾಗ ನೀವು ಹೇಗೆ ಯಶಸ್ಸನ್ನು ಪಡೆದಿರಿ ಎಂದು ಕೇಳು. ಆಗ ನಿನ್ನ ಮನದ ಸ್ಥಿತಿಗೆ ಉತ್ತರ ಸಿಗುವುದೆಂದು ಹೇಳಿ ಕಳುಹಿಸಿದ.
ಆ ಹುಡುಗನಿಗೆ ಓದಿನಲ್ಲಿ ಬಿಟ್ಟರೆ ಉಳಿದೆಲ್ಲ ಕೆಲಸಗಳಲ್ಲಿ ಆಸಕ್ತಿಯಿತ್ತು. ಹೀಗಿರುವಾಗ ಅವನ ತಂದೆ ಹೇಳಿದ ಮಾತುಗಳಲ್ಲಿ ಅವನಿಗೆ ಉತ್ಸುಕತೆಯನ್ನು ಮೂಡಿಸಿತು. ಹುಡುಗ ತನ್ನ ತಂದೆಗೆ, ‘ನಿನಗೆ ಜನರು ಬಂಗಾರದ ಕಾಲುಳ್ಳ ವ್ಯಕ್ತಿ ಎಂದು ಏಕೆ ಕರೆಯುವರು?’ ಅಂತ ಪ್ರಶ್ನಿಸಿದನು. ಅದಕ್ಕೆ ತಂದೆ ಹೇಳಿದ ‘ನೀನು ಭೇಟಿಯಾಗುವ ಜನರಿಂದ ಉತ್ತರ ಸಿಗುತ್ತದೆ.’ ಬದುಕಿನಲ್ಲಿ ನಿನಗೇನು ಬೇಕೆಂಬುದು ಅರ್ಥವಾಗುವುದು.’ ತನ್ನ ಮೂವರು ಗೆಳೆಯರ ಹೆಸರುಗಳನ್ನು ಕಾಗದದಲ್ಲಿ ಬರೆದುಕೊಟ್ಟ. ನೀನು ಬಂಗಾರದ ಕಾಲುಗಳುಳ್ಳ ವ್ಯಕ್ತಿಯ ಮಗ ಎಂದು ಹೇಳು ಮತ್ತು ಅವರು ಹೇಗೆ ಯಶಸ್ವಿ ವ್ಯಕ್ತಿಯಾದರು ಎಂಬ ಪ್ರಶ್ನೆಯನ್ನು ಕೇಳು ಎಂದನು.
ಮೊದಲನೇ ಗೆಳೆಯನ ಮನೆ ಎರಡು ಕಿ ಮೀ ದೂರವಿತ್ತು. ಅವನೊಬ್ಬ ಶ್ರೇಷ್ಠ ಅಥ್ಲೀಟ್ ಆಗಿದ್ದ. ಬಹಳ ಮೆಡಲ್ ಗಳನ್ನು ಗೆದ್ದಿದ್ದ. ತಂದೆ ಹೇಳಿದಂತೆ ಹುಡುಗ ಪ್ರಶ್ನೆಯನ್ನು ಕೇಳಿದ. ಅದಕ್ಕೆ ಆ ವ್ಯಕ್ತಿ,’ನಾನು ಶಾಲೆಯಲ್ಲಿ ಎಂದೂ ಜಾಣ ವಿದ್ಯಾರ್ಥಿ ಆಗಿರಲಿಲ್ಲ. ೪೦ ವಿದ್ಯಾರ್ಥಿಗಳಲ್ಲಿ ನನ್ನದು ೩೮ನೇ ಸ್ಥಾನ. ಆದರೆ ನನಗೆ ಆಟವೆಂದರೆ ತುಂಬಾ ಇಷ್ಟ. ಅದರಲ್ಲೂ ಓಟವೇ ನನ್ನ ಜಗತ್ತು ಎನಿಸಿತ್ತು. ಮೊದಲ ವರ್ಷದಲ್ಲಿ ತರಬೇತಿಗೆ ಸೇರಿದೆ. ಎರಡನೇ ವರ್ಷದಲ್ಲಿ ನನ್ನ ತಪ್ಪುಗಳನ್ನು ತಿದ್ದಿಕೊಂಡೆ. ಮೂರನೇ ವರ್ಷದಲ್ಲಿ ತಂತ್ರೋಪಾಯಗಳನ್ನು ಕಲಿತೆ. ಓದು ಸಂತಸ ನೀಡಲಿಲ್ಲ ಹೀಗಾಗಿ ಓಡುವುದರತ್ತ ಗಮನಹರಿಸಿದೆ. ಐದು ವರ್ಷ ನಿರಂತರ ಓಟದ ಅಭ್ಯಾಸ ಮಾಡಿದೆ. ನಂತರ ಮೊದಲ ಮೆಡಲ್ ಗೆದ್ದೆ ಒಂದಾದ ಮೇಲೊಂದು ಪದಕಗಳನ್ನು ಗೆಲ್ಲುತ್ತಲೇ ಹೋದೆ.
ಆಗ ಹುಡುಗನಿಗೆ ಅನಿಸಿತು. ‘ಯಾವುದೇ ವಿಷಯದಲ್ಲಿ ಹೆಚ್ಚು ಪರಿಣಿತಿಯನ್ನು ಪಡೆಯಬೇಕು. ಅದು ಯಾವುದೇ ಇರಬಹುದು.’
ನಂತರ ಹುಡುಗ ತನ್ನ ತಂದೆಯ ಎರಡನೇ ಗೆಳೆಯನ ಮನೆಗೆ ಭೇಟಿ ನೀಡಿದ. ಅದೊಂದು ಆಧುನಿಕ ಸೌಲಭ್ಯಗಳುಳ್ಳ ದೊಡ್ಡ ಮನೆಯಾಗಿತ್ತು. ಮನೆಯ ಮಾಲಿಕ ರೆಸ್ಟೋರೆಂಟಿನ ಮಾಲಿಕನಾಗಿದ್ದ. ಸಂತಸದಿಂದ ಬರಮಾಡಿಕೊಂಡ ಆ ವ್ಯಕ್ತಿ ಹೇಳಿದ ೪೦ ವಿದ್ಯಾರ್ಥಿಗಳಲ್ಲಿ ನಾನು ೩೯ ನೇ ಸ್ಥಾನದಲ್ಲಿರುತ್ತಿದ್ದೆ. ನನಗೆ ತಿನ್ನುವುದು ಮತ್ತು ಅಡುಗೆ ಮಾಡುವುದು ಇಷ್ಟವಾಗಿತ್ತು. ನನಗೆ ಬೇಕಾದ ತಿಂಡಿ ತಿನಿಸುಗಳನ್ನು ನಾನೇ ಮಾಡಲು ಕಲಿತೆ. ಒಂದು ದಿನ ನನ್ನ ಅಡುಗೆ ಇಷ್ಟ ಪಟ್ಟ ಒಬ್ಬ ವ್ಯಕ್ತಿ ಕೇಳಿದ. ನೀನೇಕೆ ಅಡುಗೆ ಮಾಡಿ ಮಾರಬಾರದು? ನನಗೂ ಅದು ಸರಿ ಎನಿಸಿತು.
ಮೊದಲ ವರ್ಷ ಲಾಭ ಅಷ್ಟೇನೂ ಆಗಲಿಲ್ಲ. ಆದರೆ ಅಡುಗೆ ಮೇಲಿನ ನನ್ನ ಆಸಕ್ತಿ ಕಡಿಮೆ ಆಗಲಿಲ್ಲ. ಬೇರೆ ಬೇರೆ ರೆಸಿಪಿಗಳನ್ನು ಕಲಿತೆ ಮಾರುಕಟ್ಟೆಯ ತಂತ್ರಗಳನ್ನು ತಿಳಿದುಕೊಂಡೆ. ಆಮೇಲೆ ನನ್ನದೇ ಆದ ರೆಸ್ಟೋರಂಟ್ ತೆಗೆದೆ. ಈಗ ನೀನೇ ನೋಡುತ್ತಿರುವೆ ಅದೆಷ್ಟು ದೊಡ್ಡ ಪ್ರಮಾಣದಲ್ಲಿ ಬೆಳೆದಿದೆಯೆಂದು. ಹುಡುಗನಿಗೆ ಸ್ಪೂರ್ತಿಭಾವ ಉಕ್ಕಿತು. ಯಶಸ್ವಿಯಾಗಲು ಓದಿನಲ್ಲಿ ಮುಂದಿರಲೇಬೇಕೆಂದಲ್ಲ ಅಲ್ಲವೇ? ಎಂದ ಹುಡುಗ. ಅದಕ್ಕೆ ಆತ ಒಂದೇ ಒಂದು ಕೌಶಲ್ಯದಲ್ಲಿ ಪರಿಣಿತಿಯನ್ನು ಪಡೆದರೆ ಯಶಸ್ವಿಯಾಗುತ್ತಿ ಎಂದ.
ಕೊನೆಯದಾಗಿ ಮೂರನೇ ವ್ಯಕ್ತಿಯ ಮನೆಗೆ ತೆರಳಿದ. ಅವನೀಗ ಕೊನೆಯ ರ‍್ಯಾಂಕ್‌ನಲ್ಲಿರುವ ಮನುಷ್ಯನ ಕಡೆ ಬಂದಿರುವೆನೆಂದು ತಿಳಿದಿದ್ದ. ಆದರೆ ಅವನ ವಿಚಾರ ಉಲ್ಟಾ ಆಗಿತ್ತು. ಓದಿನಲ್ಲಿ ಪ್ರಥಮ ರ‍್ಯಾಂಕ್ ಗಳಿಸಿದ ವ್ಯಕ್ತಿಯ ಮನೆ ಅದಾಗಿತ್ತು. ಆದರೆ ಆ ಮನೆ ಅಷ್ಟೇನೂ ವೈಭವದಿಂದ ಕೂಡಿರಲಿಲ್ಲ. ಆ ವ್ಯಕ್ತಿ ಹೇಳಿದ ಶಾಲೆ ಕಾಲೇಜಿನಲ್ಲಿ ನಾನು ಓದಿನಲ್ಲಿ ಮುಂದಿದ್ದೆ. ಎಲ್ಲ ವಿಷಯಗಳ ಬಗ್ಗೆ ಸ್ವಲ್ಪ ಸ್ವಲ್ಪ ಗೊತ್ತಿತ್ತು. ಆದರೆ ನಾನು ಯಾವ ವಿಷಯದಲ್ಲೂ ಪರಿಣಿತಿ ಹೊಂದಲಿಲ್ಲ. ಅದೇ ನಾನು ಮಾಡಿದ ತಪ್ಪು. ನಾನು ಮಾಡಿದ ತಪ್ಪನ್ನು ನೀನು ಮಾಡಬೇಡ ಎಂದ. ಮುಂದುವರೆದು ಹೇಳಿದ ನಿಮ್ಮ ತಂದೆ ೪೦ ನೇ ಸ್ಥಾನ ಪಡೆಯುತ್ತಿದ್ದ. ಒಂದು ದಿನ ನಿನ್ನ ತಂದೆ ಕುದುರೆ ಸವಾರಿ ಮಾಡುವಾಗ ಬಿದ್ದು ಕಾಲು ಮುರಿಯಿತು. ಅದಕ್ಕೆ ಬಂಗಾರ ಬಣ್ಣದ ಬ್ಯಾಂಡೇಜ್ ಹಾಕಿಕೊಂಡು ಬಂದಿದ್ದ. ಹೀಗಾಗಿ ಅವನನ್ನು ಎಲ್ಲರೂ ಬಂಗಾರದ ಕಾಲುಳ್ಳವನು ಎಂದು ಕರೆಯ ಹತ್ತಿದ್ದರು. ಆ ಗಾಯವಾದ ಮೇಲೂ ಅವನು ಕುದುರೆ ಸವಾರಿ ನಿಲ್ಲಿಸಲಿಲ್ಲ. ಸಣ್ಣ ಕುದುರೆ ಫಾರ್ಮ್ನೊಂದಿಗೆ ಆರಂಭಿಸಿದ್ದ ಅದೇ ದೊಡ್ಡದಾಗಿದೆ. ನಿನ್ನ ತಂದೆ ಕಠಿಣ ಪರಿಶ್ರಮಿ ಮತ್ತು ಏಕಾಗ್ರತೆಯನ್ನು ಹೊಂದಿದ ವ್ಯಕ್ತಿ.
ಮನೆಯತ್ತ ಹೊರಟಾಗ ಹುಡುಗನಿಗೆ ಅನಿಸಿತು. ತನಗೂ ತಂದೆಯಂತೆ ಕುದುರೆ ಸವಾರಿಯಲ್ಲಿ ಆಸಕ್ತಿಯಿದೆ. ಆದ್ದರಿಂದ ನಾನು ಅದನ್ನು ಚೆನ್ನಾಗಿ ಕಲಿಯಬೇಕೆಂದು ನಿರ್ಧರಿಸಿದ. ಜನರು ತಮಗೆ ಸಿಗಬೇಕಾದ ಪ್ರತಿಫಲ ಸಿಗದೇ ಇದ್ದಾಗ ಬಹಳ ದುಃಖವಾಯಿತು ಎನ್ನುತ್ತಾರೆ. ನನ್ನಿಂದಾಗದು ಎಂದು ಕೆಲವರು ಹೇಳುತ್ತಾರೆ. ಇನ್ನೂ ಕೆಲವರು ಆ ದಾರಿಯನ್ನು ಬಿಟ್ಟು ಬೇರೆ ದಾರಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ತಮಗೆ ಇಷ್ಟವೆಂದು ಅಲ್ಲ. ಬದಲಾಗಿ ಹೆತ್ತವರು ಹಾಗೆ ಮಾಡಲು ಹೇಳಿದರೆಂದೋ ಇಲ್ಲವೇ ತಮ್ಮ ಗೆಳೆಯರು ಅದೇ ದಾರಿಯಲ್ಲಿ ಹೋಗುತ್ತಿದ್ದಾರೆಂದು. ಇದನ್ನೆಲ್ಲ ನೋಡಿದಾಗ ಕೇಳಿದಾಗ ಮನದಲ್ಲೊಂದು ಪ್ರಶ್ನೆ ಮೂಡದೇ ಇರದು. ಶಿಕ್ಷಣವೆಂದರೆ ಬರಿ ಪಾಸಾಗುವುದಲ್ಲ. ನಿಮ್ಮನ್ನು ನೀವು ತಿಳಿದುಕೊಳ್ಳುವುದು ಮತ್ತು ನಿಜವಾಗಿ ನೀವೇನು ಆಗಿದ್ದೀರೋ ಅದೇ ಆಗುವುದು. ಸುತ್ತಮುತ್ತಲಿನ ಜನ ಯಶಸ್ಸಿನ ಕಥೆಗಳನ್ನು ಹೇಳುತ್ತಿರುತ್ತಾರೆ. ಅವರು ಹೇಳಿದ ಕಥೆಗಳ ಹಾದಿಯ ಜಾಡು ಹಿಡಿದು ಹೋದರೆ ನನಗೆ ಗೆಲುವು ಸಿಗುವುದೆಂದು ನಿಮಗೆ ಅನಿಸಬಹುದು. ಆದರೆ ವಾಸ್ತವಿಕ ಜೀವನ ನೀವಂದುಕೊಂಡ ಹಾಗೆ ಸರಳ ಇಲ್ಲ. ನಿಮ್ಮನ್ನು ನೀವು ತಿಳಿಯುವವರೆಗೆ ಯಶಸ್ವಿ ವ್ಯಕ್ತಿಗಳ ಕಥೆಗಳು ದಾರಿದೀಪದಂತೆ ತೋರುವವು. ನೋಡಲು ಅಂದ ಆದರೆ ತುಂಬಾ ದೂರವೆನಿಸುವವು. ನಿಮ್ಮ ಕನಸನ್ನು ಯಾರೂ ಕಟ್ಟಿಕೊಡುವುದಿಲ್ಲ. ಜನ ಮರಳೋ ಜಾತ್ರೆ ಮರಳೋ ಎಂದು ಜನಜಂಗುಳಿಯನ್ನು ಅನುಸರಿಸುತ್ತಿದ್ದರೆ ನೀವೆಂದೂ ಯಶಸ್ವಿ ವ್ಯಕ್ತಿಯಾಗಲು ಸಾಧ್ಯವಿಲ್ಲ. ಇಷ್ಟವಾದುದು ಯಾವುದೆಂಬುದನ್ನು ತಿಳಿಯಿರಿ ಕಲಿಯಿರಿ ಯಶಸ್ವಿ ವ್ಯಕ್ತಿಗಳಾಗಿರಿ. ನಿಮ್ಮ ಯಶಸ್ಸಿಗೆ ಬೇಕಾದ ಕೀಲಿಕೈ ನಿಮ್ಮೊಳಗೆ ಇದೆ.
ಜಯಶ್ರೀ.ಜೆ.ಅಬ್ಬಿಗೇರಿ.
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ ೯೪೪೯೨೩೪೧೪೨

