ದೀಪದ ಮಹತ್ವವನ್ನು ಹೀಗೆ ಅರ್ಥ ಮಾಡಿಕೊಂಡರೆ?ಮನೆಯೊಳಗೆ ಹಚ್ಚುವ ದೀಪಗಳಲ್ಲಿ ಹಲವು ಬಗೆ ಇದೆ. ಎಲ್ಲಾ ಬೆಳಕನ್ನೇ ನೀಡಿದರೂ ಅತಿ ಸಣ್ಣ ಬೆಳಕು ನೀಡುವ ದೀಪವನ್ನು ಮಾನವ ಹಚ್ಚೋದು ಕಡಿಮೆ. ಬೆಳಕಿನಲ್ಲಿ ಎಷ್ಟೋ ರೀತಿಯ ಬೆಳಕಿದೆ. ಹಗಲಿನ ಸೂರ್ಯನ ಬೆಳಕಿಗೂ ರಾತ್ರಿಯ ಚಂದ್ರನ ಬೆಳಕಿಗೂ ಎಷ್ಟೋ ವ್ಯತ್ಯಾಸವಿದ್ದರೂ ಸೂರ್ಯನ ಹತ್ತಿರ ಮಾನವ ಹೋಗಲಾಗದು ಅವನಿಲ್ಲದೆ ಜೀವನವಿಲ್ಲ.
ಹಾಗೆಯೇ ಚಂದ್ರನ ಅಂಗಳದವರೆಗೆ ಹೋಗಿ ಬಂದ ಮಾನವನಿಗೆ ಚಂದ್ರ ನ ಬೆಳಕಿನಲ್ಲಿ ಕೆಲಸ ಮಾಡಲಾಗದು. ಭೂಮಿಗೆ ಇಬ್ಬರೂ ಅಗತ್ಯವಿದೆ. ಇಲ್ಲವೆಂದರೂ ಭೂಮಿ ಸುತ್ತ ಚಂದ್ರ,ಸೂರ್ಯನ ಸುತ್ತ ಭೂಮಿ ತಿರುಗುವುದನ್ನು ಮಾನವ ತಡೆಯಲಾಗದು. ಇಲ್ಲಿ ಮನೆಯೊಳಗೆ ಹಚ್ಚುವ ದೀಪದ ಎಣ್ಣೆಯಲ್ಲಿಯೂ ಹಲವು ಬಗೆ ಇದೆ. ಒಂದೊಂದು ಒಂದೊಂದು ರೀತಿಯಲ್ಲಿ ಮನುಕುಲಕ್ಕೆ ಪರಿಹಾರ ನೀಡುತ್ತಿದೆ.
ಎಲ್ಲಾ ಭೂಮಿಯ ಮೇಲೇ ಇದೆ. ಮಾನವ ನಿರ್ಮಿತ ವಿದ್ಯುತ್ ದೀಪಗಳನ್ನು ಇಂದು ಯಾವುದೇ ತಾರತಮ್ಯಗಳಿಲ್ಲದೆ ಮನೆಮನೆಯೊಳಗೆ ಹೊರಗೆ ಉಪಯೋಗಿಸುತ್ತಾರೆ. ಆದರೆ ಎಣ್ಣೆ ದೀಪಗಳನ್ನು ದೇವತಾರಾಧನೆಗೆ ಪ್ರಮುಖ ವಾಗಿ ಬಳಸುವುದು ಹಿಂದೂಗಳು. ಉಳಿದವರು ಕ್ಯಾಂಡಲ್ ದೀಪ ಬಳಸುತ್ತಾರೆ. ಮೇಣದ ದೀಪ ಎಣ್ಣೆಯ ದೀಪಕ್ಕಿಂತ ಕೆಳಗಿನದ್ದು.
ಹೀಗಾಗಿ ಹೆಚ್ಚು ಪ್ರಕೃತಿ ಶಕ್ತಿ ಇರುವ ಎಣ್ಣೆ ದೀಪ ಹಚ್ಚುವುದರಿಂದ ಪ್ರಕೃತಿಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚುವುದೆನ್ನುತ್ತಾರೆ. ನಾವು ಪ್ರತಿದಿನ ಮನೆಯಲ್ಲಿ ಹಚ್ಚುವ ದೀಪಗಳು ಶುದ್ದವಾಗಿದ್ದಷ್ಟೂ ನಮ್ಮ ಆತ್ಮ ಶುದ್ದಿಯಾಗುತ್ತಾ ಹೋಗುತ್ತದೆ ಎನ್ನುವ ಕಾರಣಕ್ಕಾಗಿಯೇ ಪ್ರತಿದಿನವೂ ದೀಪ ಹಚ್ಚುವ ಕಂಬ, ಬಳಸುವ ಹತ್ತಿ,ಉರಿಸುವ ಕಡ್ಡಿಯವರೆಗೆ ಸ್ವಚ್ಚತೆ ಇರಬೇಕೆನ್ನುತ್ತಾರೆ.
ನಮ್ಮ ಎಲ್ಲಾ ಕ್ರಿಯೆಯನ್ನು ಸಾಕ್ಷಿ ರೂಪದಲ್ಲಿ ದೇವರಿಗೆ ಕಳಿಸುವ ಸಾಧನವೆ ದೀಪ. ದೀಪ ಆರಿದ ನಂತರ ಎಲ್ಲಿಗೆ ಹೋಯಿತೆಂದು ಯಾರೂ ಹುಡುಕುವುದಿಲ್ಲ. ಹೀಗಾಗಿ ಯಾವುದೇ ದೀಪದ ಬೆಳಕು ಶಾಶ್ವತವಾಗಿ ಭೂಮಿಯ ಮೇಲಿರೋದಿಲ್ಲ. ಮಾನವ ನಿರ್ಮಿತ ವಿದ್ಯುತ್ ದೀಪಗಳಲ್ಲಿಯೂ ತಮ್ಮದೆ ಆದ ವಿಶೇಷ ಶಕ್ತಿಯಿದೆ. ಆ ಶಕ್ತಿಯನ್ನು ಸದ್ಬಳಕೆ ಮಾಡಿಕೊಂಡರೆ ಉತ್ತಮ ಜೀವನ. ದೀಪದ ವಿಚಾರ ತಿಳಿಸುತ್ತಾ ಹೋದರೆ ಮುಗಿಯೋದಿಲ್ಲ.
ಇನ್ನು ನಮ್ಮ ಮನೆಯ ದೀಪ ಎನ್ನುವ ಸ್ತ್ರೀ ಶಕ್ತಿಯ ವಿಚಾರಕ್ಕೆ ಬಂದಾಗ ಹೆಣ್ಣು ಮನೆಯ ದೀಪ ಎಂದರು. ಆ ಹೆಣ್ಣನ್ನು ಬೇರೆ ಮನೆಗೆ ಕಳಿಸುವಾಗ ಆ ಮನೆಯ ದೀಪ ಹಚ್ಚಲು ಹೇಳುತ್ತಾರೆ. ತವರಿನ ದೀಪ ಹಚ್ಚಿದ ನಂತರ ಅತ್ತೆ ಮನೆಯ ದೀಪ ಹಚ್ಚುತ್ತಾಳೆ. ಇವೆರಡೂ ದೀಪ ಆರಿಹೋಗದಂತೆ ತನ್ನ ಜೀವನದಲ್ಲಿ ಸಮಾನತೆ ಕಾಯ್ದುಕೊಳ್ಳುವ ದೊಡ್ಡ ಶಕ್ತಿಹೆಣ್ಣಿಗಿರಬೇಕಾದರೆ ಅವಳಿಗೆ ಸಹಕರಿಸುವವರೂ ಜೊತೆಗಿರಬೇಕು.
ಯಾವಾಗ ಮದುವೆಯ ನಂತರ ತವರಿನ ಸಂಬಂಧ ಕಡಿದುಹೋಯಿತು ಎನ್ನುವ ವಾದ ವಿವಾದ ಹೆಚ್ಚಾಯಿತೋ ಆಗಲೇ ಅತ್ತೆ ಮನೆಯ ದೀಪದಲ್ಲಿಯೂ ಕಲಬೆರಕೆ ಪ್ರಾರಂಭವಾಯಿತು. ಜನ್ಮ ನೀಡಿದ ಮನೆಯ ಸಂಬಂಧ ಕಡಿದುಹಾಕಿ ಬಾಳು ನೀಡಿದವರ ಹಿಂದೆ ನಡೆದರೂ ಒಂದು ಕಣ್ಣಿಗೆ ಮೋಸಮಾಡಿದಂತೆ. ಇದಕ್ಕೆ ಬದಲಾಗಿ ಕೆಲವರು ಬಾಳು ನೀಡಿದ ಮನೆಗಿಂತ ಜನ್ಮ ನೀಡಿದ ಮನೆಯೇ ಶ್ರೇಷ್ಠ ವೆಂದು ತಿರುಗಿ ನಡೆದರೂ ಸಂಕಷ್ಟ ತಪ್ಪಿದ್ದಲ್ಲ.
ಸಮಾನತೆಯನ್ನು ಕಾಪಾಡಿಕೊಂಡು ಎಲ್ಲರನ್ನೂ ,ಎಲ್ಲವನ್ನೂ ಸಹಿಸಿಕೊಂಡು ಸ್ತ್ರೀ ಶಕ್ತಿ ತನ್ನ ಅಸ್ತಿತ್ವಕ್ಕೆ ದಕ್ಕೆ ಬರದಂತೆ ದೀಪದಂತೆ ಉರಿಯುತ್ತಾ ಒಮ್ಮೆ ಆರಿಹೋಗುತ್ತಾಳೆ. ಆರಿ ಹೋದ ಮೇಲೆ ಇಲ್ಲಿನ ಎಲ್ಲಾ ಆಗಿಹೋಗಿದ್ದಕ್ಕೆ ಸಾಕ್ಷಿಭೂತಳಾಗಿ ಪ್ರಕೃತಿಯಲ್ಲಿ ಭೂಮಿಯಲ್ಲಿ ಅಗೋಚರ ಶಕ್ತಿಯಾಗಿ ನಿಲ್ಲುತ್ತಾಳೆ. ಇದರಲ್ಲಿ ದೇವಿಯಾಗಿರಬಹುದು, ನಾರಿಯಾಗಿರಬಹುದು, ಮಾರಿಯಾಗಿರಬಹುದು ಇಲ್ಲಿ ದೀಪದ ಶಕ್ತಿಯನ್ನು ಆಂತರಿಕ ವಾಗಿ ಆಧ್ಯಾತ್ಮಿಕ ವಾಗಿ ಅರ್ಥ ಮಾಡಿಕೊಂಡರೆ ನಮ್ಮೊಳಗೆ ಹೊರಗಿರುವ ಎಲ್ಲಾ ದೀಪಗಳ ಬೆಳಕಿನಲ್ಲಿ ಮನುಕುಲ ಹೇಗೆ ಜೀವನ ನಡೆಸಿದೆ ಅದಿಲ್ಲವಾದರೆ ಏನಾಗುತ್ತಿತ್ತು? ಬೆಳಕಿಲ್ಲದ ಜೀವನವೆ ನರಕ.
ಬೆಳಕನ್ನು ಕೊಟ್ಟಿರುವ ಶಕ್ತಿಯನ್ನು ನಾವು ಯಾವ ರೀತಿಯಲ್ಲಿ ಗೌರವದಿಂದ, ಭಕ್ತಿಯಿಂದ, ಪ್ರೀತಿ ವಿಶ್ವಾಸದಿಂದ ಶುದ್ದವಾದ ಮನಸ್ಸಿನಿಂದ ನೋಡಿದ್ದೇವೆ ಎನ್ನುವ ಸದ್ವಿಚಾರವನ್ನು ಮಾಡಿಕೊಂಡರೆ ಸಾಕು. ಈಗ ನಿಜವಾದ ದೀಪ ಹಚ್ಚಿ ಬೆಳಗುವ ಸ್ತ್ರೀ ಯರಿಗಿಂತ ಆರಿಸಿ ಮನೆಹೊರಗೆ ಹೋಗುವವರು ಹೆಚ್ಚಾಗುತ್ತಿದ್ದಾರೆ. ಇದಕ್ಕೆ ಕಾರಣ ಸ್ತ್ರೀ ಗೆ ಕೊಡದ ಗೌರವವಾಗಬಹುದು. ಅತಿಯಾದ ಹಿಂಸೆ, ನೋವು, ಸಂಕಟವಿರಬಹುದು. ಹಚ್ಚಿ ಮನೆ ಬೆಳಗುವವರೂ ಇದ್ದಾರೆ. ಅವರಿಗೆ ತವರು ಹಾಗು ಗಂಡನ ಮನೆಯವರ ಉತ್ತಮ ಸಹಕಾರ ಪ್ರೀತಿ ಸಿಕ್ಕಿರುವುದು ಇದಕ್ಕೆ ಕಾರಣ.
ಹಿಂದಿನ ಎಷ್ಟೋ ಸ್ತ್ರೀ ಗೆ ಸಂಸಾರದಲ್ಲಿ ದೀಪ ಬೆಳಗುವುದಕ್ಕೆ ಮತ್ತೊಂದು ಸ್ತ್ರೀ ಅಡ್ಡನಿಲ್ಲುವ ಪರಿಸ್ಥಿತಿ ಇತ್ತು. ಇದನ್ನು ಅಜ್ಞಾನದ ಅಹಂಕಾರ, ಸ್ವಾರ್ಥ ನಡೆಸಿತ್ತು. ಈಗ ವಿಜ್ಞಾನದ ಅಜ್ಞಾನ ಈ ಕೆಲಸ ಮಾಡುತ್ತಿದೆ.ಎಷ್ಟೋ ಮಹಿಳೆಯರಿಗೆ ಈ ಪೂಜೆ, ಪುನಸ್ಕಾರ, ಧರ್ಮ, ಸಂಸ್ಕೃತಿ, ಸಂಪ್ರದಾಯದ ಬಗ್ಗೆ ತಿರಸ್ಕಾರವಿದೆ. ದೇವರ ಅಸ್ತಿತ್ವವನ್ನು ಅಲ್ಲಗೆಳೆದು ಸ್ವತಂತ್ರವಾಗಿ ಜೀವನ ನಡೆಸುವಾಗ ಸ್ವೇಚ್ಚಾಚಾರಕ್ಕೆ ತನ್ನ ತಾನರಿಯಲಾಗದೆ ಬೌತಿಕದಲ್ಲಿ ಮುಂದೆ ನಡೆದಿದ್ದರೂ ಸಮಾಜದಲ್ಲಿ ಹಚ್ಚುವ ಬೆಂಕಿಗೆ ಸಹಕಾರ ನೀಡುತ್ತಾರೆ ಮನೆಯೊಳಗಿನ ದೀಪ ಹಚ್ಚುವುದಿಲ್ಲ.
ಈ ಕಾರಣಕ್ಕಾಗಿಯೇ ಇಂದು ಸ್ತ್ರೀ ಎಷ್ಟೇ ಹಣಗಳಿಸಿದರೂ ಅಧಿಕಾರ, ಸ್ಥಾನ ಪಡೆದರೂ ಶಾಶ್ವತವಾದ ನೆಮ್ಮದಿ ಶಾಂತಿ ಇಲ್ಲದೆ ಪ್ರತಿಯೊಂದನ್ನೂ ವಿರೋಧಿಸುವ ಮೂಲಕ ಹೋರಾಟ ನಡೆಸಿರೋದು. ಹೋರಾಟದಿಂದ ಮನೆಯೊಳಗೆ ದೀಪ ಹಚ್ಚುವಂತಾದರೆ ಉತ್ತಮ.ಮನೆಯ ದೀಪವೆ ಆರಿಹೋದರೆ? ಆಧ್ಯಾತ್ಮ ಸತ್ಯದ ಮೂಲ ಉದ್ದೇಶ ದೀಪ ಸಣ್ಣದಾಗಿದ್ದರೂ ಸ್ವಚ್ಚ ಆಗಿರಬೇಕೆನ್ನುವುದಷ್ಟೆ. ಆಂತರಿಕ ಜ್ಞಾನದೀಪ ಒಂದು ಸಣ್ಣ ಕಿಡಿಯಾಗಿದ್ದರೂ ಅದನ್ನು ಆರಿಸಲಾಗದು. ಹಾಗೆ
ಅದನ್ನು ಯಾರೂ ಕದಿಯಲಾಗದು. ಹೀಗಾಗಿ ಒಳಗಿನ ದೀಪದ ಸ್ವಚ್ಚತೆಯಿಂದ ಹೊರಗಿನ ದೀಪವೂ ಸ್ವಚ್ಚತೆ ಕಡೆಗೆ ನಡೆಯಬಹುದು. ಎರಡೂ ತಮ್ಮ ತಮ್ಮ ಸ್ವಂತ ಶಕ್ತಿಯನ್ನು ಸದ್ಬಳಕೆ ಮಾಡಿಕೊಂಡರೆ ಸಾಧ್ಯ. ಸರಿಸಮ ನಡೆಯೋದಕ್ಕೆ ಸಮಾನತೆ ಇರಬೇಕು. ಎಷ್ಟು ಬೇಕು ಅಷ್ಟೇ ದೀಪ ಹಚ್ಚುವ ಮೂಲಕ ದೀಪದ ಗೌರವ ಕಾಪಾಡಬೇಕು. ದಾರಿದಾರಿಯಲ್ಲಿ ದೀಪ ಹಚ್ಚಿ ದಾರಿ ಹೋಕರಿಗೆ ಬೆಳಕು ನೀಡಿದರೂ ದಾರಿತಪ್ಪಬಹುದು.
ಹೀಗಾಗಿ ನಮ್ಮನೆಯೊಳಗಿರುವ ದೀಪವನ್ನು ನಾವೇ ಸರಿಯಾಗಿ ತಿಳಿದು ಹಚ್ಚಿದರೆ ಸ್ವಚ್ಚ ಬೆಳಕನ್ನು ನೀಡಿ ಶಾಂತಿದೀಪವಾಗುತ್ತದೆ. ಅತಿಯಾದರೆ ಗತಿಗೇಡಲ್ಲವೆ? ಸಾತ್ವಿಕ ಶಕ್ತಿಗೆ ಸತ್ವಯುತ ದೀಪದ ಅಗತ್ಯವಿದೆ. ಬೆಳಕು ಒಳಗೆ ನಡೆದಷ್ಟೂ ಪ್ರಕಾಶಮಾನವಾಗುತ್ತದೆ. ಹೊರಗೆ ನಡೆದಷ್ಟೂ ಕಳೆಗುಂದುತ್ತದೆ. ಒಳಗೆ ಬೆಳಗುವವರಿದ್ದರೆ ಹೊರಗೆ ಆರಿಸುವವರಿರುತ್ತಾರೆ ಎಚ್ಚರ, ಎಂದೋ ಒಮ್ಮೆ ಆರಿಹೋಗುವ ಹೊರಗಿನ ದೀಪಕ್ಕಾಗಿ ಶಾಶ್ವತವಾಗಿರುವ ಒಳಗಿನ ದೀಪವನ್ನು ಬಿಡಬಾರದಷ್ಟೆ.
ದೀಪಾರಾಧನೆ, ದೀಪೋತ್ಸವ ಸಾತ್ವಿಕ ಎಣ್ಣೆಹಾಕಿ,ಸಾತ್ವಿಕ ಶಕ್ತಿಯರ ಕೈಯಲ್ಲಿ ನಡೆಸಿದರೆ ಇಡೀ ವಿಶ್ವಶಕ್ತಿಯಬೆಳಕು ಕಾಣಬಹುದು.ಅದು ಬಿಟ್ಟು ರಾಜಸ,ಹಾಗು ತಾಮಸ ಶಕ್ತಿಗೆ ಬಿಟ್ಟು ಕೊಟ್ಟರೆ ಇರೋ ಸಾತ್ವಿಕತೆಯೂ ನಾಶವಾಗಬಹುದು. ಇದರೊಳಗಿರುವ ಆಧ್ಯಾತ್ಮ ಹಾಗು ಬೌತಿಕ ಸತ್ಯವನ್ನು ಗಮನಿಸಿದರೆ ನಮ್ಮ ಮನೆಯ ದೀಪ
ಸಾತ್ವಿಕವಾಗಿದೆಯೆ? ಎನ್ನುವುದು ತಿಳಿಯಬಹುದು.
ಕಾಲದ ಪ್ರಭಾವದಲ್ಲಿ ಹೆಚ್ಚು ಸತ್ಯ,ಸತ್ವ ಉಳಿದಿಲ್ಲ.ಆದರೂ ಉಳಿಸಲು,ಬೆಳೆಸಲು ಸಾಧ್ಯವಿದೆ. ಇದಕ್ಕೆ ಸಮಾನತೆ, ಒಗ್ಗಟ್ಟು, ಏಕತೆ, ಐಕ್ಯತೆಯೇ ಮಂತ್ರಶಕ್ತಿಯಾಗಬೇಕು. ದೀಪವಿಲ್ಲದೆ ಭೂಮಿಯಿಲ್ಲ. ಅಜ್ಞಾನದ ಕತ್ತಲೊಳಗೆ ಬೆಳಕನ್ನು ಕಾಣಲು ಸಾಧ್ಯವಿಲ್ಲ. ಜ್ಞಾನದ ದೀಪ ಹಚ್ಚಬೇಕಿದೆ. ಜ್ಞಾನ ಒಳಗಿದೆ.ಇದೇ ಸತ್ಯಜ್ಞಾನ. ಆತ್ಮಜ್ಞಾನವೆಂದಿದ್ದಾರೆ ಮಹಾತ್ಮರು.
ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು