ಸಿಂದಗಿ: ಜಿಲ್ಲೆಯ ರೈತರನ್ನು ಪ್ರೋತ್ಸಾಹಿಸಲು ರೈತರು ತಯಾರಿಸಿದ ಲಿಂಬೆ ಉಪ್ಪಿನಕಾಯಿಯನ್ನು ನ್ಯಾಯಬೆಲೆ ಅಂಗಡಿಗಳ ಮೂಲಕ ಹಾಸ್ಟೆಲ್, ಅಂಗನವಾಡಿ, ಬಿಸಿಊಟ ಕೇಂದ್ರಗಳಲ್ಲಿ ಮತ್ತು ಮನೆ ಮನೆಗೆ 500 ಗ್ರಾಂ ವಿತರಣೆಗೆ ಸರಕಾರ ಅನುಮೋದಿಸಬೇಕು ಎಂದು ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪುರ ಆಗ್ರಹಿಸಿದರು.
ಪಟ್ಟಣದ ಡಾ. ಅಂಬೇಡ್ಕರ ಭವನದಲ್ಲಿ ಕೃಷಿ ವಿಶ್ವವಿದ್ಯಾಲಯ ದಾರವಾಡ, ಕೃಷಿ ವಿಜ್ಞಾನ ಕೇಂದ್ರ ಇಂಡಿ ಹಾಗೂ ಕರ್ನಾಟಕ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿ ಇಂಡಿ ಇವುಗಳ ಸಹಯೋಗದಲ್ಲಿ ಲಿಂಬೆ ಬೆಳೆಯ ಸಮಗ್ರ ಬೇಸಿಗೆ ಮೌಲ್ಯವರ್ಧನ ಕುರಿತು ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿ, ಲಿಂಬೆ ಬೆಳೆಗಾರರ ಚಿಂತನಾ ಸಭೆಯು ನಿರಂತರವಾಗಿ ನಡೆಯಬೇಕು.ಮುಂದಿನ ದಿನಮಾನದಲ್ಲಿ ರಾಜ್ಯಮಟ್ಟದ ಲಿಂಬೆ ಬೆಳೆಗಾರರ ಸಂಘವನ್ನು ಸ್ಥಾಪಿಸುವುದು, 6ರಿಂದ 10 ಹಳ್ಳಿಗಳನ್ನು ಒಳಗೊಂಡ ಕ್ಲಸ್ಟರ ಮಾದರಿಯಲ್ಲಿ ಪ್ರಮಾಣ ಪತ್ರ ನೀಡುವುದು, ಮುಂಬರುವ ದಿನಗಳಲ್ಲಿ ಜಿ.ಆಯ್ ಟ್ಯಾಗ್ ಲಭಿಸಿದರೆ ಈ ಭಾಗದ ರೈತರಿಗೆ ಉತ್ಪನ್ನಗಳನ್ನು ದ್ವಿಗುಣಗೊಳಿಸುವುದರಲ್ಲಿ ಯಾವುದೇ ಸಂದೇಹವಿಲ್ಲ. ರೈತರ ಸಹಕಾರವಿದ್ದರೆ ವ್ಯಾಪಾರಿಗಳನ್ನು ಸೇರಿಸಿ ಸಂತೆ ಪ್ರಾರಂಭಿಸುವ ಬಗ್ಗೆ ಚರ್ಚಿಸಿ ರೈತರ ಗಮನ ಸೆಳೆಯುವುದು. ಏಪ್ರೀಲ್‍ನಲ್ಲಿ ನಡೆಯುವ ಲಿಂಬೆ ಉತ್ಸವಕ್ಕೆ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿ ಲಿಂಬೆ ಉತ್ಪನ್ನಗಳನ್ನು ಪರಿಚಯಿಸುವ ಕಾರ್ಯಕ್ರಮವಿದೆ ಎಲ್ಲರೂ ಭಾಗಿಯಾಗಬೇಕು ಎಂದು ಕರೆ ನೀಡಿದರು.
ಕಾರ್ಯಾಗಾರವನ್ನು ಉದ್ಘಾಟಿಸಿದ ಶಾಸಕ ರಮೇಶ ಭೂಸನೂರ ಮಾತನಾಡಿ, ರಾಜ್ಯದಲ್ಲಿ ನಿಂಬೆ ನಾಡೆಂದು ಹೆಸರುವಾಸಿಯಾದ ವಿಜಯಪುರ ಜಿಲ್ಲೆಯ ಇಂಡಿ ಮತ್ತು ಸಿಂದಗಿ ಭಾಗದಲ್ಲಿ ಲಿಂಬೆ ಬೆಳೆಯ ಅಭಿವೃದ್ಧಿಗೆ ಉತ್ತೇಜನ ನೀಡಲಾಗುತ್ತಿದ್ದು ಈ ಭಾಗದ ರೈತರ ಲಿಂಬೆ ಅಭಿವೃದ್ಧಿಗೆ 4 ಎಕರೆ ಜಮೀನನ್ನು ಸರಕಾರದಿಂದ ಮಂಜೂರು ಪಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಿ ಮುಂದಿನ ದಿನಮಾನಗಳಲ್ಲಿ ಹೆಚ್ಚಿನ ಅನುದಾನ ತಂದು ಲಿಂಬೆ ರೈತರಿಗೆ ನ್ಯಾಯ ಒದಗಿಸುವುದಾಗಿ ಭರವಸೆ ನೀಡಿದರು.
ವಿಜಯಪುರ ಕೆವ್ಹಿಕೆ ಸಹವಿತರಣಾ ನಿರ್ದೇಶಕ ಡಾ. ಆರ್.ಬಿ.ಬೆಳ್ಳಿ ಮಾತನಾಡಿ, ಇಂಡಿ ಹಾಗೂ ಸಿಂದಗಿ ಬಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕ್ಷೇತ್ರವಿರುವುದರಿಂದ ರೈತರು ಸಂಸ್ಕರಣ ಘಟಕ ಮಾಡುವಂತೆ ಸಲಹೆ ನೀಡಿದರು.
ಡಾ. ಕಾಶೀಬಾಯಿ ಖೇಡಗಿ ಮಾತನಾಡಿ, ಉಪ್ಪಿನಕಾಯಿ ಜಾಮ, ಜಲ್ಲಿ ತಯಾರಿಸುವುದರ ಬಗ್ಗೆ ಮಾಹಿತಿ ನೀಡಿದರು.
ಸಿದ್ದು ಪೂಜಾರಿ ಮಾತನಾಡಿ, ಓಡಿಓಪಿ ಯೋಜನೆಯ ಲಿಂಬೆ ಸಂಸ್ಕರಣ ಮಾಡಲು ಸರಕಾರದಿಂದ ಬರುವ ಪ್ರತಿಶತ 50 ಸಹಾಯಧನ ನೀಡುತ್ತಿದ್ದು ಅದರ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು.
ಬೆಂಗಳೂರು ಐಸಿಎಆರ್ ಸಂಸ್ಥೆ ವಿಜ್ಞಾನಿಗಳ ಮುಖ್ಯಸ್ಥ ಡಾ. ಎ.ಎನ್ ಬಗಲಿ, ಡಾ. ಕೆ.ಪಿ ರಮೇಶ, ಡಾ. ಬಸವರಾಜ ಬಿರಾದಾರ ಉಪನ್ಯಾಸ ನೀಡಿದರು.
ಮಹಾದೇವ ಅಂಬಲಿ, ಇಂಡಿ ಎಡಿಎಚ್ ಆನಂದ ಬಿರಾದಾರ, ಶೈಲಜಾ ಸ್ಥಾವರಮಠ, ಬಾಗಪ್ಪಗೌಡ ಪಾಟೀಲ, ಸಿದ್ದರಾಮ ರಂಜುಣಗಿ, ಎಸ್.ಬಿ.ಚಾಗಶೆಟ್ಟಿ, ಎಸ್.ಟಿ.ಪಾಟೀಲ, ಶ್ರೀಮಂತ ದುದ್ದಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ 10 ಜನ ಪ್ರಗತಿಪರ ರೈತರಿಗೆ ಸನ್ಮಾನಿಸಿ ಗೌರವಿಸಲಾಯಿತು. ಅಲ್ಲದೆ ಈ ಕಾರ್ಯಾಗಾರದಲ್ಲಿ 15 ಹಳ್ಳಿಗಳಿಂದ 250 ರೈತರು ಭಾಗವಹಿಸಿದ್ದರು.
ಇಂಡಿ ಹಿರಿಯ ವಿಜ್ಞಾನಿ ಆರ್.ಬಿ.ನೆಗಳೂರ ಸ್ವಾಗತಿಸಿದರು. ಸಹಾಯಕ ತೋಟಗಾರಿಕೆ ನಿರ್ದೇಶಕ ರಾಘವೇಂದ್ರ ಬಗಲಿ ನಿರೂಪಿಸಿದರು. ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿಯ ಎಂ.ಡಿ. ಸಂತೋಷಕುಮಾರ ಸಪ್ಪಂಡಿ ಸ್ವಾಗತಿಸಿ ವಂದಿಸಿದರು.