ಒಂದು ವಾರದ ಸಹಿಗಳನ್ನು ಒಮ್ಮೆಯೇ ಮಾಡಿಬಿಡುವ ಗ್ರಂಥಪಾಲಕ !
ಮೂಡಲಗಿ – ಹರಸಾಹಸ ಮಾಡಿ ಸಾರ್ವಜನಿಕರು ಸೇರಿಕೊಂಡು ಮೂಡಲಗಿ ನಗರಕ್ಕೆ ಹಾಗೂ ಹೀಗೂ ಗ್ರಂಥಾಲಯ ತಕ್ಕೊಂಡು ಬಂದರೆ ಅದನ್ನು ನಿರ್ವಹಿಸುವ ಗ್ರಂಥಪಾಲಕ ನೆನಪಾದಾಗ ಕರ್ತವ್ಯಕ್ಕೆ ಬರುವುದು, ಬಂದರೆ ಎಣ್ಣೆ ಹಾಕಿಕೊಂಡು ಬರುತ್ತಿರುವುದು ವಾಚನ ಪ್ರಿಯರಿಗೆ ಬಿಡಿಸಲಾಗದ ಒಗಟಾಗಿದೆ.
ಮದ್ಯ ಸೇವನೆ ಮಾಡಿ ಬಂದ ಈರಪ್ಪ ಬಾಗೇವಾಡಿ ಎಂಬ ಈ ಗ್ರಂಥಪಾಲಕನ ವಿಚಾರ ಗ್ರಾಮಸ್ಥರಿಗೆ ಹಾಗೂ ಮಕ್ಕಳ ಗಮನಕ್ಕೆ ಬಂದಿದ್ದು ಕೂಡಲೇ ಆತನ ರಕ್ತ ಪರೀಕ್ಷೆ ಮಾಡಿಸಿ ಮದ್ಯಸೇವನೆ ಮಾಡಿದ್ದನ್ನು ಖಾತ್ರಿಪಡಿಸಿಕೊಂಡಿದ್ದಾರೆ. ನಂತರ ಗ್ರಾಮಸ್ಥರು ಉಪ ನಿರ್ದೇಶಕ ಜಿಲ್ಲಾ ಗ್ರಂಥಾಲಯ ಕೇಂದ್ರ ಬೆಳಗಾವಿ ಇವರಿಗೆ ಸಾಕಷ್ಟು ಬಾರಿ ಫೋನು ಮೂಲಕ ಮಾಹಿತಿ ನೀಡಿದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ.
ಇತ್ತ ನಶೆಯಲ್ಲಿರುವ ಗ್ರಂಥಪಾಲಕ ಏನಾದರೂ ಕೇಳಿದರೆ ಹಾರಿಕೆ ಉತ್ತರ ನೀಡುತ್ತಾನೆ. ಈತನ ನಡವಳಿಕೆಯಿಂದ ಓದುಗರಿಗೆ ತೊಂದರೆಯಾಗುತ್ತಿದ್ದು ಜಿಲ್ಲಾ ಗ್ರಂಥ ಪಾಲಕರು ಇತ್ತ ಗಮನಹರಿಸಿ ಈ ಗ್ರಂಥ ಪಾಲಕನ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಇನ್ನೊಂದು ವಿಷಯ ಏನೆಂದರೆ ಪ್ರತಿ ರವಿವಾರ ಗ್ರಂಥಾಲಯ ತೆರೆದಿರುತ್ತದೆ ಸೋಮವಾರ ರಜೆ ಇರುತ್ತದೆ. ಇವರು ಮಾಡುವ ಘನಂದಾರಿ ಕೆಲಸ ಏನೆಂದರೆ, ರವಿವಾರ ಗ್ರಂಥಾಲಯ ಬಂದ್ ಮಾಡಿ ಮದ್ಯ ಸೇವನೆ ಮಾಡಿ ಜಾಲಿಯಾಗಿ ರವಿವಾರ ಕಳೆಯುವುದು.
ರವಿವಾರ ನಿಮ್ಮ ಗ್ರಂಥಾಲಯ ಏಕೆ ಪ್ರಾರಂಭ ಮಾಡಿಲ್ಲ ಅಂತ ಕೇಳಿದರೆ, ಗೇಟ್ ಕಿ ನಮ್ಮ ಹತ್ತಿರ ಇರುವುದಿಲ್ಲ ಹೀಗಾಗಿ ಗ್ರಂಥಾಲಯವನ್ನು ಬಂದ್ ಮಾಡಿರುತ್ತೇವೆ ಎಂಬ ಸಿದ್ಧ ಹಾರಿಕೆಯ ಉತ್ತರ ನೀಡುತ್ತಾನೆ.
ಈ ಗ್ರಂಥ ಪಾಲಕ ಮದ್ಯಪಾನ ಮಾಡಿ ಗ್ರಂಥಾಲಯಕ್ಕೆ ಬರುವುದನ್ನು ನೋಡಿ ಸಾರ್ವಜನಿಕರು, ಮಕ್ಕಳು, ಶಿಕ್ಷಕರು ವಾಚನಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಆದಷ್ಟು ಬೇಗ ಅಧಿಕಾರಿಗಳು ಈತನ ವಿರುದ್ಧ ಕ್ರಮ ಕೈಗೊಂಡು ವಾಚನ ಸಂಸ್ಕೃತಿ ಯನ್ನು ಕಾಪಾಡಬೇಕಾಗಿದೆ.