
ಸಿಂದಗಿ: ಪರಿಸರ ಸ್ನೇಹಿಯಾದ ಸಸ್ಯಗಳನ್ನು ಹಾಗೂ ಆಯಾ ಋತುಮಾನಕ್ಕೆ ಸಿಗುವಂಥ ಹಣ್ಣಿನ ಮರಗಳನ್ನು ಬೆಳೆಸುವುದರಿಂದ ಪಕ್ಷಿ ಸಂಕುಲ ಹಾಗೂ ಮನುಷ್ಯನ ಆರೋಗ್ಯಕ್ಕೂ ಶ್ರೇಯಸ್ಸು, ಪ್ರತಿ ಸಸ್ಯದಲ್ಲಿ ಔಷಧಿ ಗುಣವಿದೆ ಅದನ್ನು ಸಂಶೋಧನೆಗೆ ಒಳಪಡಿಸಿದಾಗ ಮಾತ್ರ ಪ್ರತಿ ಸಸ್ಯದ ಮಹತ್ವ ಅರಿವಾಗುತ್ತದೆ ಎಂದು ಸಾರಂಗ ಮಠದ ಪೂಜ್ಯ ಡಾ. ಪ್ರಭು ಸಾರಂಗದೇವ ಶಿವಾಚಾರ್ಯರು ಅಭಿಮತ ವ್ಯಕ್ತಪಡಿಸಿದರು.
ಪಟ್ಟಣದ ಸಾರಂಗ ಮಠದ ಆವರಣದಲ್ಲಿ ವಿಶ್ವಬಂಧು ಪರಿಸರ ಬಳಗ ಹಮ್ಮಿಕೊಂಡಿದ್ದ 26 ನೇ ವಾರದ ಪರಿಸರ ಜಾಗೃತಿ ಅಭಿಯಾನದ ಸಸಿ ನೆಡುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಾನವ ಜನ್ಮ ಭೂಮಿಗೆ ಬಂದದ್ದೇ ಪರೋಪಕಾರಾರ್ಥವಾಗಿ ಇಂಥ ಜನ್ಮವನ್ನು ಸರ್ವರಿಗೂ ಉಪಯೋಗವಾಗುವಂಥ ಪರಿಸರ ಪ್ರೇಮಕ್ಕಾಗಿ ಸ್ವಲ್ಪವಾದರೂ ಮುಡುಪಾಗಿಟ್ಟರೆ ಜನ್ಮ ಸಾರ್ಥಕವಾದಂತೆ ಕೆಲ ವರ್ಷಗಳ ಹಿಂದೆ ಕಣ್ಣ ಮುಂದೆ ಇದ್ದರೂ, ನಿರ್ಲಕ್ಷ್ಯಕ್ಕೊಳಗಾಗಿದ್ದ ನೋನಿ ಹಣ್ಣು ಈಗ ಅಮೃತಕ್ಕೆ ಸಮಾನ ಎನ್ನುವ ಸತ್ಯ ವೈದ್ಯಲೋಕ ಅರಿತುಕೊಂಡಿದೆ. ಹೀಗಾಗಿ ಪರಿಸರಸ್ನೇಹಿ ಹಾಗೂ ಜನಾನುರಾಗಿ ಸಸ್ಯ ಸಂಕುಲವನ್ನು ಬೆಳೆಸುವತ್ತ ನಾವೆಲ್ಲ ಕಾರ್ಯ ಪ್ರವೃತ್ತರಾಗಬೇಕು ಎಂದರು.
ಅಮೇರಿಕಾದ ಔಷದಿ ಗುಣಮಟ್ಟ ಖಾತ್ರಿ ವಿಶೇಷಜ್ಞೆ ಮಿಲನ ಹಿರೇಮಠ ಮಾತನಾಡಿ, ಹಳ್ಳಿಗಳು ಪಟ್ಟಣಗಳಾಗಿ ಪಟ್ಟಣಗಳು ನಗರ ಮಹಾನಗರಗಳಾಗಿ ಪರಿವರ್ತನೆಯಾಗುತ್ತಿರುವ ಭರದಲ್ಲಿ ಗಿಡಮರಗಳು ಗಣನೀಯವಾಗಿ ಕ್ಷೀಣಿಸುತ್ತಿರುವುದು ವಿಷಾದನೀಯ ಹೀಗೆಯೇ ಮುಂದುವರೆದರೆ ಪ್ರಕೃತಿ ಜೀವ ಸಂಕುಲದ ಮೇಲೆ ಮುನಿದುಕೊಳ್ಳುವ ದಿನ ದೂರವಿಲ್ಲ, ಕಾರಣ ನಾವು ಜಾಗೃತರಾಗುವ ಜೊತೆಗೆ ನಮ್ಮ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಬಾಲ್ಯದಲ್ಲಿಯೇ ಗಿಡಮರಗಳನ್ನು ಬೆಳೆಸಿ ಅವುಗಳನ್ನು ರಕ್ಷಿಸಿ ಪ್ರೀತಿಸುವ ಸಂಸ್ಕಾರ ಪರಿಪಾಟ ಬೆಳೆಸಬೇಕೆಂದರು.
ವಿಶ್ವಬಂಧು ಪರಿಸರ ಬಳಗದ ಸಂಚಾಲಕ ಸಿದ್ದಲಿಂಗ ಚೌಧರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಕುಂತಲಾ ಹಿರೇಮಠ ಪ್ರಾರ್ಥಿಸಿದರು.
ಉಪನ್ಯಾಸಕ ಮಾಂತೇಶ ನೂಲನವರ ನಿರೂಪಿಸಿದರು. ಶಿಕ್ಷಕ ಬಸವರಾಜ ಅಗಸರ ಸ್ರ್ವಾಗತಿಸಿದರು. ಅಶೋಕ ಬಿರಾದಾರ ವಂದಿಸಿದರು.
ಈ ಸಂದರ್ಭದಲ್ಲಿ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಚೆನ್ನಪ್ಪ ಕತ್ತಿ, ಮಹಾದೇವಿ ಹಿರೇಮಠ, ವಿಜಯಲಕ್ಷ್ಮಿ ಮಠ, ಶಮಶ್ಯಾದ ದೊಡಮನಿ, ಪರಿಮಳಾ ಯಲಗೋಡ, ವಿದ್ಯಾ ಬಮ್ಮಣ್ಣಿ, ಮಧು ಬಮ್ಮಣ್ಣಿ ಅಂಗವಿಕಲರ ಸಂಘದ ಅಧ್ಯಕ್ಷ ಸಭಿಯಾ ಮರ್ತುರ, ಅರ್ಜುನ ಮಲ್ಲೆವಾಡಿ, ಶರಣಬಸವ ಲಂಗೋಟಿ, ವಾಯ್ ಎಂ ಬಿರಾದಾರ, ಪ್ರದೀಪ ಕತ್ತಿ, ಶಿವಕುಮಾರ ಕಲ್ಲೂರ, ಪರಶುರಾಮ ಪೂಜಾರಿ, ಸಾಯಿಬಣ್ಣ ದೇವರಮನಿ, ಮಹಾದೇವಿ ಹಿರೇಮಠ, ಸುಜಾತಾ ಹಿರೇಮಠ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.