ಮನುಷ್ಯ ಯಾವಾಗಲೂ ಚಟುವಟಿಕೆಯಿಂದ ಬದುಕಬೇಕು. ಸೋಮಾರಿ ಮನಸ್ಸು ವಿವಿಧ ಕೆಟ್ಟ ಆಲೋಚನೆಗಳ ಬೀಡಾಗುತ್ತದೆ.ಆದ್ದರಿಂದ ಮಹಿಳೆಯರು ಕ್ರೀಡೆ,ಸಂಗೀತ, ಕಲಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು.ಅದರಿಂದ ಅವರ ದೈಹಿಕ ಹಾಗೂ ಮಾನಸಿಕ ಆರೋಗ್ಯ ಉತ್ತಮಗೊಳ್ಳುತ್ತದೆ ಎಂದು ಹಿರಿಯ ಸಾಹಿತಿ ಹಾಗೂ ಮೈಸೂರು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಡಾ.ಭೇರ್ಯ ರಾಮಕುಮಾರ್ ಅಭಿಪ್ರಾಯಪಟ್ಟರು.
ಕೆ.ಆರ್.ನಗರದ ಸ್ಮಾರ್ಟ್ ಲೇಡೀಸ್ ಕ್ಲಬ್ ವತಿಯಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳೆಯರಿಗಾಗಿ ಏರ್ಪಡಿಸಿದ್ದ ಕ್ರೀಡಾಸ್ಪರ್ಧೆಗಳ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದ ಅವರು ಮಹಿಳೆಯ ಜೀವನವೇ ಒಂದು ಕ್ರೀಡಾ ಸ್ಪರ್ಧೆ. ಬಾಲ್ಯದಲ್ಲಿ ತಂದೆ -ತಾಯಿ ,ಸಹೋದರ-ಸಹೋದರಿಯರ ಜೊತೆ ಉತ್ತಮ ಬಾಂದವ್ಯ ಹೊಂದಬೇಕು. ಮದುವೆಯ ನಂತರ ಪತಿ,ಅತ್ತೆ-ಮಾವ, ಮಕ್ಕಳು ಇವರೊಡನೆ ಸೌಹಾರ್ದಯುತವಾಗಿ ಬಾಳಬೇಕು.ಜೊತೆಗೆ ತನ್ನ ಜೀವನವನ್ನೂ ಕಟ್ಟಿಕೊಳ್ಳಬೇಕು. ಇದೂ ಮಹಿಳೆಯ ಜೀವನದಲ್ಲ ಒಂದು ಕ್ರೀಡಾಸ್ಪರ್ಧೆಯಿದ್ದಂತೆ. ಇದರಲ್ಲಿ ಗೆದ್ದರೆ ಯಶಸ್ವಿ ಮಹಿಳೆ ಎನಿಸುವರು ಎಂದು ನುಡಿದರು.
ಕ್ರೀಡಾ ಸ್ಪರ್ಧೆ ಯನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಜಿ.ಪಂ.ಸದಸ್ಯರಾದ ಡಿ.ರವಿಶಂಕರ್ ಅವರು ಮಾತನಾಡಿ ಮಹಿಳೆಯರು ಸಂಘಟಿತರಾಗಿ, ದೀನದುರ್ಬಲರ ಸೇವೆ ಮಾಡಬೇಕು. ಈ ದಿಸೆಯಲ್ಲಿ ಕೆ.ಆರ್.ನಗರದ ಲೇಡೀಸ್ ಸ್ಮಾರ್ಟ್ ಕ್ಲಬ್ ನ ಕಾರ್ಯ ಶ್ಲಾಘನೀಯ ಎಂದು ನುಡಿದರು. ಮಹಿಳೆಯರು ಯಾವುದೇ ಸಮಸ್ಯೆಗೆ ಒಳಗಾದಾಗ ನ್ಯಾಯ ಕೊಡಿಸಲು ,ಅವರಿಗೆ ಉತ್ತಮ ಆರೋಗ್ಯ, ಶಿಕ್ಷಣ,ಸ್ವಾವಲಂಬನೆ ಕಲ್ಪಿಸಲು ಶ್ರಮಿಸುವುದಾಗಿ ಅವರು ಭರವಸೆ ನೀಡಿದರು.
ರೈತಮುಖಂಡರಾದ ಅಬ್ದುಲ್ ಶಕೂರ್,ಜಿಲ್ಲಾ ಕಿಸಾನ್ ಮೋರ್ಚಾದ ಅಧ್ಯಕ್ಷರಾದ ಶ್ರೀಮತಿ ಸುನೀತಾ ರಮೇಶ್, ಸ್ಮಾರ್ಟ್ ಲೇಡೀಸ್ ಕ್ಲಬ್ ಮುಖಂಡರಾದ ಶ್ರೀಮತಿ ಸ್ಮಿತಾ ಜಯಂತ್, ಸಾಲಿಗ್ರಾಮ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಉದಯಶಂಕರ್, ನಗರ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಜೆ ರಮೇಶ್,ಮುಖಂಡರಾದ ಶಾಂತಿರಾಜ್,ರಾಣಿ,ಪೂರ್ಣಿಮಾ ಶ್ರೀನಿವಾಸ ಮೊದಲಾದವರು ಉಪಸ್ಥಿತರಿದ್ದರು. ನಂತರ ಮಹಿಳೆಯರಿಗೆ ವಿವಿಧ ರೀತಿಯ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.