ಕರೋನಾ ಕಾರಣದಿಂದ ಕಳೆದ ಎರಡು ವರ್ಷಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಕಲಿಕೆಯಾಗದ ಹಿನ್ನೆಲೆಯಲ್ಲಿ ಕಲಿಕಾ ವರ್ಷವನ್ನು ಭರಿಸುವ ಉದ್ದೇಶದಿಂದ ಘನ ಸರಕಾರ 2022-23 ನೇ ಶೈಕ್ಷಣಿಕ ವರ್ಷವನ್ನು “ಕಲಿಕಾ ಚೇತರಿಕೆ” ಎಂಬ ವಿನೂತನ ಕಾರ್ಯಕ್ರಮದೊಂದಿಗೆ ದಿನಾಂಕ 16-05-2022 ರಿಂದ ಪ್ರಾರಂಭಿಸಿದೆ. ಆದ್ದರಿಂದ ಇಂದು ಕಿತ್ತೂರಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಆರ್.ಟಿ ಬಳಿಗಾರ ಹಾಗೂ ಶಿಕ್ಷಣ ಸಂಯೋಜಕರಾದ ಮಹೇಶ ಹೆಗಡೆ ಹಾಗೂ ವಿಷಯ ಪರಿವೀಕ್ಷಕರಾದ ಶ್ರೀಮತಿ ಆರ.ಎಸ್ ಉಪ್ಪಾರ ಹಾಗೂ ಬಿ.ಆರ್.ಪಿಗಳಾದ ಅಶೋಕ ಪಾಗಾದ ಅಧಿಕಾರಿಗಳು ವಿವಿಧ ಶಾಲೆಗಳಲ್ಲಿ ಮಿಂಚಿನ ಸಂಚಾರ ಮಾಡುವ ಮೂಲಕ ಇಲಾಖೆಯ ವಿನೂತನ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.
ಮೊದಲಿಗೆ ಕೆ.ಬಿ.ಎಸ್ ಹಾಗೂ ಕೆಜಿಎಸ್ ಎಂ.ಕೆ ಹುಬ್ಬಳ್ಳಿ ಶಾಲೆಗಳಿಗೆ ಭೇಟಿ ನೀಡಿ ಅಲ್ಲಿಯ ಮಕ್ಕಳಿಗೆ ಹೂ ಹಾಗೂ ಸಿಹಿ ನೀಡುವ ಮೂಲಕ ಮಕ್ಕಳನ್ನು ಶಾಲೆಗೆ ಬರಮಾಡಿಕೊಂಡರು ಅಧಿಕಾರಿಗಳೆಂಬ ಹಮ್ಮು ತೊರೆದು ಬಾಲಮಕ್ಕಳೊಂದಿಗೆ ಬೆರೆತು ಮುದ್ದು ಮಾತುಗಳನ್ನ ಆಲಿಸಿ ಭರವಸೆಯ ಮಾತುಗಳಿಂದ ಹುರಿದುಂಬಿಸಿದರು. ಬಳಿಕ ಶಾಲಾ ಶೈಕ್ಷಣಿಕ ಮಾಹಿತಿಗಳನ್ನು ಪರಿಶೀಲಿಸಿದರು.ತದನಂತರ ಹಿರಿಯ ಪ್ರಾಥಮಿಕ ಶಾಲೆ ದಾಸ್ತಿಕೊಪ್ಪದಲ್ಲಿ ಊರ ನಾಗರಿಕರು ಹಾಗೂ ಶಾಲಾಸಿಬ್ಬಂದಿ ಸೇರಿ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಡೊಳ್ಳು ಸಮೇತ ಶೃಂಗಾರಗೊಂಡ ಎತ್ತಿನ ಬಂಡಿಯಲ್ಲಿ ಊರಿನ ನಾಗರಿಕರೊಂದಿಗೆ ಚಕ್ಕಡಿಯಲ್ಲಿ ಶಾಲಾಪ್ರಾರಂಭೋತ್ಸವದ ಘೋಷಣೆಗಳನ್ನು ಕೂಗುತ್ತಾ ಊರಿನ ಬೀದಿಗಳಲ್ಲಿ ಸಂಚರಿಸಿ ಶಾಲೆಗೆ ಮಕ್ಕಳನ್ನು ಬರಮಾಡಿಕೊಳ್ಳುವ ಕರಪತ್ರಗಳನ್ನು ನೀಡಿದರು.
ಇನ್ನು ಕಾದರವಳ್ಳಿಯ ಪ್ರೌಢಶಾಲೆಯಲ್ಲಿ ಊರ ನಾಗರಿಕರು ಮಕ್ಕಳಿಗೆ ಉಚಿತ ನೋಟ್ ಪುಸ್ತಕ ನೀಡುವ ಕಾರ್ಯಕ್ರಮದಲ್ಲಿ ಭಾಗಿಯಾಗಿ ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ತುಂಬುವ ಮಾತುಗಳನ್ನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿಗಳ ಈ ವಿನೂತನ ಕಾರ್ಯಕ್ರಮಗಳು ಶೈಕ್ಷಣಿಕ ವಲಯದಲ್ಲಿ ಹೊಸ ಭರವಸೆಯನ್ನು ತುಂಬಿದವು.