ಸಾಮಾಜಿಕ ಜಾಗೃತಿ ಮೂಡಿಸುವಲ್ಲಿ ನಾಟಕಗಳ ಪಾತ್ರ ಅತ್ಯಂತ ಮಹತ್ವಪೂರ್ಣವಾದುದು ಎಂದು ಸಾಹಿತಿ ಭೇರ್ಯ ರಾಮಕುಮಾರ್ ನುಡಿದರು.
ಹಾಸನದ ಹಾಸನಾಂಬ ಕಲಾಕ್ಷೇತ್ರದಲ್ಲಿ ಸಿಗರನಹಳ್ಳಿ ಚಂದ್ರಶೇಖರ್ ಅವರು ಆಯೋಜಿಸಿರುವ ಪೌರಾಣಿಕ ನಾಟಕೋತ್ಸವದಲ್ಲಿ ಶ್ರೀ ಚಾಮುಂಡೇಶ್ವರಿ ಜಾನಪದ ಮತ್ತು ರಂಗಭೂಮಿ ಕಲಾಸಂಘದ ಕಲಾವಿದರು ಪ್ರದಶಿ೯ಸಿದ ಕುರುಕ್ಷೇತ್ರ ನಾಟಕ ಕಾಯ೯ಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದ ಅವರು ರಾಷ್ಟ್ರದ ಸ್ವಾತಂತ್ರ್ಯ ಚಳವಳಿಯಲ್ಲಿ ಜಾಗೃತಿ ಮೂಡಿಸುವಲ್ಲಿ ರಂಗ ನಾಟಕಗಳು ಪ್ರಮುಖ ಪಾತ್ರ ವಹಿಸಿದ್ದವು. ರಾಮಾಯಣ, ಮಹಾಭಾರತ, ದಾನಶೂರ ಕರ್ಣ, ಬೇಡರ ಕಣ್ಣಪ್ಪ ಅಂತಹ ನಾಟಕಗಳು ಸಮಾಜದಲ್ಲಿ ನೈತಿಕ ಚಿಂತನೆ, ಮಾನವೀಯ ಮೌಲ್ಯಗಳನ್ನು ಇಂದೂ ಸಹ ಬಿಂಬಿಸುತ್ತಿವೆ ಎಂದು ಹೇಳಿದರು.
ಹಾಸನದ ಸಾಹಿತಿ ಗೊರೂರು ಅನಂತರಾಜು ಮಾತನಾಡಿ, ಹಾಸನ ಜಿಲ್ಲೆ ರಂಗಚಟುವಟಿಕೆಗಳ ತವರೂರು. ಕಲಾ ಮಂದಿರ ಜಿಲ್ಲೆಯ ಕಲಾವಿದರ ಕಲಾರಾಧನೆಯ ದೇವಾಲಯ. ಅಪಾರ ಕಲಾವಿದರು ತಮ್ಮ ಪ್ರತಿಭೆ ಪ್ರದರ್ಶಿಸುತ್ತಿದ್ದಾರೆ. ಇಂತವರ ಬಗ್ಗೆ ತಾವು ಪರಿಚಯ ಲೇಖನದ ಸಂಕಲನ ಹೊರ ತರುತ್ತಿದ್ದು, ರಂಗಕಲಾವಿದರು ತಮ್ಮ ವಿವರ ನೀಡಬಹುದೆಂದು ಹೇಳಿದರು.
ಹಾಸನ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷರಾದ ಜೆ. ಓ. ಮಹಾಂತಪ್ಪ, ಹಾಸನ ನಗರಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರು ನವಿಲೇ ಅಣ್ಣಪ್ಪ, ಸ್ವತಂತ್ರ ಹೋರಾಟಗಾರರು ಎಂ. ಶಿವಣ್ಣ, ಕಲಾವಿದರಾದ ಸಿಗರನಹಳ್ಳಿ ಚಂದ್ರಶೇಖರ್ ಚೆಲುವನಹಳ್ಳಿ ಶೇಖರಪ್ಪ, ರಂಗ ನಿರ್ದೇಶಕರು ಎ. ಸಿ. ರಾಜು, ಚಾಮುಂಡೇಶ್ವರಿ ಜಾನಪದ ಹಾಗೂ ಕಲಾ ಸಂಘದ ಅಧ್ಯಕ್ಷರು ಬಾಲಕೃಷ್ಣ ಕಟ್ಟಾಯ, ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶ್ರೀ ಚಾಮುಂಡೇಶ್ವರಿ ಜಾನಪದ ಕಲಾ ಸಂಘದ ಕಲಾವಿದರು ಕುರುಕ್ಷೇತ್ರ ನಾಟಕ ಪ್ರದಶಿ೯ಸಿ ಪ್ರೇಕ್ಷಕರ ಮನ ಸೆಳೆದರು.