spot_img
spot_img

ಗೊರೂರು ಅನಂತರಾಜು ಅವರ ನಗೆಯ ಕಿರು ಹಾಸ್ಯ ಪ್ರಹಸನಗಳು

Must Read

- Advertisement -

ನಗುವಿನ ನಗ ಮೊಗವನ್ನು ಅಲಂಕರಿಸಿದ್ದಾಗ ಬರುವ ಕಳೆ ಎಷ್ಟು ಪ್ರಸಾಧನಗಳನ್ನು ಬಳಸಿದರೂ, ಅದೆಷ್ಟು ಆಭರಣಗಳನ್ನು ಧರಿಸಿದರೂ ಕಾಣಿಸದು. ಅದೆಷ್ಟೇ ನೋವು ದುಃಖ ದುಮ್ಮಾನಗಳಿದ್ದರೂ ತುಸು ಹಾಸ್ಯ ಅಲ್ಲಿ ಇಣುಕಿದರೂ ಸಾಕು ನಗುವಿನ ಲೇಪನದಿಂದಾಗಿ ಸಂತೋಷ ಮನೆ ಮಾಡುತ್ತದೆ. ಹಸನ್ಮುಖಿ ಸದಾ ಸುಖಿಯೆಂಬ ನಾಣ್ಣುಡಿಯಂತೆ ನಗುವೇ ಮನುಜನ ಆರೋಗ್ಯದ ಗುಟ್ಟು. ಇದನ್ನು ಅರಿತ ನುರಿತ ಬರಹಗಾರರಾದ, ಸಾಹಿತ್ಯ ಕ್ಷೇತ್ರದಲ್ಲಿ ತಮ್ಮ ಛಾಪನ್ನು ಒತ್ತಿರುವ ಗೊರೂರು ಅನಂತರಾಜು ಅವರ ‘ ಕಿರು ಹಾಸ್ಯ ಪ್ರಹಸನಗಳು ‘ ಎಂಬ ಹೊತ್ತಗೆ ಹಾಸ್ಯವನ್ನು ಹೊತ್ತು ತಂದಿದೆ.

‘ಅಮಾಯಕ ಗುರು ಪ್ರಳಯಾಂತಕ ಶಿಷ್ಯ’ ಈ ಪ್ರಹಸನದಲ್ಲಿ ಗುರುಗಳ ಪ್ರಶ್ನೆಗೆ ಶಿಷ್ಯನು ಕೊಡುವ ಉತ್ತರ ನಗುವನ್ನು ಹೊಮ್ಮಿಸುತ್ತದೆ. ಇನ್ನು ಎರಡನೆಯ ಪ್ರಹಸನ ‘ಪೋಲೀಸ್ ಠಾಣೆ ಕಳ್ಳನ ವಿಚಾರಣೆ’ ಇಲ್ಲಿ ಕಳ್ಳತನ ಮಾಡಲು ಮೊದಲು ಗಣಪತಿ ದೇವಸ್ಥಾನವನ್ನೆ ಏಕೆ ಆರಿಸಿಕೊಂಡೆಯೆಂಬ ಪ್ರಶ್ನೆಗೆ ಯಾವ ವಿಘ್ನಗಳು ಬಾರದೆ ಇರಲಿಯೆಂಬ ಉತ್ತರ ನಗುವನ್ನು ತರಿಸುತ್ತದೆ. ಲೇಖಕರು ಕಳ್ಳನಿಗೆ ಹೇಳುವ ಹಾಗೆ ಮೆಲ್ಲನೆ ರಾಜಕೀಯ ಧುರೀಣರಿಗೂ ಚಾಟಿಯೇಟನ್ನು ಕೊಟ್ಟಿದ್ದಾರೆ, ರಾಜಕೀಯ ಸೇರಿದ್ದರೆ ರಾತ್ರಿಯ ಬದಲು ಹಗಲಿನ ಹೊತ್ತು ದರೋಡೆ ಮಾಡಬಹುದಿತ್ತೆಂದು ಸೂಚ್ಯವಾಗಿ ವಿಡಂಬಿಸಿದೆ. 

ಸುಬ್ಬಿ ಸುಬ್ಬಣ್ಣ ಸುವ್ವಲಾಲಿಯಲ್ಲಿ ಗಂಡ ಹೆಂಡತಿಯರ ಜಗಳ ಮೊಗದಲ್ಲಿ ಮಂದಹಾಸ ಮೂಡಿಸುತ್ತದೆ. ಗಂಡ ಹೆಂಡತಿಯರ ನಂಟು ಬಿಡಿಸಲಾರದ ಗಂಟು. ಅದು ಸ್ವರ್ಗದಲ್ಲಿಯೇ ನಿಶ್ಚಯವಾಗಿರುವ ಬ್ರಹ್ಮಗಂಟು, ಒಬ್ಬರನ್ನೊಬ್ಬರು ಬಿಟ್ಟಿರಲಾಗದೆಂಬ ಅರಿವಿದ್ದರೂ ಒಮ್ಮೊಮ್ಮೆ ಉಲ್ಟಾ ಮಾತನಾಡುವುದು, ಕೋಪ ಬಂದಾಗ ತವರಿಗೆ ಹೋಗ್ತೀನಿ ನೋಡೀಂತ ಬಾಯ್ಮಾತಿಗೆ ಹೆದರಿಸುವ ಹೆಂಡತಿಗೆ ವಾಪಸ್ ಬರ್ತಾ ಸೂಟ್ ತಗೊಂಬಾ ಅನ್ನೊದು ನಗುವಿನಲೆಯಲ್ಲಿ ತೇಲಿಸುತ್ತದೆ. ಡಾಕ್ಟರ್ ನನ್ನನ್ನು ಫೂಲ್ ಮಾಡ್ತೀರಾ ದಲ್ಲಿ ಆಸ್ಪತ್ರೆಯಲ್ಲಿ ಡಾಕ್ಟರ್ ಮತ್ತು ರೋಗಿಯ ಮಧ್ಯೆ ನಡೆಯುವ ಬಹಳಷ್ಟು ಮಾತುಕತೆಗಳು ನಗೆಗಡಲಲ್ಲಿ ತೇಲಿಸುತ್ತದೆ. ಸಾಯ್ತಾ ಇದ್ದವನನ್ನ ಬದುಕಿಸಿ ನನ್ನ ಹೃದಯ ಕದ್ದಿರಿ ಎಂದರೆ ಕದ್ದದ್ದು ನಿನ್ನ ಹೃದಯವಲ್ಲ ಕಿಡ್ನಿಯೆಂಬ ಉತ್ತರ, ನಿಮ್ಮ ಕಿಡ್ನಿ ಫೇಲ್ ಆಗಿದೆಯೆಂಬುದನ್ನು ಕೇಳಿದ ರೋಗಿ ಕಿಡ್ನಿ ಶಾಲೆಗೇ ಹೋಗೋಲ್ಲ ಅದು ಹ್ಯಾಗೆ ಫೇಲಾಗುತ್ತೆ ಅನ್ನುವ ಉತ್ತರಗಳು…. ಹೀಗೆ ಸಾಗುತ್ತದೆ.

- Advertisement -

ಹೇ ಶಿಷ್ಯ ಕೀಟ ಅದ್ಯಾಕೆ ನಗ್ತ ಇದ್ದೀಯ ದಲ್ಲಿ ಯಾವ ಪ್ರಾಣಿ ಇಷ್ಟವೆಂದರೆ ಬೆಕ್ಕು ಅನ್ನುವ ಹುಡುಗ. ಯಾಕೆಂದರೆ ಅಪಶಕುನ ಅಜ್ಜಿ ಶಾಲೆಗೆ ಹೋಗಬೇಡಾಂತಾರೆ ಅನ್ನೋದೇ….,ಮಕ್ಕಳ ಮುಗ್ಧತನ ಶಾಲೆಗೆ ತಪ್ಪಿಸಿಕೊಳ್ಳಲು ಹೂಡುವ ಆಟಗಳ ನೆನಪು ಮನಃಪಟಲದಲ್ಲಿ ಹಾದು ಹೋಗುವುದಂತೂ ಸತ್ಯ. ನೆರೆಹೊರೆ ಹೆಂಗಸರು ಹೀಗೆ ಮಾತಾಡಿಕೊಂಡರು, ಹಲೋ ಎಲ್ಲಿಂದ ಮಾತ್ನಾಡ್ತಿದ್ದೀಯ ಬಾಯಿಂದ್ಲೆ ಮಾತ್ನಾಡ್ತಿದ್ದೇನೆ, ಹೀಗೆ ಸಾಗುತ್ತ ಕೊನೆಯ ಪ್ರಹಸನ ಆಗ…..ನಿಮ್ಮ ಮನೆ ಮುಂದೆ ಹೊಗೆ ಗ್ಯಾರಂಟಿಯಲ್ಲಿ ಗಿರಾಕಿ ಸಪ್ಲೈ ಯರ್ ನಡುವೆ ನಡೆಯುವ ಮಾತುಕತೆಗಳು ಎಲ್ಲವೂ ನವಿರು ಹಾಸ್ಯವನ್ನು ಹೊತ್ತಿವೆ.

ಕೆಲವೊಂದು ಹಾಸ್ಯಗಳು ಅಕ್ಕಪಕ್ಕದಲ್ಲಿ ಕಂಡದ್ದು, ಮನೆಯಲ್ಲಿ ನಡೆಯುವಂತದ್ದೆ ಆಗಿದ್ದರು ಓದುವಾಗ ನಗೆ ತರಿಸುವುದಂತು ಸತ್ಯ.ಇಂದಿನ ಮೊಬೈಲ್ ಯುಗದಲ್ಲಿ ಯಾಂತ್ರಿಕ ಜೀವನದಲ್ಲಿ ತೊಡಗಿ ತಲೆ ಮೇಲೆ ಏನೊ ಭಾರವನ್ನು ಹೊತ್ತಂತೆ ನಡೆಯುವರು ಕೂಡ ಓದಿದರೆ ನಗು ಅವರ ಮೊಗದೊಲ್ಲೊಮ್ಮೆ ಹಾದು ಹೋಗುವುದು. ಹಾಗೆ ಈ ದೊಡ್ಡ ದೊಡ್ಡ ನಗರಗಳಲ್ಲಿ ಬೆಳಗಿನ ಹೊತ್ತು ಉದ್ಯಾನವನಕ್ಕೆ ಹೋದರೆ ಆಸನಗಳನ್ನ ಮಾಡುತ್ತ ನಗಲು ಕಸರತ್ತು ಮಾಡುವವರನ್ನ ಕಂಡಾಗ ನನಗಂತು ನಗು ತಡಿಲಿಕ್ಕೆ ಆಗೋಲ್ಲ, ಆ ರೀತಿಯ ಮಂದಿಯು ಕೂಡ ಓದಿದರೆ ನಗುವುದು ಖರೆಯೆಂದು ಹೇಳುತ್ತ ಲೇಖಕರ ಲೇಖನಿಯಿಂದ ಇನ್ನು ಹೆಚ್ಚೆಚ್ಚು ಹಾಸ್ಯ ಲೇಖನಗಳು ಬರಲಿಯೆಂದು ಆಶಿಸುತ್ತ,ತಾವೂ ಬೆಳೆಯುತ್ತ ತಮ್ಮ ಜೊತೆ ಹತ್ತು ಜನ ಬೆಳೆಯಲಿ ಎನ್ನುವ ಮನೋಭಾವ ಹೊಂದಿರುವ ಸರಳ ವ್ಯಕ್ತಿತ್ವವೆ ಅವರ ಮೇರು ಗುಣವೇ ಅವರನ್ನಿಷ್ಟು ಎತ್ತರಕ್ಕೆ ಬೆಳೆಸಿದೆಯೆಂಬುದು ಅತಿಶಯೋಕ್ತಿಯಲ್ಲವೆಂದು ಹೇಳುತ್ತ ನನ್ನ ಅನಿಸಿಕೆಯನ್ನ ನಗುನಗುತ್ತ ಮುಗಿಸುತ್ತಿದ್ದೇನೆ.


ಸೌಮ್ಯ ಪ್ರಸಾದ್

- Advertisement -

ಹಾಸನ

- Advertisement -
- Advertisement -

Latest News

ಕವನ : ಗೊಂಬೆಗಳ ಕಣ್ಣೀರು

ಗೊಂಬೆಗಳ ಕಣ್ಣೀರು ಅಂದು ನಾವು ಅಪ್ಪ ಅವ್ವನನ್ನು ಕಾಡಿ ಬೇಡಿ ಗೊಂಬೆಗಳಿಗಾಗಿ ಅಳುತ್ತಿದ್ದೆವು ಜಾತ್ರೆ ಉತ್ಸವದಲ್ಲಿ ಹಿರಿಯರಿಗೆ ದೇವರ ಮೇಲಿನ ಭಕ್ತಿ ನಮಗೋ ಬಣ್ಣ ಬಣ್ಣದ ಗೊಂಬೆಗಳ ಮೇಲೆ ಆಸಕ್ತಿ ಅವ್ವ ಹೇಗೋ ಮಾಡಿ ಅಪ್ಪನ ತುಡುಗಿನಲಿ ತನ್ನಲಿದ್ದ ದುಡ್ಡು ಕೊಟ್ಟು ತಂದಳು ಗೊಂಬೆಗಳ ಮಿತಿ ಇರಲಿಲ್ಲ...
- Advertisement -

More Articles Like This

- Advertisement -
close
error: Content is protected !!
Join WhatsApp Group