ಸಿಂದಗಿ: ಸದೃಢ ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಣದ ಮತ್ತು ಶಿಕ್ಷಕರ ಪಾತ್ರ ಅತ್ಯಂತ ಹಿರಿದಾಗಿದೆ. ಶಿಕ್ಷಣ ಕ್ಷೇತ್ರವು ಸರ್ಕಾರಿ, ಅನುದಾನಿತ, ಅನುದಾನ ರಹಿತ ಎಂಬ ಮೂರು ವೈಶಿಷ್ಟ ಪೂರ್ಣತೆಯನ್ನು ಒಳಗೊಂಡಿದೆ.
ಈ ಮೂರು ವ್ಯವಸ್ಥೆಗಳ ಮೂಲಕ ಶಿಕ್ಷಣದ ಪ್ರಸರಣವನ್ನು ಮಾಡುವ ಹೊಣೆಗಾರಿಕೆ ರಾಜ್ಯ ಸರ್ಕಾರದ ಮೇಲಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಹಲವಾರು ಸಮಸ್ಯೆಗಳು, ಗೊಂದಲಗಳು ಸೇರಿದಂತೆ ಅನೇಕ ತೊಂದರೆಗಳನ್ನು ಶಿಕ್ಷಕರು ಅನುಭವಿಸುತ್ತಿದ್ದಾರೆ.
ಅದರ ಎಲ್ಲಾ ಆಳ ಅಗಲವನ್ನ ಪರಿಶೀಲಿಸಿ ಶೈಕ್ಷಣಿಕ ಕ್ಷೇತ್ರದ ಅನೇಕ ಸಮಸ್ಯೆಗಳಿಗೆ ಸೂಕ್ತ ಪರಿಹಾರ ನೀಡುವಲ್ಲಿ ತಾವು ಮುಂದಾಗಬೇಕು ಎಂದು ವಿಧಾನಪರಿಷತ್ ಸದಸ್ಯ ಸುಶೀಲ್ ನಮೋಶಿ, ವಿಧಾನ ಪರಿಷತ್ ಸದಸ್ಯ ಎ. ದೇವೇಗೌಡರ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ ಅವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಭೇಟಿ ನೀಡಿ ಶಿಕ್ಷಣದ ಸಮಸ್ಯೆಗಳ ಕುರಿತಾದ ಮತ್ತು ಅವುಗಳ ಪರಿಹಾರಕ್ಕೆ ಇರುವ ಮಾರ್ಗಗಳ ಬಗ್ಗೆ ಬೆಂಗಳೂರಿನ ಅವರ ನಿವಾಸದಲ್ಲಿ ಚರ್ಚೆ ನಡೆಸಿದರು.
ಈ ಸಂದರ್ಭದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾತನಾಡಿ, ಶೈಕ್ಷಣಿಕ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವ ಕನಸನ್ನು ಕಂಡಿದ್ದೇನೆ. ಇಲ್ಲಿನ ಜ್ವಲಂತ ಸಮಸ್ಯೆಗಳಿಗೆ ಸೂಕ್ತ ಪರಿಹಾರ ನೀಡುವ ಮೂಲಕ ಈ ಕ್ಷೇತ್ರದ ಪ್ರಾವಿಣ್ಯತೆಯನ್ನು ಉಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಶಿಕ್ಷಕರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಕುರಿತಾಗಿ ಕೂಡಲೇ ಸಭೆ ಕರೆದು ಅವುಗಳ ಬಗ್ಗೆ ಸುದೀರ್ಘ ಮಾಹಿತಿಯನ್ನು ಪಡೆದುಕೊಂಡು ಪರಿಹಾರಕ್ಕೆ ಮುಂದಾಗುತ್ತೇನೆ.
ಶಿಕ್ಷಕರು ಈ ದೇಶದ ದೊಡ್ಡ ಸಂಪತ್ತು ಅವರ ನೆರವಿಗೆ ರಾಜ್ಯ ಸರ್ಕಾರ ಸದಾ ಸಿದ್ಧವಿದೆ. ಶಿಕ್ಷಣದಲ್ಲಿ ಗುಣಮಟ್ಟ ತರುವ ವಿವಿಧ ಯೋಜನೆಗಳನ್ನು ರೂಪಿಸುವ ಮೂಲಕ ನಾನು ಕಾರ್ಯನಿರ್ವಹಿಸುತ್ತೇನೆ ಎಂದರು.