ಮಕ್ಕಳ ಭವಿಷ್ಯ ರೂಪಿಸುವಲ್ಲಿ ತಾಯಿಯ ಪಾತ್ರ ಮುಖ್ಯ – ಗಿರೆಣ್ಣವರ

0
520
ಮೂಡಲಗಿ: ತುಕ್ಕಾನಟ್ಟಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ತಾಯಂದಿರ ಸಭೆಯನ್ನು ಉದ್ದೇಶಿಸಿ ಎ.ವಿ. ಗಿರೆನ್ನವರ ಮಾತನಾಡಿದರು

ಮೂಡಲಗಿ: ಗ್ರಾಮೀಣ ಮಟ್ಟದಲ್ಲಿ ಪಾಲಕರು ತಮ್ಮ ಉದ್ಯೋಗದ ಜೊತೆ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಬೇಕು ಅದರಲ್ಲೂ ಮಕ್ಕಳ ಭವಿಷ್ಯ ರೂಪಿಸುವಲ್ಲಿ ತಾಯಂದಿರ ಪಾತ್ರ ತುಂಬಾ ಪ್ರಮುಖವಾಗಿದೆ ಎಂದು ತುಕ್ಕಾನಟ್ಟಿ ಸರಕಾರಿ ಪ್ರಾಥಮಿಕ ಶಾಲೆಯ ಮುಖ್ಯಾಧ್ಯಾಪಕ ಎ.ವ್ಹಿ.ಗಿರೆಣ್ಣವರ ಹೇಳಿದರು.

ಅವರು ತಾಲೂಕಿನ ತುಕ್ಕಾನಟ್ಟಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ನಡೆದ ತಾಯಂದಿರ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಪಾಲಕರು ಬೇರೆ ಆಸ್ತಿಗೆ ಅಪೇಕ್ಷೆಪಡದೇ ಶಿಕ್ಷಕರ ಜೊತೆಗೆ ಕೈಜೋಡಿಸಿ ಶಿಕ್ಷಣದಿಂದ,ಸಂಸ್ಕಾರದಿಂದ ಮಕ್ಕಳ ಭವಿಷ್ಯ ರೂಪಿಸಿ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿಕೊಳ್ಳಲು ಕರೆ ನೀಡಿದರು.

ಕಲ್ಲೋಳಿ ಸಮೂಹ ಸಂಪನ್ಮೂಲ ವ್ಯಕ್ತಿ ಗಣಪತಿ ಉಪ್ಪಾರ ಮಾತನಾಡಿ, ಮತ್ತೆ ಕರೋನಾ ಅಲೆ ಪ್ರಾರಂಭವಾಗುವ ಸೂಚನೆಗಳು ಇರುವದರಂದ ಪಾಲಕರು ಕೋವಿಡ್ ನಿಯಮಗಳನ್ನು ಪಾಲಿಸುವುದರೊಂದಿಗೆ ಹದಿನೈದರಿಂದ ಹದಿನೆಂಟರವರೆಗಿನ ತಮ್ಮ ಮಕ್ಕಳಿಗೆ ಕೋವಿಡ್ ಲಸಿಕೆಯನ್ನು ಹಾಕಿಸಬೇಕೆಂದು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಗ್ರಾಮ ಪಂಚಾಯತ ಆಧ್ಯಕ್ಷ ಕುಮಾರ ಮರ್ದಿ ಮಾತನಾಡಿ, ಸರಕಾರಿ ಶಾಲೆಗಳಿಗೆ ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯತಿಯಿಂದ ಶಾಲೆಗೆ ಬೇಕಾಗುವ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡುವುದಾಗಿ ಭರವಸೆ ನೀಡಿದರು.

ಶಿಕ್ಷಕ ಎಮ್.ಡಿ.ಗೋಮಾಡಿ ಮಾತನಾಡಿ, ಮುಂದಿನ ದಿನಗಳಲ್ಲಿ ಸರಕಾರದ ಹೊಸ ಶಿಕ್ಷಣ ನೀತಿಯಿಂದಾಗಿ ಒಂದೇ ಸೂರಿನಡಿ ನರ್ಸರಿಯಿಂದ ಪದವಿಮಟ್ಟದವರೆಗೆ ಶಿಕ್ಷಣ ಸಿಗಲಿದೆ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ತುಂಬಾ ಬದಲಾವಣೆಯಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ ಸದಸ್ಯರಾದ ತಿಪ್ಪಣ್ಣಾ ಹುಲಕುಂದ, ಮಾದೇವಿ ಗದಾಡಿ, ಕಲ್ಲೋಳಿ ಸಮೂಹ ಸಂಪನ್ಮೂಲ ವ್ಯಕ್ತಿ ಗಣಪತಿ ಉಪ್ಪಾರ ಹಾಗೂ ಶಿಕ್ಷಕರಾದ ಶಂಕರ ಲಮಾಣಿ, ಮಾದೇವ ಗೋಮಾಡಿ, ಕುಸುಮಾ ಚಿಗರಿ, ವಿಮಲಾಕ್ಷಿ ತೋರಗಲ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ನೂರಾರು ತಾಯಂದಿರು ಭಾಗವಹಿಸಿದ್ದರು.