
ಸವದತ್ತಿ: ಕೋವಿಡ್-19ರ ಸಂದಿಗ್ದ ಸ್ಥಿತಿಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ನಡೆಸಲು ರಾಜ್ಯ ಸರಕಾರ ಸಂಪೂರ್ಣ ಸನ್ನದ್ಧವಾಗಿದ್ದು, ಅನೇಕ ಶಿಕ್ಷಣ ತಜ್ಞರ ಸಲಹೆ ಮೇರೆಗೆ ಪರೀಕ್ಷೆಯನ್ನು ವ್ಯವಸ್ಥಿತವಾಗಿ ನಡೆಸಲಾಗುತ್ತಿದೆ ಎಂದು ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಹೇಳಿದರು.
ಸ್ಥಳೀಯ ತಾ.ಪಂ ಸಭಾಭವನದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಕುರಿತು ನಡೆದ ಪೂರ್ವಭಾವಿ ಸಭೆ ಮತ್ತು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ತಾಲೂಕಿನಾದ್ಯಂತ 27 ಕೇಂದ್ರಗಳಲ್ಲಿ 4930 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದು, 2 ದಿನಗಳ ಕಾಲ ನಡೆಯುವ ಪರೀಕ್ಷೆಗೆ ಹಾಜರಾಗುವ ಎಲ್ಲ ವಿದ್ಯಾರ್ಥಿಗಳಿಗೆ ಸಕಲ ಸಿದ್ಧತೆಯನ್ನು ಮಾಡಲಾಗಿದೆ ಎಂದರು. ಸಿ.ಎಮ್.ಮಾಮನಿ ಚಾರಿಟೇಬಲ್ ಟ್ರಸ್ಟ್‍ವತಿಯಿಂದ ಎಲ್ಲ ವಿದ್ಯಾರ್ಥಿಗಳಿಗೆ ಪರೀಕ್ಷೆಯ ನಂತರ 2 ದಿನ ಬಿಸ್ಕೀಟ್ ಪೊಟ್ಟಣವನ್ನು ವಿತರಿಸುವ ವ್ಯವಸ್ಥೆ ಮಾಡಲಾಗಿದ್ದು, ಕೋವಿಡ್ ನಿಯಮಾವಳಿ ಪ್ರಕಾರ ಸ್ಯಾನಿಟೈಸರ್ ಮತ್ತು ಮಾಸ್ಕ್ ವ್ಯವಸ್ಥೆಯನ್ನು ಪರೀಕ್ಷಾ ಕೊಠಡಿಗಳಲ್ಲಿ ಕೈಗೊಳ್ಳಲಾಗುತ್ತಿದೆ ಎಂದರು.
ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಸುವ್ಯವಸ್ಥಿತವಾಗಿ ನಡೆಸಲು ತಾಲೂಕು ಆಡಳಿತ ಸಂಪೂರ್ಣ ಸಿದ್ದತೆ ಮಾಡಿಕೊಂಡಿದ್ದು, ಆರೋಗ್ಯ ಇಲಾಖೆಯ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ ಎಂದರು. ಸಭೆಗೆ ಅನುಪಸ್ಥಿತಿಯಲ್ಲಿದ್ದ ಸಾರಿಗೆ ಇಲಾಖೆ ಸಿಬ್ಬಂದಿಯವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಹೇಳಿದ ಶಾಸಕರು, ವಿದ್ಯಾರ್ಥಿಗಳು ಪರೀಕ್ಷೆ ಕೇಂದ್ರಕ್ಕೆ ಹೋಗಲು ಸಾರಿಗೆ ಸಂಪರ್ಕವನ್ನು ಉಚಿತವಾಗಿ ಕಲ್ಪಿಸಲಾಗುತ್ತಿರುವುದರಿಂದ ತಾಲೂಕು ಆಡಳಿತ ವ್ಯವಸ್ಥಿತವಾದ ಕ್ರಮ ಕೈಗೊಳ್ಳಬೇಕೆಂದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಅರ್ಜುನ ಕಂಬೋಗಿ ಮಾತನಾಡಿ, “ಭಾರತದಲ್ಲಿ ಕರ್ನಾಟಕ ರಾಜ್ಯದಲ್ಲಿ ಮಾತ್ರ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ನಡೆಸಲಾಗುತ್ತಿದ್ದು, ಕೋವಿಡ್ ಸಂದರ್ಭದಲ್ಲಿ ಶೈಕ್ಷಣಿಕ ಇಲಾಖೆಯ ಇದೊಂದು ಯಶಸ್ವಿ ಸಾಧನೆ ಎನ್ನಲಾಗಿದೆ” ಎಂದರು. “ವಿದ್ಯಾರ್ಥಿಗಳು ನಿರ್ಭೀತರಾಗಿ ಪರೀಕ್ಷೆಯನ್ನು ಬರೆಯಲು ಸನ್ನದ್ದರಾಗಬೇಕಿದ್ದು, ಇದೊಂದು ಹಬ್ಬವೆಂದು ಪರಿಗಣಿಸಿ ಪರೀಕ್ಷೆಯನ್ನು ಎದುರಿಸಬೇಕೆಂದರು. 27 ಪರೀಕ್ಷಾ ಕೇಂದ್ರಗಳಲ್ಲಿ 4930 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದು, 720 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ” ಎಂದರು.
ತಹಸೀಲ್ದಾರ ಪ್ರಶಾಂತ ಪಾಟೀಲ ಮಾತನಾಡಿ, ‘ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಮತ್ತೆ ಕೊರೊನಾ ಅಲೆ ಹೆಚ್ಚುತ್ತಿರುವದರಿಂದ ರಾಜ್ಯದಲ್ಲಿ ಇನ್ನಷ್ಟು ಜಾಗೃತೆಯನ್ನು ಕೈಗೊಳ್ಳಲಾಗಿದೆ’ ಎಂದರು. ‘ಪರೀಕ್ಷಾ ಸಮಯದಲ್ಲಿ ಸಾಮಾಜಿಕ ಅಂತರದೊಂದಿಗೆ ಕಡ್ಡಾಯವಾಗಿ ಮಾಸ್ಕ್ ಬಳಕೆಯನ್ನು ಮಾಡಲಾಗುತ್ತಿದೆ’ ಎಂದರು. ಈ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಹಾಜರಾತಿಯನ್ನು ಕಡ್ಡಾಯಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಇಲಾಖೆಯ ಸಿಬ್ಬಂದಿಯವರು ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಗಮನದಲ್ಲಿಟ್ಟುಕೊಂಡು ಪರೀಕ್ಷಾ ಕೇಂದ್ರಕ್ಕೆ ಕರೆತರಬೇಕೆಂದರು.
ತಾ.ಪಂ ಇಓ ಯಶವಂತಕುಮಾರ, ಸಿಪಿಐ ಮಂಜುನಾಥ ನಡವಿನಮನಿ, ಟಿ.ಎಚ್.ಓ ಡಾ.ಮಹೇಶ ಚಿತ್ತರಗಿ, ಪಿಎಸ್‍ಐ ಶಿವಾನಂದ ಗುಡಗನಟ್ಟಿ, ವೈ.ಎಮ್.ಶಿಂಧೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಶಿಕ್ಷಣ ಸಂಯೋಜಕ ಮಂಜುನಾಥ ಹುದ್ದಾರ ನಿರೂಪಿಸಿದರು.ಕ್ಷೇತ್ರ ಸಮನ್ವಯಾಧಿಕಾರಿಗಳಾದ ಎಮ್.ಬಿ.ಬಳಿಗಾರ ವಂದಿಸಿದರು.