ಬೆಳಗಾವಿ: ಕನ್ನಡ ಭಾಷೆಯ ರೂಪಕ ಮತ್ತು ಪ್ರತಿಮಾ ಸಾಮರ್ಥ್ಯವನ್ನು ಹಿಗ್ಗಲಿಸಿದ ಶ್ರೇಯಸ್ಸು ಕವಿ ಬೇಂದ್ರೆಯವರಿಗೆ ಸಲ್ಲುತ್ತದೆ. ಅವರ ನುಡಿಯ ಬೆಡಗನ್ನು ಬಿಡಿಸುವುದಕ್ಕೆ ಒಂದು ಬೌದ್ಧಿಕ ಹಾಗೂ ಭಾಷಿಕ ಸಿದ್ಧತೆ ಬೇಕು. ಕನ್ನಡ, ಕನ್ನಡಿಗ ಮತ್ತು ಕರ್ನಾಟಕವಿರುವವರೆಗೂ ವರ ಕವಿ ಬೇಂದ್ರೆ ಅಮರರು. ಕನ್ನಡಿಗರಿಗೆ ಅವರ ಕಾವ್ಯವನ್ನು ಆಸ್ವಾದಿಸುವುದೊಂದು ಸಂಭ್ರಮ. ಕಾವ್ಯಸಂತೋಷದ ಉತ್ತುಂಗದ ಸ್ಥಿತಿಯನ್ನು ಅವರ ಕಾವ್ಯಗಳಲ್ಲಿ ಅನುಭವಿಸಬಹುದು. ಉತ್ತರ ಕರ್ನಾಟಕದ ಭಾಷಾ ವೈಶಿಷ್ಟ್ಯ ವನ್ನು ಸಾರ್ವತ್ರಿಕಗೊಳಿಸಿ ಭಾಷಾ ಸಿದ್ಧಾಂತಗಳನ್ನು ಮೀರಿ ಕನ್ನಡವನ್ನು ಕಟ್ಟಿದ ಮಹನೀಯರು ಅವರಾಗಿರುವರು. ಕನ್ನಡಿಗರೆಲ್ಲರಿಗೂ ಕವಿ ಬೇಂದ್ರೆ ಪ್ರಾತಃಸ್ಮರಣೀಯರು. ಬೇಂದ್ರೆಯವರನ್ನು ಕುರಿತ ಅಧ್ಯಯನಕ್ಕೆ ಇಂದು ಪ್ರವೇಶ ಬಯಸುವವರು ಭಾಷಾ ತತ್ವಶಾಸ್ತ್ರ ಮತ್ತು ಸಂಗೀತ ಶಾಸ್ತ್ರದ ಮೂಲಕ ಪ್ರವೇಶಿಸಬಹುದು. ಯುವಪೀಳಿಗೆ ಬೇಂದ್ರೆಯವರ ಕವಿತೆಗಳೊಡನೆ ಹೆಚ್ಚು ಹೆಚ್ಚು ಅನುಸಂಧಾನ ವೇರ್ಪಡಿಸಿಕೊಳ್ಳಬೇಕು ಎಂದು ಕನ್ನಡ ಅಧ್ಯಯನ ಸಂಸ್ಥೆಯ ಮುಖ್ಯಸ್ಥರಾದ ಪ್ರೊ. ಎಸ್. ಎಂ ಗಂಗಾಧರಯ್ಯ ಅವರು ಅಭಿಪ್ರಾಯಪಟ್ಟರು.
ಅವರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಯು ಪಂಪ ಮಹಾಕವಿ ವೇದಿಕೆಯಲ್ಲಿ ಏರ್ಪಡಿಸಿದ್ದ ಬೇಂದ್ರೆ ಜನ್ಮದಿನಾಚಾರಣೆಯ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇದಕ್ಕೂ ಮುನ್ನ ಬೇಂದ್ರೆಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಡಾ. ಗಜಾನನ ನಾಯ್ಕ ಹಾಗೂ ಡಾ. ಶೋಭಾ ನಾಯಕ ಉಪಸ್ಥಿತರಿದ್ದರು. ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳು ಹಾಜರಿದ್ದರು.