ಬೆಂಗಳೂರು – ಜೀವನದ ಯಾವುದೇ ಕ್ಷೇತ್ರದಲ್ಲಾಗಲೀ ಯಶಸ್ಸನ್ನು ಪಡೆಯಬೇಕಾದರೆ ನಿರಂತರ ಪ್ರಯತ್ನ ಮತ್ತು ಅದೃಷ್ಟದ ಜೊತೆಗೆ ಸ್ವಶಕ್ತಿ ಹಾಗೂ ಸಾಮರ್ಥ್ಯಗಳು ಅಗತ್ಯ ಹಾಗೂ ಅನಿವಾರ್ಯ. ಕ್ರಿಯಾತ್ಮಕವಾಗಿ ಹಾಗೂ ಸೃಜನಾತ್ಮಕವಾಗಿ ತನ್ನನ್ನು ತಾನು ತೊಡಗಿಸಿಕೊಂಡಾಗ ಮಾತ್ರ ಆರಿಸಿಕೊಂಡು ಕ್ಷೇತ್ರದಲ್ಲಿ ಯಶಸ್ಸನ್ನು ಪಡೆಯಬಹುದು ಎಂದು ರಾಷ್ಟ್ರೀಯ ನಾಟಕ ಶಾಲೆ, ಬೆಂಗಳೂರು ಇದರ ನಿರ್ದೇಶಕರಾದ ಶ್ರೀಮತಿ ವೀಣಾ ಶರ್ಮಾ ಹೇಳಿದರು.
ಶ್ರೀವಿವೇಕಾನಂದ ಕಲಾಕೇಂದ್ರದವರು ತಮ್ಮ ಸುವರ್ಣಮಹೋತ್ಸವ’ ವರ್ಷದ ಸುವರ್ಣರಂಗಸಂಭ್ರಮ’ ನಾಟಕೋತ್ಸವವನ್ನು, ಬೆಂಗಳೂರಿನ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರಾದ ಶ್ರೀಮತಿ ವೀಣಾ ಶರ್ಮಾರವರು ಉದ್ಘಾಟನೆ ಮಾಡಿ ಮಾತನಾಡಿದರು.
ರಾಷ್ಟ್ರಭಕ್ತಿ, ರಾಷ್ಟ್ರಪ್ರೇಮಗಳು ಪ್ರತಿಯೊಬ್ಬ ನಾಗರಿಕರಿಗೂ ಅತ್ಯಗತ್ಯ. ಈ ದಿಸೆಯಲ್ಲಿ ವಂದೇ ಭಾರತ’ ಒಂದು ವಿನೂತನ ಪ್ರಯತ್ನ. ಅವಕಾಶವಂಚಿತ ಸುಪ್ತ ಕಲಾಪ್ರತಿಭೆಗಳನ್ನು ಗುರುತಿಸಿ ಅವರಿಗೆ ಉಚಿತವಾಗಿ ತರಬೇತಿ ನೀಡಿ, ಆತ್ಮವಿಶ್ವಾಸ ತುಂಬಿ ಪ್ರೋತ್ಸಾಹಿಸಿ ಅವರನ್ನು ತಮ್ಮ ಜೊತೆಗೆ ಸೇರಿಸಿಕೊಂಡು ರಾಷ್ಟ್ರಜಾಗೃತಿ, ಸಂಸ್ಕೃತಿಜಾಗೃತಿ ಮೂಡಿಸುತ್ತಿರುವುದು ಶ್ರೀ ವಿವೇಕಾನಂದ ಕಲಾಕೇಂದ್ರದ ಹೆಗ್ಗಳಿಕೆ ಎಂದು ಪ್ರಶಂಸಿಸಿದರು.
ಕಲಾಕೇಂದ್ರದ ಸಂಸ್ಥಾಪಕ ಕಾರ್ಯದರ್ಶಿಗಳಾದ ಡಾ. ವಿ. ನಾಗರಾಜ್, ನೃತ್ಯವಿದೂಷಿ ಡಾ. ಶ್ವೇತ, ಕರ್ನಾಟಕ ಕಲಾಶ್ರೀ’ ಶ್ರೀಮತಿ ಎಂ. ಕೆ. ಜಯಶ್ರೀ ಹಾಗೂ ಕಲಾಕೇಂದ್ರದ ಉತ್ಸಾಹದ ನವಚೈತನ್ಯ ಮಾ. ದೈವಿಕ್ ಆದಿಯಾಗಿ ಇಡೀ ಕುಟುಂಬ ಕಲಾ ಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಯಶಸ್ವಿಯಾಗಿ ಸುವರ್ಣ ಮಹೋತ್ಸವವನ್ನು ಆಚರಿಸುತ್ತಿರುವುದು ಅಭಿನಂದನೀಯ ಎಂದೂ ಕಲಾಕೇಂದ್ರದ ಎಲ್ಲ ಕಲಾವಿದರನ್ನು ಹಾಗೂ ಪದಾಧಿಕಾರಿಗಳ ಕೈಂಕರ‍್ಯವನ್ನು ಶ್ಲಾಘಿಸಿದರು.
ರಂಗಭೂಮಿ ಒಂದು ಜೀವಂತ ಕಲೆ. ಇದರಲ್ಲಿ ಯುವಕಲಾವಿದರು ಆಸಕ್ತಿ ವಹಿಸಿ ಇದನ್ನೇ ವೃತ್ತಿಯಾಗಿಯೂ ಸ್ವೀಕರಿಸಬಹುದೆಂದು ರಂಗಭೂಮಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬಹುದೆಂದು ಕಲಾವಿದರಿಗೆ ಕರೆಕೊಟ್ಟರು.
ಚಲನಚಿತ್ರ ಹಾಗೂ ಕಿರುತೆರೆಯ ಕಲಾವಿದರಾದ ಅನಂತವೇಲು ಹಾಗೂ ಶ್ರೀಮತಿ ಅಂಬುಜಾಕ್ಷಿರವರು ಕಾರ್ಯಕ್ರಮಕ್ಕೆ ವಿಶೇಷ ಶೋಭೆ ತಂದು ಕೊಟ್ಟರು. ಕರ್ನಾಟಕ ಸರ್ಕಾರದ ಅಧೀನ ಕಾರ್ಯದರ್ಶಿಗಳಾದ ಬಿ.ಎಸ್. ಮಂಜುನಾಥ್ ರವರು ನವಕಲಾಪ್ರತಿಭೆಗಳ `ವಂದೇ ಭಾರತ’ ಪ್ರದರ್ಶನವನ್ನು ಮನಸಾರೆ ಮೆಚ್ಚಿ ಉತ್ತಮ ಅಭಿನಯ ನೀಡಿದ ಕಲಾವಿದೆಯನ್ನು ಗುರುತಿಸಿ ಪುರಸ್ಕರಿಸಿದ್ದು ಅವರ ಕಲಾ ಪ್ರೋತ್ಸಾಹದ ದ್ಯೋತಕವಾಗಿತ್ತು. ಇದೇ ಸಂದರ್ಭದಲ್ಲಿ ಸುಬೇದಾರ್ ಚಂದ್ರಶೇಖರ ಉಪಾಧ್ಯರವರ ಜೊತೆಗೆ ಇತರ ಕಲಾ ಪ್ರತಿಭೆಗಳನ್ನು ಪುರಸ್ಕರಿಸಿದ್ದು ಸಂಸ್ಥೆಯ ಸುವರ್ಣ ಮಹೋತ್ಸವಕ್ಕೆ ವಿಶೇಷ ಮೆರಗು ನೀಡಿತು.