ರವೀಂದ್ರ ಕಲಾಕ್ಷೇತ್ರದ ಅಂಗಳದಲ್ಲೊಂದು ಅವಿಸ್ಮರಣೀಯ ದಿನ
ನಿನ್ನೆ ಬೆಳಿಗ್ಗೆ ಕರೆಗೆ ಸಿಕ್ಕ ಶ್ರೀ ರಾಂ. ಕೆ.ಹನುಮಂತಯ್ಯನವರು “ರವೀಂದ್ರ ಕಲಾಕ್ಷೇತ್ರದ ಕ್ಯಾಂಟೀನಲ್ಲಿ ಕಾಫಿ ಕುಡಿಯೋಣ ಬನ್ನಿ.. ” ಎಂದಾಗ.. ಸಂಜೆ 6 ಗಂಟೆಗೆ ಕಾರವಾರಕ್ಕೆ ಟ್ರೈನ್ ರಿಸರ್ವೇಶನ್ ಆಗಿದ್ದರೂ, ಅರ್ಧಗಂಟೆಯಷ್ಟಾದರೂ ಅವರನ್ನು ಭೇಟಿಯಾಗಲೇಬೇಕೆಂಬ ಆತುರಾಸಕ್ತಿಯಿಂದ ಹನ್ನೆರಡು ಗಂಟೆ ಹೊತ್ತಿಗೆ ರವೀಂದ್ರ ಕಲಾಕ್ಷೇತ್ರದ ಮುಂದಿದ್ದೆ.
4-5 ತಿಂಗಳ ಹಿಂದೆ ಮುಖಪುಸ್ತಕದ ಮೂಲಕ ಪರಿಚಿತರಾಗಿದ್ದ ಶ್ರೀ ರಾಂ.ಕೆ.ಹನುಮಂತಯ್ಯನವರು ಅಲ್ಪಾವಧಿಯಲ್ಲೇ ಅತ್ಯಂತ ಆತ್ಮೀಯರಾಗಿದ್ದರು. ಪೋಲೀಸ್ ಇಲಾಖೆಯಲ್ಲಿ ಉನ್ನತ ಹುದ್ದೆಯಲ್ಲಿದ್ದು, ನಿವೃತ್ತರಾದ ಮೇಲೆ ಕನ್ನಡಿಗರ ಸ್ನೇಹಕೂಟ ಸಂಸ್ಥೆಯನ್ನು ಸಂಸ್ಥಾಪಿಸಿ ಅದರ ಮೂಲಕ ನೂರಾರು ಸಾಹಿತ್ಯಿಕ ಸಮಾರಂಭಗಳನ್ನು, ಶಾಲಾ ಮಕ್ಕಳಿಗಾಗಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವರ್ಷಪೂರ್ತಿ ಸಮಾಜ ಸೇವೆಗೆ ಜೀವ-ಜೀವನಗಳನ್ನು ಅರ್ಪಿಸಿಕೊಂಡಿರುವ ನಿತ್ಯೋತ್ಸಾಹಿ ಚಿರಯುವಕರು. ಇಷ್ಟೆಲ್ಲಾ ತಿಳಿದದ್ದು ನಿನ್ನೆ ಅವರನ್ನು ಭೇಟಿಯಾದಾಗಲೇ. ಪ್ರಥಮ ಮುಖಾಮುಖಿಯಲ್ಲೆ ನನ್ನ ಕಾವ್ಯದೊಡಲನ್ನು ಕದ್ದ ನಿವೃತ್ತ ಖಾಕಿ ಸಮವಸ್ತ್ರಧಾರಿ.
ಪೋಲೀಸ್ ಇಲಾಖೆಯಲ್ಲಿದ್ದುಕೊಂಡೇ, ಅಪರಿಮಿತ ಸಾಹಿತ್ಯಾಸಕ್ತಿಯನ್ನು ಬೆಳೆಸಿಕೊಂಡು, ಕನ್ನಡದ ಸಾರಸ್ವತಲೋಕದ ಸಕಲ ದಿಗ್ಗಜರೊಂದಿಗೆ ಆಪ್ತಾನುಬಂಧನ್ನಿಟ್ಟುಕೊಂಡು, ನಿರಂತರ ಕನ್ನಡದ ಕೈಂಕರ್ಯದಲ್ಲಿ ತೊಡಗಿಸಿಕೊಂಡ ಅಪರೂಪದ ವ್ಯಕ್ತಿ. ಜೊತೆಗೆ ಪಾಂಡಿತ್ಯಪೂರ್ಣ ಕವಿ, ಲೇಖಕರು ಹಾಗೂ ಪ್ರಕಾಶಕರು ಕೂಡ. ಅಂತಹ ಹಿರಿಯರು ನನ್ನನ್ನು ಅತ್ಯಂತ ಪ್ರೀತ್ಯಾದರಗಳಿಂದ ಭೇಟಿಯಾಗಿದ್ದು, ಕಲಾಕ್ಷೇತ್ರದ ಅಂಗಳದಲ್ಲೆ ತಮ್ಮ ಅಭಿನಂದನಾ ಗ್ರಂಥ ನೀಡಿ, ಶಾಲು ಹೊದೆಸಿ ಆಶೀರ್ವದಿಸಿದ್ದು ನನ್ನ ಸೌಭಾಗ್ಯ ಮತ್ತು ನನ್ನನ್ನು ಮುನ್ನಡೆಸುತ್ತಿರುವ ಅಕ್ಷರದ ಹಾಗೂ ಅಕ್ಷರಬಂಧುಗಳಾದ ನಿಮ್ಮ ಕಾರುಣ್ಯ.
ಬೆಳಿಗ್ಗೆ ನಾನು ಕ್ಯಾಬಿನಲ್ಲಿದ್ದಾಗಲೇ, ನನ್ನ ಕವಿತೆಗಳನ್ನು ಓದಿ ನಿತ್ಯವೂ ಹರಸುವ ಶ್ರೀ ಶ್ರೀನಿವಾಸಮೂರ್ತಿಯವರ ಕರೆ ಬಂತು. ನನ್ನ ಹಾಸ್ಯಗವಿತೆಯನ್ನು ಮೆಚ್ಚಿ ಕರೆ ಮಾಡಿದ್ದರು. ನಾನು ರವೀಂದ್ರ ಕಲಾಕ್ಷೇತ್ರಕ್ಕೆ ಹೋಗುತ್ತಿರುವ ವಿಷಯ ತಿಳಿಸಿದೆ. “ಸಾರ್ ನಿಮ್ಮನ್ನು ಬೇಟಿಯಾಗಬೇಕೆಂದು ಬಹಳ ದಿನಗಳಿಂದ ಕಾತುರನಾಗಿದ್ದೆ. ಕೂಡಲೇ ನಾನು ಅಲ್ಲಿಎ ಬರುತ್ತೇನೆ’ ಎಂದು ಚಿಕ್ಕಬಾಣವಾರದಿಂದ ಹೊರಟು ಬಂದರು.
ನಾವು ಮೂವರೂ ಮೂರು ವಿರುದ್ಧ ದಿಕ್ಕುಗಳಿಂದ ಬಂದು, ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಪ್ರಥಮ ಬಾರಿಗೆ ಮುಖಾಮುಖಿಯಾಗಿದ್ದು ಸಾಹಿತ್ಯ ಸರಸ್ವತಿಯ ಅನುಗ್ರಹವಷ್ಟೆ. ಅಗಾಧವಾದ ಕಾವ್ಯಾಸಕ್ತಿ, ಜೀವನಾನುಭವವನ್ನು ಹೊಂದಿರುವ ಶ್ರೀನಿವಾಸಮೂರ್ತಿ ಸಾರ್ ನನ್ನ ಮೇಲಿಟ್ಟಿರುವ ಅಕ್ಕರೆ, ಪ್ರೀತಿ ನನ್ನ ಹೃನ್ಮನಗಳನ್ನು ಆರ್ದ್ರವಾಗಿಸಿತು. ಆ ಇಬ್ಬರು ಹಿರಿಯರ ಮಾತು-ಮಮತೆಯಲ್ಲಿ ಗಂಟೆ ಮೂರಾಗಿದ್ದು ತಿಳಿಯಲೇ ಇಲ್ಲ. ನಿನ್ನೆಯ ದಿನವನ್ನು ಅವಿಸ್ಮರಣೀಯವಾಗಿಸಿದ ಆ ಅಪೂರ್ವ ಹೃದಯಗಳಿಗೆ ಅರ್ಪಣೆ ನನ್ನೀ ಅಕ್ಷರ ನಮನ” –
ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.