ಸರ್… ಓ ಸರ್…ಕಾಂಬಳೆ ಸರ್ … ಸರ್ ನಮಸ್ಕಾರ್ರಿ ಆರಾಮ ಅದೀರಿ?? ನಾ ಯಾರ್ ಹೇಳ್ರಿ ಅನ್ನುತ್ತಿದ್ದಂತೆಯೇ ನಿವೃತ್ತಿ ಹೊಂದಿ ಐದಾರು ವರ್ಷ ಆಗಿದ್ದ ಬಿಸಿಎಮ್ ಹಾಸ್ಟೇಲಿನ ವಾರ್ಡನ್ ಕಾಂಬಳೆ ಸರ್ ತಲೆ ಕೆರೆದುಕೊಳ್ಳುತ್ತ ಗೊತ್ತಾಗಲಿಲ್ಲ ಅಂದರು…
ನಾ ರೀ ಸರ್… ನೀವೆಲ್ಲ ಚಿಕ್ ಬೀರ‌್ಯಾ ಅಂತಿದ್ರಲ್ಲ ಬೀರಪ್ಪ ಯಂಕಚ್ಚಿ ರೀ ಅಂದಾಗ ಅಲಾ ಮಗನ ಎಷ್ಟ ಎತ್ತರ ಬೆಳದಿದಿಯೋ ಖೂಣ ಸಿಗಲಿಲ್ಲ ಮದಿವಿ ಮಕ್ಕಳು?? ಮತ್ ಏನ ಮಾಡಾತಿ ಈಗ ಅನ್ನುತ್ತಿದ್ದಂತೆಯೇ ನಾ ಕನ್ನಡ ಸಾಲಿ ಮಾಸ್ತರ ಆಗೇನ್ರಿ ನಿಮ್ಮ ಆಶಿರ್ವಾದ ಅಂದ ಆ ಯುವಕ…
ಇನ್ನೊಂದು ಕಡೆ ಹಾಂ ಯಾರ್ರೀ ಟಿಕೇಟ್…ಟಿಕೆಟ್ ತಗೋರಿ ಹೆಣ್ ಮಕ್ಕಳು ಲಗು ಲಗೂ ಆಧಾರ ಕಾರ್ಡ ತಗೀರಿ ಅನ್ನುತ್ತ ಬರುತ್ತಿದ್ದ ಕಂಡಕ್ಟರ್ ಸೋಮಶೇಖರ್ ಉರ್ಫ್ ಸೋಮು ಹೆಂಗಸೊಬ್ಬಳನ್ನ ನೋಡಿದವನೇ ಅಯ್ಯೋ… ಬಾಯೋರ್ ಅರಾಮ ಅದೀರಿ ಎಲ್ಲಿ ಊರಿಗಿ ಹೊಂಟೀರಿ ಎನ್ ತಂಗಿ ಕಡೆ ಅನ್ನುತ್ತಿದ್ದಂತೆಯೆ ಕಿಚನ್ ಸರ್ವಂಟ್ ಆಗಿದ್ದ ತುಳಸವ್ವ ನೀ ಸೋಮಶೇಖರ್ ಮೂಲಿಮನಿ ಅಲ್ಲೇನ ತಮ್ಮಾ ಅಂತ ಉಭಯ ಕುಶಲೋಪರಿ ಕೇಳ ತೊಡಗಿದ್ದರು…
ಹೀಗೆ ಬಿಸಿ ಎಮ್ ಮತ್ತು ದೇವರಾಜ ಅರಸು ಹಾಸ್ಟೇಲುಗಳಲ್ಲಿ ಐದನೆ ತರಗತಿಯಿಂದ ಮೆಟ್ರಿಕ್ ವರೆಗೆ ಮತ್ತು ಕಾಲೇಜು ಹಾಸ್ಟೇಲುಗಳಲ್ಲಿ ಇದ್ದುಕೊಂಡು ಶಾಲೆ ಕಲಿತ ಎಷ್ಟೋ ಜನ ಯುವಕರು ತಮ್ಮ ಪೋಷಕರಿಗಿಂತ ಹೆಚ್ಚಾಗಿ ಹಚ್ಚಿಕೊಂಡದ್ದು ಇಂತಹ ಅದೆಷ್ಟೋ ಅಜ್ಞಾತ ವಾರ್ಡನ್ , ಸುಪರಿಡೆಂಟ್,ಅಡುಗೆ ಸಹಾಯಕ ಮತ್ತು ವಾಚಮನ್ ಗಳನ್ನ ಅಂದರೆ ನೀವು ನಂಬಲಿಕ್ಕಿಲ್ಲ.
ಈಗ ಸುಮಾರು ಹದಿನೈದು ಇಪ್ಪತ್ತು ವರ್ಷಗಳ ಹಿಂದಿನ ಮಾತು ಸೂರ್ಯ ಬಲ್ಬಿನ ಹಳದಿ ಬೆಳಕಿನಲ್ಲಿ ಮನೆಯಿಂದ ತಾವೇ ತಂದ ತಟ್ಟೆಯಲ್ಲಿ ಓಂ ಅಸತೋಮಾ ಜ್ಯೋತಿರ್ಗಮಯಾ ಅಂತ ಪ್ರಾರ್ಥನೆ ಸಲ್ಲಿಸಿ ಅನ್ನದಾತ ಸುಖೀಭವ ಅನ್ನುತ್ತಿದ್ದ ಅದೆಷ್ಟೋ ಜೀವಗಳು ಈಗಲೂ ತಮ್ಮ ಹಾಸ್ಟೇಲು ದಿನಗಳನ್ನ ಮೆಲುಕು ಹಾಕುತ್ತ ಎನ ಹೇಳ್ರಿ ಮೊದಲಿನ ಹಂಗ ದಿನಾ ಉಳಿಲಿಲ್ಲ ಅಂತ ಆ ದಿನಗಳನ್ನ ನೆನೆಸಿಕೊಳ್ಳುತ್ತವೆ.
ಸಣ್ಣದೊಂದು ಟ್ರಂಕಿನಲ್ಲಿ ತಿಂಗಳಿಗೋ ಎರಡು ತಿಂಗಳಿಗೋ ಬರುತ್ತಿದ್ದ ಲೈಫ್ ಬಾಯ್ ಮತ್ತು ಕೋಲ್ಗೇಟ್ ಪೌಡರಿನ ಜೊತೆಗೆ ಚಿಕ್ಕದೊಂದು ಕನ್ನಡಿಯ ಚೂರು ಇಟ್ಟುಕೊಂಡು ಹರಿದ ಮತ್ತು ತ್ಯಾಪೆ ಹಚ್ಚಿದ ಬಟ್ಟೆಗಳನ್ನೇ ನೀಟಾಗಿ ಇಟ್ಟುಕೊಂಡು ನೀರು ಕುಡಿಯುವ ತಂಬಿಗೆಯಲ್ಲಿ ಕಿಚ್ಚು ತುಂಬಿ ಇಸ್ತ್ರಿ ಮಾಡಿ ಹಾಕಿಕೊಳ್ಳುತ್ತ ಅವರಿವರು ಬರೆದು ಉಳಿದ ಬುಕ್ಕಿನ ಹಾಳೆಗಳನ್ನೇ ಕಡ ಪಡೆದು ಬೈಂಡಿಂಗ್ ಮಾಡಿಸಿದ ಬುಕ್ಕಿನಲ್ಲಿ ಶಾಲೆಯ ಬೋರ್ಡಿನ ಅಕ್ಷರಗಳನ್ನ ರಿನಾಲ್ಡ್ಸ ಅಥವಾ ಟಿಕ್ ಟಿಕ್ ಪೆನ್ನಿನಿಂದಲೊ ಅಥವಾ ಎಂಟಾನೆಯ ಕಡ್ಡಿಯಿಂದಲೋ ಬರೆದುಕೊಳ್ಳುತ್ತ ಓದಿದ ಅದೆಷ್ಟೋ ಅಸಂಖ್ಯ ಜೀವಗಳ ಬದುಕು ಹ್ಯಾಗಿತ್ತು ಅಂತ ಹೇಳ ಹೊರಟರೆ ಈಗಿನ ಹಾಸ್ಟೇಲ್ ಹುಡುಗರು ಮೂಗಿನ ಮೇಲೆ ಬೆರಳಿಟ್ಟುಕೊಳ್ಳಬಹುದು.
ಈಗಿನಂತೆ ವಾರಕ್ಕೊಮ್ಮೆ ಚಿಕನ್ ಮೊಟ್ಟೆ ಬಾಳೆಹಣ್ಣು ಹಾಲು ಅಂತ ಪೌಷ್ಟಿಕ ಆಹರವಾಗಲೀ ಅಥವಾ ತಾಜಾ ತರಕಾರಿ ಆಗಲೀ ಆಗಿನ ದಿನಗಳಲ್ಲಿ ಹಾಸ್ಟೇಲುಗಳಲ್ಲಿ ಸಿಗುತ್ತಿರಲಿಲ್ಲ ಅಂದರೆ ಈಗಿನ ಮಕ್ಕಳು ನಂಬಲಿಕ್ಕಿಲ್ಲ.
ರೇಷನ್ ಅಕ್ಕಿಯ ಜೊತೆಗೆ ತೊಗರಿಬೇಳೆಯ ಸಾಲಿನಲ್ಲಿ ಬೇಳೆ ತಟ್ಟೆಗೆ ಬಿದ್ದರೆನೇ ಅಪರೂಪ ಅನ್ನುವಂತಾಗಿದ್ದ ಮತ್ತು ಕಟ್ಟಿಗೆ ಒಲೆಯನ್ನು ಪುಕಣಿಯಿಂದ ಊದುತ್ತ ಚಪಾತಿ ಬೇಯಿಸುವಾಗ ಅಡುಗೆ ಕೋಣೆಯತ್ತ ಬಂದ ಹುಡುಗನಿಗೆ ಯಪ್ಪಾ ತಮ್ಮ ಇಲ್ಲೆ ಗೌಡ್ರ ಮನಿ ಹಂತೆಕ ಹೋಗಿ ಎರಡ್ ಕೊಡ ಭಾಂವಿ ನೀರ ತಗೊಂಡ ಬಾರೋ ನಿಂಗ್ ಎಣ್ಣಿ ಹಚ್ಚಿದ ಚಪಾತಿ ಮಾಡಿಕೊಡತೇನಿ ಅಂತ ಅಡುಗೆಯವರು ಮಕ್ಕಳಿಗೆ ಮಸ್ಕಾ ಹಚ್ಚಿ ಕೆಲಸ ಮಾಡಿಸಬೇಕಿದ್ದ ದಿನಗಳವು.
ಸ್ನಾನಕ್ಕೆ ತಣ್ಣೀರೇ ಗತಿಯಾಗಿದ್ದ ಮತ್ತು ಈಗಿನಂತೆ ಟ್ವೆಂಟಿ ಫೋರ್ ಇಂಟು ಸೇವೆನ್ ಕುಡಿಯುವ ನೀರು ಮತ್ತು ಕರೆಂಟಿಲ್ಲದ ದಿನಗಳವು ಅಂದರೆ ಯಪ್ಪಾ ಹೀಗೂ ಒಂದು ಜಮಾನಾ ಇತ್ತಾ ಅನ್ನುತ್ತಾರೆ ಈಗಿನ ಮಕ್ಕಳು.
ಇಷ್ಟಕ್ಕೂ ಆ ದಿನಗಳಲ್ಲಿ ಮನೆಯಲ್ಲಿ ಕಿತ್ತು ತಿನ್ನುವ ಬಡತನದ ನಡುವೆ ಹೇಳಿಕೊಳ್ಳಲು ಒಂದು ಹೈಸ್ಕೂಲು ಕೂಡ ಇಲ್ಲದ ಹಳ್ಳಿಗಳಿಂದ ಬಂದು ಸರ್ಕಾರಿ ಹಾಸ್ಟೇಲುಗಳಲ್ಲಿ ಉಳಿದುಕೊಂಡು ಅಲ್ಲಿ ಕೊಟ್ಟ ಊಟವನ್ನೇ ಪಂಚ ಪಕ್ವಾನ್ನವೆಂದು ಮೊದಲ ತುತ್ತನ್ನು ಕಣ್ಣಿಗೆ ಒತ್ತಿಕೊಂಡು ಸ್ವೀಕರಿಸುತ್ತ ಈಗಿನಂತೆ ಕಾಟು ಬೆಡ್ಡುಗಳಿಲ್ಲದೆ ನೆಲದ ಮೇಲಿನ ಹಾಸಿಗೆಯಲ್ಲಿ ಮಲಗುತ್ತ ಜೀವನದಲ್ಲಿ ಎತ್ತರದ ಸ್ಥಾನ ಅನ್ನಿಸಿದ ಒಂದೊಂದು ಸಣ್ಣ ಪುಟ್ಟ ಸರ್ಕಾರಿ ನೌಕರಿಗಳು ಕೂಡ ಅಚ್ಚರಿ ಹುಟ್ಟಿಸುತ್ತಿದ್ದ ದಿನಗಳವು.
ಆಗಾಗ ಹಾಸ್ಟೇಲಿಗೆ ಬಂದು ಹಾಜರಿ ತೆಗೆದುಕೊಳ್ಳುತ್ತಿದ್ದ ಹಾಸ್ಟೇಲ್ ಸುಪರಿಡೆಂಟುಗಳು ಹೊಸದಾಗಿ ಬಂದ ಹುಡುಗರನ್ನ ನೋಡುತ್ತ ಭೀಮ್ಯಾ ದೊಡ್ಡಂವ ಆಗಾನ ನೀ ಯಾನ್ ಆಗಾಂವೊ ಅಂದರೆ…ಸರ್ ನಾ ಪೋಲಿಸ್ ಆಗ್ತನ್ರಿ ಏ ಹನುಮ್ಯಾ ನೀ ಎನ್ ಆಗಾಂವೋ ಮಗನ ಅಂದಾಗ ಸರ್ ನಾ ಮಿಂಟ್ರಿಗಿ ಹೋಗ್ತನ್ರಿ ಅನ್ನುತ್ತಿದ್ದ ಮತ್ತು ಅಂತಹ ನೌಕರಿಗಳೇ ಬಡ ಹಾಗೂ ಮಧ್ಯಮ ವರ್ಗದ ಹುಡುಗರಿಗೆ ಜೀವನದ ಅಧಮ್ಯ ಗುರಿಗಳಾಗಿದ್ದ ದಿನಗಳವು.
ಅಪ್ಪಿ ತಪ್ಪಿಯೂ ನಾ ಡಾಕ್ಟರ್ ಆಗ್ತೇನಿ, ಇಂಜನೀಯರ್ ಆಗ್ತೇನಿ, ಕಮಾಂಡರ್ ಆಗ್ತೇನಿ, ಬ್ಯುಜಿನೆಸಮನ್ ಆಗ್ತೇನಿ ಅನ್ನುವ ಈಗಿನ ಹುಡುಗರಂತೆ ಹೆಚ್ಚಿನ ಮಾಹಿತಿಯೇ ಇಲ್ಲದ ಗುರಿಗಳು ಆಗಿನ ಹುಡುಗ ಹುಡುಗಿಯರಗಿದ್ದ ದಿನಗಳಲ್ಲೆ ಮ್ಯಾಟ್ರಿಕ್ ಮುಗಸಾನ ನನ್ನ ಮದ್ವೀ ಮಾಡ್ತಾರ್ರಿ ನಂಗ್ ಮುಂದ ಓದಾಕ್ ಆಗುದಿಲ್ಲ ಬಾಯೋರ ಅಂತ ಕಣ್ಣು ತುಂಬಿಕೊಂಡು ತನ್ನ ಹೆತ್ತ ಅವ್ವನನ್ನೇ ತಬ್ಬಿಕೊಂಡಷ್ಟು ಜೋರಾಗಿ ಹಿಡಿದುಕೊಳ್ಳುತ್ತಿದ್ದ ಹಾಸ್ಟೇಲ್ ಹುಡುಗಿಯರು ಯಾವಾಗಲಾದರೂ ಸಂತೆ-ಪೇಟೆಗಳಲ್ಲಿ ತಮ್ಮ ಗಂಡ ಮತ್ತು ಮಕ್ಕಳ ಜೊತೆಗೆ ಸಿಕ್ಕಾಗ ಬಾಯೋರ್ ಎಷ್ಟ ಸೊರಗೀರಿ ಅನ್ನುತ್ತಿದ್ದ ದಿನಗಳು ಈಗ ಕ್ರಮೆಣ ಮಾಯವಾಗಿ ಹಾಸ್ಟೇಲ್ ಇಲ್ಲಂದ್ರ ಪಿಜಿ ಅದಾವ್ ಬಿಡಪ್ಪಾ…. ಅಲ್ಲೆ ಇರತೆನಿ.
ಅಯ್ಯ… ಬರೆ ಇದಾ ಆತು ನಾ ಏನ್ ಹಾಸ್ಟೇಲ್ ವಲ್ಲೆವ್ವಾ ದೋಸ್ತರ ಜೋಡಿ ರೂಮ್ ಮಾಡ್ತೆನಿ ಬೇಕಾದ್ ಮಾಡಕೊಂಡ ತಿಂದ್ ಉಂಡು ಮೆಸ್ಸಿಗಿ ಹಚ್ಚಿ ಕಾಲೆಜ್ ಕಲಿತೆನಿ ಅನ್ನುವ ಈ ದಿನಗಳಲ್ಲಿ ಅಂಗೈ ಅಗಲದ ಮೊಬೈಲ್ ಹಿಡಿದು ದಿನವೂ ಚಾಟಿಂಗು,ಡೇಟಿಂಗು,ವಿಡಿಯೋ ಕಾಲ್ ಮಾಡುವ ಮತ್ತು ಪಿಜ್ಜಾ ಬರ್ಗರ್ ಅಂತಹ ತರಹೇವಾರಿ ಜಂಕ್ ಪುಡ್ಡುಗಳನ್ನ ಅನಾಯಾಸವಾಗಿ ಕತ್ತರಿಸುವ ಈಗಿನ ಹುಡುಗರಿಗೆ ಅದೆಲ್ಲ ಹ್ಯಾಗೆ ತಿಳಿದೀತು??
ಅಲ್ಲವಾ…
ಬದನೆಕಾಯಿ, ಬಟಾಟಿ ಮತ್ತು ತೊಗರಿ ಬೇಳೆಯ ಸಾರು ಹಾಗೂ ಹಿಟ್ಟು ಹಚ್ಚಿ ಲಟ್ಟಿಸಿದ ಒಣಗಿದ ಚಪಾತಿಯನ್ನೆ ಮನೆಯಿಂದ ಅವ್ವನೋ ಅಜ್ಜಿಯೋ ಕಳಿಸಿದ ಹಸಿಮೆಣಸಿನ ಖಾರದ ಜೊತೆಗೆ ಸ್ವಲ್ಪ ಗಾಣದ ಎಣ್ಣೆ ಬಿಟ್ಟುಕೊಂಡೋ ಅಥವಾ ಇಬ್ಬರು ಮೂರು ಜನ ಗೆಳೆಯರು ಸೇರಿ ಎಂಟಾನೆ ರೂಪಾಯಿ ಅಂತ ಪಟ್ಟಿ ಹಾಕಿ ಕೊಂಡು ತಂದ ಮೊಸರಿನ ಜೊತೆಗೋ ಹಂಚಿಕೊಂಡು ತಿಂದ ಆ ಕಾಲದ ಹುಡುಗ ಹುಡುಗಿಯರಲ್ಲಿ ಇರುವ ಜೀವನ ಪ್ರೀತಿ ಈಗಿನ ಮಕ್ಕಳಲ್ಲಿ ಅದು ಹ್ಯಾಗೆ ತಾನೇ ಕಣ್ಣಿಗೆ ಕಂಡೀತು…
ಅತ್ತ ಗುರಿಯೂ ಇಲ್ಲ ಇತ್ತ ಗುರುವೂ ಇಲ್ಲ ಮನೆಯಲ್ಲಿ ಇದ್ದರೆ ಪೋಲಿ ಆಗ್ತಾನೆ ಅಂತ ಹಾಸ್ಟೇಲುಗಳಿಗೆ ಇಟ್ಟ ಈಗಿನ ಮಕ್ಕಳು ಹಠ ಮಾಡಿ ಖರೀದಿಸುವ ಮೊಬೈಲುಗಳು ಅವರಿಗೆ ಜೀವನ ಪಾಠವನ್ನ ಜೀವನ ಪ್ರೀತಿಯನ್ನ ಮತ್ತು ಪರಸ್ಪರ ಸಹಬಾಳ್ವೆಯನ್ನ ಅದು ಹೇಗೆ ತಾನೆ ಕಲಿಸಬಲ್ಲವು??
ಏನಿಲ್ಲರಿ ಸರ್ ಹೋದ ವರ್ಷ ತಂಗಿ ಮದ್ವಿ ಮಾಡೇವಿ… ನಾ ಈಗ ನೌಕರಿಗಿ ಹ್ವಾದರ್ ಊರಾಗ ಅವ್ವ ಅಪ್ಪಾ ಇಬ್ರೂ ಪರದೇಶಿ ಆಗ್ತಾರ್ರೀ ಅವ್ರನ್ನ ಬಿಟ್ ಹ್ಯಾಂಗ ಹೋಗುದು ಅದಕ್ಕ ಸೇತಗಿ ಮಾಡಕೊಂಡ ಊರಾಗ ಉಳಿಯಾಂವ್ ಅದೇನ್ರಿ ಅಂದ ಆಗಿನ ಹುಡುಗರಿಗೂ ಮತ್ತು ಹೆಂಗಿದ್ರೂ ಅವ್ವಾಗ ವಯಸ್ಸ ಆತ್ರಿ ಸರ್ ಅಪ್ಪಾ ಅಂತೂ ಇದ್ದು ಇಲ್ದಂಗ ಅಜಾರಿ ಬಿದ್ದಾನ್ರಿ….ಅದಕ್ಕ ಇಬ್ಬರನ್ನು ವೃದ್ದಾಶ್ರಮಕ್ಕ ಬಿಟ್ಟು ಊರಾನ ಹೊಲಾ-ಮನಿ ಅಷ್ಟು ಮಾರಿದ್ರ ಆತ ನೋಡ್ರಿ ನಾನು ನನ್ನ ಹೆಂಡತಿ ಮಕ್ಕಳು ಸಿಟಿ ಒಳಗ ಆರಾಮ್ ಇರತೇವಿ ಅನ್ನುವ ಈಗಿನ ಜನರೇಶನ್ನಿಗೂ ಅಜ ಗಜಾಂತರ ವ್ಯತ್ಯಾಸವಿದೆ.
ಊರಾಚೆಗಿದ್ದ ಹಾಸ್ಟೇಲು ಅಕ್ಕ ಪಕ್ಕದ ಜಮೀನುಗಳಲ್ಲಿ ಸುಲಗಾಯಿ, ಸೀತನಿ, ಶೇಂಗಾ, ಜೋಳದ ದಂಟು ಮತ್ತು ವಡ್ಡಿನ ಮ್ಯಾಲಿನ ಚಿಟ್ಟಿ ಬಾರಿಕಾಯಿ,ಇಲಾಚಿ ಕಾಯಿ, ಕೆಂಪು ಹುಣಸಿಕಾಯಿ ಅಂತ ಹೆಕ್ಕಿ ತಿನ್ನುತ್ತಿದ್ದ ಅಂದಿನ ದಿನಗಳಿಗೂ ಮತ್ತು ಹಾಸ್ಟೇಲಿನ ಟಾಯ್ಲೆಟ್ಟಿನಲ್ಲಿ ಕುಳಿತುಕೊಂಡೇ ಆಮೇಜಾನ್, ಪ್ಲಿಪ್ ಕಾರ್ಟ, ಮೀಷೋ , ಸ್ವಿಗ್ಗಿ, ಝೋಮ್ಯಾಟೋ ದಂತಹ ಆನ್ ಲೈನ್ ಪ್ಲಾಟ್ ಫಾರಂಗಳಲ್ಲಿ ತಮಗೆ ಬೇಕಾದ ತಿನಿಸುಗಳನ್ನ ಆರ್ಡರ್ ಮಾಡುವ ಹಾಸ್ಟೆಲ್ ಹುಡುಗರ ಈಗಿನ ದಿನಗಳಿಗೂ ಬಹಳ ವ್ಯತ್ಯಾಸವಿದೆ.
ಬಾಲಕಿಯರ ವಸತಿ ನಿಲಯ,ದೇವರಾಜ ಅರಸು ಹಿಂದುಳಿದ ವರ್ಗಗಳ ವಸತಿ ನಿಲಯ ಅನ್ನುವ ಬೋರ್ಡುಗಳನ್ನ ನೋಡಿದಾಗಲೋ, ಆನ್ ಗೌರ್ನಮೆಂಟ್ ಡ್ಯೂಟಿ…ಸಮಾಜ ಕಲ್ಯಾಣ ಇಲಾಖೆ. ಅನ್ನುವ ಬೋರ್ಡ ಇರುವ ಕಾರುಗಳನ್ನ ನೋಡಿದಾಗಲೋ ಹಳೆಯದೆಲ್ಲ ನೆನಪಿಗೆ ತಂದುಕೊಳ್ಳುವ ನನಗೆ ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ ಅನ್ನುವದನ್ನ ಧೈರ್ಯವಾಗಿ ಪ್ರಶ್ನಿಸಿ ಅಂತ ತಿದ್ದಲು ಹೊರಟು ಗೆದ್ದಲು ಹತ್ತಿದ ಸರ್ಕಾರಿ ಸುತ್ತೋಲೆಯ ತುಣುಕೊಂದು ವಾಟ್ಸಪ್ಪಿಗೆ ಬಂದ ಬಳಿಕವಷ್ಟೇ ಯಾಕೋ ಇದೆಲ್ಲ ನೆನಪಾಯಿತು.
ಈಗಿನ ಮಕ್ಕಳಿಗೆ ಇರುವ ಸೋಲಾರ್ ಹಾಟ್ ವಾಟರ್,ಗೀಜರ್ ವಾಟರ್, ಮೈಸೂರ್ ಸ್ಯಾಂಡಲ್ ಸೋಪ್,ವಿದ್ಯಾರ್ಥಿ ವೇತನ,ಶಿಷ್ಯ ವೇತನ,ಲ್ಯಾಪ್ ಟಾಪ್ ಮತ್ತು ಟ್ಯಾಬ್ ಆಫರ್ ಗಳು ಹಾಗೂ ಸೋಮವಾರದಿಂದ ಭಾನುವಾರದವರೆಗೆ ಬೆಳಿಗ್ಗೆ, ಮಧ್ಯಾಹ್ನ ಮತ್ತು ಸಂಜೆಗೆ ಅಂತ ಊಟದ ಮೆನ್ಯೂ ಇರುವ ಚಾರ್ಟ್ ಬೋರ್ಡ್ ಗಳನ್ನ ನೋಡಿದಾಗೊಮ್ಮೆ ಆಗೆಲ್ಲ ಇಷ್ಟು ಸವಲತ್ತುಗಳಿದ್ದರೆ ನಾನು ಐ ಎ ಎಸ್ಸೋ ಕೆ ಎ ಎಸ್ಸೋ ಮಾಡ್ತಾ ಇದ್ದೆ ಅನ್ನುವ ಸರ್ಕಾರಿ ನೌಕರಿಯ ವಯಸ್ಸು ಮೀರಿದ ಮಧ್ಯವಯಸ್ಕರನ್ನ ನೋಡಿ ಮುಸಿ ಮುಸಿ ನಗುವ ಹುಡುಗ ಹುಡುಗಿಯರಿಗೆ ಸುಮ್ಮನೆ ಇದೆಲ್ಲ ಅರ್ಥವಾಗಲಿ ಅಂತ ಇದನ್ನೆಲ್ಲ ಬರೆಯಬೇಕಾಯಿತು ಅಷ್ಟೇ..
ಇಂದಿನ ಯುವಕರೇ ನಾಳಿನ ಪ್ರಜೆಗಳು ಅನ್ನುವ ಮಾತುಗಳು ನೆನಪಾದಾಗೆಲ್ಲ ಹಾಸ್ಟೆಲ್ ವಾರ್ಡನ್ ಅವರಿಗೆ ತಿಳಿಯದಂತೆ ಮುರುಘೇಂದ್ರ ಥೀಯೇಟರಿಗೆ ಗೆಳೆಯನೊಂದಿಗೆ ಹೋಗಿ ಟಿಕೆಟ್ ಕಲೆಕ್ಟರನ ಕೈಗೆ ಎರಡು ರೂಪಾಯಿ ಕೊಟ್ಟು ಜನದಟ್ಟಣೆಯಲ್ಲೇ ಒಳಗೆ ನುಸುಳಿಕೊಂಡು ರಾಜಾ ಹಿಂದುಸ್ತಾನಿ ಪಿಕ್ಚರ್ ಅನ್ನ ಅರ್ದಂಬರ್ಧ ನೋಡಿದ್ದ ಕಾರಣಕ್ಕೆ ಹಾಸ್ಟೇಲು ಹುಡುಗನೊಬ್ಬ ರಬ್ಬರ್ ಪೈಪಿನಿಂದ ಹೊಡೆಸಿಕೊಂಡು ಬೆನ್ನ ಮೇಲೆ ಬಾಸುಂಡೆಗಳೆದ್ದು ನರಳಾಡಿದ್ದು ಈಗಲೂ ಆ ಸಿನೆಮಾದ ಹಾಡುಗಳು ನನ್ನ ಕೊವಿಗೆ ಕೇಳಿದಾಗೆಲ್ಲ ಅವನೆ ನನ್ನ ಕಣ್ಣ ಮುಂದೆ ಬಂದು ನರಳಾಡಿದಂತಾಗುತ್ತದೆ.
ಅಂದ ಹಾಗೆ ಹೊತ್ತಲದ ಹೊತ್ತಿನಲ್ಲಿ ನೀವು ಓದುತ್ತಿರುವ ಈ ಬರಹದಲ್ಲಿ ಈ ಕ್ಷಣಕ್ಕೆ ಸಂಭವಾಮಿ ಯುಗೇ ಯುಗೇ ಅಂತಷ್ಟೇ ಹೇಳುತ್ತ ಇಂದಿನ ಹಾಸ್ಟೇಲು ಮಕ್ಕಳ ಭವಿಷ್ಯ ಅವರ ಕೈಯ್ಯಲ್ಲೆ ಇದೆ ಅನ್ನುವ ಮಾತಿನೊಂದಿಗೆ ನನ್ನ ಲೇಖನಕ್ಕೆ ವಿರಾಮ ಹೇಳುತ್ತಿದ್ದೇನೆ…
ದೀಪಕ ಶಿಂಧೇ