ಬಾಗಲಕೋಟೆ : ಸಾಲುಮರದ ತಿಮ್ಮಕ್ಕ ಅವರು ಕರ್ನಾಟಕದ ಪ್ರಸಿದ್ಧ ಪರಿಸರವಾದಿ ಮತ್ತು ವೃಕ್ಷಮಾತೆ ಆಗಿದ್ದರು ತಮಗೆ ಮಕ್ಕಳಿಲ್ಲದ ನೋವನ್ನು ಮರೆಯಲು, ರಸ್ತೆ ಬದಿಯಲ್ಲಿ ಆಲದ ಮರಗಳು ಸೇರಿದಂತೆ ಸಾವಿರಾರು ಸಸಿಗಳನ್ನು ಮಕ್ಕಳಂತೆ ಬೆಳೆಸಿದ್ದು, ಪ್ರಪಂಚದಾದ್ಯಂತ ಪರಿಸರ ಕಾರ್ಯದಲ್ಲಿ ಸ್ಪೂರ್ತಿದಾಯಕ ವ್ಯಕ್ತಿಯಾಗಿದ್ದರು. ಇಂತಹ ವೃಕ್ಷಮಾತೆಯ ನಿಧನವು ಕರ್ನಾಟಕ ರಾಜ್ಯಕ್ಕೆ ಅಲ್ಲದೆ ನಮ್ಮ ದೇಶಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಸಾಹಿತಿಗಳು ಹಾಗೂ ಸಂಸ್ಕೃತಿ ಚಿಂತಕರಾದ ಡಾ. ಆರ್ ನಾಗರಾಜ ಅವರು ತಿಳಿಸಿದರು.
ಅವರು ಬಿ ವಿ ವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ. ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ಅವರಿಗೆ ಏರ್ಪಡಿಸಿದ್ದ ಸಂತಾಪ ಸೂಚಕ ಸಭೆಯಲ್ಲಿ ಮಾತನಾಡುತ್ತಿದ್ದರು.
ತಿಮ್ಮಕ್ಕ ಅವರು ಕಾಯಕವೇ ಕೈಲಾಸ ಎಂಬ ಮನಸ್ಸನ್ನು ಹೊಂದಿದ್ದವರು ಅವರು ಪರಿಸರ ಸಂರಕ್ಷಣೆ ಮಾಡಲು ಸಾವಿರಾರು ಗಿಡಗಳನ್ನು ನೆಟ್ಟು ಇಡೀ ಭಾರತ ದೇಶಕ್ಕೆ ಮಾದರಿಯಾಗಿ ಅನೇಕ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದರು. 114 ವರ್ಷ ಸಂತೃಪ್ತ ಜೀವನವನ್ನು ಸಾಗಿಸಿದ್ದ ತಿಮ್ಮಕ್ಕನವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ಅವರು ಮಾತನಾಡಿದರು.
ಸಂತಾಪ ಸೂಚಕ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಚಾರ್ಯರಾದ ಪ್ರೊ ಎಸ್ ಆರ್ ಮುಗನೂರು ಮಠ ಅವರು ಮಾತನಾಡುತ್ತಾ ಸಾಲುಮರದ ತಿಮ್ಮಕ್ಕನವರು ನಮ್ಮ ಬಿವಿವಿ ಸಂಘದ ಮಹಾವಿದ್ಯಾಲಯಗಳಿಗೆ ಭೇಟಿಕೊಟ್ಟು ತಮ್ಮ ಪರಿಸರ ಸಂರಕ್ಷಣೆಯ ಅನುಭವವನ್ನು ಹಂಚಿಕೊಂಡಿದ್ದರು ಅವರಿಗೆ ನಮ್ಮ ಸಂಘವು ಇವರ ಪರಿಸರ ಕಾಳಜಿಗೆ ಗೌರವವನ್ನು ಅರ್ಪಿಸಿತ್ತು ಎಂದು ತಿಳಿಸಿದರು.
ಸಂತಾಪ ಸೂಚಕ ಸಭೆಯಲ್ಲಿ ಎನ್ಎಸ್ಎಸ್ ಅಧಿಕಾರಿಗಳಾದ ಡಾ ಎಂ ಹೆಚ್ ವಡ್ಡರ್ ಮಾತನಾಡಿದರು. ಐ ಕ್ಯೂ ಎ ಸಿ ಸಂಯೋಜಕರಾದ ಡಾ ಅಪ್ಪು ರಾಥೋಡ್ ಸೇರಿದಂತೆ ಮಹಾವಿದ್ಯಾಲಯದ ಬೋಧಕ ಬೋಧಕೇತರ ಸಿಬ್ಬಂದಿಗಳು ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

