ಎದುರಿಗೆ ಸಿಕ್ಕಾಗಲೆಲ್ಲ ಕಣ್ಣಲ್ಲಿ ಕಣ್ಣಿಟ್ಟು ಕಣ್ಣಂಚಿನಲ್ಲೇ ಮನದಾಸೆ ಹೇಳಿಬಿಡಬೇಕೆನಿಸುತ್ತಿತ್ತು. ಆದರೆ ಬಟ್ಟಲ ಕಂಗಳ ಚೆಲುವಿನ ಆಕರ್ಷಣೆಗೆ ಮನಸೋತು ನನ್ನ ಕಂಗಳು ತನ್ನ ಕೆಲಸ ಮರೆತು ಬಿಡುತ್ತಿದ್ದವು. ನಿನ್ನ ಕಂಗಳ ನಗುವಿಗೆ ನನ್ನ ಕಂಗಳು ನಗುವುದನ್ನು ಮಾತ್ರ ಮರೆಯುತ್ತಿರಲಿಲ್ಲ. ನೀ ಕಂಡರೂ ಕಾಣದಿದ್ದರೂ ಸದಾ ನಿನ್ನದೇ ಧ್ಯಾನ. ಏಕಾಂಗಿಯಾಗಿದ್ದಾಗ ಹೃದಯವು ತೆರೆದುಕೊಳ್ಳುತ್ತಿತ್ತು. ಸಿಹಿನೆನಪಿನಲ್ಲಿ ತುಂಟ ತುಟಿಗಳು ತಂತಾನೆ ಬಿರಿಯುತ್ತಿದ್ದವು. ಮುಂದೆ ಬಂದಾಗ ಮಾತ್ರ ಅದೆಲ್ಲ ಮರೆಯಾಗುತ್ತಿತ್ತು. ಎದೆ ಬಡಿತ ಹಿಡಿತಕ್ಕೆ ಸಿಗದೇ ಜೋರಾಗುತ್ತಿತ್ತು.
ಪ್ರೀತಿಯ ಕಿಲಾಡಿ ಆಟ ಆರಂಭವಾಗಿದ್ದು ನಿನ್ನಿಂದಲೇ ಆನಂದವೂ ನಿನ್ನಿಂದಲೇ. ಆಗಸದಲ್ಲಿ ಬಾಲರವಿ ಆಗಮಿಸುವುದನ್ನೇ ಕಾಯುತ್ತಿದ್ದೆ. ಆ ಹೊತ್ತಿಗೆ ಅಂಗಳದಿ ಚೆಂದದ ಎಳೆ ರಂಗೋಲಿಯನ್ನು ಎಳೆ ಎಳೆಯಾಗಿ ನಗುಮೊಗದಿ ಹಾಕುತ್ತಿದ್ದೆ. ಸೂರ್ಯ ಏಳುವ ಮುನ್ನ ಎಂದೂ ಓದಲೆಂದು ಎದ್ದವನಲ್ಲ. ಆದರೆ ಈಗ ಕೈಯಲ್ಲಿ ಹೊತ್ತಗೆ ಹಿಡಿದು ನೀ ರಂಗೋಲಿ ಬಿಡುವ ಹೊತ್ತಿಗೆ ಅರ್ಧ ತೆರೆದ ನಿಮ್ಮ ಮನೆಯ ಬಾಗಿಲಿನತ್ತ ಪೂರಾ ಕಣ್ಣು ತೆರೆದು ನೋಡುತ್ತ ನಿಲ್ಲುವುದು ದಿನದ ಕಾಯಕವಾಗಿ ಬಿಟ್ಟಿದೆ. ಮೆಲ್ಲಗೆ ಮೌನದಲ್ಲಿ ಕಣ್ಣಲ್ಲೇ ನೀ ಕರೆಯುತ್ತಿದ್ದೆ. ಯಾವೊಂದು ಕ್ಷಣವೂ ಕಣ್ತಪ್ಪಿ ಹೋಗದಂತೆ ನಿನ್ನ ನೋಡುತ್ತಿದ್ದೆ,
ರವಿವಾರ ತಲೆ ಸ್ನಾನ ಮಾಡಿ ಒದ್ದೆ ಇದ್ದ ಕೇಶರಾಶಿಯನ್ನು ಬೆನ್ನ ತುಂಬ ಎಳೆಬಿಟ್ಟು ಅದರ ನಡುವೆ ತಾಜಾ ಮಲ್ಲಿಗೆ ಮಾಲೆ ಸಿಕ್ಕಿಸಿ, ನೀ ತುಳಸಿ ಪೂಜೆ ಮಾಡುವ ಪರಿ ನೋಡಿದಾಗ ಭಕ್ತಿಯ ಛಾಯೆಯು ದಟ್ಟವಾಗಿ ಅಂತರ್ಗತವಾಗಿದ್ದು ಎದ್ದು ಕಾಣುತ್ತಿತ್ತು. ಇಂಥ ಒಲವ ಮಿಡಿತದ ಅನುಭವವೆಲ್ಲ ನನಗೆ ಹೊಸದು ತೀರ ಹೊಸದು. ಕನಸು ಕಣ್ಣಲ್ಲಿ ಸಾವಿರ ಸಾವಿರ ತುಂಬಿವೆ. ಅದಕ್ಕೂ ಕಾರಣ ನೀನೇ ಅಂತ ಬೇರೆ ಹೇಳಬೇಕಿಲ್ಲ. ಕಣ್ಣಿಗೆ ನೀ ಬಿದ್ದ ಕ್ಷಣದಿಂದ ಕೋಟಿ ಕನಸಿನ ಸರದಾರನಾಗಿ ಮನಸ್ಸು ಕುಣಿದು ಕುಪ್ಪಳಿಸುತ್ತಿತ್ತು. ಮಳೆ ನಿಂತ ಮೇಲೂ ಮರದಿಂದ ನೀರು ಹನಿಯುವುದು ನಿಲ್ಲುವುದಿಲ್ಲ. ಅಂತೆಯೇ ನಿನ್ನ ಮುಗ್ಧ ಮನಸ್ಸಿಗೆ ಮುದ್ದು ಮುದ್ದಾದ ಭಾವನೆಗಳ ಅರಳುವಿಕೆ ನಿಲ್ಲುವುದಿಲ್ಲ. ನನಗಂತೂ ಮೊದಲ ನೋಟದಲ್ಲೇ ಒಲವ ಮಿಡಿತ ಶುರುವಾಯಿತು. ಮೊದಮೊದಲು ಗೆಳೆತನದ ಬಂಧದಲ್ಲಿ ಬಂಧಿಯಾದ ನೀನು ಬರಬರುತ್ತ ಒಲವಿನಲಿ ಒಳಗಾದೆ. ಒಲವಿಗೆ ಒಪ್ಪಿಗೆಯ ಮುದ್ರೆ ಒತ್ತಿದೆ. ಆ ಗಳಿಗೆಯಲ್ಲಿ ನಿನ್ನಲ್ಲಿ ನಾ ಬೆರೆತೆ. ನನ್ನನ್ನೇ ನಾ ಮರೆತೆ. ಜಗದ ಚಿಂತೆಯನ್ನು ಮರೆತು ಪ್ರೇಮಲೋಕದ ಗಗನದೆತ್ತರಕ್ಕೆ ಹಾರಿದೆ.
ಮಾಮರದ ಮೇಲೆ ಸುಳಿದಾಡುವ ಜೋಡಿ ಹಕ್ಕಿಯಂತೆ ನಾನು ನೀನು. ನಿನ್ನಂದ ಚೆಂದ ಹೊಗಳಲು ಸಿಹಿ ಕವಿತೆ ಬರೆಯಲು ಮಹಾಕವಿ ಕಾಳಿದಾಸನೂ ಸೋಲುವನು. ವರ್ಣನೆಗೆ ನಿಲುಕದ ಚೆಲ್ವಿ ನೀನು. ಕಣ್ಣಲ್ಲೆ ನಿನ್ನ ಸೌಂದರ್ಯ ರಾಶಿ ಹೊತ್ತು ತಿರುಗುವ ಅಮರ ಪ್ರೇಮಿ ನಾನು. ಸೀದಾ ಸಾದಾ ಸರಳ ನಿರಾಭರಣ ಸುಂದರಿ. ಪುರುಸೊತ್ತು ಮಾಡಿಕೊಂಡು ತಯಾರಿಸಿದ ಬ್ರಹ್ಮನ ಮೇರು ಕೃತಿ ನೀನು. ತಿದ್ದಿ ತೀಡಿದ ಕಪ್ಪನೆಯ ಹುಬ್ಬುಗಳು, ಹಾಲುಬಣ್ಣದ ದುಂಡು ಮುಖ, ಸಂಪಿಗೆಯAತಹ ಮೂಗು, ದಾಳಿಂಬೆಯನ್ನು ನಾಚಿಸುವಂತಹ ದಂತಪAಕ್ತಿಗಳು ನೀಳ ತೋಳುಗಳು. ಮೊನಾಲಿಸಾÀಳಿಗೆ ನಗೆ ಕಲಿಸುವಂತಹ ಮೋಹಕ ನಗು.
ಹೃದಯದಲ್ಲಿ ಕಟ್ಟಿ ಹಾಕಿದ ನೀನು ಅದೊಂದು ಸಂಜೆ ಅಚಾನಕ್ಕಾಗಿ ಪಾರ್ಕಿನಲ್ಲಿ ಸಿಕ್ಕೆ. ಸಂಜೆಯ ತಂಪಾದ ತಂಗಾಳಿ ಈರ್ವರ ಮೈಗಳನ್ನು ತೀಡುತ್ತಿತ್ತು. ಹಗಲುಗನಿನಲ್ಲಿ ಮುಳುಗಿ ಹೋಗಿದ್ದ ನಾನು ನಿನ್ನನ್ನೇ ದಿಟ್ಟಿಸುತ್ತಿದ್ದೆ. ಇದ್ದಕ್ಕಿದ್ದಂತೆ ಸೋನೆ ಮಳೆಯ ತುಂತುರು ಹನಿಯೊಂದು ನಿನ್ನ ಮೃದುವಾದ ಹಣೆಯ ಮೇಲೆ ಬಿದ್ದು ನಲಿಯತೊಡಗಿದ್ದನ್ನು ಕಂಡೆ. ನಾನೇ ಮಳೆ ಹನಿಯಾಗಿದ್ದರೆ ನಿನ್ನ ನವಿರಾದ ಮೈಮೇಲೆಲ್ಲ ಹರಿದಾಡಬಹುದಿತ್ತು ಅಂದುಕೊಂಡೆ. ಆ ಭಾವನೆಯಿಂದ ಹಿಂದೆಂದೂ ಅನುಭವಿಸದ ರೋಮಾಂಚನ ಅನುಭವಿಸಿದೆ. ಸುತ್ತ ಹಸುರಿನ ಕಾಡು ಸನಿಹದಲ್ಲೊಂದು ತೊರೆ ಹರಿಯುತ್ತಿತ್ತು. ಮಂದ ಮಾರುತ ಕಂಪು ಬೀರುತ ಬೀಸುತ್ತಿತ್ತು. ಮಂಜು ಹನಿಗಳ ಕಾಡಿನ ಹೂಗಳು ಸುತ್ತ ಕಂಪನು ಸೂಸುತ್ತಿದ್ದವು. ಹಚ್ಚು ಹಸರಿನ ಮಾಮರಗಳು ನಮ್ಮಿಬ್ಬರ ಸುತ್ತುವರಿದಿದ್ದವು. ನಿನ್ನ ಪ್ರೀತಿ ಬಿಟ್ಟೂ ಬಿಡದೆ ಎದೆಯಲಿ ಅನುರಾಗದ ರಾಗ ಹಾಡುತಲಿತ್ತು. ನಲುಮೆಯ ಸಗ್ಗ ಸುಖವನು ಸವಿಯಲು ಇಂಬು ಕೊಡುತ್ತಿತ್ತು. ಮಳೆಯಲಿ ಜೊತೆಯಲಿ ಇಬ್ಬರೂ ಒಟ್ಟಿಗೆ ಒದ್ದೆಯಾಗಿದ್ದೆವು. ನಡೆಯುವಾಗ ನಮಗರಿವಿಲ್ಲದೇ ಕೈಗಳ ಬೆರಳುಗಳು ಒಂದಕ್ಕೊಂದು ಅಂಟಿಕೊಂಡು ಚಿತ್ತಾರ ಹಾಕುತ್ತಿದ್ದವು. ಅಷ್ಟರಲ್ಲಿ ನಿನ್ನಣ್ಣ ನಿನ್ನ ಹುಡುಕಿಕೊಂಡು ಬಂದಿದ್ದು ಗೊತ್ತಾಗಿ ನಾಚಿಕೆಯಿಂದ ಮೆಲ್ಲನೆ ಕೈ ಕೊಡವಿಕೊಂಡು ಓಡಿದೆ. ಅಂದು ರಾತ್ರಿಯೆಲ್ಲ ಕಣ್ರೆಪ್ಪೆಗಳು ಅಂಟಿಕೊಳ್ಳಲೇ ಇಲ್ಲ.
ಮರುದಿನ ಬೆಳಗಿನ ಜಾವ ಆರು ಗಂಟೆಯಾಗಿತ್ತು. ಜರ್ಕಿನ್ ಹಾಕಿಕೊಂಡಿದ್ದರೂ ಮುಂಜಾನೆಯ ಕೊರೆವ ಚಳಿಗೆ ಮಂಜಿನಂತಾಗಿದ್ದ ನನ್ನೆರಡು ಕೈಗಳನ್ನು ಒಂದಕ್ಕೊಂದು ತಿಕ್ಕುತ್ತಿದ್ದೆ. ಕೊರೆವ ಚಳಿ ಇದ್ದುದರಿಂದ ಹೊರಗೆ ಯಾರೂ ಇರಲಿಲ್ಲ. ನಿನ್ನ ಕಂಡ ಕೂಡಲೇ ನಿನ್ನ ಭುಜದ ಮೇಲೆ ಹೆದರುತ್ತ ಕೈಯಿಟ್ಟೆ. ಚಳಿಯಿಂದ ನಡುಗುತ್ತಿದ್ದ ನೀನು ನನ್ನ ಕೈ ಬಿಸಿಗೆ ಹಿತವೆನಿಸಿದಂತೆ ಭಾಸವಾಯಿತು. ಅರೆಗಳಿಗೆ ಕನಸಿನಲೋಕದಲ್ಲಿದ್ದವಳಂತೆ ಕಂಡೆ. ನಂತರ ಸಂಕೋಚದಿಂದ ಲಘುವಾಗಿ ತಬ್ಬಿದೆ. ಆಗ ನನ್ನೆದೆ ಮೌಂಟ್ ಎವರೆಸ್ಟ್ ಎತ್ತರಕ್ಕೆ ಬಡೆದುಕೊಳ್ಳುತ್ತಿತ್ತು ಅನ್ನೋದು ನನಗೆ ಮಾತ್ರ ಗೊತ್ತು. ಸುಕೋಮಲ ದೇಹ ಅದೇ ಮೊದಲು ಬಾರಿ ಅಷ್ಟು ಹತ್ತಿರವಾಗಿತ್ತು. ಇಬ್ಬರ ನಡುವೆ ಇದ್ದ ಅಂತರ ತುಸು ಕಡಿಮೆಯಾಗಿ ಅಂಟಿಕೊಂಡರೆ ಎಷ್ಟು ಚೆನ್ನ ಎನ್ನುತ್ತಿತ್ತು ಕಳ್ಳ ಮನಸ್ಸು. ನನ್ನ ಕುರುಚಲು ಗಡ್ಡದ ಕೆನ್ನೆ ನಿನ್ನ ಕಾಶ್ಮೀರಿ ಸೇಬಿನಂತಹ ಕೆನ್ನೆಗೆ ಮೃದುವಾಗಿ ತಗುಲಿದಾಗ ರೋಮಾಂಚನವಾಯಿತು. ನನಗೆ ಹೀಗಿರುವಾಗ ಇನ್ನು ನಿನ್ನ ಪಾಡು ಎಂದು ಪ್ರಶ್ನಿಸಿಕೊಳ್ಳುತ್ತಿದ್ದೆ. ಎಷ್ಟೇ ಆಗಲಿ ಹೆಣ್ಣು ಜೀವವಲ್ಲವೇ? ನಾಚಿಕೆಯಿಂದ ಕೆನ್ನೆ ರಂಗೇರಿತು.
ಚಿಕ್ಕವರಿದ್ದಾಗ ಮಾಮಾ ಎಂದು ಹಾರಿ ಬಂದು ತಬ್ಬಿಕೊಳ್ಳುತ್ತಿದ್ದುದು ನೆನಪಾಯಿತೇನೆ ಎಂದೆ. ಅದಕ್ಕೆ ನೀನು ಅರೆ, ಅದೆಲ್ಲ ಬೇರೆ ಆಗೆಲ್ಲ ಹೀಗೆ ಅನಿಸುತ್ತಿರಲಿಲ್ಲ ಎಂದೆ ವೈಯ್ಯಾರದಿಂದ. ಗುಳಿ ಕೆನ್ನೆಯ ಬೆಡಗಿಯ ಮನಮೋಹಕ ನಗುವಿಗೆ ಮನಸೋತೆ ನನ್ನತ್ತ ಎಳೆದು ಮುಖದತ್ತ ಮುಖ ತಂದು ಅಧರಗಳಿಂದ ಅಧರಗಳಿಗೆ ಬೀಗ ಹಾಕಲು ಮುಂದಾದೆ. ನನ್ನನ್ನು ತಡೆದೆ ಮನೆಯಲ್ಲಿ ಈ ವಿಷಯ ಗೊತ್ತಾದರೆ ಹೂತು ಹಾಕುತ್ತಾರೆ ಅಷ್ಟೆ ಎಂದೆ.
ಪ್ರಣಯ ಪಯಣದ ಅವಸರದಲ್ಲಿ ನಾನು ಮತ್ತೆ ನಿನ್ನನ್ನು ತೋಳಿನಿಂದ ಬಾಚಿ ತಬ್ಬಿದೆ. ‘ಅವೆಲ್ಲ ಗೊತ್ತಿಲ್ಲ ನನಗೆ ಒಂದು ಸಿಹಿ ಸಿಹಿಯಾದ ಜೇನ ಹನಿ ಬೇಕೇ ಬೇಕು ಅಷ್ಟೇ.’ ಹೆದರದಿರು ಈ ಕ್ಷಣ ಮಾತ್ರವಲ್ಲ ಎಂದೆಂದಿಗೂ ನೀನು ನನ್ನವಳು ಎನ್ನುತ್ತ ಮತ್ತೆ ನಿನ್ನ ಅಧರಗಳತ್ತ ಬಾಗಿದೆ. ಕುತ್ತಿಗೆ ಸುತ್ತಿದ್ದ ನಿನ್ನೆರಡು ಕೈಗಳು ಮೆತ್ತಗೆ ನನ್ನ ಕೆನ್ನೆಯನ್ನು ಹಿಂಡಿದವು. ನಿನ್ನ ಸ್ಪರ್ಶದ ಅಮಲಿನಲ್ಲಿದ್ದ ನನಗೆ ಅದು ಕಚಗುಳಿಯಿಟ್ಟಂತೆನಿಸಿತು. ಸಿಂಪಿ ಬಾಯ್ಬಿಟ್ಟು ತೋರುವ ಸ್ವಾತಿ ಮುತ್ತಿನ ಮತ್ತೇರಸಿಕೊಂಡಿದ್ದೆ. ಮುತ್ತುಣಿಸುವ ರಭಸದಲ್ಲಿ ಮುಗುಳುನಗೆಯೊಂದು ಮಾಯವಾಗಿದ್ದನ್ನು ಕಾಣದೇ ಹೋದೆ. ಸೋದರತ್ತೆ ಮಗಳೆಂಬ ಸಲಿಗೆ ಅದಾಗಿತ್ತು.
ಪ್ರೀತಿ ಸತ್ಯದಂತೆ ಅದೆಷ್ಟು ಮುಚ್ಚಿಟ್ಟರೂ ಒಂದು ದಿನ ಹೊರಗೆ ಬಂದೇ ಬರುತ್ತದೆ. ನಮ್ಮಿಬ್ಬರ ತೆರೆಮರೆಯ ಹಿಂದಿನ ಹುಡುಗಾಟ ಗಾಳಿಯಲ್ಲಿ ತೇಲಿ ಮನೆಯ ಹಿರಿಯರ ಕಿವಿಗೆ ಬಿದ್ದು ಮೂರು ಗಂಟು ಹಾಕಿದ್ದಾಗಿದೆ ಇನ್ನು ತಡವೇಕೆ ಪ್ರೇಮ ಪಯಣಕೆ ಬಾಗುತ್ತ ಬಳಕುತ್ತ ಬಂದು ತಬ್ಬಿ ಬಿಡು ಹಿಂದಿನಿಂದ ಬಳ್ಳಿಯಂತೆ. ಬಂಗಾರದ ಹೂ ನಕ್ಷತ್ರಗಳ ಹಾಸಿಗೆ ಮೇಲೆ ಪ್ರೀತಿಸುವೆ. ಭೂಮಿ ಆಗಸ ಒಂದು ಮಾಡುವಂತೆ ರಾತ್ರಿಯಿಡೀ ಸುರಿವ ಜಡೆಯುವ ಮಳೆಯ ಪರಿಯಲಿ.
ಜಯಶ್ರೀ.ಜೆ. ಅಬ್ಬಿಗೇರಿ
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ ೯೪೪೯೨೩೪೧೪೨

