“ನಲ್ ಜಲ್ ಮಿತ್ರ ಪ್ರೊಗ್ರಾಮ್” ಅಡಿಯಲ್ಲಿ GTTC ಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ಮತ್ತು ಸರಕಾರೇತರ ಸಂಸ್ಥೆಗಳ ಸಿಬ್ಬಂದಿಗೆ “ತರಬೇತುದಾರರ ತರಬೇತಿ” ಕಾರ್ಯಕ್ರಮವು ಚಿಕ್ಕಬಳ್ಳಾಪುರ ಜಿಲ್ಲೆಯ ಅಂಗಟ್ಟಾದಲ್ಲಿರುವ “ಭಾರತ ರತ್ನ ಸರ್ ಎಮ್ ವಿಶ್ವೇಶ್ವರಯ್ಯ ನ್ಯಾಷನಲ್ ಟ್ರೇನಿಂಗ್ ಫೆಸಿಲಿಟಿ ಫಾರ್ ಸ್ಕಿಲ್ಸ ಫಾರ್ ಆಲ್ (ಬಿಎಮ್.ವಿ.ಎನ್.ಟಿಎಫ್.ಎಸ್.ಎ)” ಸಂಸ್ಥೆಯಲ್ಲಿ ಜರುಗಿತು.
ತರಬೇತಿ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ರವರು ಉದ್ಘಾಟಿಸಿ ತರಬೇತಿಯ ಪ್ರಯೋಜನಗಳನ್ನು ತಿಳಿಸಿದರು. ಕೌಶಲ್ಯಾಭಿವೃದ್ದಿಗಾಗಿ ಆಯೋಜಿಸಲಾಗಿರುವ ತರಬೇತಿಯ ಪ್ರಾಮುಖ್ಯತೆ ಯನ್ನು ಯುವಕರು ಅರಿತುಕೊಳ್ಳಬೇಕೆಂದು ಸಹ ನುಡಿದರು.

ತರಬೇತಿಯ ಮುಖ್ಯ ಸಂಯೋಜಕ ಬಾಲಚಂದ್ರ ಜಾಬಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸ್ಥೆಯ ಉದ್ದೇಶ ಮತ್ತು ಗುರಿಗಳ ಬಗ್ಗೆ ವಿವರಿಸಿದರು. ರಾಷ್ಟ್ರಮಟ್ಟದಲ್ಲಿ “ಮಾಸ್ಟರ್ ಟ್ರೇನರ್ಸ ಹಾಗೂ ಸುಪರ್ ಟ್ರೇನರ”ಗಳಿಗೆ ತರಬೇತಿ ನೀಡಿ ಸ್ಥಳೀಯ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉದ್ಯೋಗ ಪ್ರಾಪ್ತಿಗಾಗಿ ಯುವಕರನ್ನು ಸಿದ್ಧಗೊಳಿಸುವ ಮತ್ತು ಕಾರ್ಯನಿರತ ವ್ಯಕ್ತಿಗಳಿಗೆ ಮರುಕೌಶಲ್ಯವೃದ್ಧಿಗಾಗಿ ತರಬೇತಿ ನೀಡುವ ವಿಶಿಷ್ಟವಾದ ಸಂಸ್ಥೆಯಾಗಿದ್ದು ಅನೇಕರಿಗೆ ಮಾರ್ಗದರ್ಶಿ ಹಾಗೂ ಮುಂಚೂಣಿ ಸಂಸ್ಥೆಯಾಗಿದೆಯೆಂದು ನುಡಿದರು.
ಸಂಸ್ಥೆಯ ನಿರ್ದೇಶಕ ಶ್ರೀನಿವಾಸರಾವ್ ಕುಲಕರ್ಣಿಯವರು ಸಂಸ್ಥೆ ಇಲ್ಲಿಯವರೆಗೆ ಕ್ರಮಿಸಿದ ದಾರಿ ಕುರಿತು ವಿವರಿಸಿದರು. ಪ್ರಸಕ್ತದಲ್ಲಿ ಬೇಡಿಕೆಯಿರುವ ವೃತ್ತಿಗಳಲ್ಲಿ ನೂತನ ವಿಭಾಗಗಳಲ್ಲಿ ತರಬೇತಿಯ ರೂಪರೇಷೆ, ಪಠ್ಯವಸ್ತು ರಚನೆ, ತರಬೇತಿ ಶೆಡ್ಯೂಲ್, ಮೌಲ್ಯಮಾಪನ, ಸರ್ಟಿಫಿಕೇಶನ್ ಮುಂತಾದ ಚಟುವಟಿಕೆಗಳಲ್ಲಿ ತೊಡಗಿದ್ದು ಉದ್ದಿಮೆಗೆ ಅವಶ್ಯಕ ಕೌಶಲ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯನಿರತವಾಗಿದೆ.
ಭಾರತದಲ್ಲಿನ ಪ್ರಮುಖ ಶೈಕ್ಷಣಿಕ ಸಂಸ್ಥೆಗಳಾದ ಆಯ್.ಆಯ್.ಟಿ. ಗಳು, ಆಯ್.ಆಯ್.ಎಸ್.ಸಿ ಹಾಗೂ ತಾಂತ್ರಿಕ ವಿಶ್ವವಿದ್ಯಾಲಯಗಳೊಂದಿಗೆ, ಉದ್ದಿಮೆಗಳೊಂದಿಗೆ ಹಾಗೂ ಆರ್ಥಿಕ ಸಂಪನ್ಮೂಲಗಳನ್ನು ಒದಗಿಸುವ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ/ಮಾಡಿಕೊಳ್ಳಲಾಗುವುದು ಎಂದು ಹೇಳಿದರು.
ಮುಂಬರುವ ದಿನಗಳಲ್ಲಿ ವಿವಿಧ ದೇಶಗಳಲ್ಲಿ ಕೌಶಲ್ಯಾಭಿವೃದ್ಧಿ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆಗೈದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿಶ್ವವಿದ್ಯಾಲಯಗಳು ಹಾಗೂ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗುವದು ಎಂದು ತಿಳಿಸಿದರು.
ತರಬೇತಿಯ ಸಂಪನ್ಮೂಲ ವ್ಯಕ್ತಿ ಶ್ರೀಧರರವರು ವೇದಿಕೆ ಮೇಲಿದ್ದರು.
ಜಿಲ್ಲಾ ಕೌಶಲ್ಯಾಭಿವೃದ್ಧಿ ಹಾಗೂ ಜಿಲ್ಲಾ ಉದ್ಯೋಗಾಧಿಕಾರಿ ಪ್ರಸಾದರವರು ಕಾರ್ಯಕ್ರಮ ನಿರೂಪಿಸಿ ವಂದನಾರ್ಪಣೆ ಮಾಡಿದರು. ವಿವಿಧ ವೃತ್ತಿಗಳಲ್ಲಿ ನಿರತರಾಗಿರುವ ಒಟ್ಟು 32 ಜನ “ತರಬೇತಿದಾರರತರಬೇತಿ”ಯಲ್ಲಿ ಭಾಗವಹಿಸಿದ್ದರು.

