ಸಿಂದಗಿ: ಪೊಲೀಸ ಅಧಿಕಾರಿಗಳೆಂದರೆ ಸಾರ್ವಜನಿಕರಲ್ಲಿ ಭಯ ಹುಟ್ಟಿಸುವ ಸಂದರ್ಭದಲ್ಲಿಯೂ ಸೌಜನ್ಯತೆಯಲ್ಲಿ ಅಹವಾಲನ್ನು ಸ್ವೀಕರಿಸಿ ಸಾಮಾನ್ಯರಂತೆ ಸಾಮಾನ್ಯರಾಗಿ 11 ತಿಂಗಳ ಸೇವೆ ಸಲ್ಲಿಸಿದ ಒಬ್ಬ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಯನ್ನು ನಾವು ಕಳೆದುಕೊಂಡಿದ್ದು ಪೊಲೀಸ್ ಇಲಾಖೆಗೆ ತುಂಬಲಾರದ ನಷ್ಟವೇ ಸರಿ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ಅಧ್ಯಕ್ಷ ಪಂಡಿತ ಯಂಪೂರೆ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ನಡೆದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ವತಿಯಿಂದ ಅಗಲಿದ ಸಿಪಿಐ ರವಿ ಉಕ್ಕುಂದ ಹಾಗೂ ಅವರ ಧರ್ಮಪತ್ನಿ ಮಧುಮತಿ ಉಕ್ಕುಂದ ದಂಪತಿಗಳಿಗೆ ಫೋಟೋ ಪೂಜೆ ಮಾಡಿ, ದೀಪ ಬೆಳಗಿಸಿ ಮೌನಾಚರಣೆ ಮಾಡುವ ಮೂಲಕ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿ, ವೃತ್ತ ನಿರೀಕ್ಷಕ ರವಿ ಉಕ್ಕುಂದ ಅವರು ಬಡವ ಬಲ್ಲಿದ ಎನ್ನದೇ ಸಮಸ್ಯೆಗೆ ಸರಳತೆಯಿಂದ ಸ್ಪಂದಿಸಿ ಸ್ಥಳದಲ್ಲಿಯೇ ಇತ್ಯರ್ಥಗೊಳಿಸುವ ಸ್ವಭಾವ ಹೊಂದಿದ್ದರು ಎಂದರು.
ಈ ಸಂದರ್ಭದಲ್ಲಿ ಕಾನಿಪ ಧ್ವನಿ ಸಂಘದ ಉಪಾಧ್ಯಕ್ಷ ಗುರು ಬಿದರಿ ಮಾತನಾಡಿ, ಸರಳ ಸಜ್ಜನಿಕೆಗೆ ಅವರ ವ್ಯಕ್ತಿತ್ವ ಹೆಸರಾಗಿದೆ. ಅವರು ಕೊಪ್ಪಳ ಜಿಲ್ಲೆಯ ನಿವಾಸಿಯಾಗಿದ್ದರು ಕೂಡಾ ಕರ್ನಾಟಕದ ಅನೇಕ ಮೂಲೆಗಳಲ್ಲಿ ಸೇವೆ ಸಲ್ಲಿಸಿ ತಮ್ಮ ಜೀವನದ ದೃಷ್ಟಾಂತಗಳನ್ನು ಅವರ ಅಧಿಕಾರಾವಧಿಯಲ್ಲಿ ಬಳಿಸಿಕೊಂಡು ನ್ಯಾಯ ಪಂಚಾಯತಿಯಲ್ಲಿಯೇ ಸಮಸ್ಯೆಗಳನ್ನು ಶಮನ ಗೊಳಿಸುವ ಮನೋಭಾವ ಹೊಂದಿದ್ದ ಮಹಾನ ಶಕ್ತಿಯಾಗಿದ್ದರು ಎಂದು ತಿಳಿಸಿದರು.
ದಲಿತ ಮುಖಂಡ ಹರ್ಷವರ್ಧನ ಪೂಜಾರಿ ವಕೀಲರು ಮಾತನಾಡಿ, ಪೊಲೀಸ ಅಧಿಕಾರಿಗಳು ಜನಸಾಮಾನ್ಯರಲ್ಲಿ ಬೆರೆತು ಕಾರ್ಯ ನಿರ್ವಹಿಸಿದ್ದು ಸಿಪಿಐ ರವಿ ಉಕ್ಕುಂದರು ಮೊದಲಿಗರು ಅಂತವರ ಜೀವನ ಅರ್ಧಕ್ಕೆ ನಿಂತು ಹೋಗಿದ್ದು ಪೊಲೀಸ ಇಲಾಖೆ ಒಳ್ಳೆಯ ಅಧಿಕಾರಿಯನ್ನು ಕಳೆದುಕೊಂಡಂತಾಗಿದೆ ಎಂದು ಹೇಳಿದರು.
ಪ್ರಧಾನ ಕಾರ್ಯದರ್ಶಿ ಗಪೂರ ಮುಜಾವರ, ಸಹ ಕಾರ್ಯದರ್ಶಿಗಳಾದ ಮೈಬೂಬ ಮುಲ್ಲಾ, ಇಸ್ಮಾಯಿಲ್ ಶೇಖ, ಪದಾಧಿಕಾರಿಗಳಾದ ವಿಜಯಕುಮಾರ ಪತ್ತಾರ, ಆರೀಫ ಮನಿಯಾರ, ಪ್ರೇಮಕುಮಾರ ಹಜ್ಜೆನವರ, ಖಾಜಾಮಿನ ಮಕಾಂದಾರ, ಅಬ್ದುಲ್ ಹಳಬರ, ಅಬ್ದುಲ್ ರಶಿದ, ಹಾಗೂ ಸಂಘಟನೆಯ ಮುಖಂಡರು ಭಿಮು ಕಲಾಲ, ಹರ್ಷವರ್ಧನ ಪೂಜಾರಿ, ಭಿಮಾಶಂಕರ ಸೇರಿದಂತೆ ಪದಾಧಿಕಾರಿಗಳು ಹಾಗೂ ವಿವಿಧ ಸಂಘಟನೆಯ ಮುಖಂಡರು ಉಪಸ್ಥಿತರಿದ್ದು ಮಾತನಾಡಿ ಸಂತಾಪವನ್ನು ಸೂಚಿಸಿದರು.