“ಇದು ಇಂದಿನ ವಿಶೇಷತೆಗಳ ಬಿಂಬಿಸುವ ಕವಿತೆ. ನಮ್ಮ ಹಳೇ ಮೈಸೂರು, ತುಮಕೂರು ಪ್ರಾಂತ್ಯದಲ್ಲಿ ಯುಗಾದಿ ಹಬ್ಬದ ಮರುದಿನವನ್ನು ವರ್ಷದೊಡಕು ಹಬ್ಬವೆಂದು ಆಚರಿಸುತ್ತೇವೆ. ಹಾಗಾಗಿ ಯುಗಾದಿ ಹಬ್ಬ ನಮ್ಮಲ್ಲಿ 2 ದಿನಗಳ ಆಚರಿಸುವ ಹಬ್ಬ. ಇಂದು ನಮ್ಮ ಭಾಗದಲ್ಲಿ ತುಂಬಾ ವಿಶೇಷತೆ, ಮಹತ್ವದ ದಿನ. ಇಂದಿನ ಪ್ರತಿ ನುಡಿ-ನಡೆಯೂ ಒಳಿತನ್ನೇ ಕೋರಬೇಕು.
ಒಳಿತನ್ನೇ ಹಂಚಬೇಕು. ವರ್ಷವೆಲ್ಲಾ ಹೀಗೆ ಇರಬೇಕು ಎನ್ನುವ ಅದ್ಭುತ ಸಂಕಲ್ಪಗಳ ಸಂಸ್ಕಾರ, ಸಂಪ್ರದಾಯದ ವಿಶಿಷ್ಟ ದಿನ. ಇಂದು ಪ್ರತಿ ಮನೆಯಲ್ಲೂ ಪುಟ್ಟಮಕ್ಕಳನ್ನು ಕೂಡಿಸಿ ಆರತಿ ಎತ್ತುವುದು. ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಉತ್ಸವಗಳನ್ನೂ ನೆರವೇರಿಸುತ್ತಾರೆ. ಇದು ಈ ದಿನದ ವೈಶಿಷ್ಟ್ಯಗಳ, ಸದ್ಭಾವಗಳ ಕವಿತೆ. ಒಪ್ಪಿಸಿಕೊಳ್ಳಿ. ”
– ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.
ವರ್ಷದೊಡಕು..!
ಇಂದು ಯುಗಾದಿಹಬ್ಬದ ಮರುದಿನ
ವರ್ಷದೊಡಕಿನ ಸಂಭ್ರಮದ ಸುದಿನ
ಜೀವ-ಭಾವ ಬಂಧಗಳ ಪ್ರತಿಎಳೆ
ಮೈದುಂಬಿಕೊಂಡು ನಿಂತಿದೆ ನವಕಳೆ.!
ಗುರುಹಿರಿಯರ ಗೌರವಿಸಿ ಆರಾಧಿಸೋಣ
ಕಿರಿಯರ ಅಕ್ಕರೆಯಲಿ ಮಾತಾಡಿಸೋಣ
ಅಹಂಕಾರ ಮತ್ಸರಗಳ ದೂರವಾಗಿಸೋಣ
ವಿನಯ ಸೌಜನ್ಯ ಮೈಗೂಡಿಸಿಕೊಳ್ಳೋಣ.!
ಪ್ರೀತಿಸುವವರಿಗೆಲ್ಲ ವರವ ಬೇಡೋಣ
ಶತ್ರುಗಳಿಗೂ ಶುಭಫಲವ ಕೋರೋಣ
ವಂದಿಸುವವರಿಗೆ ಶಿರಬಾಗಿ ನಮಿಸೋಣ
ನಿಂದಿಸುವವರನು ನಗುತ ಮನ್ನಿಸೋಣ.!
ಲೋಕಕೆಲ್ಲ ಸಂತಸ ಸಮೃದ್ಧಿ ಆಶಿಸೋಣ
ಎಲ್ಲರಿಗು ಆಯುರಾರೋಗ್ಯ ಬಯಸೋಣ
ಕೇಡೆಣಿಸುವವರಿಗೂ ಒಳಿತ ಹಾರೈಸೋಣ
ದ್ವೇಷಿಸುವವರಿಗೂ ಪ್ರೀತಿ ಹಂಚೋಣ.!
ಒಳಿತನ್ನೇ ಸಂಕಲ್ಪಿಸಿ ಪಾಲಿಸುವ ದಿನವಿದು
ವರ್ಷದೊಡಕೆಂಬ ಹಬ್ಬದ ವಿಶೇಷತೆಯಿದು.!
ತನುಮನಗಳ ನರ-ನರ ಸ್ವರ-ಸ್ವರಗಳಲ್ಲೂ
ಸದ್ಭಾವಗಳ ಸಮೀಕರಿಸುವ ಸಿರಿಹಬ್ಬವಿದು.!
ಅನುಕರಿಸಿ ಸನ್ನಡತೆ, ಎಣಿಸಿ ಶುಭಶಕುನ
ಒಳ್ಳೆಯದನೇ ನುಡಿದು ನಡೆದರೆ ಈ ದಿನ
ಒಳಿತಾಗುವುದಂತೆ ವರ್ಷವಿಡೀ ಪ್ರತಿದಿನ
ಇದು ಪೂರ್ವಿಕರು ಪಾಲಿಸಿದ ರೀತಿನೀತಿ
ವರ್ಷದೊಡಕು ಹಬ್ಬದ ಪರಂಪರೆ ಪ್ರತೀತಿ.!
ಎ.ಎನ್.ರಮೇಶ್. ಗುಬ್ಬಿ.