spot_img
spot_img

ಯುಗದ ಆದಿ, ಯುಗಾದಿಗೆ ಇದೆ ಪಂಚಾಂಗದ ನಂಟು

Must Read

- Advertisement -

ವೇದಾಂಗ ಜ್ಯೋತಿಷದಲ್ಲಿ ಹೇಳುವ ಐದು ಬಗೆ ಸಂವತ್ಸರಗಳಲ್ಲಿ ಚಾಂದ್ರಮಾನವೂ ಒಂದು. ಇದು ಚೈತ್ರಮಾಸ ಶುಕ್ಲಪಕ್ಷ ಪ್ರತಿಪದೆಯಂದು ಆರಂಭವಾಗಿ ಫಾಲ್ಗುಣಮಾಸ ಅಮಾವಾಸ್ಯೆಯಂದು ಕೊನೆಗೊಳ್ಳುತ್ತದೆ. ಇದನ್ನು ಅನುಸರಿಸುವ ಜನರಿಗೆ, ಮುಖ್ಯವಾಗಿ ದಕ್ಷಿಣ ಭಾರತದಲ್ಲಿ, ಚೈತ್ರ ಶುದ್ಧ ಪ್ರತಿಪದೆ ಹೊಸ ವರ್ಷದ ಮೊದಲ ದಿನ. ಅಂದು ಜನರು ಸಂಭ್ರಮ ಸಡಗರಗಳಿಂದ ಯುಗಾದಿ ಹಬ್ಬವನ್ನು ಆಚರಿಸುತ್ತಾರೆ.

ಸಂಸ್ಕೃತ ದಲ್ಲಿರುವ ಯುಗಾದಿ ಶಬ್ದವು ಭಾರತೀಯ ಭಾಷೆಗಳಾದ ಕನ್ನಡ ತೆಲುಗುಗಳಲ್ಲಿ ಉಗಾದಿಯಾಗುತ್ತದೆ. ಯುಗ ಎಂದರೆ ಈ ಸಂದರ್ಭದಲ್ಲಿ ಸಂವತ್ಸರ. ಆದಿ ಎಂದರೆ ಆರಂಭ ಎಂಬ ಅರ್ಥವಾದರೂ, ಸಂಸ್ಕೃತದಲ್ಲಿ ಅದಕ್ಕೆ ಬೇರೆಯ ಅರ್ಥಗಳೂ ಇವೆ. ಜೋಡಿ, ನೊಗ, ನೇಗಿಲು ಎಂಬ ಅಪ್ರಕೃತವಾದ ಅರ್ಥಗಳಿರುವಂತೆ ಈ ಸಂದರ್ಭಕ್ಕೆ ಹೊಂದಿಕೆಯಾಗುವ ಕೃತ, ತ್ರೇತಾ, ದ್ವಾಪರ, ಕಲಿಗಳಿಗೆ ಯುಗಗಳೆಂದು ಹೇಳುವುದುಂಟು. ಒಂದಾದ ಮೇಲೆ ಒಂದರಂತೆ ಬರುವ ಈ ಯುಗಗಳಲ್ಲಿ ಪ್ರಪ್ರಥಮ ಕೃತಯುಗವು ಈ ದಿನವೇ ಆರಂಭವಾಯಿತು ಎಂದು ಹೇಳುತ್ತಾರೆ. ಈ ಪ್ರಪಂಚವನ್ನು ಬ್ರಹ್ಮನು ಈ ದಿನವೇ ಮೊಟ್ಟಮೊದಲು ಸೃಷ್ಟಿ ಮಾಡಿದನೆಂದು ಪುರಾಣಗಳಲ್ಲಿದೆ.

ಪ್ರಾಜ್ಞರಾಗಿದ್ದ ನಮ್ಮ ಋಷಿಮುನಿಗಳು ಅಂದಿನ ಆ ಕಾಲದಲ್ಲಿ ತಮ್ಮ ತಪಸ್ಸಿನ ಕೆಲ ಭಾಗವನ್ನು ನಿಸರ್ಗದ ಅರಿಯುವಿಕೆಗೂ ಮೀಸಲಿಡುತ್ತಿದ್ದರು. ‘ಘಳಿಗೆ ಬಟ್ಟಲು’ ಎಂಬ ಸಮಯವನ್ನು ತಿಳಿಯುವ ಸಾಧನವನ್ನು ನಮ್ಮ ನಿಕಟಪೂರ್ವ ಶತಮಾನಗಳ ಹಿರಿಯರು ಹೊಂದಿದ್ದರು ಎಂಬುದು ಎಲ್ಲರಿಗೂ ವಿದಿತವಾದ ವಿಷಯ. ಒಂದು ಘಳಿಗೆ ಎಂದರೆ ಇಂದಿನ 24 ನಿಮಿಷಗಳು. ಅಂತಹ ಹಲವಾರು ಘಳಿಗೆಗಳು ಸೇರಿ ದಿನದಲ್ಲಿನ ಸಮಯದ ಲೆಕ್ಕ ಸಾಗುತ್ತಿತ್ತು. ಘಳಿಗೆ-ಲಿಪ್ತಿ ಇವತ್ತಿಗೂ ನಮ್ಮ ಆರ್ಷೇಯ ಪಂಚಾಂಗದಲ್ಲಿ ಚಾಲ್ತಿಯಲ್ಲಿರುವ ವಿಚಾರ. ನಮ್ಮಲ್ಲಿ ಬಹುತೇಕರಿಗೆ ಅದರ ಮೇಲೆ ಅಸಡ್ಡೆ ಇದ್ದರೂ ಸಮಯದ ಲೆಕ್ಕ ಹಾಕುವಲ್ಲಿ ಆ ಅಳತೆ ಕೂಡ ಅತ್ಯಂತ ಸಮಂಜಸ.

- Advertisement -

ಅಂತಹ ಮನುಜ ಶ್ರೇಷ್ಠರು ತಮ್ಮ ಸುತ್ತಲ ಜಗತ್ತಿನ ಆಗುಹೋಗುಗಳನ್ನು ಅವಲೋಕಿಸಿ ತಮ್ಮ ಬದುಕಿಗೂ ಮುಂದಿನ ತಮ್ಮ ಜನಾಂಗಕ್ಕೂ ಬೇಕಾಗಿ ನೈಸರ್ಗಿಕವಾಗಿರುವ ಹಲವು ಸೂತ್ರಗಳನ್ನು ಸಂಶೋಧಿಸಿದರು, ಅಭ್ಯಸಿಸಿದರು. ಅದನ್ನೇ ತಮ್ಮ ಹೊತ್ತಗೆಗಳಲ್ಲಿ ದಾಖಲಿಸಿದರು. ಮಂತ್ರಗಳೋಪಾದಿಯಲ್ಲಿ ಬಾಯಿಂದ ಬಾಯಿಗೆ ಅದು ತೆರಳಿ ಎಲ್ಲರಿಗೂ ಸಿಗುವಂತೆ ಅನುವು ಮಾಡಿಕೊಟ್ಟರು.

ಪರಿಸರದಲ್ಲಿ ಪಂಚಮಹಾಭೂತಗಳನ್ನು ಪರಿವೀಕ್ಷಿಸಿ, ತುಲನೆ ಮಾಡಿ, ಕಾಲಗಣನೆಗೆ ‘ಪಂಚಾಂಗ’ವೆಂಬ ಗಣಿತವನ್ನು ಜಾರಿಯಲ್ಲಿ ತಂದರು.

ಪ್ರಕೃತಿಯಲ್ಲಿ ನಡೆಯುವ ಕಾಲಾನುಸಂಧಾನಕ್ಕೆ ವರ್ಷಂಪ್ರತಿ ಮರುಕಳಿಸುವ ಘಟನೆಯಳನ್ನವಲಂಬಿಸಿ ಇಡೀ ವರ್ಷದಲ್ಲಿ ಇಂತಿಂತಹ ಗ್ರಹ ನಕ್ಷತ್ರಗಳು ಎಲ್ಲೆಲ್ಲಿ ಎಷ್ಟು ದಿನ ವಿಹರಿಸುತ್ತದೆ ಎಂಬುದನ್ನೂ ಗುಣಿಸಿದರು. ವರ್ಷಕ್ಕೆ ಹನ್ನೆರಡು ಮಾಸಗಳು ತಿಂಗಳುಗಳು 24 ಪಕ್ಷಗಳು, ದ್ವಾದಶ ರಾಶಿಗಳು, ದಿನದ ಗುರುತಿಗೆ ತಿಥಿ-ನಕ್ಷತ್ರಗಳು, 6 ಋತುಗಳನ್ನೂ ಹೆಸರಿಸಿದರು.

- Advertisement -

ವೇದಾಂಗ ಜ್ಯೋತಿಷದ ಒಂದು ಭಾಗವೇ ಪಂಚಾಂಗ.

ಸನಾತನ ಪದ್ಧತಿಯಂತೇ ಒಂದು ದಿನ, ದಿನದ ಹಗಲು ಮತ್ತು ರಾತ್ರಿ ಎಂಬೆರಡು ಭಾಗಗಳಿಗೆ ಸಂಬಂಧಿಸಿದಂತೆ ತಿಥಿ, ವಾರ, ನಕ್ಷತ್ರ, ಯೋಗ ಮತ್ತು ಕರಣಗಳೆಂಬ ಐದು ಅಂಗಗಳಿಂದ ಕೂಡಿರುತ್ತದೆ. ಪಂಚಾಂಗ ಯಾಕೆ ಐದು ವಿಭಾಗಗಳಿಂದ ಕೂಡಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಮೊದಲು ಭೂಮಿಯ ಪರಿಭ್ರಮಣವನ್ನು ಅರಿತುಕೊಳ್ಳಬೇಕು. ಭೂಮಿ ತನ್ನನ್ನೇ ತಾನು ಸುತ್ತುತ್ತಾ ಸೂರ್ಯನನ್ನು ಸುತ್ತಿ ಬರುತ್ತದೆ ಎಂಬುದು ಬಹುತೇಕರಿಗೆ ಗೊತ್ತು. ಭೂಮಿಗೆ ತನ್ನನ್ನು ತಾನು ಸುತ್ತು ಹಾಕಲು ಒಂದು ಇಡೀ ದಿನ ಸಾಕು.

ಸೂರ್ಯನನ್ನು ಸುತ್ತಿ ಬರಲು ಒಂದಿಡೀ ವರ್ಷ ಬೇಕು. ಆಕಾಶದಲ್ಲಿ ಸೂರ್ಯನ ಪಥವನ್ನು ಪ್ರಾಜ್ಞರು ಕ್ರಾಂತಿವೃತ್ತವೆಂದಿದ್ದಾರೆ. ಅದರ ಹತ್ತಿರದಲ್ಲೇ ಅಶ್ವಿನಿಯಿಂದಾರಂಭಗೊಳ್ಳುವ ಇಪ್ಪತ್ತೇಳು ನಕ್ಷತ್ರಗಳಿವೆ.

ಇವುಗಳನ್ನು ಪ್ರತ್ಯೇಕ ನಕ್ಷತ್ರಗಳು ಎನ್ನುವ ಬದಲು ತಾರಾ ಪುಂಜವೆಂದು ಹೇಳಬಹುದು. ಒಂದೊಂದು ಸಮೂಹವೂ ಆಕಾಶವನ್ನು ಆವರಿಸುವ ಭಾಗಗಳನ್ನು ನಾಲ್ಕು ನಾಲ್ಕು ಪಾದಗಳೆಂದು ಹೇಳಿದ್ದಾರೆ. ಆ ಪ್ರಕಾರ 27*4=108 ಪಾದಗಳಾದವು. 9 ನಕ್ಷತ್ರ ಪಾದಗಳಿಗೆ 1 ರಾಶಿಯಂತೆ ಒಟ್ಟೂ 108/9=12 ಮೇಷ, ವೃಷಭ, ಮಿಥುನ, ಕರ್ಕಾಟಕ…. ಮೀನ ರಾಶಿಗಳೆಂದು ಲೆಕ್ಕಿಸಲಾಗಿದೆ. ಭೂಮಿಯಿಂದ ಆಗಸದೆಡೆ ನಾವು ನೋಡಿದರೆ ಗ್ರಹಗಳು ಈ ರಾಶಿಗಳಿರುವ ದಿಕ್ಕುಗಳಲ್ಲಿ ಕಾಣುವುದರಿಂದ ನೋಡುವ ಕಾಲದಲ್ಲಿ ಗ್ರಹಗಳು ಯಾವ ಪಾದಗಳಲ್ಲಿವೆ ಎಂಬುದನ್ನು ಗಮನಿಸಿ ರಾಶಿಯನ್ನು ಗಮನಿಸಲಾಗುತ್ತದೆ.

ತಿಥಿ, ವಾರ, ನಕ್ಷತ್ರ, ಯೋಗ ಮತ್ತು ಕರಣಗಳನ್ನು ಅಳೆಯುವುದು ಘಳಿಗೆಗಳಲ್ಲಿ. ಒಂದು ಘಳಿಗೆಗೆ ಇಂದಿನ ಗಡಿಯಾರದ 24 ನಿಮಿಷಗಳು, ಸೂರ್ಯೋದಯದಿಂದ ದಿನ ಪ್ರಾರಂಭವಾಗುವುದರಿಂದ, ಗಡಿಯಾರದ ಸಮಯದಲ್ಲಿ ಬೆಳಿಗ್ಗೆ 6-10ಕ್ಕೆ ಸೂರ್ಯೋದಯವೆಂದಿಟ್ಟುಕೊಳ್ಳೋಣ. ಸೂರ್ಯೋದಯದಿಂದ 28 ಘಳಿಗೆಗಳ ಕಾಲ ಬಿದಿಗೆಯೆಂದಾದರೆ ಆಗ 28 824-672 ನಿಮಿಷಗಳು. ಅಂದರೆ 11 ಗಂಟೆ 20 ನಿಮಿಷಗಳು.

ಅದರರ್ಥ ಸಂಜೆ 5.30ರವರೆಗೆ ಬಿದಿಗೆ ಇರುತ್ತದೆ. ನಂತರ ತದಿಗೆ ಆರಂಭಗೊಳ್ಳುತ್ತದೆ ಎಂಬುದು ಲೆಕ್ಕಾಚಾರ. ಇದೇ ರೀತಿ ನಕ್ಷತ್ರ, ಕರಣ ಮತ್ತು ಯೋಗಗಳ ಅವಧಿಯನ್ನು ತಿಳಿಯಬಹುದಾಗಿದೆ. ವಿಶೇಷ ಸಂದರ್ಭಗಳಾದ ಮದುವೆ, ಶ್ರಾದ್ಧ, ವಿಶೇಷ ಪೂಜಾ ವಿಧಾನ ಇತ್ಯಾದಿಗಳನ್ನು ಬಿಟ್ಟು ಮಿಕ್ಕೆಲ್ಲಾ ಕೆಲಸಗಳಿಗೆ ದಿನಗಳ ಆರಂಭದಲ್ಲಿ ಇರುವ ತಿಥಿಯನ್ನೇ ಗಣಿಸಲಾಗುತ್ತದೆ.

ಹಿಂದೂಗಳಲ್ಲಿ ಯುಗಾದಿಯ ಆಚರಣೆ ಪ್ರಮುಖವಾಗಿ ಎರಡು ವಿಧ. ಮೊದಲನೆಯದು ಚಾಂದ್ರಮಾನ ಯುಗಾದಿ, ಎರಡನೆಯದು ಸೌರಮಾನ ಯುಗಾದಿ. ಚಂದ್ರನ ಚಲನೆಯನ್ನಾಧರಿಸಿ ಆಚರಿಸುವ ಯುಗಾದಿ ಚಾಂದ್ರಮಾನ ಯುಗಾದಿ. ಅಂದರೆ ಚಾಂದ್ರಮಾನ ಮಾಸ ರೀತ್ಯಾ ಚೈತ್ರ ಶುಕ್ಲಪಕ್ಷದ ಪಾಡ್ಯದಂದು ಯುಗಾದಿ. ಸೂರ್ಯನ ಚಲನೆ ಆಧರಿಸಿದ ಯುಗಾದಿ ಸೌರಮಾನ ಯುಗಾದಿ. ಅಂದರೆ ಸೌರಮಾನ ರೀತ್ಯಾ ಮೇಷ ರಾಶಿಯ ಮೊದಲ ದಿನ.

ಸೌರಮಾನ

ಸೂರ್ಯಪಥದಲ್ಲಿ ರಾಶಿಯಿಂದ ರಾಶಿಗೆ ತೆರಳುವ ಕ್ರಾಂತಿವೃತ್ತದಲ್ಲಿ ಸೂರ್ಯನ ಚಲನೆಯನ್ನವಲಂಬಿಸಿ ರಾಶಿಗಳ ಹೆಸರನ್ನೇ ಮಾಸವಾಗಿ ಪರಿಗಣಿಸಲಾಗುತ್ತದೆ.

ಚಾಂದ್ರಮಾನ

ಚಂದ್ರಪಥದಲ್ಲಿ ಎದುರಾಗುವ ನಕ್ಷತ್ರಗಳು ಚಿತ್ತ, ವಿಶಾಖ, ಜ್ಯೇಷ್ಠ, ಆಷಾಢ, ಶ್ರವಣ, ಭಾದ್ರ ಪದ, ಅಶ್ವಿನಿ, ಕೃತ್ತಿಕಾ, ಮೃಗಶಿರಾ, ಪುಷ್ಯ, ಮಘಾ ಮತ್ತು ಫಲ್ಗುಣಿ. ಚಂದ್ರ ದಿನದಲ್ಲಿ ಉಪಕ್ರಮಿಸುವ 13 ಡಿಗ್ರಿಗಳನ್ನು ಗಣನೆಗೆ ತೆಗೆದುಕೊಂಡು ಪಥದಲ್ಲಿ ಎಲ್ಲೆಲ್ಲಿ ಯಾವ ಯಾವ ನಕ್ಷತ್ರಗಳು ತಿಂಗಳಿಗೊಮ್ಮೆ 30 ದಿನ ಹುಣ್ಣಿಮೆಯಂದು ಎದುರಾಗುತ್ತವೆ ಅಥವಾ ಜೊತೆಯಾಗುತ್ತದೆ ಎಂಬುದನ್ನು ಗಮನಿಸಿ ಅಂತಹ ನಕ್ಷತ್ರಗಳನ್ನು ಮಾತ್ರ ಇದಕ್ಕೆ ಆಯ್ದುಕೊಳ್ಳಲಾಗಿದೆ.

ಎರಡೆರಡು ಚಾಂದ್ರಮಾಸಗಳಿಗೆ ಒಂದೊಂದು ಋತುವನ್ನು ಹೆಸರಿಸಿದ್ದಾರೆ. ಒಟ್ಟು ಹನ್ನೆರಡು ಚಾಂದ್ರಮಾಸಗಳಿಗೆ 6 ಋತುಗಳು ಬಳಕೆಯಲ್ಲಿವೆ.

ಸಂವತ್ಸರ

ವರ್ಷವನ್ನು ಗಣಿಸುವ ಸಲುವಾಗಿ ಸಂವತ್ಸರಗಳನ್ನು ನಿಯೋಜಿಸಿದರು. ಚಾಂದ್ರಮಾನ ರೀತ್ಯಾ ಚೈತ್ರ ಶುಕ್ಲ/ಶುದ್ಧ ಪಾಡ್ಯದಿಂದ ಫಾಲ್ಗುಣ ಅಮಾವಾಸ್ಯೆಯವರೆಗೆ ಚಾಂದ್ರ ಸಂವತ್ಸರವೆಂದು ಹೇಳಿದ್ದಾರೆ – ಖಗೋಲ ಶಾಸ್ತ್ರಕಾರರು. ಅಲ್ಲಿಗೆ ಚಾಂದ್ರಮಾನದಲ್ಲಿ ಒಟ್ಟೂ 354 ದಿನಗಳು ಕಾಣುತ್ತವೆ. ಮೇಷ ಸಂಕ್ರಮಣದಿಂದ ಇನ್ನೊಂದು ಮೇಷ ಸಂಕ್ರಮಣದವರೆಗೆ ಒಂದು ಸೌರಮಾನ ಸಂವತ್ಸರ. ಇಲ್ಲಿ 365 ದಿವಸಗಳಿವೆ. ಚಾಂದ್ರ ಸಂವತ್ಸರ ಮತ್ತು ಸೌರ ಸಂವತ್ಸರಗಳ ನಡುವಿನ ಅಂತರ ಹನ್ನೊಂದು ದಿನಗಳು.

ಯುಗವೆಂದರೇನು? ಯುಗಗಳನ್ನು ಹೇಗೆ ಒಪ್ಪಿಕೊಳ್ಳುವುದು?
ಯುಗವೆಂಬುದು ಇಹ (ಅಪರ)-ಪರದ ಸಂಬಂಧವನ್ನು ಹೇಳುತ್ತದೆ. ಕಾಲಚಕ್ರ ಸುತ್ತುತ್ತಲೇ ಇರುತ್ತದೆ. ನಿಮಿಷ ನಿಮಿಷಗಳು ಸೇರಿ ಗಂಟೆ/ಹೋರೆಯಾಗುತ್ತದೆ. ಹೋರೆಗಳು ಸೇರಿ ದಿನವಾಗುತ್ತದೆ. ದಿನಗಳು ಸೇರಿ ವಾರ, ಪಕ್ಷ, ಮಾಸ ಅಥವಾ ತಿಂಗಳು, ಸಂವತ್ಸರ/ವರ್ಷ ಕಳೆದುಹೋಗುತ್ತದೆ. ಸಂವತ್ಸರಗಳು ಅದೆಷ್ಟೋ ಬಂದು ಹೋಗುತ್ತಲೇ ಇರುತ್ತವೆ. ಹಾಗಾದರೆ ಎಷ್ಟು ಸಂವತ್ಸರಗಳಾದವು? ಯಾವಾಗ ಕಾಲಚಕ್ರ ಸುತ್ತತೊಡಗಿತು? ಈ ಪ್ರಪಂಚದ ಆರಂಭ ಎಂದಾಯ್ತು ಎಂಬುದರತ್ತ ನಮ್ಮ ಮನಸ್ಸು ನೆಡುತ್ತದೆ. ಮನುಷ್ಯನ ಒಂದು ವರ್ಷ ದೇವತೆಗಳಿಗೆ ಒಂದು ದಿನ. ಮನುಷ್ಯನ 360 ವರ್ಷಗಳು ದೇವತೆಗಳಿಗೆ ಒಂದೇ ವರ್ಷ – ಅದೇ ದಿವ್ಯವರ್ಷ. ಇಂತಹ 4800 ದಿವ್ಯ ವರ್ಷಗಳಿಗೆ ಒಂದು ಕೃತಯುಗ. 2600 ದಿವ್ಯ ವರ್ಷಗಳಿಗೆ ಒಂದು ತ್ರೇತಾಯುಗ. 2400 ದಿವ್ಯ ವರ್ಷಗಳಿಗೆ ದ್ವಾಪರಯುಗ ಮತ್ತು 1200 ದಿವ್ಯವರ್ಷಗಳಿಗೆ ಒಂದು ಕಲಿಯುಗ. ಕೃತ-ತ್ರೇತ-ದ್ವಾಪರ-ಕಲಿ ಈ ನಾಲ್ಕೂ ಯುಗಗಳನ್ನು ಒಟ್ಟೂ ಸೇರಿಸಿದರೆ 12000 ದಿವ್ಯ ವರ್ಷಗಳಾಗುತ್ತವೆ. 12000 ದಿವ್ಯವರ್ಷಗಳಿಗೊಂದು ಮಹಾಯುಗ. ಇಂತಹ ಮಹಾಯುಗ 71 ಬಾರಿ ಘಟಿಸಿದಾಗ ಅದೊಂದು ಮನ್ವಂತರ.

ಪ್ರತಿಯೊಂದು ಮನ್ವಂತರದಲ್ಲೂ ಬೇರೆ ಬೇರೆ ಮನುವಿನ ಅಧಿಪತ್ಯವಿರುವುದು. ಉದಾಹರಣೆಗೆ ಈಗ ನಾವು ಇರುವುದು ವೈವಸ್ವತ ಎಂಬ ಮನುವಿನ ಅಧಿಪತ್ಯವಿರುವ ವೈವಸ್ವತ ಮನ್ವಂತರದಲ್ಲಿ. ಒಂದು ಮನ್ವಂತರ ಮುಗಿದು ಇನ್ನೊಂದು ಮನ್ವಂತರ ಆರಂಭವಾಗುವ ಮೊದಲು ಇರುವ ಸಣ್ಣ ಕಾಲವನ್ನು ಸಂಧಿಕಾಲವೆನ್ನಲಾಗಿದೆ. ಇಂತಹ 14 ಮನ್ವಂತರಗಳು ಮತ್ತು ಅವುಗಳ ನಡುವಿನ ಸಂಧಿಕಾಲಗಳು ಮುಗಿಯುವಾಗ 71*146=1000, ಅಂದರೆ 1000 ಮಹಾಯುಗಗಳು ಘಟಿಸುತ್ತವೆ. ಇದು ಬ್ರಹ್ಮನ ಒಂದು ಹಗಲು, ಇಷ್ಟೇ ಕಾಲ ಆತನ ರಾತ್ರಿ. 2000 ಮಹಾಯುಗಗಳು ಸೇರಿದರೆ ಬ್ರಹ್ಮನ ಒಂದು ದಿನವಾಗುತ್ತದೆ. ಇದನ್ನೇ ಕಲ್ಪವೆಂದೂ ಕರೆಯುತ್ತಾರೆ. ಇಂತಹ 360 ದಿನಗಳು ಬ್ರಹ್ಮನ ಒಂದು ವರ್ಷ; ಅಂದರೆ ಒಂದು ಮಹಾಕಲ್ಪ.

ಇಂತಹ ನೂರು ವರ್ಷಗಳು ಬ್ರಹ್ಮನ ಆಯಸ್ಸು. ಬ್ರಹ್ಮನ ವಯಸ್ಸನ್ನು ಪರ ಎಂದು ಹೆಸರಿಸಿದ್ದಾರೆ. ಅದನ್ನು ಸಮವಾಗಿ ಭಾಗಿಸಿದರೆ ಮೊದಲನೆಯ ಅರ್ಧ ಭಾಗವನ್ನು ಪ್ರಥಮ ಪರಾರ್ಧವೆಂದೂ ಎರಡನೇ ಅರ್ಧಭಾಗವನ್ನು ದ್ವಿತೀಯ ಪರಾರ್ಧವೆಂದೂ ಖಗೋಲ ಶಾಸ್ತ್ರಕಾರರು ಹೇಳಿದ್ದಾರೆ.

ಪ್ರಸಕ್ತ ದಿನಗಳನ್ನು ನಾವು ಸಂಕಲ್ಪದಲ್ಲಿ ಹೇಳುವಾಗ ದ್ವಿತೀಯ ಪರಾರ್ಧ ಎನ್ನುತ್ತೇವೆ. ಅಂದರೆ ಹಾಲಿ ಚಾಲ್ತಿಯಲ್ಲಿರುವ ಬ್ರಹ್ಮನ ಆಯುಸ್ಸಿನ ಮೊದಲ ಅರ್ಧ ಭಾಗ ಕಳೆದು ಎರಡನೇ ಅರ್ಧಭಾಗದಲ್ಲಿ ಆತನಿದ್ದಾನೆ ಎಂದರ್ಥ! ಬ್ರಹ್ಮ ಎಂಬುದೊಂದು ಪದವಿ. ಅದೊಂದು ಪಟ್ಟ ಅದೊಂದು ಜವಾಬ್ದಾರಿಯ ಹುದ್ದೆ. ಆ ಪೈಕಿ ಮೊದಲ ಮಹಾಕಲ್ಪ ಕಳೆದು ಮೊದಲ ಕಲ್ಪದಲ್ಲಿ ಈಗಾಗಲೇ ಆರು ಮನ್ವಂತರಗಳೂ ಕಳೆದು ಈಗ ಏಳನೆಯದಾಗಿ ವೈವಸ್ವತ ಮನ್ವಂತರದಲ್ಲಿ 27 ಮಹಾಯುಗಗಳು ಕಳೆದು 28ನೇ ಮಹಾಯುಗದಲ್ಲಿ ಮೊದಲನೇ ಮೂರು ಯುಗಗಳು ಮುಗಿದಿದ್ದು ನಾಲ್ಕನೆಯದಾದ ಕಲಿಯುಗದ ಪ್ರಥಮ ಪಾದದಲ್ಲಿ ಮನುಷ್ಯ ಮಾಪನದ ಪ್ರಕಾರ 5113ನೇ ವರ್ಷಶಾಲಿವಾಹನ ಶಕೆ 1935ನೇ ವರ್ಷದಲ್ಲಿ ನಾವಿದ್ದೇವೆ. ಕಲಿಯುಗದ ಪ್ರಮಾಣವನ್ನು ಲೆಕ್ಕ ಹಾಕೋಣ.

ಕಲಿಯುಗ: 1200*360=4,32,000 ಮಾನುಷ ವರ್ಷಗಳು. ಇದರಲ್ಲಿ ಸದ್ಯ ಆಗಿಹೋದ 5113 ನ್ನು ಕಳೆದರೆ 4,26,887 ವರ್ಷಗಳು ಇನ್ನೂ ಬಾಕಿ ಇರುತ್ತವೆ. ಕಲಿಯುಗ ಮುಗಿಯುವುದಕ್ಕೆ!

ಹಿಂದಿನ ಯುಗಗಳಲ್ಲಿ ಎಷ್ಟು ಮಾನುಷ ವರ್ಷಗಳಿದ್ದವು ನೋಡೋಣ.

ದ್ವಾಪರಯುಗ: 2400*360=8,64,000
ತ್ರೇತಾಯುಗ: 3600*360=12,96,000
ಕೃತಯುಗ: 4800*360=17,28,000

ಮಹಾಯುಗ ಆರಂಭಗೊಂಡ ದಿನವನ್ನು ಯುಗಾದಿ ಎಂದು ಆಚರಿಸುತ್ತೇವೆ. ಈಗ ನಮ್ಮ ಯುಗಾದಿ ಯಾವುದಿದೆಯೋ ಅದನ್ನೇ ಯುಗಾದಿಯೆಂದು ಕೃತ, ತ್ರೇತ, ದ್ವಾಪರಗಳಲ್ಲೂ ಆಚರಿಸಿದ್ದರು!
ಆರಂಭದಲ್ಲಿ ಹೇಳಿದ ಶ್ಲೋಕದಲ್ಲಿ ಗಂಗಾಸ್ನಾನಾದಿ ವಿಶೇಷ ಫಲಗಳನ್ನು ಕೇವಲ ಪಂಚಾಂಗವನ್ನು ಬಳಸುವುದರಿಂದ ಪಡೆಯಬಹುದು ಎಂದಿದ್ದಾರೆ. ಅಂದರೆ ನಿತ್ಯ ಮೂರು ಹೊತ್ತು ಪಂಚಾಂಗ ಪಠನ ಮಾಡಿದರೆ ಅಂತಹ ಫಲಗಳು ಪ್ರಾಪ್ತವಾಗುತ್ತವೆಂದಲ್ಲ.

ಕಾಲಗಣನೆಯನ್ನು ನಾವು ಗಮನದಲ್ಲಿರಿಸಿಕೊಂಡರೆ ಯಾವ ಕೆಲಸವನ್ನು ಯಾವಾಗ ಮಾಡಬೇಕು, ಯಾವ ಕರ್ಮ ಯಾವಾಗ ಜರುಗಬೇಕು ಎಂಬ ತಿಳಿವಳಿಕೆ ನಮಗೊದಗುತ್ತದೆ. ಕಾಲಕಾಲಕ್ಕೆ ನಡೆಯಬೇಕಾದುದು ನಡೆದರೆ ನಾವು ಕಾಶಿಗೇ ತೆರಳಿ ಗಂಗಾಸ್ನಾನವನ್ನು ಮಾಡಲೂ ಸಾಧ್ಯವಾಗಬಹುದು. ಗೋದಾನವನ್ನು ಮಾಡಲೂ ಸಾಧ್ಯವಾಗಬಹುದು.

ಅಭ್ಯಂಗಸ್ನಾನ: ಯುಗಾದಿ ಪಾಡ್ಯದ ದಿನ ಬೆಳಗ್ಗೆ ಬೇಗನೆ ಎದ್ದು ಮೊದಲು ಅಭ್ಯಂಗನ ಸ್ನಾನ ಮಾಡಬೇಕು. ದೇಹಕ್ಕೆ ಎಣ್ಣೆಯನ್ನು ಹಚ್ಚಿ ನಂತರ ಬಿಸಿನೀರಿನಿಂದ ಸ್ನಾನ ಮಾಡುವುದನ್ನು ಅಭ್ಯಂಗನ ಸ್ನಾನ ಎನ್ನುತ್ತಾರೆ. ಸ್ನಾನದಿಂದ ರಜ-ತಮಗುಣಗಳು ಒಂದು ಲಕ್ಷಾಂಶದಷ್ಟು ಕಡಿಮೆಯಾಗಿ ಅಷ್ಟೇ ಪ್ರಮಾಣದಲ್ಲಿ ಸತ್ವಗುಣವು ಹೆಚ್ಚಾಗುತ್ತದೆ. ಈ ಪ್ರಭಾವವು ನಿತ್ಯದ ಸ್ನಾನದಲ್ಲಿ ಮೂರು ಗಂಟೆಗಳ ಕಾಲ ಉಳಿಯುತ್ತದೆ.

ಅಭ್ಯಂಗ ಸ್ನಾನದ ಪ್ರಭಾವವು ನಾಲ್ಕರಿಂದ ಐದು ಗಂಟೆಗಳ ಕಾಲ ಉಳಿಯುತ್ತದೆ. ಚರ್ಮಕ್ಕೆ ಯಾವಾಗಲೂ ಸ್ನಿಗ್ಧತೆ ಇರಬೇಕೆಂದು ಎಣ್ಣೆಯನ್ನು ಹಚ್ಚುತ್ತಾರೆ. ಶರೀರಕ್ಕೆ ಸುಖದಾಯಕ ಮತ್ತು ಮಂಗಲಕರವೆಂದು ಬಿಸಿನೀರಿನ ಸ್ನಾನವನ್ನು ಹೇಳಲಾಗಿದೆ. ಎಣ್ಣೆ ಹಚ್ಚಿದ ನಂತರ ಸ್ನಾನ ಮಾಡುವುದರಿಂದ ಚರ್ಮ ಮತ್ತು ಕೂದಲಿಗೆ ಬೇಕಾದಷ್ಟು ಎಣ್ಣೆಯು ಉಳಿಯುತ್ತದೆ. ಆದುದರಿಂದ ಸ್ನಾನ ಮಾಡುವುದಕ್ಕಿಂತ ಮೊದಲು ಎಣ್ಣೆಯನ್ನು ಹಚ್ಚಬೇಕು.

ದೇಶಕಾಲಕಥನ: ‘ಅಭ್ಯಂಗ ಸ್ನಾನವನ್ನು ಮಾಡುವಾಗ ದೇಶಕಾಲಕಥನ ಮಾಡಬೇಕು. ದೇಶಕಾಲಕಥನ ಮಾಡುವ ಭಾರತೀಯರ ಪದ್ಧತಿಯೂ ವೈಶಿಷ್ಟಪೂರ್ಣವಾಗಿದೆ. ಬ್ರಹ್ಮದೇವನ ಜನನವಾದಾಗಿನಿಂದ ಇಲ್ಲಿಯವರೆಗೂ ಬ್ರಹ್ಮದೇವನ ಎಷ್ಟು ವರ್ಷಗಳಾದವು, ಯಾವ ವರ್ಷದಲ್ಲಿ ಯಾವ ಮತ್ತು ಎಷ್ಟನೆಯ ಮನ್ವಂತರವು ನಡೆದಿದೆ. ಈ ಮನ್ವಂತರದಲ್ಲಿನ ಎಷ್ಟನೆಯ ಮಹಾಯುಗ ಮತ್ತು ಅದರಲ್ಲಿ ಯಾವ ಉಪಯುಗ ನಡೆದಿದೆ. ಇವೆಲ್ಲವುಗಳ ಉಲ್ಲೇಖವು ದೇಶಕಾಲಕಥನದಲ್ಲಿ ಬರುತ್ತದೆ. ಇದರಿಂದ ಎಷ್ಟು ಮಹತ್ತರವಾದ ಕಾಲವು ಗತಿಸಿದೆ ಮತ್ತು ಉಳಿದ ಕಾಲವು ಎಷ್ಟು ದೊಡ್ಡದಿದೆ ಎನ್ನುವುದರ ಕಲ್ಪನೆ ಬರುತ್ತದೆ.

ನಾನು ಬಹಳ ದೊಡ್ಡವನಾಗಿದ್ದೇನೆ ಎಂದು ಪ್ರತಿಯೊಬ್ಬನಿಗೂ ಅನಿಸುತ್ತಿರುತ್ತದೆ. ಆದರೆ ವಿಶ್ವದ ಬೃಹತ್ ಕಾಲವನ್ನು ಮನಗಂಡಾಗ ನಾವೆಷ್ಟು ಚಿಕ್ಕವರು ಮತ್ತು ಎಷ್ಟು ಸಣ್ಣವರಾಗಿದ್ದೇವೆ ಎನ್ನುವುದರ ಅರಿವಾಗುತ್ತದೆ. ಇದರ ಒಂದು ಲಾಭವೆಂದರೆ ಮನುಷ್ಯನ ಅಹಂಭಾವವು ಕಡಿಮೆಯಾಗುತ್ತದೆ. ವರ್ಷದಲ್ಲಿ ಮುಂದಿನ ಐದು ದಿನಗಳಂದು ಹೀಗೆಯೇ ಅಭ್ಯಂಗನ ಸ್ನಾನ ಮಾಡಬೇಕೆಂದು ಶಾಸ್ತ್ರದಲ್ಲಿ ಹೇಳಲಾಗಿದೆ.

  1. ಸಂವತ್ಸರಾರಂಭ
  2. ವಸಂತೋತ್ಸವ ಮೊದಲನೆಯ ದಿನ ಅಂದರೆ ಫಾಲ್ಗುಣ ಬಹುಳ ಪ್ರತಿಪದೆ ಮತ್ತು
  3. ದೀಪಾವಳಿಯ ಮೂರು ದಿನಗಳು ಅಂದರೆ ಆಶ್ವಯುಜ ಬಹುಳ ಚತುರ್ದಶಿ, ಅಮಾವಾಸ್ಯೆ ಮತ್ತು ಕಾರ್ತಿಕ ಶುದ್ಧ ಪ್ರತಿಪದೆ.

ತೋರಣ ಕಟ್ಟುವುದು: ಸ್ನಾನವಾದ ನಂತರ ಮಾವಿನ ತೋರಣವನ್ನು ತಯಾರಿಸಿ ಕೆಂಪು ಹೂವುಗಳೊಂದಿಗೆ ಎಲ್ಲಾ ಬಾಗಿಲುಗಳಿಗೆ ಕಟ್ಟಬೇಕು.
ಪೂಜೆ: ಮೊದಲು ನಿತ್ಯ ಕರ್ಮ ಪೂಜೆ ಮಾಡಬೇಕು. ‘ಶಾಂತಿಯ ಆರಂಭದಲ್ಲಿ ಬ್ರಹ್ಮದೇವನ ಪೂಜೆ ಮಾಡಬೇಕು. ಏಕೆಂದರೆ ಬ್ರಹ್ಮನು ಸೃಷ್ಟಿಯನ್ನು ಈ ದಿನವೇ ನಿರ್ಮಿಸಿದನು. ಪೂಜೆಯಲ್ಲಿ ಅವನಿಗೆ ದವನವನ್ನು ಅರ್ಪಿಸಬೇಕು. ಅನಂತರ ಹೋಮಹವನ ಮತ್ತು ಬ್ರಾಹ್ಮಣರಿಗೆ ಸಂತರ್ಪಣೆಯನ್ನು ನೀಡಬೇಕು.

ತರುವಾಯ ಅನಂತರೂಪಗಳಲ್ಲಿ ಅವತರಿಸುವ ವಿಷ್ಣುವಿನ ಪೂಜೆ ಮಾಡಬೇಕು. ನಮಸ್ತೇ ಬ್ರಹ್ಮರೂಪಾಯ ವಿಷ್ಣುವೇ ನಮಃ| ಈ ಮಂತ್ರವನ್ನು ಹೇಳಿ ನಮಸ್ಕರಿಸಬೇಕು. ಸಂವತ್ಸರ ಪೂಜೆ ಮಾಡಿದರೆ ಸರ್ವಪಾಪಗಳು ನಾಶವಾಗುತ್ತವೆ. ಆಯುಷ್ಯ ವೃದ್ಧಿಯಾಗುತ್ತದೆ. ಈ ದಿನದಂದು ಆ ವಾರದ ದೇವತೆಯ ಪೂಜೆಯನ್ನು ಮಾಡಬೇಕು.

ಬ್ರಹ್ಮಧ್ವಜವನ್ನು ನಿಲ್ಲಿಸುವುದು: ರಾವಣವಧೆಯ ನಂತರ ಅಯೋಧ್ಯೆಗೆ ಮರಳುವ ರಾಮನ ವಿಜಯದ ಮತ್ತು ಆನಂದದ ಪ್ರತೀಕವೆಂದು ಮನೆಮನೆಗಳಲ್ಲಿ ಬ್ರಹ್ಮಧ್ವಜವನ್ನು ಏರಿಸುತ್ತಾರೆ. ದೊಡ್ಡಕೋಲಿನ ತುದಿಗೆ ಹಸಿರು ಅಥವಾ ಹಳದಿ ಬಣ್ಣದ ಜರಿಯ ಖಣವನ್ನು ಕಟ್ಟುತ್ತಾರೆ. ಅದರ ಮೇಲೆ ಸಕ್ಕರೆಯ ಗಂಟು, ಬೇವಿನ ಚಿಗುರೆಲೆ, ಮಾವಿನ ಎಲೆ ಮತ್ತು ಕೆಂಪು ಹೂವುಗಳ ಹಾರವನ್ನು ಕಟ್ಟಿ ಮೇಲೆ ಬೆಳ್ಳಿಯ ಅಥವಾ ತಾಮ್ರದ ಕಲಶದಿಂದ ಶೃಂಗರಿಸಿ ಧ್ವಜವನ್ನು ನಿಲ್ಲಿಸುತ್ತಾರೆ.

ಅದರ ಮುಂದೆ ಸುಂದರವಾದ ರಂಗೋಲಿ ಹಾಕುತ್ತಾರೆ. ಇದಕ್ಕೆ ‘ಬ್ರಹ್ಮಧ್ವಜಾಯ ನಮಃ|’ ಎಂದು ಹೇಳಿ ಸಂಕಲ್ಪಪೂರ್ವಕವಾಗಿ ಪೂಜೆ ಮಾಡಬೇಕು. ಬ್ರಹ್ಮಧ್ವಜದ ಮುಖಾಂತರ ವಾತಾವರಣದಲ್ಲಿನ ಪ್ರಜಾಪತಿ ಸಂಯುಕ್ತ ಲಹರಿಗಳು ಈ ಕಲಶವನ್ನು ನೀರು ಕುಡಿಯಲು ಉಪಯೋಗಿಸಬೇಕು. ಹೀಗಾಗಿ ಪ್ರಜಾಪತಿ ಲಹರಿಗಳ ಸಂಸ್ಕಾರವಾಗಿರುವ ಕಲಶವು ಕುಡಿಯುವ ನೀರಿನ ಮೇಲೆ ಅಂತಹ ಸಂಸ್ಕಾರಗಳನ್ನೇ ಮಾಡುತ್ತವೆ. ಆದುದರಿಂದ ನಮಗೆ ವರ್ಷವಿಡೀ ಪ್ರಜಾಪತಿ ಲಹರಿಗಳು ಪ್ರಾಪ್ತವಾಗುತ್ತವೆ. ಸೂರ್ಯಾಸ್ತದ ಸಮಯದಲ್ಲಿ ಬೆಲ್ಲದ ನೈವೇದ್ಯವನ್ನು ತೋರಿಸಿ ಧ್ವಜವನ್ನು ಕೆಳಗಿಳಿಸುತ್ತಾರೆ.

ಪಂಚಾಂಗ ಶ್ರವಣ: ಜ್ಯೋತಿಷಿಯ ಪೂಜೆಯನ್ನು ಮಾಡಿ ಅವರಿಂದ ಅಥವಾ ಉಪಾಧ್ಯರಿಂದ ನೂತನ ವರ್ಷದ ಪಂಚಾಂಗದ ಅರ್ಥಾತ್ ವರ್ಷಫಲದ ಶ್ರವಣ ಮಾಡುತ್ತಾರೆ. ಈ ಪಂಚಾಂಗ ಶ್ರವಣದ ಫಲವನ್ನು ಹೀಗೆ ಹೇಳಲಾಗಿದೆ. ತಿಥಿಯ ಶ್ರವಣದಿಂದ ಲಕ್ಷ್ಮಿಯು ಲಭಿಸುತ್ತಾಳೆ.

ವಾರದ ಶ್ರವಣದಿಂದ ಆಯುಷ್ಯವು ವೃದ್ಧಿಯಾಗುತ್ತದೆ. ನಕ್ಷತ್ರ ಶ್ರವಣದಿಂದ ಪಾಪನಾಶನವಾಗುತ್ತದೆ. ಯೋಗ ಶ್ರವಣದಿಂದ ರೋಗ ನಿವಾರಣೆಯಾಗುತ್ತದೆ. ಕರಣ ಶ್ರವಣದಿಂದ ಇಚ್ಛಿಸಿದ ಕಾರ್ಯವು ಸಿದ್ಧಿಯಾಗುತ್ತದೆ. ಇದರ ನಿತ್ಯ ಶ್ರವಣದಿಂದ ಗಂಗಾಸ್ನಾನದ ಫಲ ಲಭಿಸುತ್ತದೆ.

ಬೇವಿನ ಪ್ರಸಾದ: ಪ್ರಜಾಪತಿ ಲಹರಿಗಳನ್ನು ಗ್ರಹಿಸುವ ಕ್ಷಮತೆಯು ಇತರ ಯಾವುದೇ ವಸ್ತುವಿಗಿಂತಲೂ ಬೇವಿನಲ್ಲಿ ಹೆಚ್ಚಿರುವುದರಿಂದ ಈ ದಿನ ಬೇವಿನ ಪ್ರಸಾದವನ್ನು ಸೇವಿಸುತ್ತಾರೆ. ಮಂತ್ರದ ಆವರ್ತನಗಳನ್ನು ಮಾಡುತ್ತಾ ಬೇವಿನ ಹೂವು, ಚಿಗುರೆಲೆಗಳು, ನೆನೆಸಿದ ಕಡಲೇಕಾಳು ಅಥವಾ ಬೇಳೆ, ಜೇನು, ಜೀರಿಗೆ ಮತ್ತು ಸ್ವಲ್ಪ ಇಂಗು ಇವೆಲ್ಲವನ್ನೂ ಬೆರೆಸಿ ಪ್ರಸಾದ ತಯಾರಿಸಿ ಎಲ್ಲರಿಗೂ ಹಂಚಬೇಕು.

ಗುರುರಾಜ ಪೋಶೆಟ್ಟಿಹಳ್ಳಿ 

- Advertisement -
- Advertisement -

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

  ಯಾರವನು ನೀನೆಂದು ಜನ‌ ನಿನ್ನ ಕೇಳಿದರೆ ಆ ಪ್ರಶ್ನೆಗುತ್ತರವ ಹೀಗೆ ಹೇಳು ಕ್ರಿಸ್ತನವ ಕೃಷ್ಣನವ ಬುದ್ಧನವ ಬಸವನವ ಎಲ್ಲರವ ನಾನೆನ್ನು‌- ಎಮ್ಮೆತಮ್ಮ ಶಬ್ಧಾರ್ಥ ಯಾರವನು = ಯಾವ ಕುಲಜಾತಿಮತಪಂಥಕ್ಕೆ ಸೇರಿದವನು ತಾತ್ಪರ್ಯ ಜನಗಳು ನಿನ್ನ ಕುಲ‌...
- Advertisement -

More Articles Like This

- Advertisement -
close
error: Content is protected !!
Join WhatsApp Group