ಯುಗಾದಿ
ಎಲ್ಲಿ ನೋಡಿದರೂ ಹೊಸತನದ ಹುರುಪು
ಕಂಗೊಳಿಸುತ್ತಿದೆ ಪ್ರಕೃತಿ ಮಾತೆಯ ಹಸಿರು
ಇಂಪಾಗಿ ಬೀಸುತಿಹುದು ನವಚೈತನ್ಯ ದ ತಂಗಾಳಿ
ಹೊಸ ವರುಷದ ಆಗಮನದ ನವೋಲ್ಲಾಸ ಮನದಿ
ಯುಗದ ಆದಿ ಯುಗಾದಿಯ ಸಂಭ್ರಮ
ಮರೆಯಾಗಲಿ ಕಹಿ ಕ್ಷಣಗಳು
ಬರಲಿ ಸಿಹಿ ದಿನಗಳು
ಬೇವಿನೊಡನೆ ಬೆಲ್ಲದ ರೀತಿಯಲಿ ಸುಮಧುರ ಕ್ಷಣಗಳು
ಬೇವು ಬೆಲ್ಲ ಸಮ್ಮಿಶ್ರ ಣದಿ ಸವಿದು
ಬಯಸೋಣ ಸರ್ವರಿಗೂ ಯುಗಾದಿಯ ಶುಭಕಾಮನೆಗಳನು
ಪೂಜಾ ಗೋಪಶೆಟ್ಟಿ
ಮುನವಳ್ಳಿ-591117
ಸವದತ್ತಿ ತಾಲೂಕು ಬೆಳಗಾವಿ ಜಿಲ್ಲೆ
ಚಿಗುರು ಯುಗಾದಿ
ಮತ್ತೆ ಬಂದಿತು ವರ್ಷಧಾರೆಯ
ಸುರಿಸಲೋಸುಗ ವಸಂತ
ಸುತ್ತ ಹಸಿರಿನ ಸಿರಿಯ ಸೊಬಗನು
ಭರಿಸೆ ಕಾಯ್ದಿದೆ ದಿಗಂತ//ಪ
ಯುಗವ ಕಳೆಯುತ ಸೊಗಸು ತುಂಬುತ
ಜಗಕೆ ಹೊಸತನು ತೋರಲು
ಚಿಗುರು ಮರದಲಿ ಖಗವು ಕೋಗಿಲೆ
ಯುಗಳ ಗೀತೆಯ ಹಾಡಲು//೧
ಚಿಗುರು ಬೇವೊಳು ಸುಗುಣ ಬೇಡುತ
ಬೆರೆಸಿ ಬೆಲ್ಲದ ಸಿಹಿಯನು/
ನಗುವ ಮಗುವಿನ ಮನದಿ ತುಂಬುತ
ಕರುಣ ಮಾನವ ಗುಣವನು//೨
ಎಳೆಯ ಮಕ್ಕಳು ಕೊಳೆಯ ತೊಳೆಯುತ
ಬಿಳಿಯ ವಸ್ತ್ರವ ಧರಿಸಿರೆ
ತಳಿರು ತೋರಣ ಸುಳಿದು ಸುಮಘಮ
ಮಳೆಯರಾಜನ ಕರೆದಿರೆ//೩
ಜೋಡಿ ವೃಷಭವ ಸಿಂಗರಿಸುತಲಿ
ಹೂಡಿ ಹೊಲದೊಳು ರೈತನು
ಮೋಡ ಮುಸುಕಿದ ಮೊದಲ ಮಳೆಯನು
ಬೇಡಿ ದೇವನ ವರವನು//೪
ಸುಳಿದು ಸೂಸುವ ಚೈತ್ರ ಮಾಸವು
ಹಳೆಯ ಫಾಲ್ಗುಣ ಮರೆಸುತ
ಪುಳಕಗೊಳಿಪುವ ಹೊಸತು ಚೇತನ
ಬೆಳೆವ ಭರವಸೆ ತುಂಬುತ//೫
ಶ್ರೀಮತಿ ಬಸಮ್ಮ ಏಗನಗೌಡ್ರ ಶಿಕ್ಷಕಿ. ಸ. ಹಿ. ಪ್ರಾಥಮಿಕ. ಶಾಲೆ. ಚವಢಾಳ. ತಾಲೂಕು ಸವಣೂರು ಜಿಲ್ಲಾ ಹಾವೇರಿ