Homeಲೇಖನರಾಖಿ ಹಬ್ಬದ ಒಳ ಮನಸ್ಸುಗಳ ಅನಾವರಣ

ರಾಖಿ ಹಬ್ಬದ ಒಳ ಮನಸ್ಸುಗಳ ಅನಾವರಣ

ಸಹೋದರ ಸಹೋದರಿಯರ ಹಬ್ಬ ಇದು ಸಂತೋಷದ ಹಬ್ಬ.ಸಹೋದರಿಗೆ ಎಲ್ಲಿಲ್ಲದ ಖುಷಿ. ಅಣ್ಣ ತಮ್ಮ ಬರುವರೆಂದು ಬಾಗಿಲಿಗೆ ಕಾಯುತ್ತಾಳೆ ಅಥವಾ ಆಹ್ವಾನ ನೀಡಿದರೆ ಸ್ವಾಗತ ಕೋರಿದರೆ ತವರು ಮನೆಗೆ ಓಡಿ ಹೋಗಿ ರಾಖಿ ಯನ್ನು ಕಟ್ಟಿ ಬರುತ್ತಾಳೆ.

ಸಹೋದರ ಸಹೋದರಿಯರ ಮಧ್ಯೆ ಇರುವ ಅನ್ಯೋನ್ಯವಾದ ಪ್ರೀತಿಯ ಸಂಬಂಧ.
ಅದಮ್ಯವಾದ ಪ್ರೀತಿ.
ವಿಶಾಲ ಹೃದಯದ ಅಣ್ಣ ತಮ್ಮಂದಿರು

ಇವರಿಗೆ ಎಷ್ಟೇ ವಯಸ್ಸಾಗಿರಲಿ ಸಹೋದರಿಯರ ಬಗ್ಗೆ ಒಲವು ಭ್ರಾತೃತ್ವ ಭಾವನೆ ಅಳಿಸುವುದಿಲ್ಲ. ಇವರನ್ನು ಅಗಲಿಸಬೇಕೆಂದು ಕುತಂತ್ರಗಳು ಸಂಚುಗಳು ಬೇಕಾದಷ್ಟು ನಡೆಯಲಿ ಆದರೆ ಇವರು ಮರೆಯುವುದಿಲ್ಲ. ಮುದ್ದಾಂ ಹೋಗಿ ರಾಖಿಯನ್ನು ಕಟ್ಟಿಸಿಕೊಂಡು ಬರುವ ಗಂಡಸರು ಎಂಟೆದೆಯ ಭoಟರು!

ಯಾರೇ ಆಗಲಿ ಅಡೆತಡೆ ಉಂಟು ಮಾಡಿದರೆ ಇವರು ಸಹಿಸುವದಿಲ್ಲ. ತಮ್ಮ ಒಡಹುಟ್ಟಿದ ಸಹೋದರಿಯರಾಗಲಿ ಅಥವಾ ಓಣಿಯಲ್ಲಿರುವ, ರಕ್ತ ಸಂಬಂಧಿಗಳಿಲ್ಲದ, ಅಕ್ಕತಂಗಿಯರಾಗಿರಲಿ ಕೈ ತುಂಬಾ ಕಟ್ಟಿಸಿಕೊಂಡು ಬರುತ್ತಾರೆ. ಇವರಿಗೊಂದು ನನ್ನ ದೊಡ್ಡ ಸಲಾಂ ಸೆಲ್ಯೂಟ್.

ವಿಭಿನ್ನ ಗುಣದವರು                                     

ಜಿಪುಣರು ನೂಲಿನ ಎಳೆಯಲ್ಲಿ ನಂಬಿಕೆ ಇಲ್ಲದವರು ವಿಶ್ವಾಸ ಇಲ್ಲದವರು, ಮನೆ ಬಿಟ್ಟು ಹೊರಗಡೆ ಬಾರದವರುಇವರು ರಾಖಿಯನ್ನು ಕಟ್ಟಿಸಿಕೊಳ್ಳಲು ಇಷ್ಟಪಡುವುದಿಲ್ಲ. ಸಹೋದರಿಯರು ಯಾರೇ ಆಗಿರಲಿ ಒಡಹುಟ್ಟಿದವರ ಆಗಿರಲಿ ಸಂಬಂಧಿಗಳೇ ಇಲ್ಲದವರಾಗಿರಲಿ ನಮ್ಮ ಮನೆಯಲ್ಲಿ ರಾಖಿಯನ್ನು ಕಟ್ಟಿಸಿಕೊಳ್ಳುವ ಪದ್ಧತಿ ಸಂಪ್ರದಾಯ ಇಲ್ಲವೆಂದು ಸಾರಾಸಗಟವಾಗಿ ಹೇಳಿಬಿಡುತ್ತಾರೆ.

ಇದೊಂದು ಜಿಪುಣತನದ ಗುಣವಾಗಿರಬಹುದು ಅಥವಾ ಆರ್ಥಿಕವಾಗಿ ತೊಂದರೆಯಲ್ಲಿರಬಹುದು, ಕಿತ್ತು ತಿನ್ನುವ ಬಡತನವಾಗಿರಬಹುದು, ಸಂಕುಚಿತ ಮನೋಭಾವನೆಯವರು ಆಗಿರಬಹುದು. ಒಟ್ಟಿನಲ್ಲಿ ಇವರಿಗೆ ರಾಖಿ ಬೇಡ ವಾಗಿರುತ್ತದೆ.

ಒಂದು ಸತ್ಯ ಘಟನೆಯ ಸುತ್ತ
ನಾನು ಕಣ್ಣಾರೆ ಕಂಡ ವಿಷಯವಿದು.
ಒಬ್ಬಳು ಸಹೋದರಿ ಸರಕಾರಿ ಹುದ್ದೆಯಲ್ಲಿರುವವಳು
ಅಣ್ಣನಿಗೆ ರಾಖಿ ಕಟ್ಟಲೆಂದೇ ಸ್ವಾಗತ ಇಲ್ಲದಿದ್ದರೂ ಸಹ ಅಣ್ಣನ ಮನೆಗೆ ಬರುತ್ತಾಳೆ. ಅಣ್ಣನ ಹೆಂಡತಿ ದುರ್ಗುಣದವಳು ರಾಖಿ ಕಟ್ಟುವಾಗ ಆರತಿಯಲ್ಲಿ ದುಡ್ಡು ಹೆಚ್ಚಿಗೆ ಕೊಡುತ್ತಾನೆ. ತನ್ನ ಗಂಡ ಎಂದು ಭಾವಿಸಿ,
ಗಂಡನನ್ನು ಎಚ್ಚರಿಸಿ ಮಧ್ಯರಾತ್ರಿಯಲ್ಲಿ ಊರಿಗೆ ಕಳಿಸಿ ಕೊಡುತ್ತಾಳೆ.

ಅಣ್ಣ ಎಲ್ಲಿ ಹೋದ ಎಂದು ಕೇಳಿದಾಗ ಅರ್ಜೆಂಟಾಗಿ ಆಫೀಸಿನಿಂದ ಫೋನ್ ಬಂದಿತ್ತು ಅವರು ಡ್ಯೂಟಿಗೆ ಹೋದರು ಎಂದು ಸುಳ್ಳು ಹೇಳುತ್ತಾಳೆ. ಅಂದು ರಜೆ ಮತ್ತು ರವಿವಾರ. ಆ ಸಹೋದರಿಗೆ ಅತ್ತಿಗೆಯ ಕುತಂತ್ರ ಅರಿಯಲು ಬಹಳ ಸಮಯ ಹಿಡಿಯಲಿಲ್ಲ ಅರ್ಥ ಮಾಡಿಕೊಂಡಿದ್ದಳು.

ತಂಗಿ ಮರುದಿನ ರಾಖಿ ಕಟ್ಟದೆ ಕಣ್ಣೀರು ಹಾಕಿ ಊರಿಗೆ ಹೋಗುತ್ತಾಳೆ. ವೈನಿ ನನಗೆ ರೊಕ್ಕ ಬೇಕಾಗಿಲ್ಲ ನನಗೆ ಸಾಕಷ್ಟು ದುಡ್ಡು ಇದೆ, ಅಣ್ಣನ ಪ್ರೀತಿ ಒಂದೇ ಸಾಕಾಗಿತ್ತು ಎಂದು ಹೇಳಿ ಕಣ್ಣೀರು ಹಾಕಿ ಹೋದಳು.
ಈ ಅತ್ತಿಗೆಗೆ ಅಣ್ಣ ತಂಗಿಯ ಪ್ರೀತಿ ನೋಡಿ ಅಸೂಯೆಪಟ್ಟಿದ್ದಳು. ಒಂದೇ ಕಲ್ಲೇಟಿನಲ್ಲಿ ಎರಡನ್ನು ಸಾಧಿಸಿಕೊಂಡಿದ್ದಳು.

ಕಣ್ಣೀರು ಹಾಕಿದ ಸಹೋದರಿ ನನ್ನ ಮುಂದೆ ಹೇಳಿ ಹೋದಳು. ಈ ದುರ್ಬುದ್ಧಿ ಹೆಂಗಸು, ಆಸು ಪಾಸು ಇಡೀ ಓಣಿಯ ಹೆಂಗಸರಿಗೆ ತನ್ನ ಬುದ್ಧಿ ಕಲಿಸಿ ಬುದ್ದಿಕೆಡಿಸಿದ್ದಳು.ನನಗೂ ಸಹ ಇದೇ ಬುದ್ಧಿಯನ್ನು ಕಲಿಸಲು ಬಂದಳು. ಇವಳ ದುರ್ಬುದ್ಧಿ ನನಗೆ ಮೊದಲೇ ಗೊತ್ತಿತ್ತು. ನಾನು ನಿರ್ಲಕ್ಷ್ಯ ಮಾಡಿದೆ.

ಒಂದು ಕೆಟ್ಟ ಹುಳ ಓಣಿಯಲ್ಲಿದ್ದರೆ ಇಡೀ ಓಣಿಯನೇ ಕೆಡಿಸುತ್ತದೆ ಎಂಬುದಕ್ಕೆ ಇದೇ ಸಾಕ್ಷಿ. ಒಬ್ಬ ಗಂಡಸು ಹೆಂಡತಿಯ ಕೈಚೀಲವಾಗಿದ್ದರೆ, ಹಿತ್ತಾಳೆ ಕಿವಿ ಆದರೆ ಸಮಾಜದಲ್ಲಿ ಸಾಮರಸ್ಯ ಹದಗೆಡುತ್ತದೆ.

ಹಿಂದೂ ಬಿಲ್ ಕೋಡ್

ಈ ಕಾಯ್ದೆ ಕಾನೂನು ಬಂದ ನಂತರ, ಒಂದು ರೀತಿಯಲ್ಲಿ ಹೆಣ್ಣು ಮಕ್ಕಳಿಗೆ ಸಹಕಾರಿ ಆದರೆ ಇನ್ನೊಂದು ರೀತಿಯಲ್ಲಿ ಸಂಬಂಧ ಪ್ರೀತಿಯ ಬಾಂಧವ್ಯ ಹಳಸಿ ಹೋಗಿದೆ.
ಸಮಾಜದಲ್ಲಿ ಎಲ್ಲರಲ್ಲೂ ವಿಶಾಲ ಮನೋಭಾವನೆ ಇರುವುದಿಲ್ಲ ಹೃದಯ ವೈಶಾಲ್ಯತೆ ಇರುವುದಿಲ್ಲ.ಸ್ವಾರ್ಥ ಹೊಟ್ಟೆಕಿಚ್ಚು ಜಿಪುಣತನ ಗರ್ವ ಅಹಂಕಾರ ಎಲ್ಲಿಯವರೆಗೆ ಇರುತ್ತದೆ ಅಲ್ಲಿಯವರೆಗೆ ಸಹೋದರರ ಬಾಂಧವ್ಯ ಹದಗಡುತ್ತಲೇ ಇರುತ್ತದೆ.

ವಿಭಿನ್ನ ಸಹೋದರಿಯರು
ಕೆಲವು ಸಹೋದರಿಯರು ದುಡ್ಡಿಗೆ ಬೇಡಿಕೆ ಇಡುತ್ತಾರೆ. ಬಂಗಾರ ಬೆಳ್ಳಿ ಆಸ್ತಿಯನ್ನು ಕೊಟ್ಟರೆ ಮಾತ್ರ ನಿನಗೆ ನಾನು ರಾಖಿಯನ್ನು ಕಟ್ಟುತ್ತೇನೆ ಎಂದು ಮೊದಲೇ ಹೇಳುತ್ತಾರೆ.ಹೀಗೆ ಹೇಳಿದಾಗ, ಸಹೋದರರು ಬರಲಿಕ್ಕೆ ಹೋಗಬೇಡ ಎಂದು ಸಹೋದರರು ಖಡಾಖoಡಿತವಾಗಿ ನಿರಾಕರಿಸಿ ಬಿಡುತ್ತಾರೆ.

ಬೀಗರು
ಕೆಲವೊಂದು ಮನೆಗಳಲ್ಲಿ ಹೆಣ್ಣು ಮಕ್ಕಳಿಗೆ ನಿನ್ನ ತವರು ಮನೆಯವರು ಆಸ್ತಿ ಬಂಗಾರ ಬೆಳ್ಳಿ ಕೊಟ್ಟರೆ ಮಾತ್ರ ರಾಖಿಯನ್ನು ಕಟ್ಟಲು ಹೋಗು ಇಲ್ಲದಿದ್ದರೆ ರಾಖಿಯನ್ನು ಕಟ್ಟಲು ಹೋಗಬೇಡ ಎಂದು ಅವರು ಸಹ ತಡೆಗಟ್ಟುವವರು, ಇದ್ದಾರೆ. ಸಮಾಜದಲ್ಲಿ ವಿಭಿನ್ನ ವಿಭಿನ್ನ ಗುಣದ ಸ್ವಾರ್ಥಿಗಳು ತುಂಬಿ ತುಳುಕುತ್ತಿದ್ದಾರೆ.

ಎಲ್ಲಿಯ ಅಣ್ಣ ಎಲ್ಲಿ ತಂಗಿ, ಎಲ್ಲಾ ಹತ್ತಿ ಕಟಗಿ ಸುಮ್ಮ್ ಮನ್ಯಾಗ ಬಿದ್ದಿರು ಅನ್ನುವ ಗಂಡ
ಕೆಲವರು ಅದೇ ನೂರು ರೂಪಾಯಿ ಇದ್ರ ಸಂಜಿಕ್ ಸೆರೆ ಬಾಟ್ಲಿ ಬರ್ತದ ಎಲ್ಲಿ ಅಕ್ಕ ತಂಗಿಯರು ಅನ್ನುವ ಕುಡುಕರು ಇದ್ದಾರೆ.ಇನ್ನು ಕೆಲವು ಸಹೋದರಿಯರು ಆ ಕುಡುಕಗ ಎಲ್ಲಿ ರಾಖಿ ಕಟ್ಟಾಕ್ ಹೋಗ್ಲಿ ನೂರು ರೂಪಾಯಿ ಖರ್ಚು ಮಾಡಿಕೊಂಡು ಅಂತ ಅನ್ನುವ ಸಹೋದರಿಯರು ಇದ್ದಾರೆ.ಕೆಲವು ಸಹೋದರಿಯರಿಗೆ ಯಾಕಾದ್ರೂ ಈ ಹಬ್ಬ ಬಂತು ಅನ್ನುವ ಮಟ್ಟಿಗೆ ಈ ಹಬ್ಬ ಮನಸ್ಸಿಗೆ ಕಿರಿಕಿರಿ ಮಾಡುತ್ತದೆ.ಕೆಲವು ಸಹೋದರಿಯರಿಗೆ ಸಹೋದರರೇ ಇರುವುದಿಲ್ಲ. ಅವರು ಓಣಿಯ ಸಹೋದರರಿಗೆ ರಾಕಿಯನ್ನು ಕಟ್ಟಿ ಸಂತೋಷ ಪಡುತ್ತಾರೆ. ಹಲ್ಲು ಇರುವವರಿಗೆ ಕಡಲೆ ಇಲ್ಲ ಕಡಲೆ ಇರೋರಿಗೆ ಹಲ್ಲು ಇಲ್ಲ ಎಂಬಂತಾಗಿದೆ ಈ ಹಬ್ಬ.ಸಂಬಂಧಗಳು ದೂರ ಆಗುತ್ತಲೇ ಇವೆ. ನಮ್ಮ ಕಾಲದಲ್ಲಿ ಅಂಚೆ ಮುಖಾಂತರ ರಾಖಿಯನ್ನು ಕಳಿಸುವ ಹಬ್ಬ ಬಲು ಜೋರಾಗಿತ್ತು. ಅದೊಂದು ನೆನಪಾಗಿ ಉಳಿದಿದೆ.ಇದೇ ರಾಖಿ ಹಬ್ಬದ ಒಳ ಮನಸುಗಳ ಅನಾವರಣ.

ನೂಲ ಹುಣ್ಣಿಮೆ ಮಹತ್ವ
ಇತಿಹಾಸದಲ್ಲಿ ನೂಲಿನ ಹುಣ್ಣಿಮೆ ಏಕೆ ಮಾಡಿದ್ದಾರೆ.
ಸಹೋದರತ್ವ ಭಾಂಧವ್ಯ ಸ್ಥಿರವಾಗಿರಲಿ ಎಂದು ನೂಲಿನ ಹುಣ್ಣಿಮೆಯನ್ನು ಮಾಡಿದ್ದಾರೆ ಸಹೋದರರಿಗೆ ರಕ್ಷಣೆ ಇರಬೇಕು ಸಹೋದರಿಯರಿಗೂ ರಕ್ಷಣೆ ಇರಬೇಕು ಎಂಬುದೇ ಇದರ ಉದ್ದೇಶವಾಗಿರುತ್ತದೆ. ಸಹೋದರಿಯರಾಗಲಿ ಸಹೋದರರಾಗಲಿ ದುಡ್ಡಿನಲ್ಲಿ ಸಂಬಂಧವನ್ನು ಅಳೆಯಬಾರದು.
ಇಲ್ಲಿ ದುಡ್ಡು ಮುಖ್ಯ ಅಲ್ಲ ಒಗ್ಗಟ್ಟು ಮುಖ್ಯವಾಗಿರುತ್ತದೆ. ಸುಖ ದುಃಖದಲ್ಲಿ ಸಮಭಾಗಿಗಳಾಗಬೇಕು.
ಎಂಬುದು ಈ ನೂಲ ಹುಣ್ಣಿಮೆಯ ಉದ್ದೇಶವಾಗಿರುತ್ತದೆ.
ಎಲ್ಲ ಸಹೋದರ ಸಹೋದರಿಯರಿಗೂ ನೂಲ ಹುಣ್ಣಿಮೆಯ ಶುಭಾಶಯಗಳು.

ಶ್ರೀಮತಿ ಪಾರ್ವತಿ ದೇವಿ ಎಂ ತುಪ್ಪದ ಬೆಳಗಾವಿ

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group