Homeಸಿನಿಮಾ"ರಾಜಿ" ಚಲನಚಿತ್ರ ಸಂಗೀತ ನಿರ್ದೇಶಕ ಉಪಾಸನಾ ಮೋಹನ್

“ರಾಜಿ” ಚಲನಚಿತ್ರ ಸಂಗೀತ ನಿರ್ದೇಶಕ ಉಪಾಸನಾ ಮೋಹನ್

ಗಾನಕೆ ನಲಿಯದ ಮನಸೇ ಇಲ್ಲ
ಗಾನಕೆ ಮಣಿಯದ ಜೀವವೇ ಇಲ್ಲ
ಗಾನಕೆ ಒಲಿಯದ ದೇವರೇ ಇಲ್ಲ,
ಗಾನವೇ ತುಂಬಿದೆ ಈ ಜಗವೆಲ್ಲ,

ಭಾವವೆಂಬ ಹೂವು ಅರಳಿ ಗಾನವೆಂಬ ಗಂಧ ಚೆಲ್ಲಿ ಉಪಾಸನೆ ಚಲನಚಿತ್ರದ ಈ ಗೀತೆ ಕಾವ್ಯಶಕ್ತಿಯ ಮಹತ್ವ ಅದರ ಸ್ವರಸಂಯೋಜನೆಗಿರುವ ಮಹತ್ವವನ್ನು ಸೊಗಸಾಗಿ ಹೇಳಿದೆ.ಒಬ್ಬ ಕವಿ ಒಂದು ಕವನ ರಚನೆ ಮಾಡಿದರೆ ಅದರ ಭಾವವನ್ನು ಅರಿತ ಗಾಯಕ ಅದಕ್ಕೊಂದು ರಾಗ ಹುಡುಕುತ್ತಾನೆ. ಅದಕ್ಕೆ ಸ್ವರಸಂಯೋಜಿಸಿ ಇಂಪಾದ ಸಂಗೀತವನ್ನು ಸಂಗೀತ ನಿರ್ದೇಶಕ ನೀಡುತ್ತಾನೆ. ಈ ಮೂವರ ಸಂಗಮದಿಂದ ರೂಪಗೊಂಡ ಆ ಕವಿತೆ ತನ್ನ ಸಾಹಿತ್ಯ, ಗಾಯಕರ ಮಾಧುರ್ಯ,ಸಂಗೀತ ಸಂಯೋಜಕರ ಸ್ವರ ಸಂಯೋಜನೆ ಮೂಲಕ ಕೇಳುಗರ ಮನಸಲ್ಲಿ ಸದಾ ಉಳಿಯುತ್ತದೆ. ಒಂದು ತಂಡ ಈ ರೀತಿ ಒಂದು ಲಹರಿಗೆ ಬಂದಾಗ ಒಂದು ಅದ್ಬುತ ಹಾಡು ಹುಟ್ಟುತ್ತದೆ. ಗಾಯಕರಾಗಿ,ಸಾಹಿತ್ಯ ರಚನೆಕಾರರಾಗಿ ಸಂಗೀತ ಸಂಯೋಜಕರಾಗಿ ಅರಳಿದ ಪ್ರತಿಭೆ ಉಪಾಸನಾ ಮೋಹನ್ ಸಂಗೀತ ಸಂಯೋಜನೆಯ “ರಾಜಿ” ಚಲನಚಿತ್ರ ಗೀತೆಗಳು ಯ್ಯೂಟೂಬ್‌ನಲ್ಲಿ ಬಿಡುಗಡೆಗೊಂಡಿವೆ. ರಾಘವೇಂದ್ರ ರಾಜಕುಮಾರ ನಟಿಸಿರುವ ಈ ಚಿತ್ರದ ಸಂಗೀತ ಉಪಾಸನಾ ಮೋಹನ್.

ಉಪಾಸನಾ ಮೋಹನ್ ಇಂದು ಸುಗಮ ಸಂಗೀತ ಕ್ಷೇತ್ರದಲ್ಲಿ ಪ್ರಮುಖವಾಗಿ ಕೇಳಿ ಬರುತ್ತಿರುವ ಹೆಸರು. ಭಾವಗೀತೆ ಕ್ಷೇತ್ರಕ್ಕೆ ತಮ್ಮದೇ ಸಂಗೀತ ಮತ್ತು ಗಾಯನದ ಮೂಲಕ ಕೊಡುಗೆಯನ್ನು ನೀಡುತ್ತ ಬಂದಿರುವ ಮತ್ತು ಬರುತ್ತಿರುವ ಕವಿಪುಂಗವರ ಗೀತೆಗಳನ್ನು ಮನೆಮನೆಗೆ ತಲುಪಿಸುತ್ತಿರುವ ಉಪಾಸನಾ ಸಂಸ್ಥೆಯ ಮೋಹನ್. ಇವರನ್ನು ಉಪಾಸನಾ ಮೋಹನ್ ಎಂದೇ ಗುರುತಿಸುತ್ತಾರೆ ಹನ್ನೆರಡು ವರ್ಷಗಳ ಹಿಂದಿನ ನೆನಪು.ನಾನು ನನ್ನ ಸ್ನೇಹಿತ ಅಶೋಕ ಚಿಕ್ಕಪರಪ್ಪಾ ಅವರ ಬೆಂಗಳೂರಿನ ಮನೆಗೆ ರಜೆ ಕಳೆಯಲೆಂದು ಹೋಗಿದ್ದೆ. ಅವರು ಗೃಹಶೋಭಾ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿರುವರು.ಆ ದಿನ ಮನೆಯಂಗಳಲ್ಲಿ ಭಾವಗೀತೆ ಸಂಜೆ ಎಂಬ ಕಾರ್ಯಕ್ರಮವಿತ್ತು.ಅದರ ಆಮಂತ್ರಣ ತೋರಿಸಿದ ಅಶೋಕ್ ಆ ಸಂಜೆ ಬೆಂಗಳೂರಿನ ಆ ಮನೆಗೆ ನನ್ನನ್ನು ಕರೆದೊಯ್ದರು.

ಅಲ್ಲಿ ಖ್ಯಾತ ಗಾಯಕಿ ಕಸ್ತೂರಿ ಶಂಕರ್ ಗೀತೆಯನ್ನು ಕೇಳಿದೆ.ಅಲ್ಲಿ ಯುವ ಗಾಯಕ ಗಾಯಕಿಯರು ಕವಿಗಳ ಭಾವಗೀತೆಗಳನ್ನು ಹಾಡುತ್ತಿದ್ದರು.ಅವುಗಳ ಸಂಗೀತ ಸಂಯೋಜನೆ ಉಪಾಸನಾ ಮೋಹನ್ ತಂಡ ನಿರ್ವಹಿಸುತ್ತಿತ್ತು. ಹೀಗೆ ಮನೆಯಂಗಳದಲ್ಲಿ ಕವಿಪುಂಗವರ ಗೀತೆಗಳನ್ನು ಆಯೋಜಿಸುತ್ತಿದ್ದ ಉಪಾಸನಾ ಮೋಹನ್‌ರ ಆ ಪ್ರಯತ್ನ ಮನಸೆಳೆಯಿತು. ಕಾರ್ಯಕ್ರಮ ಮುಗಿದ ಮೇಲೆ ಅವರನ್ನು ಮಾತನಾಡಿಸಿದೆ. ಅವರು ಆ ದಿನ ಹಾಡಿದ ಬೇಂದ್ರೆಯವರ ಇಳಿದು ಬಾ ತಾಯೆ ಇಳಿದು ಬಾ” ಮತ್ತು ಬಿ.ಆರ್.ಲಕ್ಷ್ಮಣರಾವ್ ಅವರ ಬಿಡಲಾರೆ ನಾ ಸಿಗರೇಟು ಹುಡುಗಿ,ನಿನ್ನಂತೆಯೇ ಅದು ಥೇಟು ಈ ಎರಡು ಗೀತೆಗಳು ಮನಸ್ಸಿನ ಮೇಲೆ ಪ್ರಭಾವ ಬೀರಿದ್ದವು. ರಾತ್ರಿ ಕಾರ್ಯಕ್ರಮ ಮುಗಿಸಿ ಸ್ನೇಹಿತ ಅಶೋಕರೊಂದಿಗೆ ಅವರ ಮನೆಗೆ ವಾಸ್ತವ್ಯಕ್ಕೆ ಬಂದಾಗ ಮೋಹನ್ ಬಗ್ಗೆ ಅಶೋಕರು ಹೇಳಿದರು.

ಮರುದಿನ ಅವರಿಗೆ ಪೋನ್ ಮಾಡಿ ಅವರಿರುವ ಉಪಾಸನಾ ಸಂಸ್ಥೆಗೆ ಭೇಟಿ ನೀಡಿದೆ. ಅವರೊಂದಿಗೆ ಉಪಾಸನಾ ಸಂಸ್ಥೆ ಬೆಳೆದು ಬಂದ ಬಗೆಯನ್ನು ತಿಳಿದುಕೊಂಡು ಊರಿಗೆ ಹಿಂದಿರುಗುವಾಗ ಅವರು ತಾವು ಸಂಗೀತ ಸಂಯೋಜಿಸಿದ ಹಲವು ಭಾವಗೀತೆಗಳ ಕ್ಯಾಸೆಟ್ ನನಗೆ ನೀಡಿದರು. ನಂತರ ಅವರ ಕುರಿತು ಕಿರು ಬರಹವನ್ನು ರೂಪಿಸಿದೆ. ಅದು ಪತ್ರಿಕೆಯಲ್ಲಿ ಪ್ರಕಟವಾಯಿತು.

ಹೀಗೆ ಅವರೊಂದಿಗಿನ ನಂಟು ಇಂದಿನವರೆಗೂ ಮೂಡಿ ಬಂದಿದೆ. ರವಿವಾರ ವ್ಯಾಟ್ಸಪ್‌ನಲ್ಲಿ ಅವರು ಸಂಗೀತ ಸಂಯೋಜಿಸಿದ ರಾಜಿ ಚಲನಚಿತ್ರ ಗೀತೆಯ ತುಣುಕೊಂದನ್ನು ಹಾಕಿದ್ದರು.ಬಹಳ ಇಷ್ಟವಾಯಿತು ಈ ಸಂಗೀತ ಪ್ರೇಮಿಯ ಕುರಿತು ನನ್ನ ಹಳೆಯ ನೆನಪುಗಳೊಂದಿಗೆ ಅವರು ಬೆಳೆದು ಬಂದ ದಾರಿಯನ್ನು ನಿಮ್ಮ ಮುಂದೆ ಇಟ್ಟಿರುವೆ.

ಆರಂಭದ ದಿನಗಳು:

ಮೋಹನ್ ಒಬ್ಬ ಅಪ್ರತಿಮ ಕಲಾವಿದರು. ಮಂಡ್ಯ ಜಿಲ್ಲೆಯ ಮೋಹನ್ ಜನಿಸಿದ್ದು ಮೈಸೂರಿನಲ್ಲಿ ೧೯೬೭ ಜನೇವರಿ ೨೮ ರಂದು ತಂದೆ ಎಂ.ಜಿ.ಜಯರಾಂ. ತಾಯಿ ವಿ.ಎಸ್.ಭಾಗ್ಯಲಕ್ಷ್ಮೀ. ದಂಪತಿಗಳ ಮೂರನೆಯ ಮಗ. ಮಂಡ್ಯದಲ್ಲಿ ಶಿಕ್ಷಣ ಮುಗಿಸಿ ಅಲ್ಲಿಯೇ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಮಡ್ಯದ ವಿದ್ವಾನ್ ತಾಂಡವಮೂರ್ತಿ ಹಾಗೂ ಶ್ರೀವತ್ಸರಲ್ಲಿ ಕಲಿತರು. ನಾದ ವಿನೋದಿನಿ ಕಲಾ ಸಂಸ್ಥೆಯಲ್ಲಿ ಹಾಡುವ ಅವಕಾಶ ದೊರೆಯಿತು. ಕೇವಲ ಸಂಗೀತದಿಂದ ಜೀವನ ನಡೆಸುವುದು ಸಾಧ್ಯವಿಲ್ಲ ಉಪಜೀವನಕ್ಕೆ ಏನಾದರೂ ಕೆಲಸ ಮಾಡಬೇಕು ಎಂದುಕೊಂಡು ಬೆಂಗಳೂರಿಗೆ ಆಗಮಿಸಿದರು. ಗೆಳೆಯರ ಸಹಕಾರದಿಂದ ಬೆಂಗಳೂರಿನ ಗಾಂಧಿ ಬಜಾರ ದಲ್ಲಿ ರೇಡಿಯೋ ಟೇಪ ರಕಾರ್ಡರ ರಿಪೇರಿ ಅಂಗಡಿಯೊಂದನ್ನು ತೆರೆದರು.

ಗಾಂಧಿಬಜಾರ ಆಗಿನ ಕಾಲದಲ್ಲಿ ಕವಿಗಳಿಗೆ ಸ್ಪೂರ್ತಿಯ ನೆಲೆವೀಡಾಗಿತ್ತು. ಕವಿ ಕವನಗಳನ್ನು ಗುನುಗುತ್ತಲೇ ಸುಗಮ ಸಂಗೀತದ ಕಲಿಕೆಗೆ ಸೇರ್ಪಟೆಯಾದರು. ನಂತರದ ದಿನಗಳಲ್ಲಿ ಪಿಲಿಪ್ಸ ಕಂಪನಿಯ ಉದ್ಯೋಗಿಯಾದರು. ಅದೇ ವೇಳೆ ಜಿ.ವಿ.ಅತ್ರಿಯವರು “ಸಂಗೀತಗಂಗಾ”ಎಂಬ ಸಂಸ್ಥೆಯೊಂದನ್ನು ತೆರೆದಿದ್ದರು. ಮೋಹನ್ ಅತ್ರಿಯವರಲ್ಲಿ ಶಿಷ್ಯವೃತ್ತಿ ಪ್ರಾರಂಭಿಸಿದರು. ಅತ್ರಿಯವರ ಬಳಿ ಸಂಗೀತದ ಎಲ್ಲಾ ಪ್ರಕಾರಗಳಲ್ಲಿಯೂ ಸೂಕ್ತ ಮಾರ್ಗದರ್ಶನ ಪಡೆಯುತ್ತ ಸಾಗಿದ ಮೋಹನ್ ಅದೇ ಸಂಸ್ಥೆಯಲ್ಲಿ ಪ್ರಾಧ್ಯಾಪಕ ಹಾಗೂ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದರು. ಅತ್ರಿಯವರ ಅವರ ನಂಟು ಗುರುಶಿಷ್ಯ ಬಾಂಧವ್ಯ ಇವರನ್ನು ಇಷ್ಟು ಎತ್ತರಕ್ಕೆ ಬೆಳೆಯಲು ಪ್ರೇರಕ ಶಕ್ತಿಯಾಯಿತು. ಈ ಸಂದರ್ಭದಲ್ಲಿ ಸಂಸ್ಥೆಗೆ ಬರುವ ಮಹನೀಯರ ಪರಿಚಯ ಇವರಿಗೆ ಸಂಗೀತ ಕ್ಷೇತ್ರದಲ್ಲಿ ಒಂದು ತಿರುವನ್ನು ನೀಡಿತು.

ಸಂಗೀತ ಕ್ಷೇತ್ರದಲ್ಲಿ ಏನಾದರೂ ಮಾಡಬೇಕೆಂದು ಕನಸು ಕಾಣುತ್ತಿದ್ದ ಇವರು “ಕಲಾಚಾವಡಿ”ಎಂಬ ಸಂಸ್ಥೆಯನ್ನು ಆರಂಭಿಸಿದರು. ಸುಗಮಸಂಗೀತ ಕಲಾವಿದರ ಕ್ಷೇಮಾಭಿವೃದ್ಧಿಗೆ ಸಹಾಯವಾಣಿಯಾಗುವಂತೆ ಈ ಸಂಸ್ಥೆಯನ್ನು ಬೆಳೆಸಿದರು. ಇದರ ಪ್ರಾರಂಭದಿಂದ ಅನೇಕ ಕಷ್ಟಕಾಲಗಳನ್ನು ಎದುರಿಸಿ ಮೋಹನ್ ಆ ಸಂಸ್ಥೆಯಿಂದ ಹಿಂದೆ ಸರಿದರು.ಕೊನೆಗೆ ಕೈಯಲ್ಲಿದ್ದ ಕೆಲಸವನ್ನು ತೊರೆದು ಗಟ್ಟಿ ಮನಸ್ಸು ಹಾಗೂ ದಿಟ್ಟ ನಿರ್ಧಾರದಿಂದ “ಉಪಾಸನಾ” ಸಂಸ್ಥೆ ಕಟ್ಟುವ ಕೈಂಕರ್ಯಕ್ಕೆ ಮುಂದಾದರು.

ಉಪಾಸನಾ:

ಉಪಾಸನಾ ಸಂಸ್ಥೆಗೆ ಜಾಗ ನೀಡಿದ್ದು ಹರಿಣಿ ಸತ್ಯಪ್ರಕಾಶ್. ಇದಕ್ಕೆ ಮಾರ್ಗದರ್ಶಕರೂ ಹಾಗೂ ಗೆಳೆಯರಾದ ಶಿವಮೊಗ್ಗ ಸುಬ್ಬಣ್ಣ,ರಾಜು ಅನಂತಸ್ವಾಮಿ,ಅಮೇರಿಕಾದ ಅಶ್ವತ್ಥ ನಾರಾಯಣ, ಪಲ್ಗುಣ, ಬಾಲಿ ಅಪ್ಪಗೆರೆ ತಿಮ್ಮರಾಜು ಅವರ ಜೊತೆಗೆ ಕನ್ನಡದ ಭಾವಕವಿ ಡಾ.ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರು ಸೇರಿದಂತೆ ಅನೇಕರು ಮೋಹನ್ ಅವರಿಗೆ ಬೆನ್ನೆಲುಬಾಗಿ ನಿಂತರು.ಇವರನ್ನು ಇಂದಿಗೂ ಕೃತಜ್ಞತೆಯಿಂದ ಮೋಹನ್ ನೆನೆಯುತ್ತಾರೆ.ಈಗ ಈ ಸಂಸ್ಥೆ ಬೆಳೆದು ಹೆಮ್ಮರವಾಗಿ ಜನಮಾನಸದಲ್ಲಿ ನೆಲೆಯೂರಿದೆ.

ಸಂಗೀತಗಂಗೆಯಲ್ಲಿ ತೇಲಿಹೋದ ಜಿ.ವಿ.ಅತ್ರಿಯವರನ್ನು ಸ್ಮರಿಸುತ್ತ ಭಾವುಕರಾದ ಮೋಹನ್ ಅವರ ಸವಿನೆನಪಿಗಾಗಿ “ಜಿ.ವಿ.ಅತ್ರಿ” ಪ್ರಶಸ್ತಿ ಹುಟ್ಟು ಹಾಕಿದರು. ಉಪಾಸನಾ ಸಂಸ್ಥೆಯ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಅನೇಕ ಯುವ ಕಲಾವಿದರಿಗೆ ನೀಡಿ ಪುರಸ್ಕರಿಸುತ್ತ ಬಂದಿರುವುದು ಅತ್ರಿಯವರ ಬಗೆಗಿನ ಅವರ ಗೌರವಕ್ಕೆ ಸಾಕ್ಷಿ.

ಕವಿಗೀತೆಗಳನ್ನು ಜನ ಸಾಮಾನ್ಯರ ಬಳಿಗೆ ಕೊಂಡೊಯ್ಯುವ ನಿಟ್ಟಿನಲ್ಲಿ “ಮನೆಯಂಗಳದಲ್ಲಿ ಕವಿತಾಗಾಯನ” ವೆಂಬ ವಿನೂತನ ಕಾರ್ಯಕ್ರಮ ರೂಪಿಸಿ ಈಗಾಗಲೇ ೧೪೮ ಕಂತುಗಳನ್ನು ಕಳೆದ ೧೫ ವರ್ಷಗಳಿಂದ ಬೆಂಗಳೂರಿನ ವಿವಿಧ ಬಡಾವಣೆಗಳಲ್ಲಿ ನಡೆಸಿ ಮನೆಮಾತಾಗಿದ್ದಾರೆ.

೪೫೦ ಕ್ಕೂ ಹೆಚ್ಚು ಭಾವಗೀತೆಗಳಿಗೆ ಸಂಗೀತದ ಸ್ಪರ್ಶವನ್ನು ನೀಡಿ ೪೯ ಭಾವಗೀತೆಗಳ ಸಿ.ಡಿ.ಹೊರತಂದಿರುವರು.ಇಂದಿನ ಪೀಳಿಗೆಯ ಸಂಗೀತ ಸಂಯೋಜಕರಲ್ಲಿ ಅತಿ ಹೆಚ್ಚು ಭಾವಗೀತೆಗಳನ್ನು ಸಂಯೋಜಿಸಿ ಹೊರತಂದು ಮುಂಚೂಣಿಯ ಸಂಯೋಜಕರಾಗಿ ಮೋಹನ್ ಹೆಸರಾಗಿರುವರು.ಇವರ ಮಾರ್ಗದರ್ಶನದಲ್ಲಿ ಬೆಳೆದ ಹಲವಾರು ಯುವಪ್ರತಿಭೆಗಳು ಇಂದು ಸುಗಮ ಸಂಗೀತ ಕ್ಷೇತ್ರದಲ್ಲಿ ನಾಡಿನಾದ್ಯಂತ ಗುರುತಿಸಿಕೊಂಡಿರುವರು.

ಸಿನಿಮಾ ಸಂಗೀತ ಕ್ಷೇತ್ರದತ್ತ:

ಇತ್ತೀಚಿಗೆ ಚಲನಚಿತ್ರ ಕ್ಷೇತ್ರದಲ್ಲೂ ತಮ್ಮ ಕೈಚಳಕ ಮೆರೆದಿದ್ದಾರೆ. ಕನ್ನಡ ಮೇರು ಕವಿ ಡಾ.ಎಚ್.ಎಸ್.ವೆಂಕಟೇಶಮೂರ್ತಿಯವರ ಕಥೆ ಸಂಭಾಷಣೆ ಹಾಡು ಮತ್ತು ಚೊಚ್ಚಲ ನಿರ್ದೇಶನದ “ಹಸಿರು ರಿಬ್ಬನ್” ಚಿತ್ರದ ೬ ಹಾಡುಗಳಿಗೆ ಉಪಾಸನಾ ಮೋಹನ್ ಸಂಗೀತ ನಿರ್ದೇಶನ ಮಾಡಿ ಒಂದು ಗೀತೆಯನ್ನು ತಾವೇ ಹಾಡಿದ್ದಾರೆ. ಈ ಚಿತ್ರದ ಸಕ್ಕರೆಯ ಪಾಕದಲಿ ಹಾಡಿನ ಸಾಹಿತ್ಯಕ್ಕಾಗಿ ೨೦೧೯ರ ಪಿಲ್ಮಫೇರ ಪ್ರಶಸ್ತಿ ಲಭಿಸಿದ್ದು ಹೆಮ್ಮೆಯ ಸಂಗತಿ.

ನಂತರ “ಅಮೃತವಾಹಿನಿ”ಎಂಬ ಚಿತ್ರಕ್ಕೆ ಸಂಗೀತ ನೀಡಿದರು,. ಅದರಲ್ಲಿ ನಾಲ್ಕು ಹಾಡುಗಳಿಗೆ ಸಂಗೀತ ನೀಡಿರುವರು. ಈ ಚಿತ್ರದ ಹಾಡುಗಳು ಕೂಡ ಇಂಪಾಗಿದ್ದು. ಅಮೃತ ವಾಹಿನಿಯೊಂದು ಎದೆಯ ಒಳಗೆ ಎಂಬ ಗೀತೆ ಗಮನ ಸೆಳೆದಿತ್ತು.

ಈಗ ರಾಜಿ ಚಲನಚಿತ್ರಕ್ಕೆ ಸಂಗೀತ ನೀಡಿದ್ದು ಬಿಡುಗಡೆಗೆ ಸಿದ್ದವಾಗಿದೆ. ಇದರ ಗೀತೆಗಳಲ್ಲಿ ಚಿಕ್ಕ ಚಿಕ್ಕ ನುಡಿಗಳನ್ನು ಹೊಂದಿದ ೮ ಗೀತೆಗಳಿದ್ದು ಒಂದು ಹಾಡು ಜೋಡಿ ಹಕ್ಕಿಯ ಎಂಬುದು ೪ ನಿಮಿಷ ೨೨ ಸೆಕೆಂಡುಗಳನ್ನು ಹೊಂದಿದೆ. ಉಪಾಸನಾ ಮೋಹನ್ ಅವರ ಸಂಗೀತ ಯಾನ ಚಲನಚಿತ್ರರಂಗದಲ್ಲೂ ಮುಂದುವರೆಯಿಲಿ.

ರಾಜಿ ಚಿತ್ರ ಕುರಿತು:

ಸತಿ-ಪತಿ ಬದುಕಿನ ಸರಸ-ವಿರಸ ಸಂತೋಷ, ವಿರಹ ವಿಷಾದ ವಿನೋದಗಳು ಜಗತ್ತನ್ನು ಅನಾವರಣಗೊಳಿಸಿದ ಒಂದು ಅಪರೂಪದ ಚಿತ್ರ. ಹಿರಿಯ ನಟ ರಾಘವೇಂದ್ರ ರಾಜಕುಮಾರ್ ಅಭಿನಯದಲ್ಲಿ ಪ್ರೀತಿ ಎಸ್ ಬಾಬು ಅವರು ರಾಘಣ್ಣ ಅವರಿಗೆ ಜೋಡಿಯಾಗಿ ಅಭಿನಯಿಸಿ ನಿರ್ದೇಶಿಸುತ್ತಿರುವ ‘ರಾಜಿ’ ಚಿತ್ರ ಸತಿಪತಿ ಸಂಬಂಧಗಳ ಭಾವ ಪ್ರಧಾನತೆಯನ್ನು ಪ್ರಧಾನವಾಗಿಟ್ಟುಕೊಂಡು ರೂಪಿಸಲಾಗಿದೆ. ಕನ್ನಡದಲ್ಲಿ ಮಹಿಳಾ ನಿರ್ದೇಶಕರೊಬ್ಬರು ಸಮರ್ಥವಾಗಿ ಬದುಕಿನ ಮತ್ತು ಸಂಬಂಧಗಳ ಅನಾವರಣಗೊಳಿಸಲು ಹೊರಟಿರುವ ಚಿತ್ರವೇ ‘ರಾಜಿ’.

ಕನ್ನಡಕ್ಕೆ ಮತ್ತೊಬ್ಬ ಮಹಿಳಾ ನಿರ್ದೇಶಕಿ ಪ್ರೀತಿ ಎಸ್ ಬಾಬು ಸೇರ್ಪಡೆ.

ಕನ್ನಡದಲ್ಲಿ ಬೆರಳೆಣಿಕೆಯಷ್ಟೇ ಮಹಿಳಾ ನಿರ್ದೇಶಕರಿದ್ದಾರೆ. ಸುಮನಾ ಕಿತ್ತೂರು, ರೂಪಾ ಅಯ್ಯರ್ ಅಂತಹ ಮಹಿಳಾ ನಿರ್ದೇಶಕರ ಸಾಲಿಗೆ ಈಗ ಪ್ರೀತಿ ಎಸ್ ಬಾಬು ಅವರು ಕೂಡ ಸೇರ್ಪಡೆಯಾಗುತ್ತಿದ್ದಾರೆ. ಮೂಲತಃ ಕಿರುತೆರೆ ಮತ್ತು ಬೆಳ್ಳಿತೆರೆಯಲ್ಲಿ ಮನೋಜ್ಞವಾದ ಅಭಿನಯದ ಮೂಲಕ ತಮ್ಮನ್ನು ತಾವು ಗುರುತಿಸಿಕೊಂಡಿರುವ ಪ್ರೀತಿ ಎಸ್ ಬಾಬು ಇದೆ ಮೊದಲ ಬಾರಿಗೆ ‘ರಾಜಿ’ ಚಿತ್ರದ ಮೂಲಕ ಸಿನಿಮಾವೊಂದಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಯಾವುದೇ ಹಂತದಲ್ಲೂ ಯಾವುದೇ ತರದ ರಾಜಿ ಇಲ್ಲದೆ ಚಿತ್ರವನ್ನು ಯಶಸ್ವಿಯಾಗಿ ಮತ್ತು ಸಮರ್ಥವಾಗಿ ಪ್ರಸ್ತುತಪಡಿಸುವ ವಿಶ್ವಾಸವನ್ನು ಅವರು ವ್ಯಕ್ತಪಡಿಸುತ್ತಾರೆ.. ಮಹಿಳಾ ನಿರ್ದೇಶಕಿ ಪ್ರೀತಿ ಎಸ್ ಬಾಬು. ಇನ್ನು ಈ ಚಿತ್ರದ ಬಗ್ಗೆ ನಿರ್ದೇಶಕಿ ಪ್ರೀತಿ ಎಸ್ ಬಾಬು ಅವರು ಹೇಳುವುದು ‘ಗಂಡ-ಹೆಂಡತಿ ನಡುವಿನ ಸುಂದರ ಒಪ್ಪಂದ ‘ರಾಜಿ’, ಜೀವನದಲ್ಲಿ ಏರಿಳಿತಗಳು ಸಹಜ. ಅದರಲ್ಲೂ ಗಂಡ ಹೆಂಡತಿ ಎಂದಾಗ ಅದು ಮತ್ತಷ್ಟು ಮತ್ತು ಜೀವನದ ಒಂದು ಭಾಗವೇ ಆಗಿರುತ್ತದೆ. ಗಂಡ- ಹೆಂಡತಿ ನಡುವಿನ ಒಂದು ಸುಂದರ ಪಯಣ ರಾಜಿ. ಆದರೆ ಇದರಲ್ಲೂ ಕೂಡ ಯಾರು ನಿರೀಕ್ಷಿಸದ ತಿರುವುಗಳಿವೆ. ಸಿನಿಮಾ ಭಾವನಾತ್ಮಕವಾಗಿ ಜನರನ್ನು ಸೆಳೆಯುತ್ತದೆ’ ಅಂತ ಆತ್ಮವಿಶ್ವಾಸದಿಂದ ಹೇಳುತ್ತಾರೆ, ಈ ಚಿತ್ರದ ನಿರ್ಮಾಪಕರಲ್ಲೂ ಒಬ್ಬರಾಗಿರುವ ನಿರ್ದೇಶಕಿ ಪ್ರೀತಿ ಎಸ್ ಬಾಬು. ಈ ಚಿತ್ರದಲ್ಲಿ ರಾಘವೇಂದ್ರರಾಜಕುಮಾರ್ ಅವರಿಗೆ ನಿರ್ದೇಶನ ಮಾಡುವುದರ ಜೊತೆಗೆ ಅವರ ಮಡದಿಯ ಪಾತ್ರದಲ್ಲಿ ಕೂಡ ನಿರ್ದೇಶಕಿ ಪ್ರೀತಿ ಎಸ್ ಬಾಬು ಅಭಿನಯಿಸಿರುವರು. ಇಂತಹ ಚಲನಚಿತ್ರ ದ ಸಂಗೀತ ಸಂಯೋಜನೆ ಉಪಾಸನಾ ಮೋಹನ್ ಮಾಡಿರುವುದು ಸಂತಸದ ಸಂಗತಿ.

ಕವಿಗೀತೆಗಳು ಚಲನಚಿತ್ರದಲ್ಲಿ ಇನ್ನೂ ಹೆಚ್ಚೆಚ್ಚು ಮೂಡಿ ಬರಲಿ ಎಂದು ಆಶಿಸುವೆ.ಇತ್ತೀಚಿಗೆ ನಾನು ನನ್ನ ಸಂಗೀತ ಪ್ರಿಯ ಸ್ನೇಹಿತರಿಗೆ ಇವರ ಸಂಯೋಜನೆಯ ಭಾವಗೀತೆಗಳನ್ನು ವ್ಯಾಟ್ಸಪ್ ಮೂಲಕ ಕಳಿಸುವುದನ್ನು ರೂಢಿಸಿರುವೆನು. ಅವರೂ ಕೂಡ ಪ್ರತಿದಿನವೂ ಒಂದೊಂದು ಭಾವಗೀತೆಗಳನ್ನು ನನಗೆ ಕಳಿಸುವ ಮೂಲಕ ಸಂಗೀತದ ಆಲಾಪದ ನಮ್ಮ ಸ್ನೇಹ ಮುಂದುವರೆದಿದೆ. ಉಪಾಸನಾ ಮೋಹನ ಮುಂಬರುವ ದಿನಗಳಲ್ಲಿ ನಾಡಿನ ಹೆಮ್ಮೆಯ ಸಂಗೀತ ನಿರ್ದೇಶಕರಾಗಿ ಚಲನಚಿತ್ರ ರಂಗದಲ್ಲಿ ಮಿಂಚುವಂತಾಗಲಿ ಎಂದು ಆಶಿಸುವೆನು.


ವೈ.ಬಿ.ಕಡಕೋಳ
ಶಿಕ್ಷಕ ಸಂಪನ್ಮೂಲ ವ್ಯಕ್ತಿಗಳು
ಮಾರುತಿ ಬಡಾವಣೆ ಸಿಂದೋಗಿ ಕ್ರಾಸ್ ಮುನವಳ್ಳಿ

RELATED ARTICLES

Most Popular

error: Content is protected !!
Join WhatsApp Group