ಮೂಡಲಗಿ- ಖಂಡ್ರಟ್ಟಿ, ತುಕ್ಕಾನಟ್ಟಿ ಮತ್ತು ಹಳ್ಳೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು 8 ನೇ ವರ್ಗದಿಂದ 9 ನೇ ವರ್ಗದವರೆಗೆ ಪ್ರೌಢಶಾಲೆಗಳನ್ನಾಗಿ ಉನ್ನತೀಕರಣಗೊಳಿಸಿ ಶಾಲಾ ಶಿಕ್ಷಣ ಇಲಾಖೆಯು ಆದೇಶ ಹೊರಡಿಸಿದೆ ಎಂದು ಶಾಸಕ, ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದರು.
ಪ್ರಸ್ತುತ ಶೈಕ್ಷಣಿಕ ಸಾಲಿನಿಂದ ಈ ಮೂರು ಶಾಲೆಗಳು ಪ್ರೌಢಶಾಲೆಗಳಾಗಿ ಪರಿವರ್ತನೆಗೊಂಡಿವೆ ಎಂದವರು ಹೇಳಿದರು.
ಪ್ರಾಥಮಿಕ ಶಾಲೆಗಳಿಂದ ಪ್ರೌಢಶಾಲೆಗಳಾಗಿ ಮೇಲ್ದರ್ಜೆಗೆರಿರುವ ಖಂಡ್ರಟ್ಟಿ, ತುಕ್ಕಾನಟ್ಟಿ, ಹಳ್ಳೂರ ಶಾಲೆಗಳ ಮೂರು ವರ್ಷಗಳ ಮೂಲ ಸೌಕರ್ಯಗಳ ವೆಚ್ಚವನ್ನು ಸ್ವತಃ ನಾನೇ ಭರಿಸುತ್ತೇನೆಂದು ಹೇಳಿ ಸಮ್ಮತಿ ಪತ್ರಕ್ಕೆ ಸಹಿ ಹಾಕಿರುವುದಾಗಿ ಅವರು ಹೇಳಿದರು.
ಇದರಲ್ಲಿ ಅತಿಥಿ ಶಿಕ್ಷಕರ ಗೌರವಧನ, ಶಾಲೆಗಳ ನಿರ್ವಹಣಾ ವೆಚ್ಚ ಮತ್ತು ಅಗತ್ಯವಿರುವ ಎಲ್ಲ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡುವ ಒಪ್ಪಂದಕ್ಕೆ ಒಪ್ಪಿಗೆ ನೀಡಿರುವುದಾಗಿ ತಿಳಿಸಿದರು.
ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಬಡ ಮಕ್ಕಳ ಉನ್ನತ ಶಿಕ್ಷಣದ ಸಲುವಾಗಿ ಇವುಗಳನ್ನು ಮಂಜೂರು ಮಾಡಿಸಲಾಗಿದ್ದು, ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದವರ ಮಕ್ಕಳಿಗೆ ಈ ಪ್ರೌಢಶಾಲೆಗಳು ಅನುಕೂಲವಾಗಲಿವೆ. ಈ ಮೂರು ಗ್ರಾಮಗಳ ಗ್ರಾಮಸ್ಥರು ಬಹು ದಿನಗಳಿಂದ ತಮ್ಮೂರಲ್ಲಿ ಸರ್ಕಾರಿ ಪ್ರೌಢಶಾಲೆಗಳನ್ನು ಆರಂಭಿಸುವಂತೆ ತಮ್ಮಲ್ಲಿ ಮನವಿ ಮಾಡಿಕೊಂಡಿದ್ದರು. ಸಾರ್ವಜನಿಕರ ಮನವಿ ಮೇರೆಗೆ ತಮ್ಮ ಸ್ವಂತ ಬಂಡವಾಳದಲ್ಲಿ ಪ್ರೌಢಶಾಲೆಗಳನ್ನು ಪ್ರಾರಂಭಿಸಲು ಅನುಮತಿ ಪಡೆದಿರುವುದಾಗಿ ಹೇಳಿದ ಅವರು, ಇದೇ 2025 ರಿಂದ ಈ ಉನ್ನತೀಕರಣಗೊಂಡ ಶಾಲೆಗಳು ಕಾರ್ಯನಿರ್ವಹಿಸಲಿವೆ. ಆದ್ದರಿಂದ ಖಂಡ್ರಟ್ಟಿ, ತುಕ್ಕಾನಟ್ಟಿ ಮತ್ತು ಹಳ್ಳೂರ ಗ್ರಾಮಗಳ ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಪಾಲಕ ಸಮುದಾಯದವರಲ್ಲಿ ಬಾಲಚಂದ್ರ ಜಾರಕಿಹೊಳಿ ಅವರು ಮನವಿ ಮಾಡಿಕೊಂಡಿದ್ದಾರೆ.
ಈಗಾಗಲೇ ಮೂಡಲಗಿ ವಲಯದಲ್ಲಿ 37 ಸರ್ಕಾರಿ ಪ್ರೌಢಶಾಲೆಗಳು ಕೆಲಸ ನಿರ್ವಹಿಸುತ್ತಿದ್ದು, ಈ ಮೂರು ಹೊಸ ಶಾಲೆಗಳ ಮಂಜೂರಾತಿಯಿಂದ ಸರ್ಕಾರಿ ಪ್ರೌಢಶಾಲೆಗಳ ಸಂಖ್ಯೆ 40 ಕ್ಕೆ ಏರಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಪ್ರಕಟಣೆಯಲ್ಲಿ ತಿಳಿಸಿರುವರು.