ಮೂಡಲಗಿ – ನಾಗನೂರಿನ ಸಮರ್ಥ ಪ್ರಾಥಮಿಕ ಶಾಲೆಯನ್ನು ರೈತರ ಹೊಲದ ಪಕ್ಕದಲ್ಲಿ ಶಾಲೆ ನಿರ್ಮಾಣ ಮಾಡಲು ಪರವಾನಿಗೆ ಕೊಟ್ಟಿದ್ದಲ್ಲದೆ ಸುತ್ತಲೂ ಕಾಂಪೌಂಡ್ ಇಲ್ಲದೆ, ಶಾಲಾ ಸುರಕ್ಷತಾ ನಿಯಮಗಳನ್ನು ಪಾಲಿಸಿದ್ದಾರೋ ಇಲ್ಲವೋ ಎಂಬುದನ್ನೂ ಕೂಡ ನೋಡದಷ್ಟು ಮೂಡಲಗಿ ಶಿಕ್ಷಣ ಇಲಾಖೆ ಕುಂಭಕರ್ಣ ನಿದ್ರೆಯಲ್ಲಿ ತೊಡಗಿದ್ದು ಶಾಲಾ ಮಕ್ಕಳ ಮೂತ್ರ ಪಕ್ಕದ ಹೊಲದವರಿಗೆ ಹರಿದು ಹೋಗುವಂತೆ ಮಾಡುವಲ್ಲಿ ಇವರ ಪಾತ್ರವೂ ಇದೆಯಾ ಎಂಬ ಸಂದೇಹ ಹುಟ್ಟುವಂತೆ ಮಾಡಿದೆ.
ಮೊದಲೇ ಕೆನಾಲ್ ಪಕ್ಕದಲ್ಲಿ ನಿರ್ಮಾಣವಾಗಿ ಯಾವಾಗ ಶಾಲೆಯ ವಾಹನ ಅಪಾಯಕ್ಕೆ ಈಡಾಗುವುದೋ ಎಂಬ ಆತಂಕದಲ್ಲಿ ಎಲ್ಲರೂ ಇದ್ದರೂ ಕೂಡ ಶಿಕ್ಷಣ ಇಲಾಖೆಯವರಿಗೆ ಏನೂ ಅನ್ನಿಸುವುದಿಲ್ಲ. ನಿಯಮ ಮೀರಿ ಕಟ್ಟಡ ಕಟ್ಟಿದ್ದರೂ ನಾಗನೂರಿನ ಪಂಚಾಯಿತಿ ಅಧಿಕಾರಿಗಳು ಕೂಡ ಈ ಶಾಲೆಯ ಅಧ್ಯಕ್ಷ ಹಾಗು ಆತನ ಹಿಂದಿರುವ ಪ್ರಭಾವಿ ವ್ಯಕ್ತಿಯ ಪ್ರಭಾವಕ್ಕೆ ಬಲಿಯಾಗಿ ಬಾಯಿ ತೆರೆಯದೇ ಇದ್ದಾರೆ ಆದರೆ ಪಕ್ಕದ ಹೊಲಕ್ಕೆ ಮೂತ್ರವನ್ನು ಹರಿಯಬಿಡುವಷ್ಟು ನೀಚತನ ಈ ಶಾಲೆಯಿಂದ ನಡೆದಿದ್ದರೂ ಶಿಕ್ಷಣಾಧಿಕಾರಿಗಳು ಎಚ್ಚತ್ತುಕೊಳ್ಳುವುದು ಯಾವಾಗ ಎನ್ನುವಂತಾಗಿದೆ.
ಈಗಾಗಲೇ ಶಾಲಾ ವಾಹನದ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಿ ಒಬ್ಬ ಬಾಲಕನ ಬಲಿ ಪಡೆದಿದ್ದರೂ ಈ ಶಾಲೆಯ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ಇಲಾಖೆಯ ಅಧಿಕಾರಿಗಳು ಇನ್ನೂ ಎಷ್ಟು ಬಲಿಗಳ ನಿರೀಕ್ಷೆಯಲ್ಲಿದ್ದಾರೆ ಎಂಬುದನ್ನಾದರೂ ಹೇಳಬೇಕು.
ಶಾಲೆಯ ನಿವೇಶನ ಎನ್ಎ ಆಗದೇ, ಅರ್ಧ ಕ್ಷೇತ್ರದಲ್ಲಿ ಬೆಳೆ ಬೆಳೆಯುತ್ತ ದನಕರುಗಳನ್ನು ಕಟ್ಟಿ ಗಬ್ಬು ಎಬ್ಬಿಸುತ್ತ ನಡೆಸಿದ್ದಲ್ಲದೆ ಪಕ್ಕದ ನಮ್ಮ ಹೊಲಕ್ಕೂ ಮಕ್ಕಳ ಮೂತ್ರವನ್ನು ಹರಿಯಬಿಡುತ್ತಾರೆಂದರೆ ಇವರು ಶಾಲೆಯಲ್ಲಿ ಮಕ್ಕಳಿಗೆ ಯಾವ ಸ್ವಚ್ಛತೆಯ ಬಗ್ಗೆ, ಸೌಹಾರ್ದತೆಯ ಬಗ್ಗೆ, ನೈತಿಕತೆಯ ಬಗ್ಗೆ ಪಾಠ ಹೇಳುತ್ತಾರೆ ?
ಕ್ಷೇತ್ರ ಶಿಕ್ಷಣಾಧಿಕಾರಿಗಳೇ ನಿಮ್ಮ ಸ್ವಾರ್ಥಕ್ಕಾಗಿ ನಮಗೆ ಯಾಕೆ ಈ ಶಿಕ್ಷೆ ನೀಡುತ್ತೀರಿ ?
ಉಮೇಶ ಬೆಳಕೂಡ, ಮೂಡಲಗಿ