ಸಿಂದಗಿ – ರಾಸುಗಳಿಗೆ ಸಾಂಕ್ರಾಮಿಕ ತಗುಲಿ ಜೀವ ಹಾನಿಯಾಗುವುದನ್ನು ತಪ್ಪಿಸಲು ಕರ್ನಾಟಕದಲ್ಲಿ ಇಂದಿನಿಂದಲೇ ಕಾಲುಬಾಯಿ ರೋಗ ಲಸಿಕಾ ಕಾರ್ಯಕ್ರಮದ ಅಭಿಯಾನ ಆರಂಭಿಸಲಾಗಿದೆ ಒಂದು ತಿಂಗಳ ಕಾಲ ಉಚಿತವಾಗಿಯೇ ರಾಸುಗಳಿಗೆ ಲಸಿಕೆಯನ್ನು ಪಶುಪಾಲನಾ ಇಲಾಖೆಯಿಂದ ನೀಡಲಾಗುತ್ತದೆ ಎಂದು ಹಿರಿಯ ಪಶು ವೈದ್ಯಕೀಯ ಪರೀಕ್ಷಕರಾದ ಡಾ. ಶಿವಶರಣ.ಎಸ್. ಟೆಂಗಳಿ ಹೇಳಿದರು.
ತಾಲ್ಲೂಕಿನ ಗುಬ್ಬೆವಾಡ ಗ್ರಾಮದಲ್ಲಿ ಕಾಲು ಮತ್ತು ಬಾಯಿಬೇನೆಯ ಲಸಿಕಾ ಕಾರ್ಯಕ್ರಮವನ್ನು ಸೋಮವಾರ ರಂದು ರಾಸುಗಳಿಗೆ ಲಸಿಕೆ ಹಾಕುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ ಕಾಲುಬಾಯಿ ರೋಗ ಲಸಿಕಾ ಕಾರ್ಯಕ್ರಮವು ಒಂದು ತಿಂಗಳ ರವರೆಗೆ ಕರ್ನಾಟಕ ರಾಜ್ಯಾದ್ಯಂತ ನಡೆಯಲಿದ್ದು, ದನ, ಎಮ್ಮೆಗಳಿಗೆ ಲಸಿಕೆ ಹಾಕಿಸುವಂತೆ ಪಶುಪಾಲನಾ ಸೇವೆಗಳ ಇಲಾಖೆ ಸೂಚಿಸಿದೆ. ಕರ್ನಾಟಕದ ಎಲ್ಲಾ ಪಶುವೈದ್ಯಕೀಯ ಆಸ್ಪತ್ರೆಗಳಲ್ಲಿ ಅಭಿಯಾನ ನಡೆಯಲಿದ್ದು. ಕಡ್ಡಾಯವಾಗಿ ಎಲ್ಲಾ ಮಾಲೀಕರು ತಮ್ಮ ಹಸುಗಳು, ಎಮ್ಮೆಗಳಿಗೆ ಲಸಿಕೆಯನ್ನು ಹಾಕಿಸಬೇಕು. ಮುಂದೆ ಕಾಲು ಬಾರಿ ರೋಗಕ್ಕೆ ಸಿಲುಕಿ ಆಗುವ ಅನಾಹುತವನ್ನು ತಪ್ಪಿಸಲು ಕ್ರಮ ವಹಿಸಬೇಕು ಎಂದು ತಿಳಿಸಿದರು ಹಾಗೂ ಕಾಲುಬಾಯಿ ರೋಗ ಒಂದು ಸಾಂಕ್ರಾಮಿಕ ಮತ್ತು ಕೆಲವೊಮ್ಮೆ ಮಾರಣಾಂತಿಕ ವೈರಲ್ ಕಾಯಿಲೆಯಾಗಿದ್ದು ಇದು ದೇಶೀಯ ಹಸುಗಳು ಒಳಗೊಂಡಂತೆ ಸೀಳು-ಗೊರಸುಳ್ಳ ಪ್ರಾಣಿಗಳ ಮೇಲೆ ಪರಿಣಾಮ ಬೀರುತ್ತದೆ . ವೈರಸ್ ಎರಡರಿಂದ ಆರು ದಿನಗಳ ಕಾಲ ತೀವ್ರವಾದ ಜ್ವರವನ್ನು ಉಂಟುಮಾಡುತ್ತದೆ. ನಂತರ ಬಾಯಿಯೊಳಗೆ ಮತ್ತು ಗೊರಸಿನ ಬಳಿ ಗುಳ್ಳೆಗಳು ಛಿದ್ರವಾಗಬಹುದು ಮತ್ತು ಕುಂಟತನವನ್ನು ಉಂಟುಮಾಡಬಹುದು. ಕೊನೆಗೆ ಜೀವವನ್ನೂ ಹೋಗುವ ಸಂಭವ ಇರುತ್ತದೆ ಎಂದು ರೈತರಿಗೆ ಎಚ್ಚರಿಸಿದರು.
ಲಸಿಕೆಯು ಸಂಪೂರ್ಣವಾಗಿ ಉಚಿತವಾಗಿದ್ದು, ಯಾವುದೇ ರೀತಿಯ ಶುಲ್ಕವಿರುವುದಿಲ್ಲ. ಇದು ರಾಷ್ಟ್ರೀಯ ಕಾರ್ಯಕ್ರಮವಾಗಿದ್ದು, ಲಸಿಕಾದಾರರು ಜಾನುವಾರು ಮಾಲೀಕರ ಮನೆಗೆ ಬಂದಾಗ ಸಹಕಾರ ನೀಡಿ ನಾಲ್ಕು ತಿಂಗಳ ಮೇಲ್ಪಟ್ಟ ಎಲ್ಲಾ ದನ, ಎಮ್ಮೆಗಳಿಗೆ ಲಸಿಕೆ ಹಾಕಿಸಬೇಕು.ಕಾಲುಬಾಯಿ ರೋಗ ನಿಯಂತ್ರಿಸಲು ಜಾನುವಾರುಗಳಿಗೆ ಲಸಿಕೆ ನೀಡುವುದು ಅತ್ಯಗತ್ಯವಾಗಿದೆ. ಈ ರೋಗದ ವಿರುದ್ಧ ಪ್ರತೀ 6 ತಿಂಗಳಿಗೊಮ್ಮೆ ಜಾನುವಾರುಗಳಿಗೆ ಲಸಿಕೆ ಕೊಡಿಸಿ ರೋಗ ಬರದಂತೆ ತಡೆಯಬೇಕಿದೆ ಎನ್ನುವುದು ನಮ್ಮ ಪಶು ಇಲಾಖೆಯ ಗುರಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಕಿರಿಯ ಪಶುವೈದ್ಯ ಪರೀಕ್ಷಕರಾದ ಶಿವಾನಂದ ಗುಗ್ಗರಿ,ಶ್ರೀ ಶೈಲ್ ರೋಣಿ, ಮಹಮ್ಮದ್ ಷರೀಫ್, ಕಾಶೀಂ ಪಟೇಲ್ ಬಿರಾದಾರ ಹಾಗೂ ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು.