ಬಾಗಲಕೋಟೆ : ಪ್ರಜಾತಂತ್ರದ ಮೌಲ್ಯಗಳನ್ನು ಮಹರ್ಷಿ ವಾಲ್ಮೀಕಿಯವರ ರಾಮಾಯಣ ಮಹಾಕಾವ್ಯದಲ್ಲಿ ಕಾಣುತ್ತೇವೆ. ಕವಿಋಷಿ ವಾಲ್ಮೀಕಿಯವರ ಜ್ಞಾನ, ವಿದ್ವತ್ತಿನ ಚಿಂತನೆಗಳು ಭಾರತದ ಆಧ್ಯಾತ್ಮಿಕ ಮೌಲ್ಯಗಳನ್ನು ಶ್ರೀಮಂತಗೊಳಸಿವೆ. ಮಹರ್ಷಿ ವಾಲ್ಮೀಕಿಯವರು ರಾಮಾಯಣದ ಮೂಲಕ ಶ್ರೀರಾಮನ ಚರಿತ್ರೆಯನ್ನು, ಆದರ್ಶಗಳನ್ನು ಜಗತ್ತಿಗೆ ತಿಳಿಸಿದ್ದಾರೆ. ವಿದ್ಯಾರ್ಥಿಗಳು ವಾಲ್ಮೀಕಿಯವರ ತತ್ವಾದರ್ಶಗಳನ್ನು ಅರಿತು ನಡೆಯಬೇಕು ಎಂದು ಬೇವೂರಿನ ಪರಪ್ಪ ಸಂಗಪ್ಪ ಸಜ್ಜನ ಕಲಾ ಮಹಾವಿದ್ಯಾಲಯದ ಇತಿಹಾಸ ಉಪನ್ಯಾಸಕ ಐ.ಕ್ಯೂ.ಎ.ಸಿ ಘಟಕದ ಮುಖ್ಯಸ್ಥ ಡಾ.ಎ.ಎಮ್. ಗೊರಚಿಕ್ಕನವರ ಹೇಳಿದರು.
ಜಿಲ್ಲೆಯ ಬೇವೂರನ ಪರಪ್ಪ ಸಂಗಪ್ಪ ಸಜ್ಜನ ಕಲಾ ಮಹಾವಿದ್ಯಾಲಯದಲ್ಲಿ ಎನ್.ಎಸ್.ಎಸ್ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ಆರಂಭದಲ್ಲಿ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗ ಭಾವಚಿತ್ರಕ್ಕೆ ಪೂಜೆ ನೇರವೇರಿಸಿ ಪುಷ್ಪ ನಮನ ಸಲ್ಲಿಸಿದರು.
ಈ ಸಮಾರಂಭದ ವೇದಿಕೆಯ ಮುಂಭಾಗದಲ್ಲಿ ವಿದ್ಯಾರ್ಥಿಗಳು ಮರಳಿನ ಮೇಲೆ ಅಶ್ವತ್ಥ ವೃಕ್ಷದ ಅರಳೆ ಎಲೆಗಳಲ್ಲಿ “ ಶ್ರೀ ಮಹರ್ಷಿ ವಾಲ್ಮೀಕಿ ರಾಮಾಯಣ” ಎಂಬ ನಾಮಫಲಕವನ್ನು ಸಿದ್ಧಗೊಳಿಸಿ ಬಣ್ಣಬಣ್ಣದ ರಂಗೋಲಿ, ವಿವಿಧ ಪುಷ್ಪಗಳಿಂದ ಅಲಂಕಾರಗೊಳಿಸಿದ್ದು ಕಾರ್ಯಕ್ರಮದ ಸೊಬಗನ್ನು ಹೆಚ್ಚಿಸಿತ್ತು.
ಪಿ.ಎಸ್ ಸಜ್ಜನ ಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಜಗದೀಶ ಗು.ಭೈರಮಟ್ಟಿ ಉಪನ್ಯಾಸಕರಾದ ಎಸ್.ಎಸ್.ಆದಾಪೂರ, ಡಾ.ಸಂಗಮೇಶ ಬ. ಹಂಚಿನಾಳ, ಡಿ.ವಾಯ್. ಬುಡ್ಡಿಯವರ ಬೋಧಕೇತರ ಸಿಬ್ಬಂದಿ ಶಿವು ಕಟಗಿ ಮುಂತಾದವರು ಭಾಗಿಯಾಗಿದ್ದರು. ಎನ್.ಎಸ್.ಎಸ್ ಘಟಕದ ಕಾರ್ಯಕ್ರಮಾಧಿಕಾರಿ ಜಿ.ಎಸ್. ಗೌಡರ ನಿರೂಪಿಸಿ ವಂದಿಸಿದರು