ಮೂಡಲಗಿ – ಉತ್ತಮ ಸರ್ಕಾರದ ಆಯ್ಕೆಗಾಗಿ ತಮಗೆ ನೀಡಲಾದ ಮತದಾನದ ಹಕ್ಕು ಚಲಾಯಿಸಿ ಉತ್ತಮ ಸರ್ಕಾರವನ್ನು ಆಯ್ಕೆ ಮಾಡಬೇಕು ಎಂದು ತಾಲ್ಲೂಕು ಸ್ವೀಪ್ ಸಮಿತಿ ಅಧ್ಯಕ್ಷರೂ ಆಗಿರುವ ಕಾರ್ಯನಿರ್ವಾಹಕ ಅಧಿಕಾರಿ ನವೀನಪ್ರಸಾದ ಕಟ್ಟಿಮನಿ ಹೇಳಿದರು. ಮತದಾನದ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಂಗಳವಾರ ನಗರದಲ್ಲಿ ತಾಲ್ಲೂಕು ಸ್ವೀಪ್ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬೈಕ್ ರ್ಯಾಲಿಯಲ್ಲಿ ಅವರು ಮಾತನಾಡಿದರು.
ಪ್ರತಿ ಅರ್ಹ ಮತದಾರರು ಮತದಾನ ಮಾಡಬೇಕು ಸುಭದ್ರ ಸರ್ಕಾರವನ್ನು ಆಯ್ಕೆ ಮಾಡಬೇಕು ಎಂದರು.
ಮೂಡಲಗಿ ತಾಲ್ಲೂಕು ಪಂಚಾಯತ್ ಕಾರ್ಯಾಲಯದಲ್ಲಿ ಪ್ರಾರಂಭವಾದ ಬೈಕ್ ರ್ಯಾಲಿಯು, ನಗರದ ಬಸವೇಶ್ವರ ವೃತ್ತ, ಕಲ್ಮೇಶ್ವರ ಸರ್ಕಲ್, ಮಾರ್ಕೆಟ್ ಪ್ರದೇಶದ ಮೂಲಕ ಕಲ್ಮೇಶ್ವರ ಸರ್ಕಲ್ ಪ್ರವೇಶಿಸಿ, ತಾಲ್ಲೂಕು ಪಂಚಾಯತ್ ಕಾರ್ಯಾಲಯದವರೆಗೆ ಜರುಗಿತು.
ಬಳಿಕ ಮಾತನಾಡಿದ ಮೂಡಲಗಿ ತಹಶೀಲ್ದಾರ ಬಿ ಎಸ್ ಕಡಕಭಾವಿ ಅವರು, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು. ಮತದಾರರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬೈಕ್ ರ್ಯಾಲಿಯನ್ನು ಆಯೋಜಿಸಲಾಗಿದೆ ಎಂದರು.
ಇದೇ ವೇಳೆ ವಿಶೇಷಚೇತನರು ಕೂಡ ಬೈಕ್ ರ್ಯಾಲಿಯ ಮೂಲಕ ಮತದಾರರಲ್ಲಿ ಮತದಾನದ ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎ ಸಿ ಮನ್ನಿಕೇರಿ, ಸಿಡಿಪಿಒ ಯಲ್ಲಪ್ಪ ಗದಾಡಿ, ಪುರಸಭೆ ಮುಖ್ಯಾಧಿಕಾರಿ ಸಿ ಬಿ ಪಾಟೀಲ, ಸಹಾಯಕ ನಿರ್ದೇಶಕರು (ಗ್ರಾಉ), ಸಹಾಯಕ ನಿರ್ದೇಶಕರು ಪಂಚಾಯತ ರಾಜ್, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ನರೇಗಾ ಅಧಿಕಾರಿ ಚಂದ್ರಶೇಖರ ಬಾರ್ಕಿ, ಸಂಗಮೇಶ ರೊಡ್ಡನವರ, ಚಿದಾನಂದ ಮುಗಳಖೋಡ, ಎಂಐಎಸ್ ಸಂಯೋಜಕರು, ಸಿಬ್ಬಂದಿ ಮತ್ತಿತರರು ಉಪಸ್ಥಿತರಿದ್ದರು.