ಮೈಸೂರು – 87 ನೇ ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರಾಚೀನ ಸರ್ಕಾರಿ ಕನ್ನಡ ಶಾಲೆಗಳ ಉಳಿವಿಗೆ ನಿರ್ಣಯ ಅಂಗೀಕರಿಸಿರುವ ಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ ದತ್ತಿ ಪ್ರಶಸ್ತಿ ಪುರಸ್ಕೃತ ಸಾಹಿತಿಗಳಾದ ಡಾ.ಭೇರ್ಯ ರಾಮಕುಮಾರ್ ಸ್ವಾಗತಿಸಿದ್ದಾರೆ
ಈ ಬಗ್ಗೆ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ.ಮಹೇಶ್ ಜೋಷಿ ಅವರಿಗೆ ಪತ್ರ ಬರೆದಿರುವ ಅವರು ಶತಮಾನ ದಾಟಿರುವ ನೂರಾರು ಸರ್ಕಾರಿ ಕನ್ನಡ ಶಾಲೆಗಳು ರಾಜ್ಯದಲ್ಲಿ ಅತ್ಯಂತ ದುರ್ವ್ಯವಸ್ಥೆಗೆ ಒಳಗಾಗಿವೆ.ಈ ಶಾಲೆಗಳಿಗೆ ನೂತನ ಕಟ್ಟಡ, ಕುಡಿಯುವ ನೀರಿನ ವ್ಯವಸ್ಥೆ ,ಉತ್ತಮ ಶೌಚಾಲಯ ವ್ಯವಸ್ಥೆ ಅತ್ಯಂತ ಅಗತ್ಯವಿದೆ.ಈ ಬಗ್ಗೆ ಸಾಹಿತ್ಯ ಸಮ್ಮೇಳನದಲ್ಲಿ ನಿರ್ಣಯ ಕೈಗೊಂಡಿರುವುದು ಶ್ಲಾಘನೀಯ ಎಂದವರು ತಿಳಿಸಿದ್ದಾರೆ.
ಅದೇ ರೀತಿ ಖಾಸಗಿ ಹಾಗೂ ಕೇಂದ್ರ ಸರ್ಕಾರಿ ಕಚೇರಿಗಳಲ್ಲಿ ಕನ್ನಡ ಭಾಷೆಗೆ ಪ್ರಥಮ ಆದ್ಯತೆ ನೀಡುವುದನ್ನು ರಾಜ್ಯ ಸರ್ಕಾರ ಕಡ್ಡಾಯ ಗೊಳಿಸಬೇಕಿದೆ. ಈ ಬಗ್ಗೆ ಕನ್ನಡ ಸಾಹಿತ್ಯ ಪರಿಷತ್ ಗಮನಹರಿಸಬೇಕಿದೆ ಎಂದು ಭೇರ್ಯ ರಾಮಕುಮಾರ್ ಅಗ್ರಹಪಡಿಸಿದ್ದಾರೆ.
ಮಂಡ್ಯದಲ್ಲಿ ನಡೆದ ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 200 ಕೂ ಹೆಚ್ಚು ಹೊರ ರಾಷ್ಟ್ರಗಳ ಕನ್ನಡಿಗರು ಭಾಗವಹಿಸಿರುವುದು ಶ್ಲಾಘನೀಯ.ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರಾದ ಮಹೇಶ್ ಜೋಷಿ ಅವರು ಸ್ವತಃ ಅಮೆರಿಕಾ, ಲಂಡನ್,ಸೌದಿ ಅರೇಬಿಯ ಮೊದಲಾದ ಹೊರ ರಾಷ್ಟ್ರಗಳಿಗೆ ಭೇಟಿ ನೀಡಿ ಅಲ್ಲಿ ನೆಲೆಸಿರುವ ಕನ್ನಡಿಗರನ್ನು ಸಾಹಿತ್ಯ ಸಮ್ಮೇಳನಕ್ಕೆ ಅಹ್ವಾನಿಸಿದರು. ಅನಿವಾಸಿ ಭಾರತೀಯರು ಬಹಳ ಸಂತಸದಿಂದ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ್ದು ಮಂಡ್ಯ ಸಮ್ಮೇಳನದ ದಾಖಲೆ.ಮುಂದಿನ ಸಮ್ಮೇಳನ ಗಳಲ್ಲೂ ಈ ಪದ್ಧತಿ ಮುಂದುವರೆಯಲಿ ಎಂದವರು ತಮ್ಮ ಪತ್ರದಲ್ಲಿ ಶ್ಲಾಘಿಸಿದ್ದಾರೆ.