- Advertisement -
ಬೆಳಗಾವಿ – ಹಿಡಕಲ್ ಜಲಾಶಯದ ನದಿ ಪಾತ್ರದಲ್ಲಿ ಧಾರಾಕಾರ ಮಳೆಯಾಗುತ್ತಿರುವುದರಿಂದ ಜಲಾಶಯಕ್ಕೆ ಭಾರಿ ಪ್ರಮಾಣದ ನೀರು ಹರಿದು ಬರುತ್ತಿದ್ದು ಗರಿಷ್ಠ ಮಟ್ಟ ತಲುಪಲು ಇನ್ನು ಕೆಲವೇ ಅಡಿಗಳು ಬಾಕಿ ಇವೆ. ಇದೇ ರೀತಿ ಮಳೆಯಾಗಿ ಒಳಹರಿವು ಹೆಚ್ಚಾದರೆ ಜಲಾಶಯದಿಂದ ಹೆಚ್ಚಿನ ಪ್ರಮಾಣದ ನೀರನ್ನು ಬಿಡುವುದು ಅನಿವಾರ್ಯವಾಗುವುದು ಎಂಬುದಾಗಿ ಕರ್ನಾಟಕ ನೀರಾವರಿ ನಿಗಮದ ಪ್ರಕಟಣೆ ತಿಳಿಸಿದೆ.
ಜಲಾಶಯದ ಗರಿಷ್ಠ ಮಟ್ಟ ೨೧೭೫ ಅಡಿಯಾಗಿದ್ದು ದಿ. ೨೩ ರಂದು ಬೆಳಿಗ್ಗೆ ನೀರಿನ ಮಟ್ಟ ೨೧೫೮ ಅಡಿ ತಲುಪಿತ್ತು. ಜಲಾನಯನ ಪ್ರದೇಶದಲ್ಲಿ ಬಿಟ್ಟೂ ಬಿಡದೆ ಮಳೆಯಾಗುತ್ತಿರುವ ಕಾರಣ ಜಲಾಶಯಕ್ಕೆ ನೀರಿನ ಒಳ ಹರಿವು ಹೆಚ್ಚಾಗುತ್ತಿದ್ದು ನೀರನ್ನು ಹೆಚ್ಚಿನ ಪ್ರಮಾಣದಲ್ಲಿ ಹೊರಬಿಡುವುದು ಅನಿವಾರ್ಯವಾಗಿದೆ. ಆದ್ದರಿಂದ ನದಿಪಾತ್ರದ ಹಳ್ಳಿಗಳ ಜನರು ಸುರಕ್ಷಿತ ಪ್ರದೇಶಗಳಿಗೆ ತೆರಳಬೇಕು ಎಂದು ಕರ್ನಾಟಕ ನೀರಾವರಿ ನಿಗಮದ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರು ಪ್ರಕಟಣೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.