ಬೆಂಗಳೂರು : ನೂರು ಕಾರ್ಯಕ್ರಮಗಳೆಂದರೆ ಸಾಮಾನ್ಯ ಸಾಧನೆಯಲ್ಲ. ರಾ.ಸು ಅವರ ಪ್ರಯತ್ನವನ್ನು ಎಲ್ಲರೂ ಪ್ರಶಂಸಿಸಬೇಕು ಎಂದು ಥಟ್ ಅಂತ ಹೇಳಿ ಖ್ಯಾತಿಯ ನಾ. ಸೋಮೇಶ್ವರ ಹೇಳಿದರು.
ನಗರದ ಮಾತಿನ ಮನೆಯ ನೂರನೆಯ ಕಾರ್ಯಕ್ರಮದಲ್ಲಿ ಅವರು ಗೌರವ ಸ್ವೀಕರಿಸಿ ಮಾತನಾಡುತ್ತಾ, ಮಾತಿನ ಮನೆಯ ಕಾರ್ಯಕ್ರಮಗಳು ನಿಜಕ್ಕೂ ಉತ್ತಮ, ಮಾತಿನ ಮನೆಯ ನೂರನೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ನನಗೆ ಹೆಮ್ಮೆ ಎನ್ನಿಸುತ್ತಿದೆ ಹಾಗೂ ಈ ಸಂದರ್ಭದಲ್ಲಿ ಐವರು ಉತ್ಕೃಷ್ಟ ವ್ಯಕ್ತಿಗಳನ್ನು ಆರಿಸಿ ಅವರನ್ನು ಗೌರವಿಸಿರುವುದು ಅತ್ಯಂತ ಶ್ಲಾಘನೀಯ ಕಾರ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತಿನ ಮನೆ ನಡೆದುಬಂದ ಹಾದಿಯನ್ನು ಸಹನಾ ರಾಜೇಶ್ ಅವರು ವಿವರಿಸಿದರು
ಮಾತಿನ ಮನೆಯ ನೂರು ಕಾರ್ಯಕ್ರಮಗಳ ಪರಿಚಯ ಮಾಡಿಸುವ ವಿಡಿಯೋವನ್ನೂ ಪ್ರದರ್ಶಿಸಲಾಯಿತು.
ರಂಜನೆ – ಮನೋರಂಜನೆ-
ವಿದ್ವಾನ್ ಕಾರ್ತಿಕ್ ಅವರ ಮ್ಯಾಂಡೋಲಿನ್ ವಾದನ, ನಂದಿನಿ ಸಿರೀಶ್ ಅವರ ಹಾಡುಗಳು, ಎಂ ಪ್ರಭು ಅವರ ಜಾದೂ ಪ್ರದರ್ಶನ, ಬೇಲೂರು ರಾಮಮೂರ್ತಿಯವರ ಹಾಸ್ಯೋಪನ್ಯಾಸ ಹಾಗೂ ರಾಜೇಶ್ ಕಶ್ಯಪ್ ತಂಡದ ಹಾಸ್ಯ ಪ್ರಹಸನಗಳು ಕಾರ್ಯಕ್ರಮದಲ್ಲಿ ನೆರೆದಿದ್ದವರನ್ನು ರಂಜಿಸಿದ್ದವು.
ಇದೇ ಸಂದರ್ಭದಲ್ಲಿ ವಿದ್ವಾವಾಚಸ್ಪತಿ ಅರಳುಮಲ್ಲಿಗೆ ಪಾರ್ಥಸಾರಥಿ, ನಾ ಸೋಮೇಶ್ವರ, ಎಂಎಸ್ ನರಸಿಂಹಮೂರ್ತಿ, ಡಾ ಮಾಲತಿಹೊಳ್ಳ ಹಾಗೂ ಬೈರಮಂಗಲ ರಾಮೇಗೌಡ ಅವರನ್ನು ಮಾತಿನ ಮನೆಯ ಪರವಾಗಿ ಗೌರವಿಸಲಾಯಿತು.
2020 ರಲ್ಲಿ ಮಾತಿನ ಮನೆ ಆರಂಭ : ರಾಸು ವೆಂಕಟೇಶ
2020ರಲ್ಲಿ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಆರಂಭವಾದ ಮಾತಿನ ಮನೆಯು ಪ್ರತಿ ತಿಂಗಳಿಗೊಂದು ಎಂಬಂತೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡಿಕೊಂಡು ಬಂದಿದ್ದು, ಇದೀಗ ನೂರರ ಸಂಭ್ರಮದಲ್ಲಿದೆಯೆಂದು ಮಾತಿನ ಮನೆಯ ರಾ ಸು ವೆಂಕಟೇಶ ಅವರು ಪ್ರಾಸ್ತಾವಿಕ ನುಡಿಯಲ್ಲಿ ತಿಳಿಸಿ ಈ ಯಶಸ್ಸಿಗೆ ಕಾರಣರಾದ ಎಲ್ಲರಿಗೂ ಕತಜ್ಞತೆ ತಿಳಿಸಿದರು.
ದಿ. 9/3/2025ರ ಭಾನುವಾರ ಸಂಜೆ 5:30ರಿಂದ ಎರಡೂವರೆ ತಾಸುಗಳು ನಡೆದ ವಿಶೇಷ ನೂರರ ಸಂಭ್ರಮ ಕಾರ್ಯಕ್ರಮವು ಮಾತಿನ ಮನೆಯ ಜನಪ್ರಿಯತೆಗೆ ಸಾಕ್ಷಿಯಾಗಿತ್ತು. ರಂಜಿತಾ ರಾಮ ಕುಮಾರ್, ರಾಧಾ ಕೇಶವ ಹೆಬ್ಬಾರ್ ಕಾರ್ಯಕ್ರಮವನ್ನು ನಿರೂಪಿಸಿದರು
ವರದಿ : ತೀರ್ಥಹಳ್ಳಿ ಅನಂತ ಕಲ್ಲಾಪುರ