ಮೂಡಲಗಿ – ತಾಲೂಕಿನ ಯಾದವಾಡ ಸಮೀಪದ ಗಿರಿಸಾಗರ ಎಂಬ ಗ್ರಾಮದ ಸರ್ಕಾರಿ ಶಾಲೆಯ ಮಕ್ಕಳಿಗೆ ಆಟವಾಡಲು ಮೈದಾನ ಇಲ್ಲವಂತೆ, ಮನವಿ ಸಲ್ಲಿಸಿದರೂ ಮೈದಾನ ಸಿಗದ್ದಕ್ಕೆ ಇಲ್ಲಿನ ಗ್ರಾಮಸ್ಥರು ಲೋಕಸಭಾ ಚುನಾವಣೆಗೆ ಬಹಿಷ್ಕಾರ ಹಾಕಿದ್ದಾರೆ.
ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು ೭೫ ವರ್ಷಗಳಾದರೂ ಒಂದು ಸರ್ಕಾರಿ ಶಾಲೆಗೆ ಆಟದ ಮೈದಾನ ಒದಗಿಸದ ಸರ್ಕಾರ ಹಾಗೂ ಶಿಕ್ಷಣ ಇಲಾಖೆಗಳು ಸಮಾಜಕ್ಕೆ ಯಾವ ಸಂದೇಶ ನೀಡಲು ಹೊರಟಿವೆ ಎಂಬುದೇ ಯಕ್ಷ ಪ್ರಶ್ನೆಯಾಗಿದೆ. ಒಂದು ಖಾಸಗಿ ಶಾಲೆ ತೆರೆಯಲು ಶಿಕ್ಷಣ ಇಲಾಖೆ ಮೊದಲು ಆಟದ ಮೈದಾನವನ್ನು ಕೇಳುತ್ತದೆ. ಆದರೆ ಸರ್ಕಾರಿ ಶಾಲೆಗೆ ಮೈದಾನ ಕೊಡಲು ಇನ್ನೂವರೆಗೂ ಆಗಿಲ್ಲವೆಂದರೆ ಇದಕ್ಕಿಂತ ವಿಷಾದಕರ ಸಂಗತಿ ಯಾವುದೂ ಇಲ್ಲ.
ಶಾಲೆಗೆ ಆಟದ ಮೈದಾನ ನೀಡದ್ದಕ್ಕೆ ಈ ಸಲದ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಗಿರಿಸಾಗರ ಗ್ರಾಮದ ನಾಗರಿಕರು ಹೇಳಿದ್ದನ್ನು ಶಿಕ್ಷಣ ಇಲಾಖೆ, ರಾಜ್ಯ ಸರ್ಕಾರ, ಜಿಲ್ಲಾಡಳಿತ ಗಂಭಿರವಾಗಿ ತೆಗದುಕೊಳ್ಳಬೇಕು. ಐದು ವರ್ಷಕ್ಕೊಮೆ ಬರುವ ಚುನಾವಣೆಯನ್ನೇ ಈ ಸಲ ಬಹಿಷ್ಕರಿಸಿದರೆ ಪ್ರಜಾಪ್ರಭುತ್ವಕ್ಕೆ ಯಾವ ಅರ್ಥವೂ ಇರುವುದಿಲ್ಲ.
ಲೋಕಸಭಾ ಚುನಾವಣೆಯ ಬಹಿಷ್ಕಾರದ ಸಭೆಯಲ್ಲಿ ಮಾತನಾಡಿದ ಗಿರಿಸಾಗರ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷ ಕಲ್ಮೇಶ ಗಾಣಿಗೇರ ಅವರು, ಕ್ರೀಡೆಗಾಗಿ ಮಕ್ಕಳಿಗಾಗಿ ಆಟದ ಬಯಲು ಇಲ್ಲವಾಗಿದೆ ಮಕ್ಕಳ ಅಭ್ಯುದಯಕ್ಕಾಗಿ ಶಿಕ್ಷಣ ಎಷ್ಟು ಅವಶ್ಯಕವೋ ಪಠ್ಯೇತರ ಚಟುವಟಿಕೆಗಳು ಅಷ್ಟೇ ಮುಖ್ಯವಾಗಿದೆ. ಆದರೆ ಪಠ್ಯೇತರ ಚಟುವಟಿಕೆ ನಡೆಸಲು ಮಕ್ಕಳಿಗೆ ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.
ಸರ್ಕಾರ ಮಕ್ಕಳಿಗೆ ಬಿಸಿಯೂಟ, ಸಮವಸ್ತ್ರ, ಶೂ, ಹಾಲು ಮೊಟ್ಟೆ ನೀಡುತ್ತದೆ ಆದರೆ ಕ್ರೀಡಾಕೂಟದಲ್ಲಿ ಸರ್ಕಾರಿ ಶಾಲಾ ಮಕ್ಕಳು ಹೆಚ್ಚಿನ ಸಾಧನೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅವರು ನುಡಿದಿದ್ದಾರೆ.
ಇದೇ ಸಂದರ್ಭದಲ್ಲಿ ಗ್ರಾಮಸ್ಥರು ಫಲಕವೊಂದನ್ನು ಪ್ರದರ್ಶಿಸಿ, ಗಿರಿಸಾಗರ ಗ್ರಾಮದ ಸರ್ಕಾರಿ ಶಾಲೆಗೆ ಆಟದ ಮೈದಾನ ನೀಡದ ಕಾರಣ ಈ ಸಲದ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸಿದ್ದು ಯಾವ ಪಕ್ಷದವರೂ ತಮ್ಮ ಗ್ರಾಮಕ್ಕೆ ಪ್ರಚಾರಕ್ಕೆ ಬರಬಾರದು ಎಂದು ನಿರ್ಬಂಧ ಹೇರಿದ್ದಾರೆ.
ಈ ಬಗ್ಗೆ ಸರ್ಕಾರದ ಇಲಾಖೆಗಳು ತಕ್ಷಣವೇ ಸ್ಪಂದಿಸುವ ಕೆಲಸವಾಗಬೇಕು. ಶಿಕ್ಷಣದಂಥ ಪ್ರಮುಖ ಕಾರ್ಯಕ್ಕೆ ಯಾವುದೇ ಅಡಚಣೆಗಳು ಬರಬಾರದು. ಗಿರಿಸಾಗರದ ಜನರು ಕೇಳುತ್ತಿರುವ ನ್ಯಾಯಯುತ ಬೇಡಿಕೆ ಈಡೇರಲೇಬೇಕು .
ಉಮೇಶ ಬೆಳಕೂಡ, ಮೂಡಲಗಿ