ಮೂಡಲಗಿ – ಮೂಡಲಗಿ ಪಟ್ಟಣವು ತಾಲೂಕಾಗಿ ಹೊರಹೊಮ್ಮಿ ಅನೇಕ ವರ್ಷಗಳಾದವು. ಪಟ್ಟಣದ ಮಧ್ಯೆಯೇ ಇರುವ ಸರ್ಕಾರಿ ಶಾಲೆ ಶತಮಾನದ ಮೇಲೆ ಅರ್ಧ ಶತಮಾನ ಕಂಡರೂ ಇನ್ನೂ ಯಾವುದೇ ಅಭಿವೃದ್ಧಿ ಕಾಣದೆ ಹಳೆಯ ಗೂಡಿನಂತೆ ಕಾಣುತ್ತಿದೆ. ಶಿಕ್ಷಣ ಇಲಾಖೆಯ ಕರ್ತವ್ಯಪರತೆಯನ್ನು ಅಣಕಿಸುತ್ತಿದೆ.
ಇದೇ ಡಿ. ೨೭ ಹಾಗೂ ೨೮ ರಂದು ಎರಡು ದಿನಗಳ ಕಾಲ ಸಮೀಪದ ಮುಸಗುಪ್ಪಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಕಾರ್ಯಕ್ರಮವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು.
ಜಿಲ್ಲಾ ಪಂಚಾಯತ ಬೆಳಗಾವಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಚಿಕ್ಕೋಡಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಮೂಡಲಗಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಮುಸಗುಪ್ಪಿಯಲ್ಲಿ ನಡೆದ ನಮ್ಮೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಎರಡು ದಿನಗಳ ಕಾಲ ಮೂಡಲ ಆಗಿ ತಾಲೂಕಿನ ಎಲ್ಲ ಶಿಕ್ಷಕ ವೃಂದದವರು, ಅಧಿಕಾರಿಗಳು ಸಡಗರ ಸಂಭ್ರಮದಿಂದ ಓಡಾಡಿ ಒಂದು ಶಾಲೆಯ ಶತಮಾನೋತ್ಸವ ಮಾಡಿದರು. ಸಮಾರಂಭ ನೆರವೇರಿಸಲು ಶಾಸಕರು ಕೂಡ ತುಂಬ ಮುತುವರ್ಜಿ ವಹಿಸಿ ಎಲ್ಲರನ್ನು ಹುರಿದುಂಬಿಸಿದರಂತೆ.
ಇನ್ನು ಮುಸಗುಪ್ಪಿ ಹಿರಿಯ ಪ್ರಾಥಮಿಕ ಶಾಲೆಯನ್ನು ನೋಡಬೇಕು. ಯಾವುದೇ ಖಾಸಗಿ ಶಾಲೆಯ ಆಡಂಬರಕ್ಕೂ ಕಡಿಮೆ ಇಲ್ಲದಂತೆ ಈ ಶಾಲೆಯನ್ನು ಸಜ್ಜುಗೊಳಿಸಲಾಗಿದೆ. ಇಲ್ಲಿ ಏನುಂಟು ಏನಿಲ್ಲ. ಡಿಜಿಟಲ್ ಜಗತ್ತು ತೆರೆದುಕೊಂಡಿದೆ, ವಿಜ್ಞಾನ ಜಗತ್ತು ಅನಾವರಣಗೊಂಡಿದೆ. ಮಕ್ಕಳ ಜ್ಞಾನಕ್ಕೆ ಪೂರಕ ವ್ಯವಸ್ಥೆ ಮಾಡಲಾಗಿದೆ. ಹೊರ ನೋಟಕ್ಕೂ ಕೂಡ ಮುಸಗುಪ್ಪಿ ಶಾಲೆ ಸುಂದರವಾಗಿದೆ. ಮೊನ್ನೆಯಷ್ಟೇ ಉದ್ಘಾಟನೆಗೊಂಡ ರಂಗ ಮಂಟಪ ಕೂಡ ವಿದ್ಯಾರ್ಥಿಗಳ ಪ್ರತಿಭೆ ಪ್ರದರ್ಶನಕ್ಕೆ ಇಂಬು ಕೊಡಲಿದೆ. ಇಲ್ಲಿನ ಶೌಚಾಲಯಗಳು, ಅಲ್ಲಿನ ಸ್ವಚ್ಛತೆ ಇತರ ಶಾಲೆಗಳಿಗೆ ಮಾದರಿಯಾಗಿದೆ.
ಮುಸಗುಪ್ಪಿಯ ಪ್ರಾಥಮಿಕ ಶಾಲೆಯು ಸದ್ಯ ಸಂಭ್ರಮದಿಂದ ಶತಮಾನೋತ್ಸವ ಆಚರಿಸಿಕೊಳ್ಳುವುದರಲ್ಲಿ ಸಾರ್ಥಕತೆಯಿದೆ ಆದರೆ ಒಂದು ಕೇಂದ್ರ ಸ್ಥಾನವೆನ್ನಿಸಿಕೊಂಡಿರುವ ಮೂಡಲಗಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಯಾಕೆ ಶಿಕ್ಷಣ ಇಲಾಖೆ ಅನ್ಯಾಯ ಮಾಡುತ್ತಿದೆ ?

ಈ ಶಾಲೆಗೆ ಈಗ ಭರ್ತಿ ೧೪೫ ವರ್ಷಗಳು ಆದರೆ ಇನ್ನೂ ಶತಮಾನೋತ್ಸವ ಆಚರಿಸಿಕೊಳ್ಳುವ ಯೋಗ ಈ ಶಾಲೆಗೆ ಬಂದಿಲ್ಲ. ಸನ್ ೧೮೮೦ ರಲ್ಲಿ ಈ ಶಾಲೆ ಆರಂಭಗೊಂಡಿದೆಯಂತೆ. ಆದರೆ ಇನ್ನೂ ತಗಡಿನ ಶಾಲೆಯಂತೆ ಕಾಣುತ್ತದೆ. ಇದ್ದದ್ದರಲ್ಲಿ ಹೆಣ್ಣು ಮಕ್ಕಳ ಶಾಲೆ ಸ್ವಲ್ಪ ಪರವಾಗಿಲ್ಲ. ಆದರೆ ಬಾಲಕರ ಶಾಲೆಯಂತೂ ಇನ್ನೂ ಶತಮಾನದ ಹಿಂದಿನ ಶಾಲೆಯಂತೆ ಕಾಣುತ್ತಿದೆ. ಶಾಲೆಯನ್ನು ಸುಧಾರಣೆ ಮಾಡಬೇಕೆಂಬ ಇಚ್ಛಾಸಕ್ತಿ ಹಿಂದಿನ ಮುಖ್ಯೋಪಾಧ್ಯಾಯ ರಿಗೂ, ಬಿಇಓ ಅವರಿಗೂ, ಶಾಸಕರಿಗೂ ಇರಲೇ ಇಲ್ಲವೆ ? ಈ ಶಾಲೆಯ ಬಗ್ಗೆ ಯಾಕೆ ಎಲ್ಲರಿಗೂ ಇಂಥ ನಿರಾಸಕ್ತಿ, ನಿರ್ಲಕ್ಷ್ಯ ಎಂಬುದು ಸಾರ್ವಜನಿಕರ ಪ್ರಶ್ನೆ.
ಮೊದಲೇ ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವ ಕಾಲವಿದು. ಯಾಕೆ ಮೂಗು ಮುರಿಯುತ್ತೀರಿ ಎಂದು ಕೇಳಿದರೆ, ಈ ಬಾಲಕರ ಶಾಲೆಯನ್ನು ತೋರಿಸಬಹುದು. ಇಲ್ಲಿಯವರೆಗೆ ಇಲ್ಲಿ ಒಂದು ಸುಸಜ್ಜಿತ ಶೌಚಾಲಯ ಇರಲಿಲ್ಲ. ಈಗಷ್ಟೇ ನಿರ್ಮಾಣವಾಗಿದೆ. ಅದನ್ನು ಇನ್ನುಂದೆ ಹೇಗೆ ನಿರ್ವಹಣೆ ಮಾಡುತ್ತಾರೋ ಕಾದು ನೋಡಬೇಕು. ಇನ್ನು ಯಾವುದೇ ಯೋಜನೆಯಿಲ್ಲದೆ ದಕ್ಷಿಣ ದಿಕ್ಕಿನಲ್ಲಿ ನಿರ್ಮಾಣಗೊಂಡಿರುವ ಶೌಚಾಲಯಗಳ ಅವ್ಯವಸ್ಥೆಯ ಬಗ್ಗೆ ಎಷ್ಟು ಹೇಳಿದರೂ ಸಾಲದು. ಈ ಶೌಚಾಲಯಗಳ ನಿರ್ಮಾಣವೇ ಸರ್ಕಾರಿ ಹಣ ದಂಡವಾಗಿದೆ. ಸಿಕ್ಕಾಪಟ್ಟೆ ಭ್ರಷ್ಟಾಚಾರ ನಡೆದಿದೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತದೆ.
ಶಾಲೆ ಸ್ಥಾಪಿತವಾದ ಅವಧಿ ನೋಡಿದರೆ ಸಾಕಷ್ಟು ಅಭಿವೃದ್ಧಿ ಹೊಂದಬೇಕಾಗಿತ್ತು. ಆದರೆ ಹಳೆಯ ಹೆಂಚು ತೆಗೆದು ಕಳಪೆ ಗುಣಮಟ್ಟದ ತಗಡು ಹಾಕಿದ್ದನ್ನು ಬಿಟ್ಟರೆ ಬೇರೆ ಕೆಲಸಗಳಾಗಿಲ್ಲ. (ಈ ಮೊದಲಿದ್ದ ಬಿಇಓ ಅಜಿತ ಮನ್ನಿಕೇರಿಯವರು ಈ ಶಾಲೆಗೆ ೫೦ ಲಕ್ಷ ರೂ.ಗಳ ದೇಣಿಗೆ ಬರುವುದಿದೆ ಎಂದು ಹೇಳಿದ ನೆನಪು ) ಮೊನ್ನೆ ತಾನೆ ಯಾರೋ ದಾನಿಗಳು ಡೆಸ್ಕ್ ಗಳನ್ನು ನೀಡಿದ್ದಾರಂತೆ ಅವುಗಳನ್ನು ಇಟ್ಟುಕೊಳ್ಳುವ ಯೋಗ್ಯತೆ ಈ ಶಾಲೆಗೆ ಇಲ್ಲವೆಂದರೆ ತಪ್ಪಾಗದು.
ಊರಿನ ನಡುಮಧ್ಯೆ ವಿಶಾಲವಾದ ಜಾಗದಲ್ಲಿ ಇರುವ ಈ ಶಾಲೆ ಊರಿನ ಆಕರ್ಷಣೆಯಾಗಬೇಕಿತ್ತು. ಆದರೆ ಆಗಿಲ್ಲವೆಂದರೆ ಇಲ್ಲಿನ ಶಿಕ್ಷಣ ವ್ಯವಸ್ಥೆ ಎಷ್ಟು ಜಡ್ಡುಗಟ್ಟಿದೆಯೆಂಬ ಅಂದಾಜು ಸಿಗುತ್ತದೆ. ಈವರೆಗಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಲಿ, ಶಾಸಕರಾಗಲಿ, ಎಸ್ ಡಿ ಎಂ ಸಿಯವರಾಗಲಿ ಶಾಲೆಯನ್ನು ಸುಧಾರಿಸುವ ನಿಟ್ಟಿನಲ್ಲಿ ವಿಚಾರ ಮಾಡದೇ ಇರುವುದು ವಿಪರ್ಯಾಸ. ಗ್ರಾಮೀಣ ಮಟ್ಟದ ಮುಸಗುಪ್ಪಿ ಶಾಲೆಯನ್ನಾದರೂ ನೋಡಿ ಕಲಿಯಬೇಕಾಗಿದೆ. ನೂತನ ಬಿಇಓ ರವರು ಮನಸು ಮಾಡಬೇಕು, ಶಾಸಕರ ಮನವೊಲಿಸಬೇಕು. ಶಾಸಕರೂ ಕೂಡ ಈ ಶಾಲೆಯತ್ತ ಇರುವ ಮಲತಾಯಿ ಧೋರಣೆ ತೆಗೆದುಹಾಕಬೇಕೆಂಬುದು ನಮ್ಮ ಮನವಿ.
ಉಮೇಶ ಬೆಳಕೂಡ
ಮೂಡಲಗಿ,೯೪೪೮೮೬೩೩೦೯

