ಮುನವಳ್ಳಿ: ”ಜ್ಞಾನದಿಂದ ದೀಪ ಹಚ್ಚುವಾಗ ಜನ್ಮಾಂತರ ವಾಸನೆಗಳು ಅಥವ ಕರ್ಮ ಬಂಧನಗಳು ಸುಟ್ಟು ಹೋಗುತ್ತವೆ. ನಮ್ಮ ಚಿಂತನೆಗಳು ಮತ್ತು ಲಕ್ಷ್ಯಗಳು ಉನ್ನತವಾಗಿಯೇ ಇರಬೇಕು. ಕಾರ್ತಿಕ ಮಾಸದಲ್ಲಿ ಮಾತ್ರ ದೀಪ ಹಚ್ಚದೇ ಪ್ರತಿ ದಿನವೂ ಅದನ್ನು ಭಗವಂತನ ಆರಾಧನೆ ಎಂದು ದೀಪ ಹಚ್ಚಿರಿ.ಎಲ್ಲೆಡೆಯೂ ಹರುಷ ತುಂಬಿರಲಿ.” ಎಂದು ಶ್ರೀ ಅಭಿನವ ನಾಗಲಿಂಗ ಮಹಾಸ್ವಾಮಿಗಳು ಕರೆ ನೀಡಿದರು.
ಅವರು ಚಿಕ್ಕುಂಬಿ ಗ್ರಾಮದ ಶ್ರೀ ಜಗದ್ಗುರು ಅಜಾತ ನಾಗಲಿಂಗೇಶ್ವರ ಮಠದಲ್ಲಿ ನೇತೃತ್ವದಲ್ಲಿ ಡಿಸೆಂಬರ್ ೫ ರಂದು ಸಂಜೆ ೬.೪೫ ಗಂಟೆಗೆ ಕಾರ್ತಿಕೋತ್ಸವ ಮುಕ್ತಾಯ ಸಮಾರಂಭದ ಕಾರ್ಯಕ್ರಮದಲ್ಲಿ ತಮ್ಮ ಪ್ರಸಾದ ವಾಣಿಯನ್ನು ನೀಡಿದರು.” “ಸಿದ್ಧಾರೂಢ ಮಹಾತ್ಮರ ವಾಣಿಯಂತೆ ಚಿಕ್ಕುಂಬಿಯಲ್ಲಿ ಪಲ್ಲಕ್ಕಿ ರಥೋತ್ಸವ ಜರಗುತ್ತದೆ. ಎಂದು ಅಮೃತ ವಾಣಿಯಾಗಿತ್ತು. ಅದು ಈಗ ನಿಜವಾಗುತ್ತಿದೆ.ಮಹಾತ್ಮರ ವಾಣಿಗಳು ಯಾವತ್ತೂ ಬದುಕಿನ ಉನ್ನತಿಯನ್ನು ಲೋಕಕ್ಕೆ ಒದಗುವ ವಿವಿಧ ಸಂಗತಿಗಳನ್ನು ಸೂಚಿಸುತ್ತವೆ”ಎಂದು ಅವರು ನುಡಿದರು.
ಈ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಚಿಕ್ಕಬಳ್ಳಾಪುರದ ನಂದಿಬೆಟ್ಟದ ಸಿದ್ದನ ಗವಿಯ ಶ್ರೋತ್ರೀಯ ಬ್ರಹ್ಮನಿಷ್ಠ ಸ್ವಾಮಿ ಶಿವಾತ್ಮಾನಂದ ಸರಸ್ವತಿ ಮಹಾಸ್ವಾಮಿಗಳು ತಮ್ಮ ಪ್ರಸಾದ ವಾಣಿಯನ್ನು ನೀಡಿ “ದೀಪವನ್ನು ಬೆಳಗುವುದು ಸನಾತನ ಜೀವನ ಧರ್ಮದಲ್ಲಿ ಎಲ್ಲಾ ಧಾರ್ಮಿಕ ವಿಧಿಗಳಲ್ಲಿ ನಡೆಯಬೇಕಾದ ಪ್ರಥಮ ಕಾರ್ಯ. ಚಿಕ್ಕುಂಬಿ ಮಠದಲ್ಲಿ ಅದನ್ನು ಕಾರ್ತಿಕೋತ್ಸವದಲ್ಲಿ ವಿಶಿಷ್ಟವಾಗಿ ನಡೆಸಿಕೊಂಡು ಬರುತ್ತಿರುವುದು ನಿಜಕ್ಕೂ ಮಹತ್ವದ ಸಂಗತಿ. ಈ ದಿಸೆಯಲ್ಲಿ ಮಹಾತ್ಮರ ವಾಣಿಯನ್ನು ಕೂಡ ನೀವು ಆಲಿಸುವಿರಿ. ಹಾಲಿನಲ್ಲಿ ತುಪ್ಪವಿದ್ದಂತೆ ನಮ್ಮಲ್ಲಿ ಪರಮಾತ್ಮನಿದ್ದಾನೆ. ಮನಸಾ ಯಾರು ನಮ್ಮಲ್ಲಿ ಪರಮಾತ್ಮನಿರುತ್ತಾನೆ ಎಂದು ತಿಳಿದಿರುವರೋ ಅದರಂತೆ ಶುದ್ಧ ಭಾವದಿಂದ ನಡೆದುಕೊಳ್ಳುವರೋ ಅವರು ಪಾವನರು” ಎಂದು ತಿಳಿಸಿದರು. ಅಥಣಿ ತಾಲೂಕಿನ ಅಡಹಾಳಟ್ಟಿಯ ದುರದುಂಡೇಶ್ವರ ಶಾಖಾ ಮಠದ ಶಿವಪಂಚಾಕ್ಷರಿ ಮಹಾಸ್ವಾಮಿಗಳು “ಮಂಗಳ ಚಿಹ್ನೆಗಳಲ್ಲಿ ಪ್ರಥಮವಾಗಿ ದೀಪವನ್ನೇ ಬೆಳಗಲಾಗುತ್ತದೆ. ಅನಂತರ ಇತರ ಎಲ್ಲವೂ ಜರಗುತ್ತದೆ. ಹಿಂದೆ ನಮ್ಮ ಪೂರ್ವಜರೆಲ್ಲರೂ ಗೋಮಯದಿಂದ ನೆಲವನ್ನು ಸಾರಿಸುತ್ತಿದ್ದರು. ಅದಕ್ಕೆ ವಿಶಿಷ್ಟ ಮಹತ್ವವಿತ್ತು. ಇಂದಿಗೂ ಗ್ರಾಮೀಣ ಪ್ರದೇಶಗಳಲ್ಲಿ ಗೋಮಯದಿಂದ ಮನೆಯನ್ನು ಸಾರಿಸುವ ಸಂಪ್ರದಾಯವಿದೆ. ಚಿಕ್ಕುಂಬಿ ಮಠದ ಈ ಕಾರ್ಯ ನಿಜಕ್ಕೂ ಅಮರ.ಇಂಥ ಸದ್ಭಕ್ತರು ಇಲ್ಲಿ ನೆರೆದು ಇಂತಹ ಪುಣ್ಯ ಕಾರ್ಯದಲ್ಲಿ ತೊಡಗುವ ಮೂಲಕ ಅನ್ನದಾಸೋಹ, ದಾನ ದಾಸೋಹ, ಜ್ಞಾನ ದಾಸೋಹ ಕಾರ್ಯಗಳಲ್ಲಿ ಪೂಜ್ಯರೊಂದಿಗೆ ಕೈಜೋಡಿಸುತ್ತಿರುವಿರಿ. ಇದು ನಿಜಕ್ಕೂ ಪುಣ್ಯ ಭೂಮಿ.” ಎಂದು ತಮ್ಮ ಪ್ರಸಾದ ವಾಣಿಯಲ್ಲಿ ತಿಳಿಸಿದರು.
ಧಡೇರಕೊಪ್ಪ (ಹನುಮನಹಳ್ಳಿ) ಶಿವಾನಂದಮಠದ ಶ್ರೋತ್ರೀಯ.ಬ್ರಹ್ಮನಿಷ್ಠ ಶ್ರೀ ಶಿವಬಸವ ಮಹಾಸ್ವಾಮಿಗಳು “ ದೀಪಗಳಲ್ಲಿ ವೈವಿದ್ಯವಿದೆ. ಜ್ಯೋತಿಗೆ ನಿಗದಿತ ಆಕಾರವಿಲ್ಲದಿದ್ದರೂ ದೀಪವನ್ನು ಹಚ್ಚುವ ಹಣತೆಗಳಲ್ಲಿ ದೀಪದ ಕಾಲು ಕಂಬಗಳಲ್ಲಿ ವೈವಿಧ್ಯಗಳನ್ನು ಕಾಣಬಹುದು. ಸಾಲಾಗಿ ಹಚ್ಚುವ ದೀಪಗಳನ್ನು ನೋಡುವುದೇ ಕಣ್ಣಿಗೆ ಹಬ್ಬ. ಆತ್ಮನ ಸ್ವರೂಪವನ್ನು ಶಬ್ದಗಳಲ್ಲಿ ವರ್ಣಿಸುವುದು ಬಹಳ ಕಷ್ಟ. ಕಾಮ ಕ್ರೋಧ ಮೋಹ ಮದವೆಂಬ ಮತ್ಸರಗಳು ಈ ಜ್ಯೋತಿಯ ಮೂಲಕ ಅಳಿಯುತ್ತವೆ” ಎಂದು ಕಾರ್ತಿಕದ ಮಹತ್ವವನ್ನು ತಿಳಿಸಿದರು.
ಹಾರೋಗೊಪ್ಪದ ಚನ್ನವೃಷಭೇಂದ್ರ ಲೀಲಾ ಮಠದ ಮಾತೋಶ್ರೀ ಶಿವಯೋಗಿನಿದೇವಿ “ಹೊರಗಿನ ವ್ಯವಹಾರಗಳಿಗಾಗಲಿ ಮಾನಸಿಕ ಕ್ರಿಯೆಗಳಿಗಾಗಲಿ ಬೆಳಕೆಂಬುದು ಬೇಕೇ ಬೇಕು.ಬೆಳಕು ಸ್ವಯಂ ಪ್ರಕಾಶಗೊಳ್ಳುವಂತದ್ದಿರಬೇಕು.ಅಂತಹ ಬೆಳಕೇ ಪರಬ್ರಹ್ಮ, ಆತನೇ ಪರಂಜ್ಯೋತಿ. ಸೂರ್ಯ ಚಂದ್ರ ನಕ್ಷತ್ರ.ಬೆಂಕಿ.ವಿದ್ಯುತ್ ಮಿಂಚು, ದೀಪ ಇವುಗಳೆಲ್ಲ ಪ್ರಾಕೃತಿಕವಾಗಿರುವ ಜ್ಯೋತಿಗಳು.ನಾವು ಮನೆಮನೆಗಳಲ್ಲಿ ಹಚ್ಚುತ್ತಿರುವ ದೀಪಗಳು ಆ ಪರಂಜ್ಯೋತಿಯ ಪ್ರತೀಕ.ಅವುಗಳನ್ನು ಪೂಜಿಸುವುದು.
ಶ್ರೀಮಠದಲ್ಲಿ ನಡೆಯುವ ಕಾರ್ತಿಕ ಕಾರ್ಯಕ್ರಮಗಳಲ್ಲಿ ಎಲ್ಲರೂ ಪಾಲ್ಗೊಂಡು ದೀಪ ಹಚ್ಚುವ ಮೂಲಕ ಆ ಪರಂಜ್ಯೋತಿಯ ಜೊತೆಗೆ ಇಲ್ಲಿ ಉಪಸ್ಥಿತರಿರುವ ಜ್ಞಾನಿಗಳ ಪ್ರಸಾದವಾಣಿ ಪಡೆದು ಆ ಜ್ಯೋತಿಗೆ ಇನ್ನಷ್ಟು ಮೆರಗು ನೀಡುತ್ತಿರುವ ನೀವೆಲ್ಲ ಸದ್ಬಕ್ತರು ಧನ್ಯರು. ಈ ನೆಲ ಪಾವನ”ಎಂದು ನುಡಿದರು.
ಗೊರವನಕೊಳ್ಳದ ಬ್ರಹ್ಮಾನಂದ ಮಠದ ಶಿವಾನಂದ ಸ್ವಾಮಿಗಳು“ ಅಸತೋಮಾ ಸದ್ಗಮಯ ತಮಸೋಮಾ ಜ್ಯೋತಿರ್ಗಮಯ. ಎಂಬ ಶ್ಲೋಕವನ್ನು ತಿಳಿಸುತ್ತ ಕತ್ತಲೆಯಿಂದ ಬೆಳಕಿನಡೆಗೆ ಅಜ್ಞಾನದಿಂದ ಸುಜ್ಞಾನದೆಡೆಗೆ ಜೀವನ ಸಾಗಬೇಕು.ಅಜ್ಞಾನ ಇರುವಲ್ಲಿ ಶಾಂತಿ ನೆಮ್ಮದಿ ಸಿಗದು. ನಮ್ಮಲ್ಲಿ ಬ್ರಹ್ಮಜ್ಞಾನ ಪಡೆದುಕೊಳ್ಳಬೇಕೆಂದರೆ ಇಂತಹ ಮಹಾತ್ಮರ ವಾಣಿಯನ್ನು ಆಲಿಸಬೇಕು. ಇಂತಹ ಧಾರ್ಮಿಕ ಕಾರ್ಯದಲ್ಲಿ ತನು, ಮನ, ಧನದಿಂದ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ಕೃತಾಥರಾಗಬೇಕು.” ಎಂದು ತಿಳಿಸಿದರು.
ಹಾಲ ಕುಸುಗಲ್ ಸಿದ್ದಾರೂಢ ಮಠದ ಪರಮ ಪೂಜ್ಯ ರವಿಶಂಕರ ಮಹಾಸ್ವಾಮಿಗಳು “ಆತ್ಮನ ಸ್ವರೂಪವನ್ನು ಪದಗಳಲ್ಲಿ ವರ್ಣಿಸುವುದು ಕಷ್ಟ. ಅದು ಅನುಭವಕ್ಕೆ ನಿಲುಕುವ ವಿಷಯವೇ ಹೊರತು ಹೇಳಲು ಬರುವುದಿಲ್ಲ. ಆದರೂ ಕ್ಲಿಷ್ಟಕರವಾದ ವಿಷಯವನ್ನು ಸರಳವಾಗಿ ಸುಲಭವಾಗಿ ಹೇಳುವ ಶಕ್ತಿ ಮಹಾತ್ಮರಲ್ಲಿ ಇತ್ತು. ಅಂತಹ ಮಹಾತ್ಮರ ಸನಾತನ ಸಂಸ್ಕೃತಿಯನ್ನು ನಮ್ಮ ದೇಶ ಹೊಂದಿದೆ. ಅಂತರಂಗದ ಕತ್ತಲೆಯನ್ನು ಕಳೆಯಬೇಕಾದರೆ ಸದ್ಗುರು ಸನ್ನಿಧಿಯಿಂದ ಮಾತ್ರ ಸಾಧ್ಯ.ಅಂತಹ ಪರಂಪರೆಯನ್ನು ಚಿಕ್ಕುಂಬಿ ಮಠವು ನಡೆಸಿಕೊಂಡು ಬರುವ ಮೂಲಕ ಸದ್ಭಕ್ತರಿಗೆ ಗುರುವಿನ ಪ್ರಸಾದವಾಣಿಯನ್ನು ಉಣಬಡಿಸುತ್ತಿರುವುದು ನಿಜಕ್ಕೂ ಮರೆಯಲಾಗದ ಕಾರ್ಯ. ಅದರಲ್ಲಿ ತಾವೆಲ್ಲರೂ ಪಾಲ್ಗೊಂಡು ಇಂತಹ ಕಾರ್ಯಕ್ರಮಕ್ಕೆ ಸಾಕ್ಷೀಭೂತರಾಗಿರುವಿರಿ.” ಎಂದು ಭಕ್ತರನ್ನ ಉದ್ದೇಶಿಸಿ ತಮ್ಮ ಪ್ರಸಾದ ವಾಣಿಯನ್ನು ನೀಡಿದರು.
ಅಬ್ಬೀಗೇರಿ ಮುಗಳಖೋಡ ಶಾಖಾಮಠದ ಪರಮ ಪೂಜ್ಯ ಬಸವರಾಜ ಮಹಾಸ್ವಾಮಿಗಳು “ದೀಪವನ್ನು ಉರಿಸುವಾಗ ಅದರಲ್ಲಿ ಉತ್ಪತ್ತಿಯಾಗ ಹೊರೆ ಸುತ್ತಲಿನ ವಾತಾವರಣವನ್ನುಸೇರಿ ಉಸಿರಾಟದ ಮೂಲಕ ನಮ್ಮೊಳಗೆ ಸೇರಿ ಮನದ ಕ್ಲೇಶನಾಶಕ್ಕೆ ಕಾರಣವಾಗುತ್ತದೆ.ತುಪ್ಪದ ದೀಪ ಕೂಡ ಹಾಗೆಯೇ ಎಳ್ಳೆಣ್ಣೆ, ಹರಳೆಣ್ಣೆ, ಸೇಂಗಾ ಎಣ್ಣೆ ಹೀಗೆ ಮಹತ್ವದ ಧಾನ್ಯಗಳಿಂದ ತಯಾರಿಸಿದ ಎಣ್ಣೆಯಿಂದ ದೀಪ ಬೆಳಗುವುದರ ಹಿಂದೆಯೂ ಕೂಡ ವೈಜ್ಞಾನಿಕ ಸತ್ಯವಿದೆ”ಎಂದು ದೀಪ ಬೆಳಗುವುದರ ಮಹತ್ವವನ್ನು ತಿಳಿಸಿದರು.
ಇದೇ ಸಂದರ್ಭದಲ್ಲಿ ಚಿಕ್ಕಬಳ್ಳಾಪುರದ ನಂದಿಬೆಟ್ಟದ ಸಿದ್ದನ ಗವಿಯ ಶ್ರೋತ್ರೀಯ ಬ್ರಹ್ಮನಿಷ್ಠ ಸ್ವಾಮಿ ಶಿವಾತ್ಮಾನಂದ ಸರಸ್ವತಿ ಮಹಾಸ್ವಾಮಿಗಳ ಕಿರೀಟ ಪೂಜೆ ಜರುಗಿತು.
ಈ ಕಾರ್ಯಕ್ರಮದಲ್ಲಿ ನರಗುಂದ ಪುಣ್ಯಾರಣ್ಯ ಪತ್ರಿವನ ಮಠದ ಷಟಸ್ಥಳ ಬ್ರಹ್ಮ ಸಿದ್ಧವೀರ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು, ಮುಖ್ಯ ಅತಿಥಿಗಳಾಗಿ ಗದಗ ಜಿಲ್ಲೆಯ ನೀರಲಗಿಯ ವೇದಮೂರ್ತಿ ಚಂದ್ರಶೇಖರಯ್ಯ ಹಿರೇಮಠ,ಬೆನಕೊಪ್ಪದ ಗುತ್ತಿಗೆದಾರರಾದ ಬಿ.ವೀ.ಬಿಂಗಿ, ಎಸ್.ವಿ.ಬಿಂಗಿ, ಎ.ಎಸ್.ಬಿಂಗಿ, ಎಂ.ಕೆ.ಕುಂಬಾರ ಮೊದಲಾದವರು ಉಪಸ್ಥಿತರಿದ್ದರು.
ಶ್ರೀ ಮಠದ ಬ್ರಹ್ಮರಥ(ತೇರು) ನಿರ್ಮಾಣದ ದೇಣಿಗೆ ಪುಸ್ತಕ ಬಿಡುಗಡೆಯನ್ನು ನಂದಿಮಠದ ಶ್ರೀಗಳು ನೆರವೇರಿಸಿದರು. ಚಿಕ್ಕುಂಬಿಯ ಸಮಸ್ತ ಭಜನಾ ಮಂಡಳಿಗಳು ಹಾಗೂ ಸಂಗೀತಗಾರರಿಂದ ಸಂಗೀತ ಸೇವೆ ಜರುಗಿತು. ಎಂ.ಪಿ.ಪಾಟೀಲ ಶಿಕ್ಷಕರು ಕಾರ್ಯಕ್ರಮ ನಿರೂಪಿಸಿದರು. ಸಂಪನ್ಮೂಲ ವ್ಯಕ್ತಿಗಳಾದ ಎನ್.ಜಿ.ತೊಪ್ಪಲದ ಸ್ವಾಗತಿಸಿದರು. ಕೊನೆಗೆ ಮಹಾಮಂಗಳಾರತಿಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.