ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ. ಶಿಕ್ಷಣ (Education) ಎಂಬುದು ಸಮಾಜದ ಮೂಲ ಅಡಿಪಾಯ ಎಂದೆನಿಸಿದ್ದು ಲಿಂಗ, ಹಿನ್ನೆಲೆ, ಆರ್ಥಿಕ ಸ್ಥಿತಿ, ಲೈಂಗಿಕ ದೃಷ್ಟಿಕೋನ ಮತ್ತು ಧರ್ಮವನ್ನು ಲೆಕ್ಕಿಸದೆ ಆರ್ಥಿಕ ಸ್ವಾತಂತ್ರ್ಯ ಮತ್ತು ಜ್ಞಾನ ಸೇರಿದಂತೆ ಜೀವನದ ವಿವಿಧ ಅಂಶಗಳನ್ನು ಸುಧಾರಿಸಲು ಹಾಗೂ ಮಹೋನ್ನತ ಗುರಿಯನ್ನು ಸಾಧಿಸಲು ಅವಕಾಶವನ್ನೊದಗಿಸುವ ಕ್ಷೇತ್ರವಾಗಿದೆ.
ಅಲ್ವಾ? ಏನ್ರಿ ಅಪರಾಧ ಮಾಡಿದ್ದೀವಿ ನಾವು, ಹೆಣ್ಣಾಗಿ ಹುಟ್ಟಿದ್ದು ತಪ್ಪಾ? ಉನ್ನತ ಶಿಕ್ಷಣ ಪಡಿಯುತ್ತಿರುವುದು ತಪ್ಪಾ? ನಿಮಗೆ ಸಮಾನವಾಗಿ ಕೆಲಸ ಮಾಡೋದು ತಪ್ಪಾ? ರಾತ್ರಿ ಕೆಲಸ ಮಾಡೋದು ತಪ್ಪಾ? ಸುಂದರವಾಗಿರೋದು ತಪ್ಪಾ?ನಾವು ಓಡಾಡೋದು ತಪ್ಪಾ? ಅನ್ಯಾಯದ ವಿರುದ್ಧ ಹೋರಾಡೋದು ತಪ್ಪಾ? ನಿಮ್ಮ ಎಲ್ಲಾ ಆಸೆಗಳನ್ನು ತೀರಿಸಿಕೊಳ್ಳೋ ಭೋಗದ ವಸ್ತುಗಳ ನಾವು…? ನಾವು ನ್ಯಾಯದ ವಿರುದ್ಧ ಸ್ವಲ್ಪ ಧ್ವನಿ ಎತ್ತಿದ್ದರೆ ನಮ್ಮನ್ನು ರೇಪ್ ಮಾಡ್ತೀರಾ…? ಯಾಕೆ ನಮ್ಮ ವಿರುದ್ಧ ಹೋರಾಡುವ ತಾಕತ್ತಿಲ್ವಾ ನಿಮಗೆ? ನಮ್ಮೊಂದಿಗೆ ಸೆಣಸಾಡುವ ಧೈರ್ಯ ಇಲ್ವಾ ? ಬನ್ನಿ ಹೆಣ್ಣು ಮಕ್ಕಳೊಂದಿಗೆ ಪೈಪೋಟಿ ಮಾಡಿ, ಆದರೆ ಎಲ್ಲಾ ಬಿಟ್ಟು ಅತ್ಯಾಚಾರ, ಕೊಲೆ ಮಾಡಿದರೆ ನೀವು ಗೆದ್ದ ಹಾಗಾ ? ಹೆಣ್ಣಿಗೆ ಬೆಲೇನೇ ಇಲ್ವಾ? ನಾವು ಶಾಪಗ್ರಸ್ತರೆ. ? ನಮಗೆ ನೋವಿಲ್ವಾ? ಈ ಹತ್ಯಾಚಾರಗಳಿಗೆ ಕೊನೆ ಎಂದು ?
ಸುಮಾರು 45 ನಿಮಿಷಗಳವರೆಗೂ ನರಕಯಾತನೆ ಅನುಭವಿಸಿದ ಹೆಣ್ಣಿನ ಕೂಗು ಯಾರಿಗೂ ಕೇಳಿಸಲೇ ಇಲ್ವಾ? ಇದು ಎಂತಹ ಆಸ್ಪತ್ರೆ, ಘನಘೋರ ಕೃತ್ಯ ನಡೆಯುತ್ತಿದ್ದರೂ ಆ ಹೆಣ್ಣಿನ ರಕ್ಷಣೆಗೆ ಯಾರು ಬರಲಿಲ್ಲವೆ? “ರಾಧಾ ಗೋವಿಂದ್ಕರ್” ಪ್ರತಿಷ್ಠತ ಆಸ್ಪತ್ರೆ ಇದ್ದರೂ ಕೂಡ DDR Duty Doctors Room ವ್ಯವಸ್ಥೆ ಯಾಕೆ ಇಲ್ಲ? ಸೆಮಿನಾರ್ ಹಾಲ್ ನಲ್ಲಿ ಮಲಗಬೇಕಾ? ಸತತವಾಗಿ 36 ಘಂಟೆ ಕೆಲಸ ಮಾಡುವುದು ಅಂದರೆ ಏನಿದರ ಅರ್ಥ? ಸಂಜಯ್ ರಾಯ್ ಒಬ್ಬ ಕಾಮುಕ, ಮದ್ಯ ವ್ಯಸನಿ, ಅನೇಕ ಹೆಣ್ಣುಮಕ್ಕಳಿಗೆ ಶೋಷಣೆ ಮಾಡಿದ ಕ್ರಿಮಿನಲ್ ದುರ್ದೈವ ನೋಡಿ ಇವನು ಸಿವಿಲ್ ವಾಲೆಂಟರ್ ಅಂತೆ ಇವರು ಸಮಾಜ ಸುಧಾರಿಸುತ್ತಾರೆಯೇ? ಇಂತಹ ಕ್ರಿಮಿನಲ್ಗಳಿಗೆ ಯಾವ ಆಧಾರದ ಮೇಲೆ ಹುದ್ದೆ ಕೊಟ್ಟಿರಬಹುದು, ಒಂದು ವೇಳೆ ಕೊಟ್ಟಿದ್ದರೂ ಇವನ ಅನೈತಿಕ ಚಟುವಟಿಕೆಗಳು ಯಾರ ಗಮನಕ್ಕೂ ಬಂದಿಲ್ವ ? ನಾಲಕ್ಕು ನಾಲಕ್ಕು ಮದುವೆಗಳನ್ನು ಮಾಡಿಕೊಂಡಿರುವ ಆಸಾಮಿ, ಕಾಮುಕ ಪಿಶಾಚಿಯನ್ನು ಹುದ್ದೆಯಿಂದ ಮೊದಲೆ ಡಿಸ್ಮಿಸ್ ಮಾಡಬಹುದಿತ್ತಲ್ವ? ಸಾವಿರಾರು ಪ್ರಶ್ನೆಗಳು……
“ಬೇಟಿ ಪಢಾವ್,ಬೇಟಿ ಬಚಾವ್” ತಂದೆ ತಾಯಿ ಹೆಣ್ಣು ಮಕ್ಕಳಿಗೂ ಕೂಡ ಉನ್ನತ ಶಿಕ್ಷಣ ಸಿಗಲಿ, ಅವರು ಕೂಡ ಆರ್ಥಿಕವಾಗಿ, ಸಾಮಾಜಿಕವಾಗಿ ಬಲಿಷ್ಠರಾಗಿ ನೆಮ್ಮದಿಯ ಜೀವನ ರೂಪಿಸಿಕೊಳ್ಳಲಿಕ್ಕೆ ಅಂತ ನಗರ ಪ್ರದೇಶಗಳಿಗೆ ಕಳಿಸುತ್ತಾರೆ, ಆದರೆ ಆ ಹೆಣ್ಣು ಮಗು ಸುರಕ್ಷತೆಯಿಂದ ಮನೆಗೆ ವಾಪಾಸ್ ಬರುತ್ತಾಳೆ ಎನ್ನುವ ನಂಬಿಕೆ ಈಗ ಪಾಲಕ ಪೋಷಕರಿಗೆ. ಇಲ್ಲ ರಿ.. ಎಂತಹ ಹೇಯ ಕೃತ್ಯ ಇದು, ಖಂಡನೀಯ.
ಉನ್ನತ ಶಿಕ್ಷಣ ಸಂಸ್ಥೆಗಳು ಹೆಣ್ಣುಮಕ್ಕಳ ಸುರಕ್ಷತೆಗಾಗಿ ವಿಶೇಷ ಕಾಳಜಿ ವಹಿಸಬೇಕು, PG ಗಳು, ಹಾಸ್ಟೆಲಗಳು, ಕ್ಯಾಂಪಸ್ಗಳು ಎಲ್ಲಾ ಕಡೆಗಳಲ್ಲೂ ಪೊಲೀಸ್ ನೇಮಕ ಮಾಡಬೇಕು, ದುರ್ದೈವ ನೋಡಿ ಕೋಲ್ಕತ್ತಾದಲ್ಲಿ ಸಿವಿಲ್ ವಾಲೆಂಟರ್ ಎಂಬಾತನಿಂದಲೇ ಈ ಕೃತ್ಯ ಆಗಿರುವುದು, ಯಾರ ಮೇಲೆ ನಂಬಿಕೆ, ವಿಶ್ವಾಸ ಇಲ್ಲದ ಹಾಗೆ ಆಗಿದೆ. ನಿರ್ಭಯ, ಹೈದ್ರಾಬಾದ್ ಯುವತಿ, ಮೊನ್ನೆ ಹುಬ್ಬಳ್ಳಿಯಲ್ಲಿ ಕಾಲೇಜು ಕ್ಯಾಂಪಸ್ನಲ್ಲಿ ಹಾಡುಹಗಲೆ ವಿದ್ಯಾರ್ಥಿನಿ ಕೊಲೆ, ಅದು ಮಾಸುವ ಮೊದಲೆ, ಇನ್ನೊಂದು ಅನಾಥ ಯುವತಿ ಕೊಲೆ. ಕಾನೂನು ಏನು ಮಾಡುತ್ತಿದೆ? ಯಾಕೆ ಆರೋಪಿಗಳಿಗೆ ಗಲ್ಲು ಶಿಕ್ಷೆ ಕೊಡುತ್ತಿಲ್ಲ…? ಯಾಕೆ ವಿಳಂಬ? ಕಾನೂನಿನ ನಿಧಾನಗತಿಯ ಕಾರ್ಯಾಚರಣೆಗಳಿಂದ ಅಪರಾಧಗಳಿಗೆ ಭಯ ಇಲ್ಲದ ಹಾಗೆ ಆಗಿದೆ,
ಎಲ್ಲೆಂದರಲ್ಲಿ ಸರಗಳ್ಳತನ…, ಬೆಂಗಳೂರಿನಲ್ಲಿ ಈಗಂತೂ ಭಯಾನಕ ವಾತಾವರಣ, ನಿರ್ಜನ ಪ್ರದೇಶದಲ್ಲಿ ಒಂಟಿ ಮಹಿಳೆಯರು ಸಿಕ್ಕರೆ ಸಾಕು ಅಮಾನವೀಯವಾಗಿ ಎಳೆದಾಡುವ ದೃಶ್ಯಗಳು ನ್ಯೂಸ್ ಚಾನೆಲ್ ಗಳಲ್ಲಿ ಬಿತ್ತರಿಸುತ್ತಾರೆ, ಆದರೆ ಅಪರಾಧಿಗಳಿಗೆ ಶಿಕ್ಷೆಯಾಗಿದ್ದು ಮಾತ್ರ ಗೊತ್ತೆ ಇಲ್ಲ.ಯಾಕೊ ವಾತಾವರಣ ತುಂಬಾ ಕೆಟ್ಟಿದೆ ಇದಕ್ಕೆ ನಮ್ಮ ಕಾನೂನಿನ ವ್ಯವಸ್ಥೆ ಬದಲಾಗಬೇಕು, ಅಪರಾಧಗಳಿಗೆ ತುರ್ತಾಗಿ ಕಠಿಣ ಶಿಕ್ಷೆಯಾಗಬೇಕು. ಕಾನೂನು ಬದಲಾಗಬೇಕು.. ಇನ್ನೂ ಯಾರು ಯಾರು ಇಂತಹ ಘಟನೆಗಳಿಗೆ ಕಾರಣಿಕರ್ತರು ಇದಾರೆ, ಈ ವ್ಯವಸ್ಥೆ ಹಿಂದೆ ಇರುವ ಉದ್ದೇಶ ಎಲ್ಲವೂ ತನಿಖೆಯಾಗಿ ಅಪರಾಧಿಗಳಿಗೆ ಕಠಿಣ ಶಿಕ್ಷೆ ಆಗಬೇಕು…
ಆ ಮುಗ್ಧ ಜೀವದ ಆತ್ಮಕ್ಕೆ ಶಾಂತಿ ಸಿಗಲಿ… ತಂದೆ ತಾಯಿ ಕುಟುಂಬಕ್ಕೆ ದುಃಖಭರಿಸುವ ಶಕ್ತಿ ಸಿಗಲಿ… RIP ಡಿಯರ್ ಡಾಕ್ಟರ್ ಜಿ….. ಇನ್ನೂ ಎಷ್ಟು ಜೀವಗಳು ಬಲಿಯಾಗುತ್ತವೆಯೊ? ನಮಗೆ ಎಲ್ಲಿದೆ ಸುರಕ್ಷತೆ?
ಮಹಿಳೆಯರು ಮತ್ತು ಮಕ್ಕಳ ಮೇಲೆ ನಡೆಯುವ ಹಿಂಸೆಯು ಅತ್ಯಂತ ವ್ಯಾಪಕವಾಗಿದೆ. ಇದು ಮಾನವ ಹಕ್ಕು ಉಲ್ಲಂಘನೆಗಳಲ್ಲಿ ಅತ್ಯಂತ ಗಂಭೀರವಾದುದು. ಜಗತ್ತಿನಾದ್ಯಂತ ಮೂವರು ಮಹಿಳೆಯರಲ್ಲಿ ಒಬ್ಬ ಮಹಿಳೆಯು ಹಿಂಸೆಗೆ ಒಳಗಾಗುತ್ತಾಳೆ. ಕಳೆದ ಒಂದು ದಶಕದಲ್ಲಿ ಈ ಪ್ರಮಾಣವು ಬದಲಾಗಿದ್ದೇ ಇಲ್ಲ. ಪ್ರತಿ ಒಂದು ತಾಸಿನಲ್ಲಿ ಐವರು ಮಹಿಳೆಯರು ಅಥವಾ ಹೆಣ್ಣು ಮಕ್ಕಳು ತಮ್ಮ ಕುಟುಂಬದವರಿಂದಲೇ ಕೊಲೆಯಾಗುತ್ತಾರೆ ಎಂಬುದು ತೀರಾ ಇತ್ತೀಚಿನ ಅಂದಾಜು ಎಂದು ವಿಶ್ವ ಸಂಸ್ಥೆಯು ಹೇಳಿದೆ.
“ಒಂದು ಸಮಾಜದಲ್ಲಿರುವ ಸ್ತ್ರೀ ಪುರುಷ ಸಂಬಂಧ ಎಷ್ಟು ಆರೋಗ್ಯಕರವಾಗಿದೆ ಎನ್ನುವುದು, ಮಾನವನು ತನ್ನ ಪಶು ಮನಃಸ್ಥಿತಿಯಿಂದ ಮನುಷ್ಯನಾಗುವತ್ತ ಎಷ್ಟು ಸಾಗಿದ್ದಾನೆ ಎನ್ನುವುದರ ಅಳತೆಗೋಲಾಗಿದೆ’ ಎಂದು ಕಾರ್ಲ್‌ಮಾರ್ಕ್ಸ್ ಹೇಳುತ್ತಾರೆ. ಆದರೆ ಎಷ್ಟು ಕ್ರೂರ ಘಟನೆಗಳು ನಡೆಯುತ್ತಿವೆ. ಇಂಥವುಗಳನ್ನು ಖಂಡಿಸುವ. ಇಂತಹ ಘಟನೆಗಳಿಗೆ ಕಾರಣೀಕರ್ತರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಬೇಕಲ್ಲವೇ.?
ನಂದಿನಿ ಸನಬಾಳ್ ಕಲಬುರಗಿ