ತಾವು ಕಲಿತು ಆರoಕಿ ಸಂಬಳ ಗಿಟ್ಟಿಸುವ ಕೆಲಸಕ್ಕೆ ಅರ್ಹತೆ ಪಡೆದಿಲ್ಲ. ತನ್ನ ಮಕ್ಕಳು ಪ್ರಾರಂಭದಲ್ಲಿಯೇ ಆರoಕೆ ಸಂಬಳ ಗಿಟ್ಟಿಸುವಾಗ ಯಾವ ಹೆತ್ತವರು ಬೀಗುವುದಿಲ್ಲ ಹೇಳಿ…ಈಗಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ನೂರೆಂಟು ಬಗೆಯ ತರಬೇತಿ ಕೂಡ ಸಾಕಷ್ಟು ಹಣ ತೆತ್ತರೆ ಲಭಿಸುತ್ತದೆ. ಏನಿಲ್ಲ ಅಂದರೆ ರಾಜಸ್ಥಾನದ ಕೋಟಾ ನಗರದಲ್ಲಿ ಕಠಿಣ ಶಿಕ್ಷಣ ನೀಡಿ ಮಕ್ಕಳನ್ನು ರೇಸಿನ ಕುದುರೆಯಂತೆ ತಯಾರು ಮಾಡುವ ಟ್ಯೂಷನ್ ಕ್ಲಾಸ್ಗಳಿಗೆ ಕೊರತೆ ಇಲ್ಲ. ಸಾಲದಿದ್ದರೆ ಅಲ್ಲಿನ ಕೋಚಿಂಗ್ ವಿಪರೀತಕ್ಕೆ ಹೋಗಿ ನೇಣು ಬಿಗಿಯುವ ಮಕ್ಕಳಿಗೂ ಕೊರತೆಯಿಲ್ಲ.ಅಂತೂ 99% ಅಂಕಕ್ಕೂ ಮೀರಿ ಅಂಕ ತೆಗೆದರೆ ಜಾಣರಲ್ಲಿ ಜಾಣ!
ಹೀಗೆ ಸಾಗುತ್ತಿದೆ ನಮ್ಮ ವಿದ್ಯಾರ್ಜನೆ ಮತ್ತು ಹೆತ್ತವರ ನಿರೀಕ್ಷೆ. ಸಂಸ್ಕಾರ ,ಲೋಕಜ್ಞಾನ,ಸಾಮಾನ್ಯ ಜ್ಞಾನ, ಕಾಮನ್ ಸೆನ್ಸ್ ಇತ್ಯಾದಿ ಯಾವುದೂ ಬೇಕಾಗಿಲ್ಲ.ಡಿಗ್ರಿ ಪಡೆದ ಬಳಿಕ ಯಾವುದಾದರೂ ಬೆಂಗಳೂರಿನ ಐ ಟಿ ಕಂಪೆನಿಯಲ್ಲಿ ಸೇರಿದರೆ ಮುಗಿಯಿತು.ಮುಂದೆಲ್ಲ ಜೀವನ ಸುಖದ ಸುಪ್ಪತ್ತಿಗೆ.!ತುಪ್ಪಹಚ್ಚಿದ ಹೋಳಿಗೆಯೋ ಹೋಳಿಗೆ!!
ಹಾಗಿದ್ದರೆ ವಿದ್ಯಾರ್ಜನೆ ಅಂದರೆ ಪೊಗದಸ್ತಾದ ಸಂಬಳಕ್ಕೆ ಅಣಿಯಾಗುವ ಅದೇನೋ ಶಿಕ್ಷಣ ಮಾತ್ರವೇ ಅಥವಾ ಅದಕ್ಕಿಂತ ಮಿಗಿಲಾದ ಇನ್ನೇನೋ ಇರಬೇಕಲ್ಲವೇ? ಈ ಪ್ರಶ್ನೆಯನ್ನು ಹೆತ್ತವರು ತಮ್ಮಲ್ಲಿಯೇ ನಿಷ್ಕರ್ಷಿಸಬೇಕೆ ಇಲ್ಲ ತಮ್ಮ ಮಕ್ಕಳ ಪಾಡಿಗೆ ಬಿಟ್ಟುಕೊಟ್ಟರೆ ಸಾಕೆ?ಧಾರಾಳ ಅಂಕ ಪಡೆದುಕೊಂಡರೆ ಅಲ್ಲಿಗೆ ವಿದ್ಯಾರ್ಜನೆ ಪಡೆದಂತೆಯೇ!ಆದರೆ ಮುಂದಿನ ಮಕ್ಕಳ ಜೀವನ ಯಾವ ಕಡೆ ವಾಲುತ್ತೆ ಎಂಬುದು ದೊಡ್ಡ ಪ್ರಶ್ನಾರ್ಥಕ ಚಿಹ್ನೆ ಹೌದೆ ಅಲ್ಲವೇ ಎಂಬ ಪರೀಕ್ಷೆ ಮಾಡುವುದಾದರೂ ಯಾರು?ಹೌದು ಇದೊಂದು ಯಕ್ಷ ಪ್ರಶ್ನೆಯೇ ಸರಿ.
ಸಾಕ್ಷರ ರಾಕ್ಷಸರು ಇಂದು ಹೆಬ್ಬೆಟ್ಟು ಒತ್ತುವ ನಿರಕ್ಷರ ಸಾಮಾನ್ಯರಿಗಿಂತ ಹೀನರಾಗಿ, ಮಾನುಷಿಕ ಮೌಲ್ಯಗಳನ್ನು ಗಾಳಿಗೆ ತೂರಿ ಮೆರೆದಾಡುವುದು ನಿಜವಾಗಿಯೂ ವಿರೋಧಾಭಾಸವೇ ಸರಿ.ಅಂದರೆ ಇದು ಅವರು ಗಳಿಸಿದ ಶಿಕ್ಷಣದ ತಪ್ಪೇ ಇಲ್ಲ ಇವರ ಗ್ರಹಿಕೆ,ನಡುವಳಿಕೆಯ ತಪ್ಪೇ?
ನಾಲ್ಕಕ್ಷರ ಕಲಿತ, ಗುಣ ನಡತೆ ಇಲ್ಲದ ಪಡಪೋಷಿ ರಾಜಕಾರಣಿಗಳು ಅದ್ಯಾವ ರೀತಿಯಲ್ಲಿ ವಾಮ ಮಾರ್ಗದಲ್ಲಿ ಮಣಗಟ್ಟಲೆ ದೋಚಿ ಸಮಾಜದಲ್ಲಿ ಗೌರವಯುತವಾಗಿ ಮೆರೆದಾ ಡುವುದು ಕಂಡಾಗ ಪುರಂದರ ದಾಸರು ಆಡಿ ದಂತೆ ” ನಗೆಯು ಬರುತಿದೆ ಎನಗೆ ನಗೆಯು ಬರುತಿದೆ ಜಗದಲಿರುವ ಮನುಜರ ಕಂಡು ನಗೆಯು ಬರುತಿದೆ “ಎಂಬ ಕೀರ್ತನೆಯ ಎರಡು ಸಾಲು ನೆನಪಾಗುತ್ತದೆ.ಪತ್ರಿಕೆಯ ಪುಟಗಳಲ್ಲಿ ಭ್ರಷ್ಟ ರಾಜಕಾರಣಿಗಳು , ಹಿರಿಯ ವಿದ್ಯಾಸಂಪನ್ನ ಅಧಿಕಾರಿಗಳ ನಡವಳಿಕೆ ಲಂಚ ರುಶುವತ್ತಿಗೆ ಹೇಸದ ಕೃತ್ಯದ ವರದಿ ಕಂಡಾಗ ಇವರೆಲ್ಲ ಯಾವ ಸೀಮೆಯಲ್ಲಿ ವಿದ್ಯಾರ್ಜನೆ ಮಾಡಿ ಕಡಿದು ಕಟ್ಟೆ ಹಾಕಿದರು ಎಂದು ಜನಸಾಮಾನ್ಯರು ತಲೆ ಚಚ್ಚಿ ಕೊಂಡರೆ ತಪ್ಪಿಲ್ಲ.
ಇತ್ತೀಚೆಗೆ ಒಂದು ಮನೋಜ್ಞ ವಿಡಿಯೋ ತುಣುಕು ನೋಡುವ ಅವಕಾಶ ಸಿಕ್ಕಿತು.ಕಾರ್ಕಳದ ನಿವೃತ್ತ ಅಧ್ಯಾಪಕ ಶ್ರೀಯುತ ಮುನಿರಾಜ ರೆಂಜಾಳ ಅವರ ಯೋಚನಾಲಹರಿ ಬುದ್ಧಿಗೆ ಗ್ರಾಸ ಒದಗಿಸಿದೆ ಎನುವುದರಲ್ಲಿ ಎರಡು ಮಾತಿಲ್ಲ .ಅವರು ವಿದ್ಯಾರ್ಥಿ ಹಾಗೂ ಅವರ ಪಾಲಕರನ್ನು ಉದ್ದೇಶಿಸಿ ಹೀಗೊಂದು ರೋಚಕ ವಿವರಣೆ ನೀಡಿದರು. ಪ್ರಾರಂಭದಲ್ಲಿಯೇ ಒಂದು ಸುಂದರ ಉಪಕತೆಯಿಂದ ಪೀಠಿಕೆ ಹಾಕಿದರು ” ಶಾಲೆಯ ಮಕ್ಕಳೆಲ್ಲ ಅಧ್ಯಾಪಕರ ಜತೆಯಲ್ಲಿ ಅದೊಂದು ದಿನ ಹಳ್ಳಿಗೆ ಪಿಕ್ನಿಕ್ಗೆ ಎಂದು ತೆರಳಿದರು. ಹಳ್ಳಿಯ ಒಂದೆಡೆ ಕೊಬ್ಬರಿಯಿಂದ ಎಣ್ಣೆ ಹಿಂಡುವ , ಎತ್ತುಗಳ ಬಲದಿಂದ, ಗಾಣ ನೋಡಲು ಹೋದಾಗ ಮಕ್ಕಳಿಗೆಲ್ಲ ಅದೇನೋ ವಿಚಿತ್ರ ಕಂಡಂತೆ ತೋಚಿತು.ಎರಡು ಎತ್ತುಗಳು ಸುತ್ತ ತಿರುಗುತ್ತ ಇದ್ದಾಗ ಗಾಣದ ನಡುವೆ ಸಿಕ್ಕು ಕೊಬ್ಬರಿ ಜಜ್ಜಿಯಾಗುತ್ತಾ ಅದರಿಂದ ತೆಂಗಿನ ಎಣ್ಣೆ ಒಸರಿ ಒಂದು ಪಾತ್ರೆಯಲ್ಲಿ ಶೇಖರಣೆಗೊಳ್ಳುತಿತ್ತು. ಮಕ್ಕಳು ಇದನ್ನು ಕೂಲಂಕುಷ ಗಮನಿಸಿದರು.ಯಾವನೇ ಒಬ್ಬ ಚಾಟಿಯ ಪೆಟ್ಟು ಕೊಡದೆ ಇದ್ದರೂ ಆ ಜೋಡೆತ್ತುಗಳು ತಮ್ಮ ಕತ್ತಿಗೆ ಕಟ್ಟಿದ ಗಂಟೆಯ ಕಿಣಿ ಕಿಣಿ ಸದ್ದು ಮಾಡುತ್ತಾ ಸುತ್ತು ಬರುತ್ತಿದ್ದವು.ಗಾಣ ತನ್ನ ಎಣ್ಣೆ ಹಿಂಡುವ ಕೆಲಸ ಮಾಡುತ್ತಿತ್ತು.
ಆಗ ವಿದ್ಯಾರ್ಥಿಗಳ ತಲೆಗೆ ಕೆಲವೊಂದು ಪ್ರಶ್ನೆಗಳು ಹೊಳೆದವು.ಗಾಣದ ಮಾಲೀಕ ತುಸು ದೂರ ಗದ್ದೆಯಲ್ಲಿ ಗೇಯುತ್ತಿರುತ್ತಾನೆ. ಎತ್ತು ಗಳು ತಮ್ಮ ಪಾಡಿಗೆ ಸುತ್ತು ಹಾಕುವಾಗ ಗಂಟೆಯ ಕಿಣಿ ಕಿಣಿ ನಾದ ಆತನು ಗಮನಿಸುತ್ತಲೇ ಇದ್ದ.ಮಧ್ಯದಲ್ಲಿ ಗಾಣದ ಬಳಿ ಬಂದು ಕೊಬ್ಬರಿ ಹಿಂಡು ವಾಗ ಅದನ್ನು ಒಂದು ಮರದ ಬ್ಯಾಟಿನಿಂದ ಕೈಯಾಡಿಸುವ ಕೆಲಸ ಕೂಡ ಮಾಡುತಿದ್ದ.ಆಗ ಓರ್ವ ಅತಿ ಬುದ್ಧಿವಂತ ವಿದ್ಯಾರ್ಥಿ ಗಾಣದ ಮಾಲೀಕನಿಗೆ ಒಂದು ಪ್ರಶ್ನೆ ಎಸೆಯುತ್ತಾನೆ.ಜಾಣ ಪ್ರಶ್ನೆ.ಅದೆಂದರೆ ರೈತನಿಗೆ ಗಂಟೆಯ ಕಿಣಿ ಕಿಣಿ ಅದೇನೋ ಕೇಳಿದಾಗ ಎತ್ತುಗಳು ಗಾಣಕ್ಕೆ ಸುತ್ತು ಬರುವ ಸೂಚನೆ ನೀಡುವುದು ಖಾತರಿ ಇತ್ತು.ಆದರೆ ಎತ್ತುಗಳು ನಿಂತಲ್ಲೇ ನಿಂತು ಗೋಣು ಆಡಿಸಿ ಗಂಟೆಯ ಸದ್ದು ಹೊರಡಿಸಿದರೆ…ಎಂಬ ಗುಮಾನಿ ಆತನಿಗೆ.ಆತನ ಬುದ್ಧಿ ಸ್ವಲ್ಪ ಚುರುಕಾಗಿಯೇ ಇತ್ತು ,ಬಿಡಿ.ಆದರೆ ರೈತನಿಗೆ ಅಂತಹ ಪ್ರಸಂಗ ಎದುರಿಸಿದ ಅನುಭವ ಆ ತನಕ ಆಗಿರಲಿಲ್ಲ ಎಂಬುದು ಕೂಡಾ ನಿಜವೇ.ಆಗ ರೈತ ಹುಡುಗನಿಗೆ ಚುರುಕು ಮುಟ್ಟಿಸಿದ್ದು ಈ ಮಾತಿನಲ್ಲಿ “ನಾನು ಈ ತನಕ ನನ್ನ ಗಾಣದ ಈ ಎತ್ತುಗಳನ್ನು ಯಾವುದೇ ಕಾಲೇಜಿಗೆ ಶಿಕ್ಷಣಕ್ಕಾಗಿ ದಾಖಲು ಮಾಡಿಲ್ಲವಲ್ಲ!.”
ಈಗಿನ ನಕ್ಸಲ್ಬಾರಿ, ಎಂದು ಕಾಡಿನಲ್ಲಿ ಅವಿತುಕೊಂಡು ಕತ್ತಲಲ್ಲಿ ಗುಪ್ತವಾಗಿ ನಾಡಿಗೆ ಬಂದು ಬಡ ಕುಟುಂಬಗಳಿಗೆ ಬೆದರಿಕೆ ಹಾಕಿ ತಮ್ಮ ಹೊಟ್ಟೆಪಾಡಿಗೆ ಬೇಕಾದ ವಸ್ತುಗಳನ್ನು ಕೋವಿ ತೋರಿಸಿ ಎತ್ತೊಯ್ಯುವುದು ಅದೇನು ಕ್ರಾಂತಿ ಮಾಡಲು ಹೊರಟವರ ಜಾಡು ಎಂದು ನಾವು ಭಾವಿಸಬೇಕು? ಇವರೆಲ್ಲ ವಿಶ್ವವಿದ್ಯಾಲಯದಲ್ಲಿ ಕಲಿತ ವಿದ್ಯೆ ಎಂದರೆ ಇಷ್ಟೇ ಏನು?ಕ್ರಾಂತಿಯೋ ಭ್ರಾಂತಿಯೋ ಇಲ್ಲ ಸುಲಿಗೆ ಮಾಡಿ ಜೀವನ ಸಾಗಿಸುವ ಕ್ರಮವೋ ತಿಳಿಯದು. ಒಟ್ಟಾರೆ ಇವರದ್ದು ಕೂಡ ವಿದ್ಯಾರ್ಜನೆಯ ಕೊರತೆಯ ಪರಾಕಾಷ್ಠೆ ಅಲ್ಲವೇ?
ಇದು ಕ್ರಾಂತಿ ಮಾಡಲು ಹೊರಟ ಹೇಡಿಗಳ ಪರಾಕ್ರಮ.!ಅದೂ ಎರಡು ಮೂರು ಪದವಿ ಪಡೆದ ಅಭ್ಯಸ್ತ ವಿದ್ಯಾಸಂಪನ್ನರ(?) ದುಡಿಮೆಯ ದಾರಿ! ದೇಶದ ಕಾನೂನಿನ
ಚೌಕಟ್ಟಿನಲ್ಲಿ ಇದ್ದುಕೊಂಡು ಹೋರಾಡುವುದು ಬಿಟ್ಟು ಬುಡಮೇಲು ಕೃತ್ಯ ಮಾಡಿ ಹೊಟ್ಟೆಪಾಡು ನೋಡಿಕೊಳ್ಳುವುದಾದರೆ ಇದು ಏತರ ಶಿಕ್ಷಣ?
ಹಾಗಿದ್ದರೆ ಶಿಕ್ಷಣ ಸೋತು ಸುಣ್ಣವಾಗಿ ಹೋಯಿತೇ?ಇದರಿಂದ ಭಿಕ್ಷೆ ಬೇಡಿ ಹೊಟ್ಟೆ ಹೊರೆದು ಕೊಟ್ಯಾಧೀಶನಾದ ಮುಂಬಯಿಯ ವ್ಯಕ್ತಿ ಮಾಡಿದ ಕೆಲಸ ಮೇಲ ಲ್ಲವೇ?ಯಾತಕ್ಕಾಗಿ ಶಿಕ್ಷಣ? ಸುಲಿಗೆ ಮಾಡಿ ಸಂಪಾದಿಸಲೇ?ಸುಸಂಸ್ಕೃತರಾಗಿ ಸಮಾಜದ ಮುಖ್ಯವಾಹಿನಿಯಲ್ಲಿ ಇದ್ದುಕೊಂಡು ಪ್ರಾಮಾಣಿಕವಾಗಿ ದುಡಿದು ಹೊಟ್ಟೆಹೊರೆಯದಿರುವುದೇ ನಕ್ಸಲ್ ವಿದ್ಯಾಸಂಪನ್ನರ ಕ್ರಾಂತಿಕಾರಿ ನಿಲುವೇ?
ನಗೆಯ ಬರುತಿದೆ ಮತ್ತೆ ಮತ್ತೆ ನಗೆಯು ಬರುತಿದೆ ಈ ಹೇಡಿಗಳ ಅಟ್ಟಹಾಸಕ್ಕೆ. ಹಾಗಿದ್ದರೆ ಅಂಕ ತೆಗೆಯುವುದೇ ಶಿಕ್ಷಣವೇ?ಅಂದರೆ ಕ್ರಾಂತಿಕಾರಿಗಳಿಗೆ ಕಾರ್ಲ್ ಮಾರ್ಕ್ಸ್ ಪ್ರೇರಣೆ ನೀಡಿದ ಮಹಾ ದೊಡ್ಡ ಅರ್ಥ ಶಾಸ್ತ್ರಿ.ಅದೇ ರೀತಿ ಇಂದಿನ ವಿದ್ಯಾರ್ಥಿಗಳಿಗೆ ಕೂಡ 99% ಮಾರ್ಕ್ಸ್ ಪಡೆದು ಮುಂದೆ ಒಬ್ಬ ತಂತ್ರಜ್ಞ ಇಲ್ಲ ವೈದ್ಯ ನಾಗಿ ಬಿಟ್ಟರೆ ಮುಗಿದೇ ಹೋಯಿತು.ಹಾಗಿದ್ದರೆ ದೊಡ್ಡದೊಡ್ಡ ಪದವಿ ಗಿಟ್ಟಿಸಿಕೊಂಡ ಮಂದಿ ಸರಕಾರಿ ಇಲಾಖೆಗಳಲ್ಲಿದ್ದು ಸಂಬಳದ ನೂರು ಪಟ್ಟು ಗಿ೦ಬಳ ಪಡೆದು ಮನೆಯಲ್ಲಿ ಹಾಸಿಗೆಯ ಅಡಿಯಲ್ಲಿ, ಬಾತ್ ರೂಮ್ ಗೋಡೆ ಗಳಲ್ಲಿ ಅದನ್ನು ಅವಿತಿಟ್ಟು ಸಂಭಾವಿತರಂತೆ ಸಮಾಜದಲ್ಲಿ ಮೆರೆಯುವುದು ಯಾವ ಸೀಮೆಯ ವಿದ್ಯಾರ್ಜನೆ ಸ್ವಾಮೀ?,ರಾಷ್ಟ್ರವಿರೋಧಿ, ವಿಧ್ವಂಸಕ ಕೃತ್ಯದಲ್ಲಿ ತೊಡಗಿಕೊಂಡಿರುವ ಹೆಚ್ಚಿನ ಬಂಡಾಯಗಾರ, ಕ್ರಾಂತಿಕಾರಿಗಳೆ೦ಬ ಸೋಗಿನಲ್ಲಿ ಯಾವುದೇ ಮಾನ ಮರ್ಯಾದೆ ಇಲ್ಲದೆ ಸಮಾಜದ್ರೋಹಿಗಳಾಗಿ ಇದ್ದರೆ ಅವರಿಗೆಲ್ಲ ಏತರ ಶಿಕ್ಷಣ ದೊರೆಯಿತು?ಇವರೆಲ್ಲ ನಿರಕ್ಷರ ಕುಕ್ಷಿಗಳ ಮುಂದೆ , ಬಡ ನಿರ್ಗತಿಕರ ಮುಂದೆ,ನೇಗಿಲ ಯೋಗಿಗಳ ತುಲನೆಯಲ್ಲಿ ಕ್ರೂರ ಮೃಗಗಳಿಗಿಂತಲೂ ಹೀನರಲ್ಲವೇ? ಹೆಚ್ಚೇಕೆ ನಮ್ಮ ನಿಷ್ಣಾತ ಭಯೋತ್ಪಾದಕರು ಯಾವ ವಿದ್ಯಾಲಯದಲ್ಲಿ ಬಾಂಬು ತಯಾರಿ ಕಲಿತು ಅಮಾಯಕರ ಬಲಿ ಪಡೆಯಲು ಕಲಿತರು?ಹಾಗಿದ್ದರೆ ನಮ್ಮ ಶಿಕ್ಷಣ ವ್ಯವಸ್ಥೆ ಖಂಡಿತಾ ಉತ್ತಮ ,ಜವಾಬ್ದಾರಿ ಕೆಯುಳ್ಳ ನಾಗರಿಕರನ್ನು ಸೃಷ್ಟಿಸಲು ಅಸಫಲವಾಗಿಲ್ಲವೇ?
ಅಕ್ಷರಾಭ್ಯಾಸವಿದ್ದೂ ಇವರೆಲ್ಲ ದೇಶದ್ರೋಹಿಗಳು ಅಲ್ಲವೇ ?
ಭೂಮಿಗೆ ಭಾರ ಸಾಲದಿದ್ದರೆ ಅನ್ನಕ್ಕೆ ಸಂಚಕಾರ ಈ ವರ್ಗದ ನೀಚ ಬುದ್ಧಿಯ ವಿಘ್ನ ಸಂತೋಷಿಗಳು. ರಕ್ಕಸ ವರ್ಗದ ಅರಾಜಕತೆಯನ್ನು ವೈಭವೀಕರಿಸುವ ದುಡಿಯದೆ ಅನ್ನ ತಿನ್ನುವ ನೀಚರು ಇವರು.ಎಂದರೆ ನಗರದಲ್ಲಿಯೂ ವಾಸಿಸುವ ಅರ್ಬನ್ ನಕ್ಸಲ್,ಕಾಡಿನಲ್ಲಿ ಅಡಗುದಾಣಕ್ಕೆ ಶರಣಾಗುವ ಕುಬುದ್ಧಿ ಜೀವಿಗಳು
ಮಾನುಷಿಕ ಮೌಲ್ಯಕ್ಕೆ ಹೊರತಾದ,ದೇಶಪ್ರೇಮ ರಹಿತವಾದ ವಿದ್ಯೆ ಕಲಿತರೇನು ಬಿಟ್ಟರೇನು?”
ಶಿಕ್ಷಣ ತಜ್ಞರೆನಿಸಿಕೊಂಡ ವರ್ಗ ಉತ್ತರಿಸಬೇಕು.
ಬಿ ನರಸಿಂಗ ರಾವ್ , ಕಾಸರಗೋಡು