ಸಿಂದಗಿ: ಮಹಿಳೆಯರಲ್ಲಿ ಅಗಾಧ ಶಕ್ತಿಯಿದೆ ಒಂದು ಮಹಿಳೆ ಶಿಕ್ಷಣ ಕಲಿತರೆ ಇಡೀ ಜಗತ್ತನ್ನೆ ಬೆಳಗಿಸುತ್ತಾಳೆ ಎನ್ನುವುದಕ್ಕೆ ಇಂದು ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರು ಮುಂಚೂಣಿಯಲ್ಲಿದ್ದಾರೆ. ಮಹಿಳೆ ಈ ಜಗತ್ತಿನ ದೊಡ್ಡ ಶಕ್ತಿ, ಮಹಿಳೆಗೆ ಯೋಗ್ಯವಾದ ಶಿಕ್ಷಣ ನೀಡಿದಲ್ಲಿ ಈ ರಾಷ್ಟ್ರ ಸಮೃದ್ದ ರಾಷ್ಟ್ರವಾಗುತ್ತದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿಯ ಸದಸ್ಯ ಡಾ.ಚನ್ನಪ್ಪ ಕಟ್ಟಿ ಹೇಳಿದರು.
ಪಟ್ಟಣದ ತಾಲೂಕಾ ಶಿಕ್ಷಣ ಪ್ರಸಾರ ಮಂಡಳಿ ವಿವಿಧ ಅಂಗ ಸಂಸ್ಥೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಅವರಿಂದ ನೂತನ ಶಾಸಕ ಅಶೋಕ ಮನಗೂಳಿ ಅವರಿಗೆ ಸನ್ಮಾನ ಸಮಾರಂಭ ಮತ್ತು ನೂತನ ಮಹಿಳಾ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯವನ್ನು ಉದ್ಘಾಟಿಸಿ ಮಾತನಾಡಿ, ಮಹಿಳೆಗೆ ಶಿಕ್ಷಣ ನೀಡಿದಲ್ಲಿ ದೇಶ ಜಗತ್ತಿನಲ್ಲಿಯೆ ಕ್ರಾಂತಿ ಮಾಡುತ್ತದೆ. ಅದಕ್ಕೆ ಡಾ. ಬಿ. ಆರ್. ಅಂಬೇಡ್ಕರ ಅವರು ಸಮಾಜದ ಪ್ರಗತಿ ಮಹಿಳಾ ಶಿಕ್ಷಣದ ಮೇಲಿದೆ ಎಂದು ಹೇಳಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಈ ಸಂಸ್ಥೆಯಲ್ಲಿ ಮಹಿಳೆಗೆ ಪ್ರತ್ಯೇಕ ಶಿಕ್ಷಣ ವ್ಯವಸ್ಥೆ ಕಲ್ಪಿಸಿದ್ದು ಮಹತ್ತರ ಕಾರ್ಯವಾಗಿದೆ. ದಿ.ಎಮ್.ಸಿ.ಮನಗೂಳಿ ಅವರು ಶಿಕ್ಷಣ, ಸಾಮಾಜೀಕ ಮತ್ತು ರಾಜಕೀಯ ಕ್ಷೇತ್ರದಲ್ಲಿ ಹೊಸ ಮೈಲುಗಲ್ಲನ್ನು ಸ್ಥಾಪಿಸಿದ್ದವರು. ಈ ಭಾಗ ನೀರಾವರಿಯಾಗಲು ಅವರ ಶ್ರಮ ನಿಜಕ್ಕೂ ಪ್ರಮುಖವಾಗಿದೆ. ಶಾಸಕ ಅಶೋಕ ಮನಗೂಳಿ ತಂದೆಯೆಂತೆಯೆ ಈ ಕ್ಷೇತ್ರದ ಅಭಿವೃದ್ದಿ ಮಾಡಲು ಮುಂದಾಗಬೇಕು. ಸಿಂದಗಿ ಪಟ್ಟಣದಲ್ಲಿ ನೆನಗುದಿಗೆ ಬಿದ್ದಿರುವ ಕಲಾ ಸಾಮ್ರಾಟ ಹಂದಿಗನೂರ ಸಿದ್ರಾಮಪ್ಪನವರ ರಂಗಮಂದಿರಕ್ಕೆ ಸರ್ಕಾರದಿಂದ ಅನುದಾನ ಬಂದಿದೆ ಆದರೆ ಕಾರ್ಯ ಮಾತ್ರ ಪೂರ್ಣಗೊಂಡಿಲ್ಲ ಅದನ್ನು ಶಾಸಕರು ಪೂರ್ಣಗೊಳಿಸಿ ಅನೇಕ ಸಾಂಸ್ಕೃತಿಕ, ಸಾಹಿತ್ಯಿಕ ಕಾರ್ಯಗಳಿಗೆ ಅನುಕೂಲ ಮಾಡಿಕೊಡಬೇಕು ಎಂದರು.
ಸಂಸ್ಥೆಯ ಸಿಬ್ಬಂದಿ ಅವರು ನೀಡಿದ ಸನ್ಮಾನವನ್ನು ಸ್ವೀಕರಿಸಿದ ಶಾಸಕ ಅಶೋಕ ಮನಗೂಳಿ ಮಾತನಾಡಿ, ಮಹಿಳೆ ಸ್ವಾವಲಂಬಿಯಾಗಬೇಕು ಅವಳಿಗೆ ಉತ್ತಮ ಸೃಜನಾತ್ಮಕ ಶಿಕ್ಷಣ ನೀಡುವ ಉದ್ದೇಶದಿಂದ ನಮ್ಮ ಸಂಸ್ಥೆ ಮಹಿಳಾ ಪದವಿ ಪೂರ್ವ ಕಾಲೇಜನ್ನು ಪ್ರಾರಂಭ ಮಾಡಿದೆ, ಮುಂಬರುವ ದಿನಗಳಲ್ಲಿ ಮಹಿಳೆಯರಿಗೆ ವಸತಿ ನಿಲಯ, ವಿವಿಧ ಕರಕುಶಲ ಕೌಶಲ್ಯಗಳನ್ನು ಕಲಿಸುವ ಉದ್ದೇಶವಿದೆ ಎಂದ ಅವರು ಸಿಂದಗಿ ಪಟ್ಟಣದಲ್ಲಿ 24*7 ಕುಡಿಯುವ ನೀರಿನ ಯೋಜನೆಗೆ ಸರ್ಕಾರ ಮಂಜುರು ಮಾಡಿದ್ದ ರೂ 15 ಕೋಟಿ ಆದರೆ ಪಟ್ಟಣದಲ್ಲಿ ಸುಮಾರು 51 ಸಾವಿರಕ್ಕೂ ಅಧಿಕ ಜನಸಂಖ್ಯೆ ಇರುವುದರಿಂದ ಮತ್ತೆ ನಾನು ಹಣಕಾಸು ಸಚಿವ ಸಿಎಂ ಸಿದ್ದರಾಮಯ್ಯನವರಿಗೆ ಮನವಿ ಮಾಡಿಕೊಂಡಾಗ ಹೆಚ್ಚುವರಿಯಾಗಿ ರೂ. 25 ಕೋಟಿ ಹಣ ನೀಡಲು ಒಪ್ಪಿಕೊಂಡಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಕಾಮಗಾರಿಗೆ ಟೆಂಡರ್ ಕರೆದು ಕಾಮಗಾರಿ ಯೋಜನೆ ಪ್ರಾರಂಭ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಅಧ್ಯಕ್ಷತೆ ವಹಿಸಿದ ಸಂಸ್ಥೆಯ ನಿರ್ದೇಶಕ ಶಿವಪ್ಪಗೌಡ ಬಿರಾದಾರ ಮಾತನಾಡಿದರು. ಸ್ಥಳೀಯ ಊರಿನ ಹಿರಿಯ ಮಠದ ಶ್ರೀ ಶಿವಾನಂದ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಈ ವೇಳೆ ನಿರ್ದೇಶಕ ಮಂಡಳಿಯ ಸದಸ್ಯರು ಹಾಗೂ ಸಂಸ್ಥೆಯ ಸಿಬ್ಬಂದಿಗಳು ಅಶೋಕ ಮನಗೂಳಿ ಮತ್ತು ಅವರ ಧರ್ಮಪತ್ನಿ ನಾಗರತ್ನ ಮನಗೂಳಿ ಅವರಿಗೆ ಸನ್ಮಾನಿಸಿ ಗೌರವಿಸಿದರು.
ವೇದಿಕೆ ಮೇಲೆ ಸಂಸ್ಥೆಯ ಉಪಾಧ್ಯಕ್ಷರಾದ ಬಿ.ಜಿ.ಪಾಟೀಲ ಬಿಂಜಲಬಾವಿ, ನಿರ್ದೇಶಕರಾದ ಬಸನಗೌಡ ಪಾಟೀಲ ಡಂಬಳ, ಬಿ.ಜಿ.ನೆಲ್ಲಗಿ, ವಿಶ್ವನಾಥಗೌಡ ಪಾಟೀಲ, ಶಂಕರಗೌಡ ಬಿರಾದಾರ, ವಿಠೋಬಾ ಮಾಗಣಗೇರಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಎಲ್ಲ ಸಿಬ್ಬಂದಿಗಳು, ನಿವೃತ್ತ ಶಿಕ್ಷಕರ ಬಳಗ, ವಿದ್ಯಾರ್ಥಿಗಳು ಇದ್ದರು.
ಕಾರ್ಯಕ್ರಮದಲ್ಲಿ ಡಾ.ಪ್ರಕಾಶ ರಾಗರಂಜನಿ ಪ್ರಾರ್ಥಿಸಿದರು, ಪ್ರಾಚಾರ್ಯ ಡಾ.ಬಿ.ಜಿ.ಪಾಟೀಲ ಸ್ವಾಗತಿಸಿದರು, ಪ್ರಾಚಾರ್ಯ ಎ.ಆರ್,ಹೆಗ್ಗಣದೊಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಉಪನ್ಯಾಸಕ ಸಿದ್ದಲಿಂಗ ಕಿಣಗಿ ನಿರೂಪಿಸಿದರು, ಶಿಕ್ಷಕ ಆರ್.ವಾಯ್. ಪರೀಟ ವಂದಿಸಿದರು.