ಪ್ರತಿ ವರ್ಷ ಏಪ್ರಿಲ್ 23 ನ್ನು ವಿಶ್ವ ಪುಸ್ತಕ ದಿನವನ್ನಾಗಿ ಆಚರಿಸುತ್ತಾರೆ. ಸ್ಪೇನ್ ದೇಶದ ಮಿಗೆಲ್ ದ ಸರ್ವಾಂಟಿಸ್ ಅಮರ ಲೇಖಕ.ವಿಶ್ವ ಸಾಹಿತ್ಯಕ್ಕೆ “ಡಾನ್ ಕ್ವಿಕ್ಸೋಟ್” ಮಹಾನ್ ಸಾಹಿತ್ಯ ಕೊಟ್ಟ ಲೇಖಕ ಸರ್ವಾಟೀಸ್ ಇವರು 1923 ರ ಏಪ್ರಿಲ್ 23 ರಂದು ನಿಧನರಾದರು.ಅವರ ಗೌರವಾರ್ಥವಾಗಿ ಸ್ಪೇನ್ ದೇಶದಲ್ಲಿ “ಪುಸ್ತಕ ದಿನ” ಆಚರಿಸತೊಡಗಿದರು. ವಿಶ್ವ ಸಂಸ್ಥೆಯ ಶೈಕ್ಷಣಿಕ ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಆಯೋಗ (ಯುನೆಸ್ಕೋ) 1995 ರಲ್ಲಿ ಮೊದಲ ಸಲ ಓದುವಿಕೆ, ಪ್ರಕಾಶನ ಮತ್ತು ಕೃತಿಸ್ವಾಮ್ಯಗಳ ಬಗ್ಗೆ ಅರಿವು ಮತ್ತು ಪ್ರಚಾರ ನೀಡಲು ಈ ಕಾರ್ಯಕ್ರಮ ಹಮ್ಮಿಕೊಂಡಿತು.
ವಿಶ್ವಸಂಸ್ಥೆ ಈ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಯುವಜನತೆಯಲ್ಲಿ ಪುಸ್ತಕ ಪ್ರೇಮ,ಓದಿನ ಖುಷಿ ಅಥವ ಗಮ್ಮತ್ತು ಹೆಚ್ಚಿಸುವ ಮತ್ತು ಉತ್ತಮ ಲೇಖಕರನ್ನು ಗೌರವಿಸುವ ಹಂಬಲ ಹೊಂದಿದೆ.ನೂರಕ್ಕೂ ಹೆಚ್ಚು ರಾಷ್ಟ್ರಗಳು ಮತ್ತು ವಿಶ್ವದಾದ್ಯಂತ ಅನೇಕ ಪುಸ್ತಕ ಪ್ರಕಾಶಕರು ಪುಸ್ತಕ ವ್ಯಾಪಾರಿಗಳು ಗ್ರಂಥಾಲಯಗಳು ಶಾಲಾ-ಕಾಲೇಜು-ವಿಶ್ವವಿದ್ಯಾಲಯಗಳು ಸಾಂಸ್ಕøತಿಕ ಸಂಘಟನೆಗಳು ಮತ್ತು ಸಾಹಿತ್ಯ ವೇದಿಕೆಗಳು ಈ ದಿನಾಚರಣೆಯಲ್ಲಿ ಭಾಗವಹಿಸುವ ಮೂಲಕ ಪುಸ್ತಕ ಓದುವಿಕೆಯ ಮಹತ್ವ ಸಾರಲಿವೆ. ಈ ದಿನದಂದು ವಿಲಿಯಂ ಶೆಕ್ಸಪಿಯರ್ ಹುಟ್ಟಿದ ಮತ್ತು ಮರಣ ಹೊಂದಿದ ದಿನ ಕೂಡ..
ಪುಸ್ತಕಗಳಿರುವ, ಪುಸ್ತಕವೆಂಬ ಗೆಳೆಯರಿರುವ ಜಾಗವೇ ನನ್ನ ಅರಮನೆ, ಸಾಧು ಸತ್ಪುರುಷರು, ತತ್ವಜ್ಞಾನಿಗಳು, ವೇದಾಂತಿಗಳು, ಅರಸರು, ಆಳುಗಳು, ಲೇಖಕರು, ಕವಿಗಳು, ಕಲೆಗಾರರ ಸಂಗಡ ಓಡಾಡುತ್ತಿರುತ್ತೇನೆ ಅವರ ಸಂದರ್ಶನಕ್ಕಾಗಿ ಆಯುಸ್ಸನ್ನು ಕಳೆಯುತ್ತೇನೆ. -ಪ್ಲೇಚರ್
ಜ್ಞಾನಾರ್ಜನೆಗಾಗಿ ಗ್ರಂಥಕೋಶ ಪುಸ್ತಕಗಳನ್ನು ಓದುವುದು, ಪ್ರವಾಸ ಕೈಗೊಳ್ಳುವದು ಬಹುಮುಖ್ಯ. ಇದರಿಂದ ಜ್ಞಾನಸಂಪತ್ತು ಅಧಿಕಗೊಳ್ಳುತ್ತದೆ. ಅಷ್ಟೇ ಅಲ್ಲ ಓದುಗನ ವ್ಯಕ್ತಿತ್ವ ಬೆಳೆದು ಮಾನಸಿಕ ಸಮತೋಲನ ದೊರೆಯುತ್ತದೆ. ವರ್ತಮಾನ, ಭೂತಕಾಲ ಹಾಗೂ ಭವಿಷತ್‍ಕಾಲದ ಜ್ಞಾನವನ್ನು ಬೆಳೆಸಿಕೊಳ್ಳಲು ಪುಸ್ತಕಗಳು ನೆರವಾಗುತ್ತವೆ.
ಗಾಂಧೀಜಿಯವರು “ಪುಸ್ತಕ ಓದುವ ಹವ್ಯಾಸವುಳ್ಳವನು ಎಲ್ಲಿ ಹೋದರೂ ಸುಖ-ಸಂತೋಷವಾಗಿರಬಲ್ಲ” ಎಂದಿರುವರು. ಅಂದರೆ ಉತ್ತಮ ಅಭಿರುಚಿಯಿರುವ ಪುಸ್ತಕ ಓದುಗನಾದ ಮಾತ್ರಕ್ಕೆ ಇದು ಸಾಧ್ಯ. ನಾವಿಂದು ಮಾಹಿತಿ ತಂತ್ರಜ್ಞಾನದ ಮುಂಚೂಣಿಯಲ್ಲಿದ್ದೇವೆ. ದಿನನಿತ್ಯವೂ ವರ್ತಮಾನಪತ್ರಿಕೆ, ವಾರಪತ್ರಿಕೆ, ಪಾಕ್ಷಿಕ ಮಾಸಪತ್ರಿಕೆ, ದ್ವೈಮಾಸಿಕ, ತ್ರೈಮಾಸಿಕ ಪತ್ರಿಕೆಗಳ ರೂಪದಲ್ಲಿ ಪುಸ್ತಕಗಳು ಬರುತ್ತಿವೆ. ಇವುಗಳಲ್ಲಿ ಎರಡು ವಿಧ. ಒಂದು, ಮಾನವೀಯ ಮೌಲ್ಯಗಳ ಪ್ರತೀಕವಾದರೆ, ಇನ್ನೊಂದು ಅಶ್ಲೀಲ ಸಾಹಿತ್ಯ.
ಮಾನವೀಯ ಮೌಲ್ಯಗಳಿಗಿರುವ ಪುಸ್ತಕ ಯಾವುದನ್ನೇ ಓದಿದರೂ ಉದಾತ್ತವೂ, ಉನ್ನತವೂ ಆದ ವಿಚಾರ ಧಾರೆಯಾಗಿರುತ್ತದೆ. ಅಮರತ್ವ ತಿಳಿವು ಇದರಿಂದ ಲಭ್ಯವಾಗುತ್ತದೆ. ಆದರೆ ಅಶ್ಲೀಲ, ಕೆಟ್ಟ ಮನೋವಿಕಾರ ಬಿಂಬಿಸಿರುವ ಪೀತ ಪುಸ್ತಕಗಳನ್ನು ಓದುವುದರಿಂದ ನಮ್ಮ ವ್ಯಕ್ತಿತ್ವ ಸಂಕುಚಿತಗೊಂಡು ದುಷ್ಟ ಚಟ, ಕೆಟ್ಟ ವಿಚಾರಗಳತ್ತಮನಸ್ಸು ಹರಿಯುತ್ತದೆ. ಉತ್ತಮ ಪುಸ್ತಕಗಳು ನಮ್ಮ ಸಂಗಾತಿಗಳಾಗಿದ್ದರೆ ಮನಸ್ಸು ಸಂತಸದಿಂದಿರುವುದು.
ವಿ.ಸ್ಟಾರೆಟ್ ಎನ್ನುವ ವಿದ್ವಾಂಸರು “ಸುಖವನ್ನು ಸಂಗ್ರಹಿಸಬೇಕಾದರೆ ಪುಸ್ತಕಗಳನ್ನು ಸಂಗ್ರಹಿಸು” ಎಂದಿದ್ದಾರೆ. ಮನುಷ್ಯನ ಏಕಾಂತವನ್ನು ಹೊಡೆದೋಡಿಸಿ ಬದುಕಿಗೆ ಸ್ಪಷ್ಟವಾದ ನೆಲೆಯನ್ನು ಪುಸ್ತಕಗಳು ನೀಡುತ್ತವೆ. ಆಗ ಸುಖ ಪ್ರಾಪ್ತಿಯಾಗುತ್ತದೆ. ರಾಮಾಯಣ, ಮಹಾಭಾರತ, ಭಗವದ್ಗೀತೆಯಂತಹ ಪುರಾಣ ಪುಸ್ತಕ ಓದುವುದರಿಂದ ಮನುಷ್ಯನ ಬದುಕಿನ ಮೌಲ್ಯಗಳು ತಿಳಿಯಬಹುದು. ಅದಕ್ಕಾಗಿ ನಮ್ಮ ದೇಶದಲ್ಲಿ ಇಂದಿಗೂ ಮಾನವೀಯ ಮೌಲ್ಯಗಳು ಸಾಧು, ಸತ್ಪುರುಷರ ಮೂಲಕ ಉಳಿದು ಬಂದಿದೆ.ಮಠ, ಮಾನ್ಯಗಳು, ಮಂದಿರಗಳು ಇಂದಿಗೂ ಉತ್ತಮ ಧಾರ್ಮಿಕ ಗ್ರಂಥಗಳ ಮೂಲಕ ಅವುಗಳ ಮೌಲ್ಯ ಸಾರುತ್ತಿವೆ. ಮನುಕುಲ ಉದ್ಧಾರಕ್ಕಾಗಿ ಸೇವೆ ಗೈಯುತ್ತರುವ ಕಾರಣ. ಉತ್ತಮ ತತ್ವ ವಿಚಾರಧಾರೆಗಳು ಪುಸ್ತಕಗಳ ಮೂಲಕ ಓದುವವರ, ಓದಿ ಮಾತನಾಡುವವರ, ಮಾತನಾಡಿದವರ ಮಾತು, ಆಲಿಸುವವರ ಮೂಲಕ ಭಾರತೀಯತೆ ಉಳಿದುಕೊಂಡು ಬಂದಿದೆ.
ಪುಸ್ತಕಗಳನ್ನು ಓದುವವನು ಏನನ್ನಾದರೂ ಸಾಧಿಸಬಲ್ಲ ಎಂಬುದಕ್ಕೆ ಅಮೇರಿಕದ ಜೇಮ್ಸ್ ಎ. ಗಾರಪೀಲ್ಡ ಉದಾಹರಣೆ. ತೀರ ಬಡಕುಟುಂಬದಲ್ಲಿ ಜನಿಸಿದ್ದ ಈತ ಬಾಲ್ಯದಿಂದ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಂಡಿದ್ದ ಅವರಿವರ ಮನೆಗೆಲಸ ಮಾಡಿ ಬಡಗಿಯ ಮನೆಯಲ್ಲಿ ಅಡಿಗೆಮಾಡಿ ನೆಲ ಒರೆಸಿದ. ಕೆತ್ತನೆಯ ಕೆಲಸ ಮಾಡಿ ಬಂದ ಕೂಲಿಯಿಂದ ಪುಸ್ತಕಕೊಳ್ಳುತ್ತಿದ್ದ. ಸ್ನೇಹಿತರಿಂದ ಕೂಡ ಪುಸ್ತಕೆರವಲು ಪಡೆಯುತ್ತಿದ್ದ. ದಿನದ ದುಡಿಮೆಯ ಮಧ್ಯದ ಊಟ. ಉಪಹಾರದ ಸಮಯದಲ್ಲೂ ಓದುತ್ತಿದ್ದ. ಬಸ್ಸಿಗಾಗಿ ಕಾಯುವಾಗ ಪುಸ್ತಕ ಓದುತ್ತಿದ್ದ. ಕೇವಲ 26 ವರ್ಷ ವಯಸ್ಸಿನಲ್ಲಿ ಅಮೇರಿಕಾದ ಓಹಿಯೋ ಪ್ರಾಂತದ ಸೆನೆಟ್ ಸದಸ್ಯನಾದಾಗ ಮೂವತ್ಮೂರು ವರ್ಷ ವಯಸ್ಸು ಆತನ ಜ್ಞಾನ. ಆಡಳಿತದ ಅನುಭವ ಮೂಲಕ ಅಮೇರಿಕ ರಾಷ್ಟ್ರಾಧ್ಯಕ್ಷನಾದ.
ಬಂಕಿಂ ಚಂದ್ರ ಚಟರ್ಜಿಯವರು ಹೇಳುವಂತೆ “ಮೈ ಮೇಲೆ ಹರಕು ಬಟ್ಟೆಯಿದ್ದರೂ ಚಿಂತೆಯಿಲ್ಲ, ಕೈಯಲ್ಲಿ ಒಂದು ಪುಸ್ತಕವಿರಲಿ” ಎಷ್ಟು ಅರ್ಥಗರ್ಭಿತ ಮಾತಿದು.
ಪುಸ್ತಕಗಳೆಲ್ಲವನ್ನೂ ಕೊಂಡು ಓದಲಿಕ್ಕಾಗದು. ಅದಕ್ಕಾಗಿಯೇ ವಾಚನಾಲಯ ಗ್ರಂಥಾಲಯಗಳನ್ನು ಸೃಷ್ಟಿಸಲಾಗಿದೆ. ಅಲ್ಲಿ ಎಲ್ಲ ಪುಸ್ತಕಗಳು ಲಭ್ಯವಾಗುತ್ತವೆ. ಗ್ರಂಥಾಲಯ ಸದಸ್ಯತ್ವ ಪಡೆದು ಪುಸ್ತಕ ಎರವಲು ಪಡೆಯುವ ಸಂಸ್ಕಸೃತಿ ನಮ್ಮಲ್ಲಿದೆ. ಈ ಮೂಲಕ ಓದುಗರನ್ನು ತಲುಪುವ ಪುಸ್ತಕಗಳಿಂದ ಪ್ರಯೋಜನ ಪಡೆಯುವವರದೆಷ್ಟು ಜನ? ಎಷ್ಟೋ ಜನ ಪುಸ್ತಕ ತೆಗೆದುಕೊಂಡು ಹೋಗಿ ಅದರಲ್ಲಿ ತಮ್ಮ ಹೆಸರನ್ನೋ ಇನ್ನೇನನ್ನೋ ಬರೆದುಕೊಟ್ಟರೆ, ಇನ್ನು ಕೆಲವರು ಕೆಲವು ಪುಟಗಳನ್ನು ಹರಿದುಕೊಟ್ಟಿರುತ್ತಾರೆ. ಕೆಲವು ಸಾಲುಗಳ ಕೆಳಗೆ ಗೆರೆ ಎಳೆದಿರುತ್ತಾರೆ. ಇದು ಸಭ್ಯತೆಯ ಲಕ್ಷಣವಲ್ಲ. ಇಂಥ ಅಸಭ್ಯತೆ ತೋರಿಸುವುದರಿಂದ ಜ್ಞಾನ ವೃದ್ಧಿಯಾಗದು. ಪುಸ್ತಕ ತೆಗೆದುಕೊಂಡು ಮರಳಿ ಕೊಡುವಾಗ ಅದಕ್ಕೆ ಕವರ್ ಇರುವಂತೆ ನೋಡಿಕೊಳ್ಳಿ ಅಥವಾ ಹೊಲಸಾಗದಂತೆ ಎಚ್ಚರಿಕೆ ವಹಿಸಿ.
ಎರವಲು ಮರಳಿ ಕೊಡುವ ದಿನಾಂಕ ನೆನಪಿಡಿ ನಮಗೆ ಇನ್ನೂ ಕೆಲವು ದಿನ ಬೇಕೆಂದು ಅನಿಸಿದ್ದಲ್ಲಿ ಗ್ರಂಥ ಪಾಲಕನಿಗೆ ಹೇಳಿ ಮತ್ತೆ ದಿನಾಂಕ ಮುಂದುವರೆಸಿಕೊಂಡು ಹೋಗಿ.
ವಾಚನಾಲಯಗಳ ಹಿನ್ನಲೆ
ವಾಚನಾಲಯಗಳಿಗೆ ಸುಮಾರು ಎಂಟು ಸಾವಿರ ವರ್ಷಗಳ ಇತಿಹಾಸವಿದೆ.ಪ್ರಾಚೀನ ಮೆಸಪೋಟಮಿಯನ್ನರು ಹಸಿಯಾದ ಜೇಡಿಮಣ್ಣಿನ ಬಿಲ್ಲೆಗಳ ಮೇಲೆ ಕ್ಯೂನಿಯಸ್ ಎಂಬ ಪೆನ್ನಿನಂತಹ ಸಾಧನದಿಂದ ಬರೆಯುತ್ತಿದ್ದರು.ಆದ್ದರಿಂದ ಈ ಬರವಣಿಗೆಯನ್ನು “ಕ್ಯೂನಿಫಾರ್ಮ”ಎಂದು ಕರೆದರು.ಇಂಥ ಬಿಲ್ಲೆಗಳನ್ನು ಒಣಗಿಸಿ ಇವುಗಳನ್ನು ಒಂದೆಡೆ ಸಂಗ್ರಹಿಸಿ ಇಡುತ್ತಿದ್ದರು.ಇವೇ ಆಧುನಿಕ ವಾಚನಾಲಯಗಳ ಮುತ್ತಜ್ಜರು.
ಪ್ರಾಚೀನ ಈಜಿಪ್ತಿನ ವಾಚನಾಲಯಗಳು ಪೂಜಾರಿಗಳ ಮೇಲ್ವಿಚಾರಣೆಯಲ್ಲಿ ದೇವಾಲಯಗಳಲ್ಲಿ ಇದ್ದವು.”ಫಾಫಿರಸ್”ಎಂಬ ಗಿಡದಿಂದ ತಯಾರಿಸಿದ ಸುರುಳಿಗಳನ್ನು ಇದಕ್ಕಾಗಿ ಬಳಸಲಾಗುತ್ತಿತ್ತು. ಕ್ರಿಸ್ತಪೂರ್ವ ಒಂಭತ್ತನೆಯ ಶತಮಾನದಲ್ಲಿ ಬರವಣಿಗೆಯನ್ನು ರೂಢಿಸಿಕೊಂಡ ಗ್ರೀಕರು ತಾವು ಸ್ಥಾಪಿಸಿದ ಪ್ರತಿ ಪಟ್ಟಣಗಳಲ್ಲೂ ಒಂದೊಂದು ವಾಚನಾಲಯ ತೆರೆದರು.ಪ್ಲೇಟೋ ಸ್ಥಾಪಿಸಿದ ಅಕಾಡೆಮಿಯಲ್ಲೂ ಕೂಡ ವಾಚನಾಲಯವಿತ್ತು.ಪ್ರಸಿದ್ದ ಅಲಗ್ಸಾಂಡ್ರಿಯಾ ವಾಚನಾಲಯ ಕ್ರಿ.ಪೂ 300 ರಲ್ಲಿ ಸ್ಥಾಪಿತವಾಯಿತು.ಇದು 120 ವಿಭಾಗಗಳಲ್ಲಿ ವಿಂಗಡಿಸಲಾಗಿದ್ದ ಸುಮಾರು 70,000 ಪಾಪಿರಸ್ ಸುರುಳಿಗಳನ್ನು ಒಳಗೊಂಡಿತ್ತು.
ಸಾರ್ವ ಜನಿಕ ವಾಚನಾಲಯಗಳ ಕಲ್ಪನೆ ನೀಡಿದವರು ರೋಮನ್‍ರು. ಜೂಲಿಯಸ್ ಸೀಜರ್ ಇಂಥ ವಾಚನಾಲಯ ಸ್ಥಾಪಿಸುವ ಆಸಕ್ತಿ ಹೊಂದಿದ್ದ. ರೋಮ್ ನ ಅನೇಕ ಶ್ರೀಮಂತರು ವಾಚನಾಲಯಗಳ ಸ್ಥಾಪನೆಗೆ ನೆರವಾದರು. 4 ನೇ ಶತಮಾನದ ವೇಳೆಗೆ ರೋಮ್ ನಲ್ಲಿ ಸುಮಾರು 28 ವಾಚನಾಲಯಗಳಿದ್ದವು.
ಕ್ರಿ.ಶ.ಪ್ರಾರಂಭದೊಂದಿಗೆ ವಾಚನಾಲಯಗಳು ಚರ್ಚಗಳ ಒಂದು ಭಾಗವಾಗಿದ್ದವು.ಇಲ್ಲಿ ಅನೇಕ ಧಾರ್ಮಿಕ ಗ್ರಂಥಗಳನ್ನು ಸಂಗ್ರಹಿಸಿ ಇಡಲಾಗುತ್ತಿತ್ತು.
ಪ್ಯಾರಿಸ್.ಪ್ರಾನ್ಸ,ಹಿಡಲ್ ಬರ್ಗ ಹಾಗೂ ಪ್ಲಾಕಿನ್ಸ ವಿಶ್ವವಿದ್ಯಾಲಯಗಳಲ್ಲಿ ಪುಸ್ತಕಗಳನ್ನು ಸರಪಳಿ ಹಾಕಿ ಸಂಗ್ರಹಿಸುತ್ತಿದ್ದರು.ಪುಸ್ತಕಗಳ ಸಂರಕ್ಷಣೆ ಈ ಕ್ರಮದ ಉದ್ದೇಶ,ಕ್ರ.ಶ.1400 ವೇಳೆಗೆ ಆಕ್ಸಪರ್ಡ ವಿಶ್ವವಿದ್ಯಾಲಯ ಬೋಡಲಿನ್ ಎಂದು ಕರೆಯಲ್ಪಡುತ್ತಿದ್ದ ತನ್ನ ಗ್ರಂಥಾಲಯ ಸ್ಥಾಪಿಸಿತು.ಇದು ವಿಶ್ವದ ಅತ್ಯಂತ ದೊಡ್ಡ ಗ್ರಂಥಾಲಯವಾಗಿ ಹೆಸರು ಪಡೆಯಿತು.
19 ನೇ ಶತಮಾನದಲ್ಲಿ ಇಂಗ್ಲೆಂಡಿನಲ್ಲಿ ಸಾರ್ವಜನಿಕ ವಾಚನಾಲಯಗಳ ಚಳುವಳಿಯೇ ನಡೆಯಿತು.1850 ರಲ್ಲಿ ಇಂಗ್ಲೆಂಡಿನ ಸಂಸತ್ತು ಕಾಯ್ದೆಯ ಮೂಲಕ ಸಾರ್ವಜನಿಕ ವಾಚನಾಲಯಗಳ ಸ್ಥಾಪನೆಗೆ ಚಾಲನೆ ನೀಡಿತು.ಈ ರೀತಿ ವಿಶ್ವದಾದ್ಯಂತ ಅದಕ್ಕೊಂದು ಶಾಖೆ/ಪ್ರತ್ಯೇಕ ಖಾತೆಗಳು ಉದಯವಾಗಿ ಗ್ರಂಥಾಲಯ ಖಾತೆಗೆ ಒಬ್ಬ ಸಚಿವರನ್ನು ನೇಮಕ ಮಾಡುವ ಮಟ್ಟಿಗೆ ವಾತಾವರಣ ಬೆಳೆದು ಬಂದಿದೆ.
ಏಪ್ರಿಲ್ 23 ವಿಶ್ವ ಪುಸ್ತಕ ದಿನವನ್ನಾಗಿ ಆಚರಿಸುವ ಜೊತೆಗೆ ಭಾರತದಲ್ಲಿ ನವೆಂಬರ್ 14 ರಿಂದ 20 ರ ವರೆಗೆ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಆಚರಿಸಲಾಗುತ್ತಿದೆ.ಜಪಾನ್ ದೇಶದಲ್ಲಿ ಮಕ್ಕಳಲ್ಲಿ ಓದಿನ ಅಭಿರುಚಿ ಬೆಳೆಸಲು ಅಲ್ಲಿನ ಸಾರ್ವಜನಿಕರು “ಬಂಕೋ ಯೋಜನೆ” ಹಮ್ಮಿಕೊಂಡಿದ್ದು ವಾರದ ರಜಾ ದಿನಗಳಲ್ಲಿ ಜನವಸತಿ ಸಮುಚ್ಚಯ,ಬಡಾವಣೆಗಳಲ್ಲಿ ಆಸಕ್ತರು ತಮ್ಮ ನೆರೆಹೊರೆಯ ಮನೆಗಳ ಮಕ್ಕಳನ್ನು ತಮ್ಮ ಮನೆಗಳಿಗೆ ಆಹ್ವಾನಿಸಿ ಅವರ ಇಷ್ಟದ ಪುಸ್ತಕ ಓದಲು ಕೊಡುವ ಮೂಲಕ ಎಲ್ಲಾ ಮಕ್ಕಳನ್ನು ಒಂದೆಡೆ ಸೇರಿಸಿ ವಿವಿಧ ಪುಸ್ತಕಗಳನ್ನು ಪರಿಚಯಿಸುವ ಜೊತೆಗೆ ನೆರೆಹೊರೆಯ ಬಾಂದವ್ಯವನ್ನು ವೃದ್ದಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ.
ನಿಮಗೆ ಹಣದ ಅನುಕೂಲವಿದ್ದಾಗ ಉತ್ತಮ ಪುಸ್ತಕ ಖರೀದಿಸಿ ನಿಮ್ಮ ಮನೆಯಲ್ಲಿ ಸಂಗ್ರಹಿಸಿಡಿ. ಆ ಪುಸ್ತಕ ಮತ್ತೆ ಮತ್ತೆ ಓದುವುದರಿಂದ ಮನಸ್ಸಿಗೆ ಉಲ್ಲಾಸ, ಆನಂದ ಸಿಗುವುದು.ಕೇವಲ ಗ್ರಂಥಾಲಯಕ್ಕೆ ಹೋಗಿ ಪುಸ್ತಕ ಓದಿದರೆ ಸಾಲದು ನಮ್ಮ ಬಳಿ ಪುಸ್ತಕ ಸಂಗ್ರಹ ಇರುವುದು ಕೂಡ ಅಷ್ಟೇ ಮಹತ್ವವನ್ನು ಪಡೆದಿದೆ.ಆದ ಕಾರಣ ಮೈಮೇಲೆ ಹರಕು ಬಟ್ಟಯಿದ್ದರೂ ಪರವಾಗಿಲ್ಲ ಕೈಯಲ್ಲೊಂದು ಉತ್ತಮ ಪುಸ್ತಕವಿರಲಿ ಎಂಬ ಮಾತಿನಂತೆ ಪುಸ್ತಕ ಸಂಗ್ರ ಅವುಗಳ ಓದು ಮಹತ್ವದ್ದು.ಇತ್ತೀಚಿನ ಮಾಹಿತಿ ತಂತ್ರಜ್ಞಾನ ಬೆಳವಣಿಗೆಯ ಹಿನ್ನಲೆಯಲ್ಲಿ ಪುಸ್ತಕಗಳು ಇಂಟರ್ ನೆಟ್ ಮೂಲಕ ಕೂಡ ದೊರೆಯುತ್ತಿದ್ದು ವೀಕಿಪೀಡಿಯಾ ಎನ್‍ಸ್ಲೈಕೋಪೀಡಿಯಾ ಮೂಲಕ ಅನೇಕ ಮಹತ್ವದ ಸಂಗತಿಗಳನ್ನು ಕೂಡ ಕಲೆ ಹಾಕಬಹುದಾಗಿದೆ.
ಪುಸ್ತಕ ಕುರಿತು ಹಲವು ದಾರ್ಶನಿಕರ ನುಡಿಗಳು
- ಅತ್ಯುತ್ತಮ ಪುಸ್ತಕಗಳು ಉತ್ತಮ ಸಂಗಾತಿಗಳು. -ಪಾರ್ಕರ್.
- ಗ್ರಂಥವಿಲ್ಲದ ಕೋಣೆ. ಆತ್ಮವಿಲ್ಲದ ದೇಹದಂತೆ. -ಸಿಸಿರೋ.
- ಪುಸ್ತಕ ಪ್ರೇಮವಿಲ್ಲದವನು ಹಣವಂತನಾದರೂ ದರಿದ್ರನೇ. -ಲ್ಯಾಂಗ್ ಪೋರ್ಡ.
- ನಿಮ್ಮ ಮತ್ತು ಪ್ರಪಂಚದ ನಡುವೆ ಪುಸ್ತಕದ ಆತ್ಮಗೋಡೆಯಿರಲಿ -ರವೀಂದ್ರನಾಥ ಟಾಗೋರ್.
- ಒಳ್ಳೆಯ ಓದುಗನಿಂದಷ್ಟೇ ಒಳ್ಳೆಯ ಪುಸ್ತಕ ರಚಿಸಲು ಸಾಧ್ಯ. -ಎಮರ್ಸನ್.
- ಉತ್ತಮ ಪುಸ್ತಕಗಳ್ನೋದುವದರಿಂದ ಅತೀ ಕಡಿಮೆ ಖರ್ಚಿನಲ್ಲಿ ಮನರಂಜನೆ ದೊರೆಯುವುದು ಇದೇ ಶಾಶ್ವತ. -ಬನಾಡ್ ಶಾ.
- ಮನುಷ್ಯನಿಂದ ಮನುಷ್ಯ ಹುಟ್ಟುವ ಹಾಗೆ ಪುಸ್ತಕದಿಂದ ಪುಸ್ತಕ ಹುಟ್ಟುತ್ತದೆ. -ವಿ.ಕೃ.ಗೋಕಾಕ್
- ಶ್ರೇಷ್ಠ ಪುಸ್ತಕಗಳನ್ನೋದುವುದರಿಂದ ಉತ್ತಮ ಅಭಿಪ್ರಾಯಗಳು ನೆಲೆಗೊಂಡು ಉತ್ತಮರಾಗುತ್ತೇವೆ. -ಡಾ.ಎಸ್.ರಾಧಾಕೃಷ್ಣನ್.
- ಕೆಲವರಿಗೆ ಜೀವನವೇ ಮುಖ್ಯ ಆದರೆ ನನಗೆ ವಾಚನವು ಅದಕ್ಕಿಂತ ಮುಖ್ಯ.-ಡಿಯರ್ ಸಾಬ್‍ಸ್ಮಿತ್.
- ಎಲ್ಲ ಪುಸ್ತಕಗಳನ್ನು ಎರಡು ಪಂಗಡಗಳನ್ನಾಗಿ ವಿಂಗಡಿಸಬಹುದು. ಅಂದಂದಿನ ಪುಸ್ತಕಗಳು ಹಾಗೂ ಸಾರ್ವಕಾಲಿಕ ಪುಸ್ತಕಗಳು. -ಜಾನ್ ರಸ್ಕಿನ್.
ವೈ.ಬಿ.ಕಡಕೋಳ
ಶಿಕ್ಷಕರು
ಮಾರುತಿ ಬಡಾವಣೆ,ಶಿಂದೋಗಿ ಕ್ರಾಸ್ ಮುನವಳ್ಳಿ
ಮುನವಳ್ಳಿ-591117
ತಾ:ಸವದತ್ತಿ ಜಿಲ್ಲೆ;ಬೆಳಗಾವಿ
8971117442 7975547298