ಹುನಗುಂದ ತಾಲೂಕಿನ ಚಿಕ್ಕಯರನಕೇರಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಜರುಗಿತು.
ಈ ಸಂದರ್ಭದಲ್ಲಿ ಹೊಂಗೆ, ಬೇವು, ತೆಂಗು, ತಾಪ್ಸಿ, ಆಲ, ಮಹಾಗನಿ, ಕರಿಬೇವು, ಬಸರಿ ಮೊದಲಾದ ಐವತ್ತಕ್ಕೂ ಹೆಚ್ಚು ಸಸಿಗಳನ್ನು ನೆಡಲಾಯಿತು.
ಶಿಕ್ಷಕ ಅಶೋಕ ಬಳ್ಳಾ ಮಾತನಾಡುತ್ತಾ ‘ಸಸಿಗಳನ್ನು ನೆಟ್ಟು ಬಿಟ್ಟರೆ ಸಾಲದು. ಅವನ್ನು ಬೆಳೆಸಿ ಹೆಮ್ಮರವಾಗುವಂತೆ ಮಾಡಿದಾಗ ಮಾತ್ರ ಇಂತಹ ಆಚರಣೆಗಳಿಗೆ ಅರ್ಥ ಬರುತ್ತದೆ. ಕಾರ್ಖಾನೆಗಳ ತ್ಯಾಜ್ಯ, ಪ್ಲಾಸ್ಟಿಕ್, ವಾಹನಗಳ ಹೊಗೆಯಿಂದ ಪರಿಸರ ಮಾಲಿನ್ಯವಾಗುತ್ತಿದೆ. ಇಂದು ನಾವೆಲ್ಲರೂ ಜಾಗೃತರಾಗಿ ಗಿಡ ಮರಗಳನ್ನು ಬೆಳೆಸುವ ಮೂಲಕ ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕಾಗಿದೆ ಎಂದರು.
ಶಿಕ್ಷಕ ಸಿದ್ದು ಶೀಲವಂತರ ಮಾತನಾಡುತ್ತಾ, ‘ವೈಜ್ಞಾನಿಕ ಆವಿಷ್ಕಾರಗಳ ಅತಿಯಾದ ಅವಲಂಬನೆಯಿಂದ ಮನುಷ್ಯ ತನಗರಿವಿದ್ದೂ ಇಲ್ಲದಂತೆ ಪ್ರಕೃತಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾನೆ. ಅದರ ಪರಿಣಾಮವನ್ನು ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ವರ್ಗಾಯಿಸುತ್ತಿದ್ದಾನೆ. ಇದರಿಂದ ನಿಸರ್ಗದಲ್ಲಿ ಏರುಪೇರಾಗಿ ಮನುಷ್ಯ ಸಹಜ ಬದುಕಿನಿಂದ ವಿಮುಖನಾಗುತ್ತಿದ್ದಾನೆ. ಜಾಗತಿಕ ತಾಪಮಾನ ಹೆಚ್ಚಾಗುತ್ತಿದ್ದು ಭೂಮಿ ಬಿಸಿಯಾಗುತ್ತಿದೆ. ಪರಿಣಾಮವಾಗಿ ಜೀವಸಂಕುಲವೆಲ್ಲ ತೊಂದರೆಗೆ ಒಳಗಾಗುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದರು.
ಬಿ ಆರ್ ಪಿ ಗಿರಿಯಪ್ಪ ಆಲೂರ ಮಾತನಾಡುತ್ತಾ, ಆಧುನಿಕತೆಗೆ ಮಾರುಹೋಗಿರುವ ಇಂದಿನ ಮನುಷ್ಯ ತನ್ನ ಸಾಂಪ್ರದಾಯಿಕತೆಯನ್ನು ಮರೆಯುತ್ತಿದ್ದಾನೆ. ಹಿಂದೆ ಜನ ಪ್ರಕೃತಿಯೊಂದಿಗೆ ಬದುಕು ಸಾಗಿಸಿದ್ದರು. ಪರಿಸರದಲ್ಲಿ ನೈಸರ್ಗಿಕವಾಗಿ ಸಿಗುವ ವಸ್ತುಗಳಿಂದ ತಮ್ಮ ದಿನನಿತ್ಯದ ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದರು. ನಮ್ಮ ನಿತ್ಯದ ಆಹಾರಕ್ಕಾಗಿ ರಾಸಾಯನಿಕ ಗೊಬ್ಬರಗಳನ್ನು ಬಳಸಿ ಬೆಳೆ ಬೆಳೆದು ಸೇವಿಸುತ್ತಿದ್ದಾನೆ. ಪ್ರಕೃತಿ ಸಹಜ ಹಣ್ಣು ಹಂಪಲುಗಳು ಕೃತಕ ರಾಸಾಯನಿಕಗಳಿಂದಾಗಿ ಬೇಗನೆ ಕಳೆತು ಕೊಳೆತು ಹೋಗುವ ಸಂದರ್ಭವನ್ನು ನಾವು ಎದುರಿಸುತ್ತಿದ್ದೇವೆ. ಈ ಕುರಿತು ನಾವು ಜಾಗೃತರಾಗಬೇಕಾಗಿದೆ’ ಎಂದರು.
ಇದೇ ಸಂದರ್ಭದಲ್ಲಿ ಮುಖ್ಯಗುರುಗಳಾದ ಕಿರಣ ವಜ್ರಮಟ್ಟಿ ಅವರು ಪ್ರತಿ ವರ್ಷದಂತೆ ಈ ವರ್ಷವೂ ಶಾಲೆಯ ಎಲ್ಲ ಮಕ್ಕಳಿಗೆ ಅರ್ಧ ಡಜನ್ ನೋಟು ಪುಸ್ತಕ ಲೇಖನ ಸಾಮಗ್ರಿಗಳನ್ನು ಕೊಡುಗೆಯಾಗಿ ನೀಡಿದರು.
ಸಿ ಆರ್ ಪಿ ಸಂಗಪ್ಪ ಚಲವಾದಿ, ಶಿಕ್ಷಕರುಗಳಾದ ಎಂ.ಜಿ. ಬಡಿಗೇರ, ಎ. ಎನ್. ಸೋಲಾಪುರ, ಸಿ.ಎಸ್.ಬಮಸಾಗರ, ಸಾವಿತ್ರಿ ಮಾಶ್ಯಾಳ, ಗ್ರಾಮದ ಯುವಕರಾದ ಗಣೇಶ, ಯಲಗೂರದಪ್ಪ, ಸಂತೋಷ, ರವಿ, ಅಭಿಷೇಕ ಇತರರು ಉಪಸ್ಥಿತರಿದ್ದರು.